ಸ್ಟಾರ್​ ಬ್ಯಾಟರ್​ನನ್ನು ತಂಡದಿಂದ ಕೈಬಿಟ್ಟರೆ ಒಳಿತು ಇಲ್ಲಾಂದ್ರೆ ವಿಶ್ವಕಪ್​ ಗೆಲ್ಲೋದು ಕಷ್ಟ ಅಂದ್ರು ರವಿಶಾಸ್ತ್ರಿ! Ravi Shastri  
ಕ್ರಿಕೆಟ್

ಈ ಸ್ಟಾರ್​ ಬ್ಯಾಟರ್​ನನ್ನು ತಂಡದಿಂದ ಕೈಬಿಟ್ಟರೆ ಒಳಿತು ಇಲ್ಲಾಂದ್ರೆ ವಿಶ್ವಕಪ್​ ಗೆಲ್ಲೋದು ಕಷ್ಟ ಅಂದ್ರು ರವಿಶಾಸ್ತ್ರಿ! Ravi Shastri

ಪ್ರಮುಖ ಮುಖ್ಯಾಂಶಗಳು

  • ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯು ಅಂತಿಮ ಹಂತಕ್ಕೆ ಬಂದಿದೆ
  • ಇಂದಿನಿಂದ (ಮಾರ್ಚ್​ 04) ಸೆಮಿಫೈನಲ್ ಪಂದ್ಯಗಳು ಆರಂಭವಾಗಲಿವೆ
  • ಇಂದು ಸಂಜೆ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ಕಾದಾಡಲಿವೆ
  • ಮಾರ್ಚ್ 5 ರಂದು ಭಾರತ ಮತ್ತು ಇಂಗ್ಲೆಂಡ್ ನಡುವೆ 2ನೇ ಸೆಮಿಫೈನಲ್​ ನಡೆಯಲಿದೆ
Ravi Shastri : ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯು ಅಂತಿಮ ಹಂತಕ್ಕೆ ಬಂದಿದೆ. ಇಂದಿನಿಂದ (ಮಾರ್ಚ್​ 04) ಸೆಮಿಫೈನಲ್ ಪಂದ್ಯಗಳು ಆರಂಭವಾಗಲಿದ್ದು, ಇಂದು ಸಂಜೆ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ಕಾದಾಡಲಿವೆ. ಈ ಮಹತ್ವದ ಪಂದ್ಯಕ್ಕೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಸಾಕ್ಷಿಯಾಗಲಿದೆ. ಎರಡನೇ ಸೆಮಿಫೈನಲ್ ಪಂದ್ಯ ಮಾರ್ಚ್ 5 ರಂದು ಭಾರತ ಮತ್ತು ಇಂಗ್ಲೆಂಡ್ ನಡುವೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ.
ಸಮಿಫೈನಲ್​ ಆರಂಭಕ್ಕೂ ಮುನ್ನವೇ ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ ಮತ್ತು ಪ್ರಸಿದ್ಧ ನಿರೂಪಕ ರವಿಶಾಸ್ತ್ರಿ, ಟೀಮ್ ಇಂಡಿಯಾಕ್ಕೆ ಪ್ರಮುಖ ಸಲಹೆಗಳನ್ನು ನೀಡಿದ್ದಾರೆ. ಇದನ್ನು ಎಚ್ಚರಿಕೆ ಅಂತಾನೂ ಪರಿಗಣಿಸಬಹುದು. ಅಷ್ಟಕ್ಕೂ ರವಿಶಾಸ್ತ್ರಿ ಹೇಳಿದ್ದೇನೆಂದರೆ, ಟೀಮ್​ ಇಂಡಿಯಾದ ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾರನ್ನು ಮುಂದಿನ ಪಂದ್ಯದಿಂದ ಕೈಬಿಡುವಂತೆ ಸಲಹೆ ನೀಡಿದ್ದಾರೆ.
