PSL 2026 
ಕ್ರಿಕೆಟ್

ಗಲ್ಲಿ ಕ್ರಿಕೆಟ್‌ಗಿಂತಲೂ ಕಡೆ ಆಯ್ತು PSL: ಮಳೆಯಲಿ ನೆನೆಯುತ್ತಾ ಕಮೆಂಟರಿ; ಛತ್ರಿ ವ್ಯವಸ್ಥೆಯೂ ಇಲ್ವಾ? ಎಂದ ನೆಟ್ಟಿಗರು! PSL 2026

ಕರಾಚಿ: ಪಾಕಿಸ್ತಾನ ಸೂಪರ್ ಲೀಗ್ (PSL) ಅಂದ್ರೆ ಸಾಕು, ಅಲ್ಲಿ ಕ್ರಿಕೆಟ್‌ಗಿಂತ ವಿವಾದಗಳೇ ಹೆಚ್ಚು ಸದ್ದು ಮಾಡುತ್ತವೆ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. 2026ರ ಪಿಎಸ್ಎಲ್ (PSL 2026 )ಸೀಸನ್ ಆರಂಭವಾಗಿ ಕೇವಲ ಒಂದು ವಾರ ಕಳೆದಿದೆ, ಅಷ್ಟರಲ್ಲೇ ಈ ಲೀಗ್ ಸೋಶಿಯಲ್ ಮೀಡಿಯಾದಲ್ಲಿ ಮೀಮ್ ಮೆಟೀರಿಯಲ್ ಆಗಿ ಬದಲಾಗಿದೆ. ಮೈದಾನದಲ್ಲಿ ಸಿಕ್ಸರ್-ಬೌಂಡರಿಗಳ ಅಬ್ಬರಕ್ಕಿಂತ ಟ್ರೋಲರ್​ಗಳ ಕೇಕೆಯೇ ಹೆಚ್ಚಾಗಿ ಕೇಳಿಸುತ್ತಿದೆ.

ಮಳೆಯ ನಡುವೆ ಪಂದ್ಯ

ಇತ್ತೀಚೆಗೆ ನಡೆದ ಪಂದ್ಯವೊಂದರ ನಂತರದ ಪ್ರೆಸೆಂಟೇಶನ್ (Post-match presentation) ವೇಳೆ ನಡೆದ ಘಟನೆಯಂತೂ ಈಗ ಸೋಶಿಯ್​ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಪಾಕಿಸ್ತಾನದ ಬ್ಯಾಟರ್ ಅಜಂ ಖಾನ್ ಅವರು ಸಂದರ್ಶನ ನೀಡಲು ಸಿದ್ಧರಾಗಿದ್ದರು. ಅಷ್ಟರಲ್ಲಿ ವರುಣ ದೇವ ಎಂಟ್ರಿ ಕೊಟ್ಟಿದ್ದಾನೆ. ಜಿನುಗು ಮಳೆ ಶುರುವಾದಾಗ ಅಲ್ಲಿ ಗಲಿಬಿಲಿ ಉಂಟಾಯಿತು. ನಿರೂಪಕರು ಛತ್ರಿ ತರಲು ಓಡಾಡುತ್ತಿದ್ದರೆ, ಅಜಂ ಖಾನ್ ಮಳೆಯಲ್ಲಿ ನೆನೆಯುತ್ತಾ ನಿಂತಿದ್ದರು.
ಆಗ ಅಲ್ಲಿಗೆ ಬಂದಿದ್ದು ವೆಸ್ಟ್ ಇಂಡೀಸ್‌ನ ಆಲ್‌ರೌಂಡರ್ ಕಾರ್ಲೋಸ್ ಬ್ರಾಥ್‌ವೈಟ್ ಅಜಂ ಖಾನ್ ಸಂದರ್ಶನ ನೀಡುವಾಗ ಬ್ರಾಥ್‌ವೈಟ್ ಅವರ ತಲೆಯ ಮೇಲೆ ಛತ್ರಿ ಹಿಡಿದು ನಿಂತ ವಿಡಿಯೋ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ಇದನ್ನು ನೋಡಿದ ಫ್ಯಾನ್ಸ್, ಇದು ಅಂತರಾಷ್ಟ್ರೀಯ ಗುಣಮಟ್ಟದ ಲೀಗ್‌ ಅಂತಾರಾ ಅಥವಾ ಗಲ್ಲಿ ಕ್ರಿಕೆಟ್ ಅಂತಾರಾ? ಎಂದು ಕಾಲೆಳೆಯುತ್ತಿದ್ದಾರೆ.

