ಟೀಮ್ ಇಂಡಿಯಾ ಮಹಿಳಾ ಆಟಗಾರ್ತಿ ಸ್ಮೃತಿ ಮಂಧಾನ ಮತ್ತು ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್
- ಮುರಿದುಬಿತ್ತು ಟೀಮ್ ಇಂಡಿಯಾ ಮಹಿಳಾ ಆಟಗಾರ್ತಿ ಸ್ಮೃತಿ ಮಂಧಾನ ಮದುವೆ
- ಮದುವೆ ವಿಚಾರವಾಗಿ ಕೊನೆಗೂ ಮೌನ ಮುರಿದ ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್
- ವೈಯಕ್ತಿಯ ಸಂಬಂಧದಿಂದ ಹಿಂದೆ ಸರಿದು ಜೀವನದಲ್ಲಿ ಮುಂದುವರಿಯಲು ನಿರ್ಧರಿಸಿದ್ದೇನೆಂದ ಪಲಾಶ್
- ವದಂತಿಗಳನ್ನು ಹರಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಸ್ಮೃತಿ ಮಾಜಿ ಪ್ರಿಯಕರ ವಾರ್ನಿಂಗ್
ಮುಂಬೈ: ಭಾರತದ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಹಾಗೂ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ( Smriti Mandhana ) ಅವರ ಮದುವೆ ಸಂಗೀತ ನಿರ್ದೇಶಕ ಹಾಗೂ ನಿರ್ಮಾಪಕ ಪಲಾಶ್ ಮುಚ್ಚಲ್ ಅವರ ಜತೆ ಮತ್ತೆ ನಡೆಯುತ್ತಾ? ಅಥವಾ ಇಲ್ಲವಾ? ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಈ ವಿಚಾರವಾಗಿ ಪಲಾಶ್ ಅವರು ಕೊನೆಗೂ ಮೌನ ಮುರಿದಿದ್ದಾರೆ.
ತಮ್ಮ ಇನ್ಸ್ಟಾಗ್ರಾಂನಲ್ಲಿ ಸ್ಟೋರಿ ಹಂಚಿಕೊಂಡಿರುವ ಪಲಾಶ್, ಸ್ಮೃತಿ ಮಂಧಾನ ಜತೆಗಿನ ಪ್ರೇಮ ಸಂಬಂಧವನ್ನು ಬ್ರೇಕಪ್ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ, ತಮ್ಮ ವಿರುದ್ಧ ಇಲ್ಲಸಲ್ಲದ್ದನ್ನು ಹರಡುತ್ತಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನು ಸಹ ನೀಡಿದ್ದಾರೆ.
ಹಾಗಾದರೆ, ಪಲಾಶ್ ಅವರು ಏನು ಬರೆದಿದ್ದಾರೆ ಅನ್ನೋದನ್ನು ಡೀಟೈಲ್ ಆಗಿ ನೋಡುವುದಾದರೆ, ನಾನು ನನ್ನ ವೈಯಕ್ತಿಯ ಸಂಬಂಧದಿಂದ (ಸ್ಮೃತಿ ಮಂಧಾನ ಪ್ರೀತಿ) ಹಿಂದೆ ಸರಿದು, ನನ್ನ ಜೀವನದಲ್ಲಿ ಮುಂದುವರಿಯಲು ನಿರ್ಧರಿಸಿದ್ದೇನೆ. ಆಧಾರವಿಲ್ಲದ ವದಂತಿಗಳನ್ನು ನಂಬಿ ಜನರು ಸುಲಭವಾಗಿ ಪ್ರತಿಕ್ರಿಯಿಸುತ್ತಿರುವುದನ್ನು ನೋಡಿದರೆ ತುಂಬಾ ಕಷ್ಟವಾಗುತ್ತಿದೆ ಮತ್ತು ಭಯವಾಗುತ್ತಿದೆ. ನನ್ನ ಜೀವನದ ಅತ್ಯಂತ ಕಷ್ಟದ ಹಂತದಲ್ಲಿ ನಾನಿಂದು ಇದ್ದೇನೆ. ಆದರೆ, ನಾನು ನನ್ನ ನಂಬಿಕೆಗಳನ್ನು ಯಾವುದೇ ಕ್ಷಣದಲ್ಲೂ ಬಿಟ್ಟುಕೊಡದೇ, ಈ ಪರಿಸ್ಥಿತಿಯನ್ನು ಸಂತೋಷವಾಗಿಯೇ ನಿಭಾಯಿಸುತ್ತೇನೆ. ಮೂಲಗಳು ಯಾವುದೆಂದು ತಿಳಿಯದ ವದಂತಿಗಳನ್ನು ನಂಬಿ ಇನ್ನೊಬ್ಬರ ವ್ಯಕ್ತಿತ್ವವನ್ನು ನಿರ್ಣಯಿಸುವುದಕ್ಕೆ ಈ ಸಮಾಜ ವಿರಾಮ ಹೇಳುತ್ತದೆ ಎಂದು ನಾನು ಭಾವಿಸುತ್ತೇನೆಂದು ಪಲಾಶ್ ಬರೆದುಕೊಂಡಿದ್ದಾರೆ.
