ಅಜಿತ್​ ಅಗರ್ಕರ್ ಎಕ್ಸಿಟ್​ ಬೆನ್ನಲ್ಲೇ ಮುಖ್ಯ ಆಯ್ಕೆಗಾರ ಸ್ಥಾನಕ್ಕೆ ಮಾಜಿ ಸ್ಪಿನ್ನರ್ ಆಯ್ಕೆ! ಆದರೆ, ಇಲ್ಲೊಂದು ಕ್ಯಾಚ್​ ಇದೆ  
ಕ್ರಿಕೆಟ್

ಅಜಿತ್​ ಅಗರ್ಕರ್ ಎಕ್ಸಿಟ್​ ಬೆನ್ನಲ್ಲೇ ಮುಖ್ಯ ಆಯ್ಕೆಗಾರ ಸ್ಥಾನಕ್ಕೆ ಮಾಜಿ ಸ್ಪಿನ್ನರ್ ಆಯ್ಕೆ! ಆದರೆ, ಇಲ್ಲೊಂದು ಕ್ಯಾಚ್​ ಇದೆ | Chief Selector

ಖಾಯಂ ಮುಖ್ಯ ಆಯ್ಕೆಗಾರರ ​​ನೇಮಕಾತಿ ಪೂರ್ಣಗೊಳ್ಳುವವರೆಗೆ ಪ್ರಗ್ಯಾನ್ ಓಜಾ ಈ ಜವಾಬ್ದಾರಿಗಳನ್ನು ನಿರ್ವಹಿಸಲಿದ್ದಾರೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಮತ್ತೊಂದೆಡೆ, ಪೂರ್ಣಾವಧಿಯ ಮುಖ್ಯ ಆಯ್ಕೆಗಾರರ ​​ಹುದ್ದೆಯ ರೇಸ್​ನಲ್ಲಿ ಇದೀಗ ಟೀಮ್ ಇಂಡಿಯಾದ ಮತ್ತೊಬ್ಬ ಮಾಜಿ ಕ್ರಿಕೆಟಿಗ ಪಾರ್ಥಿವ್ ಪಟೇಲ್ ಅವರ ಹೆಸರನ್ನು ಬಿಸಿಸಿಐ ಪರಿಗಣಿಸುತ್ತಿದೆ ಎಂದು ವರದಿಯಾಗಿದೆ.

ನವದೆಹಲಿ: ಕಳೆದ ಕೆಲವು ದಿನಗಳಿಂದಲೂ ಬಿಸಿಸಿಐ ಮುಖ್ಯ ಆಯ್ಕೆಗಾರ (Chief Selector) ಸ್ಥಾನದಿಂದ ಅಜಿತ್ ಅಗರ್ಕರ್​ ಕೆಳಗಿಳಯಲಿದ್ದಾರೆ ಎಂಬ ಸುದ್ದಿಗಳು ಕ್ರಿಕೆಟ್​ ವಲಯದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿತ್ತು. ಅಂತೆಯೇ, ಇದೀಗ ಆಯ್ಕೆ ಸಮಿತಿಯಲ್ಲಿ ಬಿಸಿಸಿಐ (BCCI) ಪ್ರಮುಖ ಬದಲಾವಣೆಗಳನ್ನು ಮಾಡಿದ್ದು, ಅಜಿತ್​ ಎಕ್ಸಿಟ್​ ಬೆನ್ನಲ್ಲೇ ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್​ಗೆ ಮುಖ್ಯ ಆಯ್ಕೆಗಾರ ಸ್ಥಾನವನ್ನು ನೀಡಿದೆ. ಆದರೆ, ಪೂರ್ಣ ಪ್ರಮಾಣದಲ್ಲಿ ಅಲ್ಲ ಎಂಬುದೇ ಕ್ಯಾಚ್​.

