ಯಶಸ್ವಿ ಜೈಸ್ವಾಲ್ ಕೇಕ್ ತಿನ್ನಿಸಲು ಬಂದಾಗ ನೋ ಎಂದ ರೋಹಿತ್ ಶರ್ಮ
- ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾದ ಏಕದಿನ ಸರಣಿ ಜಯ
- ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡ ಭಾರತ
- ವಿಶಾಖಪಟ್ಟಣದಲ್ಲಿ ಕೇಕ್ ಕತ್ತರಿಸಿ ವಿಜಯೋತ್ಸವ ಆಚರಿಸಿದ ಟೀಮ್ ಇಂಡಿಯಾ
- ಯಶಸ್ವಿ ಜೈಸ್ವಾಲ್ ಕೇಕ್ ತಿನ್ನಿಸಲು ಬಂದಾಗ ಬೇಡ ಎಂದು ನಿರಾಕರಿಸಿದ ರೋಹಿತ್
Rohit Sharma : ಶನಿವಾರ ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಅಂತಿಮ ಏಕದಿನ ಪಂದ್ಯವನ್ನು ಗೆದ್ದು, ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ಭಾರತ ಗೆದ್ದುಕೊಂಡಿತು. ಪಂದ್ಯ ಬಳಿಕ ತಾವು ತಂಗಿದ್ದ ಹೋಟೆಲ್ಗೆ ಟೀಮ್ ಇಂಡಿಯಾ ತಲುಪಿದಾಗ ಭವ್ಯ ಸ್ವಾಗತ ದೊರೆಯಿತು. ಈ ವೇಳೆ ಯಶಸ್ವಿ ಜೈಸ್ವಾಲ್ ಅವರು ಕೇಕ್ ಕತ್ತರಿಸಿ ವಿಜಯೋತ್ಸವ ಆಚರಿಸಿದರು.
ಕೇಕ್ ಕತ್ತರಿಸಿದ ಬಳಿಕ ಮೊದಲ ತುಂಡನ್ನು ಹಿರಿಯ ಆಟಗಾರ ಕೊಹ್ಲಿಗೆ ತಿನ್ನಿಸಿದ ಜೈಸ್ವಾಲ್, ನಂತರ ಮತ್ತೊಬ್ಬ ಹಿರಿಯ ಆಟಗಾರ ರೋಹಿತ್ ಶರ್ಮಗೆ ತಿನ್ನಿಸಲು ಮುಂದಾದರು. ಆದರೆ, ರೋಹಿತ್ ಅವರು ತಿನ್ನಲು ನಿರಾಕರಿಸಿದರು. ಹೋಗಪ್ಪ ನಾನು ಮತ್ತೆ ದಪ್ಪಗಾಗುತ್ತೇನೆ ಎನ್ನುತ್ತಾ ಕೇಕ್ ತಿನ್ನದೇ ಅಲ್ಲಿಂದ ನಗುತ್ತಾ ಹೊರಟು ಹೋದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಅಂದಹಾಗೆ, ಟಿ20 ಮತ್ತು ಟೆಸ್ಟ್ ಪಂದ್ಯಗಳಿಂದ ನಿವೃತ್ತಿ ಘೋಷಿಸಿರುವ ರೋಹಿತ್ ಶರ್ಮ, ಪ್ರಸ್ತುತ ಏಕದಿನ ಪಂದ್ಯಗಳನ್ನು ಮಾತ್ರ ಆಡುತ್ತಿದ್ದಾರೆ. 2027ರ ಏಕದಿನ ವಿಶ್ವಕಪ್ ಗುರಿಯೊಂದಿಗೆ ರೋಹಿತ್ ಅವರು ಏಕದಿನ ಮಾದರಿಯಲ್ಲಿ ಮುಂದುವರಿಯುತ್ತಿದ್ದಾರೆ. ವಿಶ್ವಕಪ್ಗೆ ಇನ್ನೂ ಸಾಕಷ್ಟು ಸಮಯ ಇರುವುದರಿಂದ ರೋಹಿತ್ ಅವರು ತಮ್ಮ ಫಿಟ್ನೆಸ್ ಕಡೆ ಹೆಚ್ಚು ಗಮನಹರಿಸಿದ್ದಾರೆ.
ಸದ್ಯ ರೋಹಿತ್ ಅವರು ತಮ್ಮ ಫಿಟ್ನೆಸ್ನಲ್ಲಿ ಸಾಕಷ್ಟು ಸುಧಾರಿಸಿಕೊಂಡಿದ್ದಾರೆ. ಟೆಸ್ಟ್ ಮಾದರಿಗೆ ನಿವೃತ್ತಿ ಘೋಷಿಸಿದಾಗಿನಿಂದ, ಬರೋಬ್ಬರಿ 10 ಕೆಜಿಗಿಂತ ಹೆಚ್ಚು ತೂಕ ಇಳಿಸಿಕೊಂಡಿದ್ದಾರೆ. ತಮ್ಮ ಫಿಟ್ನೆಸ್ಮ ಕಾಯ್ದುಕೊಳ್ಳಲು ಕಟ್ಟುನಿಟ್ಟಿನ ಆಹಾರಕ್ರಮವನ್ನು ಅನುಸರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಣ್ಣ ಕೇಕ್ ತುಂಡನ್ನು ತಿನ್ನಲು ನಿರಾಕರಿಸಿದ್ದಾರೆ.
ಅಂದಹಾಗೆ, ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ರಾಂಚಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಅವರು 51 ಎಸೆತಗಳಲ್ಲಿ 57 ರನ್ ಗಳಿಸಿದರು. ಎರಡನೇ ಏಕದಿನ ಪಂದ್ಯದಲ್ಲಿ 14 ರನ್ ಗಳಿಸಿ ಔಟಾದರು. ನಿರ್ಣಾಯಕ ಮೂರನೇ ಏಕದಿನ ಪಂದ್ಯದಲ್ಲಿ ಅವರು 73 ಎಸೆತಗಳಲ್ಲಿ 75 ರನ್ ಗಳಿಸಿ ಭಾರತದ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು, (ಏಜೆನ್ಸೀಸ್).