ಆ ಒಂದು ಮಾತಿನಿಂದ ಆಕ್ರೋಶಗೊಂಡಿದ್ದ ರೋಹಿತ್ ಜುಲೈನಲ್ಲೇ ನಿವೃತ್ತಿಗೆ ಮುಂದಾಗಿದ್ದರು ಆದ್ರೆ ಮನಸ್ಸು ಬದಲಿಸಿದ್ದೇಕೆ? Rohit Sharma
- ಮುಂಬೈನಲ್ಲಿ ಇಂದು ಬಿಸಿಸಿಐ ಮಹತ್ವದ ಸಭೆ
- ರೋಹಿತ್ ಶರ್ಮಾ ಸೇರಿದಂತೆ ಹಿರಿಯ ಆಟಗಾರರ ಭವಿಷ್ಯದ ಬಗ್ಗೆ ಚರ್ಚೆ
- ಲಾರ್ಡ್ಸ್ ಏಕದಿನ ಪಂದ್ಯದ ಬಳಿಕ ನಿವೃತ್ತಿ ನೀಡುವಂತೆ ಕೇಳಿಕೊಂಡಿದ್ದ ಆಯ್ಕೆ ಸಮಿತಿ
- ಶತಕ ಸಿಡಿಸಿ ನಿವೃತ್ತಿ ಚರ್ಚೆಗೆ ತಾತ್ಕಾಲಿಕ ವಿರಾಮ ಹಾಕಿದ ರೋಹಿತ್ ಶರ್ಮಾ
- ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಸ್ಥಾನಕ್ಕೆ ಕುತ್ತು ತರಲಿದೆಯಾ ಇಂದಿನ ಸಭೆ?
ನವದೆಹಲಿ: ಬಿಸಿಸಿಐನ ಮಹತ್ವದ ಸಭೆಯ ಹೊಸ್ತಿಲಲ್ಲೇ ಟೀಮ್ ಇಂಡಿಯಾದ ಹಿರಿಯ ಆಟಗಾರರಾದ ರೋಹಿತ್ ಶರ್ಮಾ ( Rohit Sharma ), ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಅವರ ಕ್ರಿಕೆಟ್ ಭವಿಷ್ಯದ ಕುರಿತು ತೀವ್ರ ಚರ್ಚೆ ಆರಂಭವಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ 2027ರ ಐಸಿಸಿ ಏಕದಿನ ವಿಶ್ವಕಪ್ ಸಿದ್ಧತೆಗಳ ನಡುವೆ, ರೋಹಿತ್ ಶರ್ಮಾ ಅವರ ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ಕೆಲವು ಅಚ್ಚರಿಯ ಬೆಳವಣಿಗೆಗಳು ತೆರೆಮರೆಯಲ್ಲಿ ನಡೆದಿವೆ ಎಂದು ಹೇಳಲಾಗುತ್ತಿದೆ.
ಮುಂಬೈನಲ್ಲಿ ಇಂದು (ಸೆ.03) ನಡೆಯಲಿರುವ ಬಿಸಿಸಿಐ ಸಭೆಯಲ್ಲಿ ರೋಹಿತ್ ಶರ್ಮಾ ಮಾತ್ರವಲ್ಲದೆ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜೇಡೇಜಾ ಅವರ ಭವಿಷ್ಯದ ಬಗ್ಗೆಯೂ ಗಂಭೀರ ಚರ್ಚೆ ನಡೆಯಲಿದೆ. ಭಾರತದ ತಂಡವು ಆಫ್ರಿಕಾದಲ್ಲಿ ನಡೆಯಲಿರುವ 2027ರ ಏಕದಿನ ವಿಶ್ವಕಪ್ ಟೂರ್ನಿಗೆ ಹೆಜ್ಜೆ ಇಡುತ್ತಿರುವ ಹಿನ್ನೆಲೆಯಲ್ಲಿ ಈ ಸಭೆಯು ತೀವ್ರ ಕುತೂಹಲ ಮೂಡಿಸಿದೆ. ರೋಹಿತ್ ಅವರ ಮೇಲೆ ಕತ್ತಿ ತೂಗುತ್ತಿದ್ದರೆ, ಕೊಹ್ಲಿ ಮತ್ತು ಜಡೇಜಾ ಸದ್ಯಕ್ಕೆ ಯಾವುದೇ ಒತ್ತಡವನ್ನು ಎದುರಿಸುತ್ತಿಲ್ಲ.