ಇದಿಷ್ಟೇ ಅಲ್ಲದೆ, ಮತ್ತಷ್ಟು ಬರೆದುಕೊಂಡಿರುವ ಪಲಾಶ್, ಸದ್ಯ ನಾವು ಈ ವಿಚಾರಗಳನ್ನು (ವದಂತಿಗಳನ್ನು) ಯೋಚಿಸುತ್ತಿರುವಾಗಲೇ, ಪ್ರಪಂಚದ ಅನೇಕ ಜನರು ಇಂತಹ ವದಂತಿಗಳನ್ನು ಹರಡಿ ತೀವ್ರ ಪರಿಣಾಮಗಳನ್ನು ಈಗಾಗಲೇ ಎದುರಿಸುತ್ತಿದ್ದಾರೆ. ಸುಳ್ಳು ಮತ್ತು ಮಾನಹಾನಿಕರ ವಿಷಯವನ್ನು ಹರಡುವವರ ವಿರುದ್ಧ ನನ್ನ ತಂಡವು ಕೂಡ ಕಠಿಣ ಕಾನೂನು ಕ್ರಮ ಕೈಗೊಳ್ಳಲಿದೆ. ಈ ಕಠಿಣ ಸಮಯದಲ್ಲಿ ನನ್ನ ಮೇಲೆ ದಯೆ ತೋರಿದವರಿಗೆ ನಾನು ಧನ್ಯವಾದ ತಿಳಿಸುತ್ತೇನೆ ಎಂದು ಹೇಳುವ ಮೂಲಕ ಪಲಾಶ್ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಹಿನ್ನೆಲೆ ಏನು?
ಎಲ್ಲವು ಅಂದುಕೊಂಡಂತೆ ನಡೆದಿದ್ದರೆ ನ. 23ರಂದು ಮಹಾರಾಷ್ಟ್ರ ಸಾಂಗ್ಲಿಯಲ್ಲಿ ಸ್ಮೃತಿ ಒಡೆತನದ ಫಾರ್ಮ್ಹೌಸ್ನಲ್ಲಿ ಸ್ಮೃತಿ ಮತ್ತು ಪಲಾಶ್ ವಿವಾಹ ನಡೆಯಬೇಕಿತ್ತು. ಆದರೆ, ಸ್ಮೃತಿ ತಂದೆ ಶ್ರೀನಿವಾಸ್ ಮಂಧಾನ ಅವರಿಗೆ ಹೃದಯಾಘಾತದ ಲಕ್ಷಣಗಳು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾದ ಹಿನ್ನೆಲೆಯಲ್ಲಿ ವಿವಾಹವನ್ನು ಮುಂದೂಡಲಾಗಿದೆ ಎಂದು ಆ ಸಮಯದಲ್ಲಿ ಘೋಷಿಸಲಾಯಿತು. ಇಷ್ಟೇ ಆಗಿದ್ದರೆ ಯಾವುದೇ ಸಂದೇಹಗಳು ಹುಟ್ಟಿಕೊಳ್ಳುತ್ತಿರಲಿಲ್ಲ. ತಂದೆ ಆಸ್ಪತ್ರೆಗೆ ದಾಖಲಾದ ಬೆನ್ನಲ್ಲೇ ಸ್ಮೃತಿ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಿಂದ ನಿಶ್ಚಿತಾರ್ಥ ಮತ್ತು ಕ್ರಿಕೆಟ್ ಮೈದಾನದಲ್ಲಿ ಪಲಾಶ್ ಪ್ರಪೋಸ್ ಮಾಡಿದ ವಿಡಿಯೋಗಳು ಸೇರಿದಂತೆ ಮದುವೆಗೆ ಸಂಬಂಧಿಸಿದ ಎಲ್ಲಾ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದರು. ಇದು ಸಾಲದು ಎಂಬಂತೆ ಸ್ಮೃತಿಯ ಸಹ ಆಟಗಾರ್ತಿಯರಾದ ಜೆಮಿಮಾ ರೋಡ್ರಿಗಸ್ ಮತ್ತು ಶ್ರೇಯಾಂಕ ಪಾಟೀಲ್ ಕೂಡ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದರು. ಮತ್ತೊರ್ವ ಆಟಗಾರ್ತಿ ರಾಧಾ ಯಾದವ್ ಅವರು ಪಲಾಶ್ ಅವರನ್ನು ಅನ್ಫಾಲೋ ಮಾಡಿದರು. ಈ ಎಲ್ಲ ನಡೆಗಳನ್ನು ನೋಡಿದಾಗ ಅನುಮಾನ ದಟ್ಟವಾಯಿತು. ವಿವಾಹವನ್ನು ಮುಂದೂಡಿರುವುದರ ಹಿಂದೆ ಏನೋ ಒಂದು ದೊಡ್ಡ ಸಮಸ್ಯೆ ಇದೆ ಎಂಬ ಊಹಾಪೋಹಕ್ಕೆ ಕಾರಣವಾಯಿತು.