ಈ ಸಲ ಕ್ರಿಕೆಟ್​ಗಿಂತ ವಿವಾದಗಳದ್ದೇ ಸದ್ದು!

2026ರ ಈ ಸೀಸನ್ ಆರಂಭದಿಂದಲೂ ಕೆಟ್ಟ ಕಾರಣಗಳಿಗಾಗಿಯೇ ಸುದ್ದಿಯಲ್ಲಿದೆ. ಪಿಎಸ್ಎಲ್ ಸರಿಯಾದ ಹಾದಿಯಲ್ಲಿ ಸಾಗಲು ಹೆಣಗಾಡುತ್ತಿದೆ ಅನ್ನೋದಕ್ಕೆ ಈ ಕೆಳಗಿನ ಘಟನೆಗಳೇ ಸಾಕ್ಷಿಯಾಗಿವೆ.
1. ವಿದೇಶಿ ಆಟಗಾರರ ಗುಡ್‌ಬೈ: ಟೂರ್ನಿ ಶುರುವಾದ ಬೆನ್ನಲ್ಲೇ ಸ್ಟಾರ್ ವಿದೇಶಿ ಆಟಗಾರರು ಲೀಗ್‌ನಿಂದ ಹೊರನಡೆಯುತ್ತಿದ್ದಾರೆ. ಇದು ಲೀಗ್‌ನ ಘನತೆಗೆ ದೊಡ್ಡ ಹೊಡೆತ ನೀಡಿದೆ.
2. ಫಖರ್ ಜಮಾನ್ ಮೇಲೆ ನಿಷೇಧ: ಪಾಕಿಸ್ತಾನದ ಸ್ಟಾರ್ ಆಟಗಾರ ಫಖರ್ ಜಮಾನ್ ಅವರು ಬಾಲ್ ಟ್ಯಾಂಪರಿಂಗ್ (ಚೆಂಡು ವಿರೂಪಗೊಳಿಸುವುದು) ಮಾಡ್ತಾ ಸಿಕ್ಕಿಬಿದ್ದಿದ್ದಾರೆ. ಈ ಕಾರಣಕ್ಕೆ ಅವರಿಗೆ ಎರಡು ಪಂದ್ಯಗಳ ನಿಷೇಧ ಹೇರಲಾಗಿದೆ.
3. ಮೂಲಸೌಕರ್ಯದ ಕೊರತೆ: ಮಳೆ ಬಂದಾಗ ಕನಿಷ್ಠ ಪಕ್ಷ ಆಟಗಾರರಿಗೆ ಮತ್ತು ನಿರೂಪಕರಿಗೆ ಒಂದು ಸರಿಯಾದ ಛಾವಣಿ ಅಥವಾ ಛತ್ರಿ ಒದಗಿಸಲು ಸಾಧ್ಯವಾಗದ ಪಿಸಿಬಿ (ಪಾಕಿಸ್ತಾನ ಕ್ರಿಕೆಟ್ ಮಂಡಳಿ) ವಿರುದ್ಧ ನೆಟ್ಟಿಗರು ಕೆಂಡಕಾರುತ್ತಿದ್ದಾರೆ.

ಮೀಮ್‌ಗಳ ಸುರಿಮಳೆ!

ಟ್ವಿಟರ್ (X) ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಈ ಲೀಗ್ ಬಗ್ಗೆ ಮೀಮ್‌ಗಳ ಭರಾಟೆ ಜೋರಾಗಿದೆ. ವಿಶ್ವದ ನಂಬರ್ 1 ಲೀಗ್ ಐಪಿಎಲ್ ಜೊತೆ ಪಿಎಸ್ಎಲ್ ಅನ್ನು ಹೋಲಿಕೆ ಮಾಡುತ್ತಿದ್ದವರಿಗೆ ಈಗ ವಾಸ್ತವ ಅರ್ಥವಾಗುತ್ತಿದೆ ಎಂದು ಭಾರತೀಯ ಫ್ಯಾನ್ಸ್ ಕಾಲೆಳೆಯುತ್ತಿದ್ದಾರೆ. ಈ ಪಿಎಸ್​ಎಲ್​ ಕ್ಕಿಂತ ನಮ್ಮೂರಿನಲ್ಲಿ ನಡೆಯುವ ಕ್ರಿಕೆಟ್​ ಟೂರ್ನಾಮೆಂಟ್​ ಎಷ್ಟೋ ಚೆನ್ನಾಗಿರುತ್ತದೆ ಎಂದು ವ್ಯಂಗ್ಯ ಮಾಡಿದ್ದಾರೆ,(ಏಜನ್ಸೀಸ್​).