'ರೋಕೊ' ಜೋಡಿ ಮುಟ್ಟಲು ಯಾರಿಗೂ ಸಾಧ್ಯವಿಲ್ಲ 
ಕ್ರಿಕೆಟ್

'ರೋಕೊ' ಜೋಡಿ ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ: ಮಾಜಿ ಕ್ರಿಕೆಟಿಗ ಆರ್​. ಅಶ್ವಿನ್​ ಓಪನ್​ ಟಾಕ್​ | RoKo

ಪ್ರಮುಖ ಮುಖ್ಯಾಂಶಗಳು

  • ರೋಹಿತ್ ಶರ್ಮ ಮತ್ತು ವಿರಾಟ್​ ಕೊಹ್ಲಿಯನ್ನು ತಂಡದಿಂದ ಕೈಬಿಡುವ ಮುನ್ಸೂಚನೆ
  • ರೋಕೊ ಜೋಡಿಯನ್ನು ತೆಗೆದುಹಾಕುವುದು ಅಷ್ಟು ಸುಲಭದ ಮಾತಲ್ಲ
  • ಡ್ರಾಪ್​ ಔಟ್​ ಕುರಿತು ಟೀಮ್ ಇಂಡಿಯಾ ಮಾಜಿ ಸ್ಪಿನ್ನರ್​ ಆರ್​. ಅಶ್ವಿನ್​ ಓಪನ್ ಟಾಕ್​
ನವದೆಹಲಿ: ಅಂತಾರಾಷ್ಟ್ರೀಯ ಟಿ20 ಮತ್ತು ಟೆಸ್ಟ್ ಕ್ರಿಕೆಟ್​ಗೆ ಈಗಾಗಲೇ ಗುಡ್​ಬೈ ಘೋಷಿಸಿರುವ ಟೀಮ್ ಇಂಡಿಯಾದ ದಿಗ್ಗಜ ಹಾಗೂ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ (RoKo), ಪ್ರಸ್ತುತ ಏಕದಿನ ಪಂದ್ಯಗಳಿಗೆ ಮಾತ್ರ ಸೀಮಿತವಾಗಿದ್ದಾರೆ. ಇತ್ತೀಚೆಗಷ್ಟೇ ಇಂಗ್ಲೆಂಡ್​ ಸರಣಿ ಸೋತ ಬೆನ್ನಲ್ಲೇ 2027ರ ಏಕದಿನ ವಿಶ್ವಕಪ್​ ತಂಡದಲ್ಲಿ ಅವರಿಬ್ಬರಿಗೆ ಸ್ಥಾನ ಸಿಗೋದು ಬಹುತೇಕ ಅನುಮಾನ ಎಂಬ ಪ್ರಶ್ನೆಗಳು ಭಾರಿ ಚರ್ಚೆಯಾಗುತ್ತಿದ್ದಂತೆ ಭಾರತದ ಮಾಜಿ ಕ್ರಿಕೆಟಿಗ ಆರ್​. ಅಶ್ವಿನ್​ ಮುಟ್ಟಿ ನೋಡಿಕೊಳ್ಳುವಂತೆ ಕೆಲವರಿಗೆ ಉತ್ತರಿಸಿದ್ದಾರೆ.   
'ರೋಕೊ' ಜೋಡಿಯನ್ನು ವಿಶ್ವಕಪ್​ ತಂಡದಿಂದ ಖಚಿತವಾಗಿ ಕೈಬಿಡುತ್ತಾರೆ. ಇದಕ್ಕೆ ಕಾರಣ, ಹೆಡ್​ ಕೋಚ್​ ಗೌತಮ್ ಗಂಭೀರ್ ಹಾಗೂ ರೋಹಿತ್ ಶರ್ಮ ಮತ್ತು ವಿರಾಟ್​ ಕೊಹ್ಲಿ ಮಧ್ಯೆಯಿರುವ ಸಾಕಷ್ಟು ಭಿನ್ನಾಭಿಪ್ರಾಯಗಳು. ಬಲವಂತವಾಗಿ ದಿಗ್ಗಜ ಕ್ರಿಕೆಟಿಗರನ್ನು ತಂಡದಿಂದ ಹೊರಗೆ ಕಳುಹಿಸುತ್ತಾರೆ ಎಂಬ ಮಾತುಗಳು ಜಾಲತಾಣಗಳಲ್ಲಿ ಹರಿದಾಡಿವೆ. ಈ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಅಶ್ವಿನ್​, ಅವರಿಬ್ಬರನ್ನು ತೆಗೆದುಹಾಕುವ ಮಾತು ಅಷ್ಟು ಸುಲಭವಲ್ಲ ಎಂದಿದ್ದಾರೆ. 