ಆ ಕ್ಷಣದಲ್ಲಿ ಸ್ಮೃತಿ ಆಗಲಿ ಅಥವಾ ಪಲಾಶ್ ಆಗಲಿ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಇನ್ನಷ್ಟು ಗೊಂದಲವನ್ನು ಸೃಷ್ಟಿ ಮಾಡಿತು. ಇದರ ನಡುವೆ ಪಲಾಶ್ ಅವರ ಸಹೋದರಿ ಮತ್ತು ಬಾಲಿವುಡ್ ಗಾಯಕಿ ಪಲಾಕ್ ಮುಚ್ಚಲ್ ತಮ್ಮ ಸಹೋದರನ ಮದುವೆ ಬಗ್ಗೆ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದರು. ಸ್ಮೃತಿಯ ತಂದೆಯ ಅನಾರೋಗ್ಯದ ಕಾರಣ ಮದುವೆಯನ್ನು ಮುಂದೂಡಲಾಗಿದೆ ಎಂದು ಹೇಳಿದರು. ಯಾವಾಗ ಪಲಾಕ್ ಮುಚ್ಚಲ್ ಅವರು ಫೋಸ್ಟ್ ಮಾಡಿದರೋ ಕೆಲವೇ ಕ್ಷಣಗಳಲ್ಲಿ ಅಪರಿಚಿತ ಮಹಿಳೆಯೊಬ್ಬರು ಪಲಾಶ್ ಜೊತೆ ಚಾಟ್ ಮಾಡಿದ್ದಾರೆನ್ನಲಾದ ಸ್ಕ್ರೀನ್‌ಶಾಟ್‌ಗಳು ಜಾಲತಾಣದಲ್ಲಿ ಕಾಣಿಸಿಕೊಂಡವು. ಕೆಲವು ಪೋಸ್ಟ್‌ಗಳಲ್ಲಿ ಮೇರಿ ಡಿ'ಕೋಸ್ಟಾ ಎಂದು ಗುರುತಿಸಲ್ಪಟ್ಟ ಮಹಿಳೆ ಸ್ಕ್ರೀನ್ ಶಾಟ್ಗಳನ್ನು ಹಂಚಿಕೊಂಡಿದ್ದಾರೆ ಎಂದು ಹೇಳಿದವು. ಆ ಚಾಟ್ನಲ್ಲಿ ಪಲಾಶ್ ಅವರು ನಿಗೂಢ ಯುವತಿಯ ಲುಕ್ ಅನ್ನು ಹೊಗಳಿದ್ದರು ಮತ್ತು ಸ್ಮೃತಿ ಬಗ್ಗೆಯೂ ಚರ್ಚಿಸಿದ್ದರು. ಅಲ್ಲದೆ, ಡೇಟಿಂಗ್ ಬಗ್ಗೆಯೂ ಉಲ್ಲೇಖಿಸಿದ್ದರು. ಆದರೆ, ಇದು ಪಲಾಶ್ ಅವರಿಗೆ ಸಂಬಂಧಿಸಿದ ಸ್ಕ್ರೀನ್ಶಾಟ್ ಎಂಬುದಕ್ಕೆ ಯಾವುದೇ ಪುರಾವೆ ಇರಲಿಲ್ಲ. ಅಂದಿನಿಂದ ಅನೇಕ ಊಹಾಪೋಹಗಳು ಹರಡುತ್ತಾ ಬಂದವು. ಅಂತಿಮವಾಗಿ ಪಲಾಶ್ ಮುಚ್ಚಲು ವದಂತಿಗಳಿಗೆ ತೆರೆಎಳೆದಿದ್ದಾರೆ, (ಏಜೆನ್ಸೀಸ್).