ಮೊಹಮ್ಮದ್ ಅಮೀರ್ಗೆ ಖಡಕ್ ತಿರುಗೇಟು ಕೊಟ್ಟ ಅಶ್ವಿನ್! Abhishek Sharma
- ಅಭಿಷೇಕ್ ಶರ್ಮಾರನ್ನು ಟೀಕಿಸಿದ್ದ ಪಾಕ್ ಆಟಗಾರನಿಗೆ ಖಡಕ್ ತಿರುಗೇಟು ಕೊಟ್ಟ ಆರ್. ಅಶ್ವಿನ್
- ಮೊಹಮ್ಮದ್ ಅಮೀರ್ ಅವರನ್ನು ತರಾಟೆಗೆ ತೆಗೆದುಕೊಂಡ ರವಿಚಂದ್ರನ್ ಅಶ್ವಿನ್
- ಅಭಿ ಆಟದ ಬಗ್ಗೆ ನೀವು ಏನು ಬೇಕಾದರೂ ಹೇಳಬಹುದು ಆದರೆ ಸ್ಲಾಗರ್ ಅಲ್ಲ ಅಂದ್ರು ಮಾಜಿ ಸ್ಪಿನ್ ಮಾಂತ್ರಿಕ
Abhishek Sharma : ಟೀಮ್ ಇಂಡಿಯಾದ ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ವಿರುದ್ಧ ಟೀಕೆಗಳ ಸುರಿಮಳೆಗೈದಿದ್ದ ಪಾಕಿಸ್ತಾನದ ಸ್ಟಾರ್ ಬೌಲರ್ ಮೊಹಮ್ಮದ್ ಅಮೀರ್ ಅವರನ್ನು ಭಾರತದ ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಅಹಮದಾಬಾದ್ನಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯ ಎರಡನೇ ಸೂಪರ್-8 ಹಂತದ ಪಂದ್ಯವನ್ನು ದಕ್ಷಿಣ ಆಫ್ರಿಕಾ ವಿರುದ್ಧ ಸೋತ ಟೀಮ್ ಇಂಡಿಯಾಗೆ ಭಾರೀ ಟೀಕೆಗಳು ಹರಿದುಬಂದವು. ಗ್ರೂಪ್ ಸ್ಟೇಜ್ನಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ಸತತ ಜಯ ಸಾಧಿಸಿದ ಸೂರ್ಯಕುಮಾರ್ ಯಾದವ್ ಪಡೆಗೆ ಸೌತ್ ಆಫ್ರಿಕಾ ಎದುರು ಗೆಲುವಿನ ಓಟ ಮುಂದುವರೆಸಲು ಆಗಲಿಲ್ಲ. ಒಂದೆಡೆ, ಭಾರತ 74 ರನ್ಗಳ ಹೀನಾಯ ಸೋಲು ಅನುಭವಿಸಿದರೆ, ಮತ್ತೊಂದೆಡೆ ಮೂರು ಡಕ್ಔಟ್ ಬಳಿಕ ಮತ್ತೊಂದು ಪಂದ್ಯದಲ್ಲಿಯೂ ಅಭಿಷೇಕ್ ತಮ್ಮ ಫ್ಲಾಪ್ ಶೋ ಮುಂದುವರಿಸಿದರು. ಹೀಗಾಗಿ, ಅಭಿಷೇಕ್ ಟೀಕೆಗಳಿಗೆ ಗುರಿಯಾದರು.
ಮೊಹಮ್ಮದ್ ಅಮೀರ್ ಹೇಳಿದ್ದೇನು?
ಅಭಿಷೇಕ್ ಒಬ್ಬ ಅದ್ಭುತ ಬ್ಯಾಟರ್ ಏನಲ್ಲ. ಆತ ಸ್ಲಾಗರ್ (ಟೆಕ್ನಿಕ್ ಇಲ್ಲದೆ ಆಡುವ ಕ್ರಿಕೆಟಿಗ). ಅಭಿಷೇಕ್ರನ್ನು ನಾನು ನಮ್ಮದೇ ತಂಡದ ಬ್ಯಾಟರ್ ಸೈಮ್ ಆಯುಬ್ಗೆ ಹೋಲಿಸುತ್ತೇನೆ. ಕಾರಣ, ಆಯುಬ್ ಬಂದಾಗ ಅವನಿಗೆ ಯಾವ ಕಡೆ ಹೊಡೆಯಬೇಕು ಅನ್ನೋದೇ ಗೊತ್ತಿರಲಿಲ್ಲ. ಆಡಬಾರದ ಜಾಗದಲ್ಲಿ ಆಡ್ತಿದ್ದ. ಲೆಗ್ಸೈಡ್ ರನ್ಗಳನ್ನು ಕಲೆಹಾಕುತ್ತಿದ್ದ. ಬಾಲ್ ನಾಲ್ಕನೇ ಅಥವಾ ಐದನೇ ಸ್ಟಂಪ್ನತ್ತ ಬಂದರೆ ಅವನಿಗೆ ಏನು ಮಾಡಬೇಕೋ ತಿಳಿಯುತ್ತಿರಲಿಲ್ಲ. ಅಭಿಷೇಕ್ ಕೂಡ ಹಾಗೆಯೇ ಎಂದು ಅಮೀರ್ ಹೇಳಿದ್ದರು.