ಅಜಿತ್ ಅಗರ್ಕರ್ ಅವರ ಬಿಸಿಸಿಐ ಒಪ್ಪಂದವು ಅಕ್ಟೋಬರ್ 4ರಂದು ಅಧಿಕೃತವಾಗಿ ಕೊನೆಗೊಳ್ಳಲಿದೆ. ಹೀಗಾಗಿ, ಅವರ ಸ್ಥಾನಕ್ಕೆ ಯಾರನ್ನು ತರಬೇಕು ಎಂಬ ಗೊಂದಲದಲ್ಲಿದ್ದ ಬಿಸಿಸಿಐ, ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ಪ್ರಗ್ಯಾನ್ ಓಜಾ ಅವರನ್ನು ಹಂಗಾಮಿ ಮುಖ್ಯ ಆಯ್ಕೆಗಾರರನ್ನಾಗಿ ನೇಮಕ ಮಾಡಿಕೊಂಡಿದೆ. ಖಾಯಂ ಮುಖ್ಯ ಆಯ್ಕೆಗಾರರ ​​ನೇಮಕಾತಿ ಪೂರ್ಣಗೊಳ್ಳುವವರೆಗೆ ಪ್ರಗ್ಯಾನ್ ಓಜಾ ಈ ಜವಾಬ್ದಾರಿಗಳನ್ನು ನಿರ್ವಹಿಸಲಿದ್ದಾರೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಮತ್ತೊಂದೆಡೆ, ಪೂರ್ಣಾವಧಿಯ ಮುಖ್ಯ ಆಯ್ಕೆಗಾರರ ​​ಹುದ್ದೆಯ ರೇಸ್​ನಲ್ಲಿ ಇದೀಗ ಟೀಮ್ ಇಂಡಿಯಾದ ಮತ್ತೊಬ್ಬ ಮಾಜಿ ಕ್ರಿಕೆಟಿಗ ಪಾರ್ಥಿವ್ ಪಟೇಲ್ ಅವರ ಹೆಸರನ್ನು ಬಿಸಿಸಿಐ ಪರಿಗಣಿಸುತ್ತಿದೆ ಎಂದು ವರದಿಯಾಗಿದೆ.

ಗುವಾಹಟಿಯಲ್ಲಿ ಆಯ್ಕೆಗಾರರ ​​ಪ್ರಮುಖ ಸಭೆ

ಭಾರತೀಯ ಆಯ್ಕೆಗಾರರು ಪ್ರಸ್ತುತ ಗುವಾಹಟಿಯಲ್ಲಿ ಸಭೆ ಸೇರಿದ್ದು, ಪ್ರಗ್ಯಾನ್ ಓಜಾ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ, ನ್ಯೂಜಿಲೆಂಡ್ ವಿರುದ್ಧದ ಮುಂಬರುವ ಪ್ರವಾಸಕ್ಕಾಗಿ ಭಾರತೀಯ ತಂಡವನ್ನು ಹೇಗೆ ಆಯ್ಕೆ ಮಾಡಬೇಕು ಎಂಬುದರ ಕುರಿತು ಸುದೀರ್ಘ ಚರ್ಚೆ ಕೈಗೊಳ್ಳಲಾಗಿದೆ. ಓಜಾ ಟೀಮ್ ಇಂಡಿಯಾದ ಅತ್ಯುತ್ತಮ ಸ್ಪಿನ್ನರ್ ಆಗಿ ಗುರುತಿಸಿಕೊಂಡಿದ್ದು ಇಂದಿಗೂ ಕ್ರಿಕೆಟ್​ ಪ್ರೇಮಿಗಳಿಗೆ ನೆನಪಿದೆ. 24 ಟೆಸ್ಟ್ ಪಂದ್ಯಗಳಲ್ಲಿ 113 ವಿಕೆಟ್‌, 18 ಏಕದಿನ ಪಂದ್ಯಗಳಲ್ಲಿ 21 ವಿಕೆಟ್‌ ಮತ್ತು 6 ಟಿ20 ಪಂದ್ಯಗಳಲ್ಲಿ 10 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದೀಗ ಅವರು ಆಟಗಾರರನ್ನು ಆಯ್ಕೆ ಮಾಡುವ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಹಲವರಲ್ಲಿ ಕುತೂಹಲ ಕೆರಳಿಸಿದೆ.