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮುಂದುವರಿಯಲು ಬಯಸಿದರೆ, ಅವರನ್ನು ತಂಡದಿಂದ ಕೈಬಿಡುವುದು ಅತ್ಯಂತ ಕಷ್ಟಕರ. ಇದಕ್ಕೆ ಎರಡು ಮುಖ್ಯ ಕಾರಣಗಳಿವೆ. ಮೊದಲನೆಯದು, ಅವರಿಬ್ಬರ ಅದ್ಭುತ ಪ್ರತಿಭೆ. ರೋಹಿತ್ ಶರ್ಮಾ ಏಕದಿನ ಪಂದ್ಯಗಳಲ್ಲಿ 11,000ಕ್ಕೂ ಅಧಿಕ ರನ್ ಗಳಿಸಿದ್ದಾರೆ. ಆದ್ದರಿಂದ ಅಂತಹ ಆಟಗಾರನನ್ನು ಪಕ್ಕಕ್ಕಿಡುವುದು ಕಷ್ಟಸಾಧ್ಯ. ಇನ್ನು, ಕೊಹ್ಲಿ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ. ಅವರು ತಮ್ಮ ಆಟದ ಮೂಲಕ ತಮ್ಮನ್ನು ತಾವು ಸಾಬೀತುಪಡಿಸಿದ್ದಾರೆ ಎಂದರು.
ಎರಡನೆಯದು, ರೋಕೊ ಜೋಡಿಗೆ ದೊಡ್ಡ ಅಭಿಮಾನಿಗಳ ಬಳಗವಿದೆ. ಈ ಇಬ್ಬರು ಪಂದ್ಯಗಳನ್ನು ಆಡುವಾಗ, ಲಕ್ಷಾಂತರ ಪ್ರೇಕ್ಷಕರು ಅವರನ್ನು ನೋಡುವುದಕ್ಕೆ ಮೈದಾನದಲ್ಲಿ ಸೇರುತ್ತಾರೆ. ಹೀಗಿರುವಾಗ, ಅಂತಹವರನ್ನು ತಂಡದಿಂದ ಕೈಬಿಟ್ಟರೆ, ಭಾರಿ ಟೀಕೆ, ಪ್ರಶ್ನೆಗಳು ಉದ್ಬವಿಸುತ್ತದೆ. ರೋಹಿತ್ ಮತ್ತು ಕೊಹ್ಲಿಯನ್ನು ತಂಡದಿಂದ ಹೊರಗಿಟ್ಟರೆ ಜನರು ಸುಮ್ಮನಿರುತ್ತಾರೆಯೇ? ಖಂಡಿತ ಇಲ್ಲ ಎಂದರು. 
ಬೌಲರ್‌ಗಳ ಪರಿಸ್ಥಿತಿ ಸ್ವಲ್ಪ ಭಿನ್ನ. ಮೊಹಮ್ಮದ್​ ಶಮಿ, ಸಿರಾಜ್ ಅಥವಾ ಭುವನೇಶ್ವರ್ ಕುಮಾರ್‌ರಂತಹ ಬೌಲರ್‌ಗಳು ತಂಡದಲ್ಲಿ ಇಲ್ಲದಿದ್ದರೆ, ಕೆಲವೇ ಜನರು ಅದನ್ನು ಪ್ರಶ್ನಿಸುತ್ತಾರೆ. ಏಕೆಂದರೆ, ಸ್ಟಾರ್ ಬ್ಯಾಟರ್‌ಗಳ ಬಗ್ಗೆ ಇರುವಷ್ಟು ಚರ್ಚೆ, ಬೌಲರ್​ಗಳ ಕುರಿತಂತೆ ಇರುವುದಿಲ್ಲ. ಬೌಲರ್‌ಗಳಿಗೂ ಅದೇ ಮಟ್ಟಗಿನ ಚರ್ಚೆ, ಪ್ರಶ್ನೆಗಳು ಇದ್ದಿದ್ದರೆ ಆಗ ಖಂಡಿತ ಅವರನ್ನು ತಂಡದಿಂದ ಕೈಬಿಡುವುದು ಸಹ ಕಷ್ಟವೇ ಎಂದು ಅಶ್ವಿನ್ ತಮ್ಮದೇ ಶೈಲಿಯಲ್ಲಿ ಹೇಳಿದ್ದಾರೆ,(ಏಜೆನ್ಸೀಸ್).