ಅಲ್ಲದೆ, ಪಾಕಿಸ್ತಾನದ ಟಿವಿಯಲ್ಲೂ ಮಾತನಾಡಿದ್ದ ಅಮೀರ್, ನಾನು ನನ್ನ ಹೇಳಿಕೆಗೆ ಈಗಲೂ ಬದ್ಧ. ಇಲ್ಲಿ ಅಭಿಷೇಕ್ ಶರ್ಮರನ್ನು ಕೆಳಗೆ ಹಾಕಿ ಮಾತಾಡಬೇಕು ಅಥವಾ ಟೀಕಿಸಬೇಕು ಅಂತ ಸ್ಲಾಗರ್ ಪದ ಬಳಸಲಿಲ್ಲ. ಅವರ ಬಗ್ಗೆ ಆ ರೀತಿ ಹೇಳುತ್ತಿದ್ದದ್ದು ಕೇವಲ ಒಬ್ಬ ಬೌಲರ್ ದೃಷ್ಟಿಯಲ್ಲಿ ಮಾತ್ರ. ಸೂಪರ್-8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧವೂ ಅವರ ವಿಫಲರಾಗಿದ್ದಾರೆ. ಕೇವಲ 14 ರನ್ ಗಳಿಸಿದ್ದಾರೆ. ಇಷ್ಟು ರನ್ ಅನ್ನು ಒಂದೇ ಸೈಡ್ನಲ್ಲಿ ಅವರು ಕಲೆಹಾಕಿದ್ದಾರೆ. ಅಭಿಷೇಕ್ ಆಡಿದ್ದೆಲ್ಲ ಕೆಟ್ಟ ಬಾಲ್ಗಳೇ. ಯಾವಾಗ ರಬಾಡ ಉತ್ತಮ ಬೌಲಿಂಗ್ ದಾಳಿಗೆ ಮುಂದಾದರೋ, ಆಗ ಹೇಗೆ ಆಡಬೇಕು ಅನ್ನೋದೇ ಆತನಿಗೆ ತಿಳಿಯಲಿಲ್ಲ ಎಂದರು.
ಮತ್ತೆ ಫಾರ್ಮ್ಗೆ ಬಂದ ಅಭಿ
ಟೀಕೆಗಳ ನಡುವೆ ಅಭಿಷೇಕ್ ಶರ್ಮಾ ನಿನ್ನೆ ಮತ್ತೆ ಫಾರ್ಮ್ಗೆ ಮರಳಿದ್ದಾರೆ. ನಿನ್ನೆ ಜಿಂಬಾಬ್ವೆ ವಿರುದ್ಧ ನಡೆದ ಸೂಪರ್ 8 ಪಂದ್ಯದಲ್ಲಿ ಟೀಮ್ ಇಂಡಿಯಾ ಮೊದಲು ಬ್ಯಾಟ್ ಮಾಡಿ 256 ರನ್ ಕಲೆಹಾಕಿತು. ಈ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಆಡಿದ ಅಭಿಷೇಕ್, 30 ಎಸೆತಗಳಲ್ಲಿ 55 ರನ್ ಗಳಿಸಿದರು. ಈ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಅಮೀರ್ಗೆ ಅಶ್ವಿನ್ಗೆ ಗುದ್ದು
ನಿನ್ನೆ ಅಭಿಷೇಕ್ ಆಡಿದ ರೀತಿಯನ್ನು ಉಲ್ಲೇಖಿಸಿ ಟೀಮ್ ಇಂಡಿಯಾದ ಮಾಜಿ ಸ್ಪಿನ್ ಮಾಂತ್ರಿಕ ಆರ್. ಅಶ್ವಿನ್, ಅಮೀರ್ಗೆ ಜಾಡಿಸಿದ್ದಾರೆ. ಅಭಿಷೇಕ್ ಶರ್ಮಾ ಆಟದ ಬಗ್ಗೆ ನೀವು ಏನು ಬೇಕಾದರೂ ಹೇಳಬಹುದು, ಆದರೆ ಅವರು ಸ್ಲಾಗರ್ ಅಲ್ಲ. ಅವರು ಕ್ರಿಕೆಟ್‌ನಲ್ಲಿ ಅತ್ಯಂತ ಉತ್ತಮ ಬ್ಯಾಟ್ ಸ್ವಿಂಗ್‌ಗಳಲ್ಲಿ ಒಂದನ್ನು ಹೊಂದಿದ್ದಾರೆ. ಅವರ ಮಾರ್ಗದರ್ಶಕ ಯುವರಾಜ್ ಸಿಂಗ್‌ಗಿಂತಲೂ ಅಭಿಷೇಕ್ ಉತ್ತಮರು. ಅಭಿ ಅವರ ಏಕೈಕ ತಪ್ಪೆಂದರೆ, ಪ್ರತಿ ಚೆಂಡನ್ನೂ ಸಿಕ್ಸರ್ಗೆ ಅಟ್ಟುವ ಉದ್ದೇಶ ತೋರುತ್ತಾರೆ ಎಂದರು. ಈ ಮೂಲಕ ಅಮೀರ್ ಹೇಳಿಕೆಗೆ ಅಶ್ವಿನ್ ಖಡಕ್ ಉತ್ತರ ನೀಡಿದರು, (ಏಜೆನ್ಸೀಸ್).