ಡ್ರೆಸಿಂಗ್ ರೂಮ್ನಲ್ಲಿ ಇ-ಸಿಗರೇಟ್ ಸೇದಿದ ರಿಯಾನ್ ಪರಾಗ್
- ಡ್ರೆಸಿಂಗ್ ರೂಮ್ನಲ್ಲಿ ಇ-ಸಿಗರೇಟ್ ಸೇದಿದ ರಿಯಾನ್ ಪರಾಗ್
- ಸೋಷಿಯಲ್ ಮೀಡಿಯಾನಲ್ಲಿ ವಿಡಿಯೋ ವೈರಲ್
- ಬಿಸಿಸಿಐ ನಿಂದ ಪಂದ್ಯದ ಶೇ.25 ರಷ್ಟು ಶುಲ್ಕ ದಂಡ
ಪಂಜಾಬ್: ಮಂಗಳವಾರ (ಏ.28) ನಡೆದ ಪಂಜಾಬ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಐಪಿಎಲ್ ಪಂದ್ಯದ ವೇಳೆ ರಾಜಸ್ಥಾನ್ ತಂಡದ ನಾಯಕ ರಿಯಾನ್ ಪರಾಗ್ ಇ-ಸಿಗರೇಟ್ (Riyan Parag Vaping) ಸೇದಿದ ವಿಡಿಯೋ ಎಲ್ಲಾ ಕಡೆ ವೈರಲ್ ಆಗಿ ಆಕ್ರೋಶಕ್ಕೆ ಕಾರಣವಾಗಿತ್ತು.
ಈಗ ಈ ವಿಚಾರದ ಬಗ್ಗೆ ಕಠಿಣ ಕ್ರಮ ಕೈಗೊಂಡಿರುವ ಬಿಸಿಸಿಐ ರಿಯಾನ್ ಪರಾಗ್ಗೆ ಅಂದಿನ ಪಂದ್ಯದ ಶುಲ್ಕದ ಶೇ.25 ರಷ್ಟು ಮೊತ್ತವನ್ನು ದಂಡದ ರೂಪದಲ್ಲಿ ಭರಿಸುವಂತೆ ತಿಳಿಸಿದೆ. ಪರಾಗ್ ಐಪಿಎಲ್ನ ನೀತಿ ಸಂಹಿತೆಯನ್ನು ಮುರಿದ್ದಿದ್ದಾರೆ, ಆದರೆ ಇದು ಕೇವಲ ಮೊದಲ ಹಂತದ ಉಲ್ಲಂಘನೆಯಾದ ಕಾರಣ ಕೇವಲ 25% ದಂಡವನ್ನು ಮಾತ್ರ ವಿಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ರಿಯಾನ್ನಿಂದ ವೇಪಿಂಗ್!
ಏಪ್ರಿಲ್ 28 ರಂದು, ಪಂಜಾಬ್ನ ಪಿಸಿಎ ಕ್ರೀಡಾಂಗಣದಲ್ಲಿ ನಡೆದ 19 ನೇ ಸಾಲಿನ ಐಪಿಎಲ್ನ 40 ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ, ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸುವ ಮೂಲಕ ಪಂಜಾಬ್ನ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿತು.
ಆದರೆ ಇದೇ ಪಂದ್ಯಾವಳಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಡ್ರೆಸಿಂಗ್ ರೂಮ್ನಲ್ಲಿ ವೇಪ್ (ಇಲೆಕ್ಟ್ರಾನಿಕ್ ಸಿಗರೇಟ್) ಸೇದುತ್ತಿರುವ ದೃಶ್ಯವೊಂದು ಕ್ಯಾಮರಾದ ಕಣ್ಣಿನಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ದೊಡ್ಡ ಚರ್ಚೆಗೆ ವೇದಿಕೆಯಾಗಿದೆ.
ಕಾನೂನು ಏನು ಹೇಳುತ್ತದೆ?
ಭಾರತ ಸರ್ಕಾರವು 2019ರಲ್ಲಿ ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧ ಕಾಯ್ದೆ (PECA - Prohibition of Electronic Cigarettes Act) ಅಡಿಯಲ್ಲಿ ಇ-ಸಿಗರೇಟ್ ಮತ್ತು ವೇಪ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ.
ಈ ಕಾಯ್ದೆಯ ಪ್ರಕಾರ, ಇ-ಸಿಗರೇಟ್ ಮತ್ತು ವೇಪ್‌ಗಳ ಉತ್ಪಾದನೆ ಮತ್ತು ತಯಾರಿಕೆ, ಆಮದು ಮತ್ತು ರಫ್ತು, ಸಂಗ್ರಹಣೆ ಮತ್ತು ಮಾರಾಟ ಅಂತೆಯೇ ಯಾವುದೇ ರೀತಿಯ ಜಾಹೀರಾತನ್ನು ಮಾಡುವಂತಿಲ್ಲ ಎಂಬ ನಿಯಮವಿದೆ.
ಮೊದಲ ಬಾರಿಗೆ ಈ ನಿಯಮಗಳನ್ನು ಮೀರಿದರೆ 1 ವರ್ಷದವರೆಗೆ ಜೈಲು ಶಿಕ್ಷೆ ಅಥವಾ 1 ಲಕ್ಷ ರೂಪಾಯಿವರೆಗೆ ದಂಡ, ಎರಡಕ್ಕಿಂತ ಹೆಚ್ಚು ಬಾರಿ ಉಲ್ಲಂಘಿಸಿದರೆ 3 ವರ್ಷದವರೆಗೆ ಜೈಲು ಶಿಕ್ಷೆ ಮತ್ತು 5 ಲಕ್ಷ ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ. ಹಾಗೆಯೇ ಇ-ಸಿಗರೇಟ್ ಮತ್ತು ವೇಪ್‌ಗಳ ಸಂಗ್ರಹಣೆಯನ್ನು ಮಾಡಿದಲ್ಲಿ, 6 ತಿಂಗಳವರೆಗೆ ಜೈಲು ಶಿಕ್ಷೆ ಅಥವಾ 50,000 ರೂಪಾಯಿ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ, (ಏಜನ್ಸೀಸ್).