ಇಂಗ್ಲೆಂಡ್ ಪ್ರವಾಸದ ವೇಳೆ ಲಾರ್ಡ್ಸ್ನಲ್ಲಿ ನಡೆದ ಏಕದಿನ ಸರಣಿಯ ಫೈನಾಲ್ ಪಂದ್ಯವೇ ರೋಹಿತ್ ಅವರ ಕೊನೆಯ ಪಂದ್ಯವಾಗಲಿದೆ ಎಂಬ ಗುಸುಗುಸು ಕೇಳಿಬಂದಿತ್ತು. ಈಗಾಗಲೇ ರೋಹಿತ್ 2024ರಲ್ಲಿ ಟಿ20 ಹಾಗೂ 2025ರಲ್ಲಿ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಪಿಟಿಐ ವರದಿ ಪ್ರಕಾರ, ಆಯ್ಕೆ ಸಮಿತಿಯ ಸದಸ್ಯರೊಬ್ಬರು ರೋಹಿತ್ ಬಳಿ ತಾವು ಮುಂದಿನ ಹಾದಿಯತ್ತ ಸಾಗಲು ನಿರ್ಧರಿಸಿರುವುದಾಗಿ ತಿಳಿಸಿದ್ದು, ಪಂದ್ಯದ ಬಳಿಕವೇ ನಿವೃತ್ತಿ ಪ್ರಕಟಿಸುವಂತೆ ಕೇಳಿಕೊಂಡಿದ್ದರು ಎನ್ನಲಾಗಿದೆ.
ಶತಕದ ಮೂಲಕ ತಾತ್ಕಾಲಿಕ ವಿರಾಮ
ಆಯ್ಕೆದಾರರ ಈ ಮಾತುಗಳಿಂದ ತೀವ್ರ ಬೇಸರಗೊಂಡಿದ್ದ ರೋಹಿತ್ ಶರ್ಮಾ, ಲಾರ್ಡ್ಸ್ ಪಂದ್ಯದಲ್ಲಿ ಅದ್ಭುತವಾಗಿ ಬ್ಯಾಟ್ ಬೀಸಿ 138 ರನ್ಗಳ ಭರ್ಜರಿ ಶತಕ ಸಿಡಿಸಿದರು. ಅವರ ಈ ಅಮೋಘ ಆಟದಿಂದಾಗಿ ಸದ್ಯಕ್ಕೆ ನಿವೃತ್ತಿಯ ಮಾತುಗಳು ಮತ್ತು ಚರ್ಚೆಗಳು ತಾತ್ಕಾಲಿಕವಾಗಿ ಹಿನ್ನೆಲೆಗೆ ಸರಿದವು. ಆದರೆ, ಈ ಶತಕವೊಂದೇ ಅವರನ್ನು 2027ರ ವಿಶ್ವಕಪ್ ತಂಡದಲ್ಲಿ ಖಾಯಂಗೊಳಿಸುವುದಿಲ್ಲ ಎಂದು ವರದಿಗಳು ಸ್ಪಷ್ಟಪಡಿಸಿವೆ.
ರೋಹಿತ್ ನಿವೃತ್ತಿ ವದಂತಿಗಳ ಬೆನ್ನಲ್ಲೇ, ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ರೋಹಿತ್ ತಂಡದಲ್ಲೇ ಮುಂದುವರಿಯಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದರು. ಆದರೆ, ಈ ಹೇಳಿಕೆಯು ಆಯ್ಕೆ ಸಮಿತಿಗೆ ಸಮಾಧಾನ ತಂದಿರಲಿಲ್ಲ. ಇದು ಅಜಿತ್ ಅಗರ್ಕರ್ ನೇತೃತ್ವದ ಸಮಿತಿ ಹಾಗೂ ಬಿಸಿಸಿಐ ಉನ್ನತ ಅಧಿಕಾರಿಗಳ ನಡುವೆ ಆಂತರಿಕ ಉದ್ವಿಗ್ನತೆಗೆ ಕಾರಣವಾಯಿತು ಎಂದು ಹೇಳಲಾಗಿದೆ.
ಈ ಬೆಳವಣಿಗೆಗಳು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರ ಭವಿಷ್ಯದ ಮೇಲೂ ಪರಿಣಾಮ ಬೀರಿವೆ. 2027ರ ವಿಶ್ವಕಪ್ ತನಕ ತಮ್ಮ ಅಧಿಕಾರಾವಧಿ ವಿಸ್ತರಣೆಯಾಗಲಿದೆ ಎಂದು ಅಗರ್ಕರ್ ನಿರೀಕ್ಷಿಸಿದ್ದರು. ಆದರೆ, ಗುರುವಾರದ ಬಿಸಿಸಿಐ ಸಭೆಯಲ್ಲಿ ಈ ಯೋಜನೆಯ ಬಗ್ಗೆಯೂ ಚರ್ಚೆಯಾಗಲಿದ್ದು, ಅವರ ಸ್ಥಾನಕ್ಕೆ ಎನ್ಸಿಎ (ಸದ್ಯ ಸಿಒಇ) ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರನ್ನು ತರಲು ಮಂಡಳಿ ಉತ್ಸುಕವಾಗಿದೆ ಎಂಬ ಗುಸುಗುಸು ಜೋರಾಗಿದೆ, (ಏಜೆನ್ಸೀಸ್).