ಐಸಿಸಿ ರಿವ್ಯೂನ ಇತ್ತೀಚಿನ ಎಪಿಸೋಡ್​ನಲ್ಲಿ ಮಾತನಾಡಿರುವ ರವಿಶಾಸ್ತ್ರಿ, ಅಭಿಷೇಕ್​ ಅವರು ಮಾನಸಿಕವಾಗಿ ತೊಂದರೆಗೀಡಾಗಿರುವಂತೆ ಕಾಣುತ್ತಿದ್ದಾರೆ. ಹೇಳಬೇಕೆಂದರೆ, ಅವರಿನ್ನೂ ಸೆಮಿಫೈನಲ್ ಪಂದ್ಯಕ್ಕೆ ಸಿದ್ಧವಾಗಿಲ್ಲ. ಸಾಧ್ಯವಾದರೆ, ಅಭಿಷೇಕ್ ಶರ್ಮಾರನ್ನು ಕೂರಿಸಿ, ಮತ್ತೊಬ್ಬ ಆರಂಭಿಕ ಆಟಗಾರನನ್ನು ಆಯ್ಕೆ ಮಾಡಿಕೊಳ್ಳುವಂತೆ ರವಿಶಾಸ್ತ್ರಿ ಸಲಹೆಗಳನ್ನು ನೀಡಿದ್ದಾರೆ. ಇಲ್ಲದಿದ್ದರೆ, ಟೀಮ್ ಇಂಡಿಯಾ ದೊಡ್ಡ ಅಪಾಯದಲ್ಲಿ ಸಿಲುಕುತ್ತದೆ ಎಂದು ಎಚ್ಚರಿಸಿದ್ದಾರೆ.
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಭಿಷೇಕ್ ಶರ್ಮಾ ಅವರ ಪ್ರದರ್ಶನ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ ಅನ್ನೋದು ಎಲ್ಲರಿಗು ತಿಳಿದಿದೆ. ಈ ಟೂರ್ನಿಯಲ್ಲಿ ಮೂರು ಬಾರಿ ಶೂನ್ಯಕ್ಕೆ ಔಟಾಗಿರುವ ಅಭಿಷೇಕ್ ಶರ್ಮಾ, ಕೇವಲ ಒಂದು ಅರ್ಧಶತಕ ಮಾತ್ರ ದಾಖಲಿಸಿದರು. ಅದು ಕೂಡ ಕ್ರಿಕೆಟ್​ ಶಿಶು ಜಿಂಬಾಬ್ವೆ ವಿರುದ್ಧ. ವೆಸ್ಟ್ ಇಂಡೀಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲೂ ಅಭಿಷೇಕ್ ಶರ್ಮಾ ವಿಫಲರಾದರು. ವಿಂಡೀಸ್​ ವಿರುದ್ಧ ಸಂಜು ಆಡದೇ ಇದ್ದಿದ್ದರೆ, ಟೀಮ್ ಇಂಡಿಯಾ ಮನೆಗೆ ಹೋಗುತ್ತಿತ್ತು. ಈ ಸಂದರ್ಭದಲ್ಲಿ, ರವಿಶಾಸ್ತ್ರಿ ಅವರು ಅಭಿಷೇಕ್ ಶರ್ಮಾ ಅವರ ಬಗ್ಗೆ ಪ್ರಮುಖ ಹೇಳಿಕೆಗಳನ್ನು ನೀಡಿದ್ದಾರೆ. ಅಭಿಷೇಕ್ ಶರ್ಮಾ ಅವರ ಸಂಪೂರ್ಣ ಮನಸ್ಥಿತಿ ಪ್ರಸ್ತುತ ಗೊಂದಲದಲ್ಲಿದೆ ಎಂದಿದ್ದಾರೆ.
ಅಭಿಷೇಕ್​ ಅವರು ಸೆಮಿಫೈನಲ್‌ಗೆ ಸಿದ್ಧವಾಗಿಲ್ಲ. ಅವರ ಸ್ಥಾನದಲ್ಲಿ ಮತ್ತೊಬ್ಬ ಆರಂಭಿಕ ಆಟಗಾರ ಕಣಕ್ಕಿಳಿದರೆ ಉತ್ತಮ. ಅಭಿಷೇಕ್​ ಅವರ ಮಾನಸಿಕ ಸ್ಥಿತಿಯಿಂದಾಗಿ ಸರಿಯಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ. ಅಭ್ಯಾಸದ ಸಮಯದಲ್ಲಿಯೂ ಸರಿಯಾಗಿ ಗಮನಹರಿಸುತ್ತಿಲ್ಲ. ಟೀಮ್ ಇಂಡಿಯಾ ಮತ್ತು ಇಂಗ್ಲೆಂಡ್ ನಡುವಿನ ಸೆಮಿಫೈನಲ್ ಸಮಯದಲ್ಲಿ ಆಟಗಾರರ ಮೇಲೆ ಹೆಚ್ಚಿನ ಒತ್ತಡ ಇರುತ್ತದೆ. ಅಂತಹ ಸಮಯದಲ್ಲಿ ಅಭಿಷೇಕ್ ಶರ್ಮಾ ಅವರು ಒತ್ತಡವನ್ನು ಎದುರಿಸಲಾರರು. ಆದ್ದರಿಂದ, ಪರ್ಯಾಯವಾಗಿ ಮತ್ತೊಬ್ಬ ಆರಂಭಿಕ ಆಟಗಾರನನ್ನು ತೆಗೆದುಕೊಳ್ಳುವುದು ಉತ್ತಮ ಎಂದು ರವಿಶಾಸ್ತ್ರಿ ಹೇಳಿದ್ದಾರೆ, (ಏಜೆನ್ಸೀಸ್​).