'ಕ್ರಿಕೆಟ್​ ದೇವರ' ಕೊನೆಯ ಪಂದ್ಯದ ಹೀರೋ

ಕ್ರಿಕೆಟ್ ಜಗತ್ತಿನಲ್ಲಿ ಪ್ರಗ್ಯಾನ್ ಓಜಾ ಅವರ ವೃತ್ತಿಜೀವನವು ಒಂದು ಪ್ರಮುಖ ನೆನಪಿನೊಂದಿಗೆ ಬೆಸೆದುಕೊಂಡಿದೆ. ಕಾರಣ, ನವೆಂಬರ್ 16, 2013ರಂದು ಸಚಿನ್ ತೆಂಡೂಲ್ಕರ್ ಆಡಿದ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯದಲ್ಲೇ ಪ್ರಗ್ಯಾನ್ ಓಜಾ ಕೂಡ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು. ಆ ಪಂದ್ಯದಲ್ಲಿ ಅವರು ಅದ್ಭುತ ಸ್ಪಿನ್ ಬೌಲಿಂಗ್ ಮೂಲಕ 10 ವಿಕೆಟ್‌ಗಳನ್ನು ಕಬಳಿಸಿ 'ಪಂದ್ಯಶ್ರೇಷ್ಠ' (ಪ್ಲೇಯರ್ ಆಫ್ ದಿ ಮ್ಯಾಚ್) ಪ್ರಶಸ್ತಿಗೆ ಭಾಜನರಾಗಿದ್ದರು.

ದುರದೃಷ್ಟವಶಾತ್, ಆ ನಂತರ ಅವರನ್ನು ಮತ್ತೆ ಭಾರತೀಯ ತಂಡಕ್ಕೆ ಆಯ್ಕೆ ಮಾಡಲಾಗಿಲ್ಲ. ಪಂದ್ಯ ಗೆಲ್ಲಿಸಿಕೊಡುವ ಆಟಗಾರನಾಗಿ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸಿದ ಓಜಾ, ಇದೀಗ ಮುಖ್ಯ ಆಯ್ಕೆಗಾರರ ​​ಸ್ಥಾನದಲ್ಲಿ ಭಾರತೀಯ ತಂಡದ ಭವಿಷ್ಯವನ್ನು ರೂಪಿಸಲು ಮುಂದಾಗಿದ್ದಾರೆ. ಅದು ಮಧ್ಯಂತರ ಮುಖ್ಯ ಆಯ್ಕೆಗಾರನಾಗಿ ಎಂಬುದು ಇಲ್ಲಿ ಗಮನಾರ್ಹ.

ಓಜಾಗೆ ಸರಣಿ ಸವಾಲು

ಮಧ್ಯಂತರ ಮುಖ್ಯ ಆಯ್ಕೆಗಾರರಾಗಿ ಅಧಿಕಾರ ವಹಿಸಿಕೊಂಡಿರುವ ಪ್ರಜ್ಞಾನ್ ಓಜಾ ಅವರ ಮುಂದೆ ಸವಾಲುಗಳಿವೆ. ಮುಂಬರುವ ಐಸಿಸಿ (ICC) ಟೂರ್ನಿಗಳು ಮತ್ತು ದ್ವಿಪಕ್ಷೀಯ ಸರಣಿಗಳಿಗಾಗಿ ಯುವ ಆಟಗಾರರನ್ನು ಪ್ರೋತ್ಸಾಹಿಸುವ ಮೂಲಕ ಅವರು ಪರಿಣಾಮಕಾರಿ ತಂಡವನ್ನೇ ರೂಪಿಸಬೇಕಿದೆ. ನ್ಯೂಜಿಲೆಂಡ್ ಪ್ರವಾಸಕ್ಕಾಗಿ ತಂಡವನ್ನು ಆಯ್ಕೆ ಮಾಡುವುದು ಓಜಾ ನೇತೃತ್ವದ ಸಮಿತಿಗೆ ಮೊದಲ ಪ್ರಮುಖ ಪರೀಕ್ಷೆಯಾಗಲಿದೆ. ಅನುಭವಿ ಮತ್ತು ಯುವ ಆಟಗಾರರನ್ನು ಒಳಗೊಂಡ ಅತ್ಯುತ್ತಮ ತಂಡವನ್ನು ಪ್ರಕಟಿಸಲು ಆಯ್ಕೆ ಸಮಿತಿಯು ಶ್ರಮಿಸುತ್ತಿದೆ,(ಏಜೆನ್ಸೀಸ್).