ಹೀಗೂ ಟ್ರೋಫಿ ಗೆಲ್ಲಬೇಕಾ? ನಾಚಿಕೆಯಾಗಬೇಕು ಪಾಕಿಸ್ತಾನಕ್ಕೆ! ಅಂಧರ ಏಷ್ಯಾಕಪ್​ ಪ್ರಶಸ್ತಿ ಪ್ರದಾನಕ್ಕೆ ಕಾಲಿಡದ ಟೀಮ್ ಇಂಡಿಯಾ | Asia Cup 
ಕ್ರಿಕೆಟ್

ಹೀಗೂ ಟ್ರೋಫಿ ಗೆಲ್ಲಬೇಕಾ? ನಾಚಿಕೆಯಾಗಬೇಕು ಪಾಕಿಸ್ತಾನಕ್ಕೆ! ಅಂಧರ ಏಷ್ಯಾಕಪ್​ ಪ್ರಶಸ್ತಿ ಪ್ರದಾನಕ್ಕೆ ಕಾಲಿಡದ ಟೀಮ್ ಇಂಡಿಯಾ | Asia Cup

ನವದೆಹಲಿ: ಮಳೆಯ ಹಿನ್ನೆಲೆ ಭಾರತ ಮತ್ತು ಪಾಕಿಸ್ತಾನ ಮಧ್ಯೆ ನಡೆಯಬೇಕಿದ್ದ ಅಂಧರ ಏಷ್ಯಾಕಪ್​ ಫೈನಲ್ ಪಂದ್ಯವನ್ನು ಆಡಿಸದೆ, ನೇರವಾಗಿ ಪಾಕ್​ ವಿಜೇತ ತಂಡ ಎಂದು ಘೋಷಿಸಿದ್ದಲ್ಲದೇ, ಅವರಿಗೆ ಟ್ರೋಫಿಯನ್ನು ಹಸ್ತಾಂತರಿಸಿದ್ದನ್ನು ಟೀಮ್ ಇಂಡಿಯಾ ಮುಖಕ್ಕೆ ಹೊಡೆದಂತೆ ಬಹಿರಂಗವಾಗಿ ಖಂಡಿಸಿದೆ.

ಗೆದ್ದು ಟ್ರೋಫಿ ಪಡೆಯಲು ಅನರ್ಹರಾದ ಪಾಕಿಸ್ತಾನಕ್ಕೆ ಟೂರ್ನಿಯ ಚಾಂಪಿಯನ್ ಪಟ್ಟ ಕೊಟ್ಟಿರುವುದು ಸದ್ಯ ಭಾರತ ತಂಡದ ಆಟಗಾರರ ಪಿತ್ತವನ್ನು ನೆತ್ತಿಗೇರಿಸಿದೆ. ಬಾಂಗ್ಲಾದೇಶದ ಢಾಕಾದಲ್ಲಿ ನಡೆದ ಪುರುಷರ ಅಂಧರ ಏಷ್ಯಾಕಪ್ 2026ರ ಫೈನಲ್‌ನಲ್ಲಿ ಪಾಕಿಸ್ತಾನವನ್ನು ವಿಜೇತ ಎಂದು ಘೋಷಿಸಿದ್ದೇ ತಡ, ಟೀಮ್ ಇಂಡಿಯಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬಹಿಷ್ಕರಿಸಿದೆ. ಟ್ರೋಫಿ ಹೇಗೆ ಕೊಟ್ರಿ ನೀವು ಎಂದು ನೇರವಾಗಿ ಕಿಡಿಕಾರಿದೆ. ಜಂಟಿ ವಿಜೇತರೆಂದು ಘೋಷಿಸುವ ಬದಲು ಪಾಕಿಸ್ತಾನಕ್ಕೆ ಮಾತ್ರ ಟ್ರೋಫಿ ನೀಡಿರುವುದು ಈಗ ಕ್ರಿಕೆಟ್ ವಲಯದಲ್ಲಿ ಭಾರಿ ವಿವಾದವನ್ನು ಸೃಷ್ಟಿಸಿದೆ.

ಮಳೆಯಿಂದ ರದ್ದಾದ ಫೈನಲ್, ಪಾಕ್​ಗೆ ಚಾಂಪಿಯನ್ ಪಟ್ಟ!

ಪುರುಷರ ಅಂಧರ ಏಷ್ಯಾಕಪ್ ಫೈನಲ್ ಪಂದ್ಯ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯಬೇಕಿತ್ತು. ಆದರೆ, ವರುಣಾರ್ಭಟದ ಕಾರಣ ಪಂದ್ಯ ರದ್ದಾಯಿತು. ಈ ಸಂದರ್ಭದಲ್ಲಿ, ರನ್‌ರೇಟ್ ಆಧಾರದ ಮೇಲೆ ಪಾಕಿಸ್ತಾನ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಯಿತು. ಇದನ್ನು ವಿರೋಧಿಸಿದ ಟೀಮ್ ಇಂಡಿಯಾ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸದೆ, ಬಹಿರಂಗವಾಗಿ ಪ್ರತಿಭಟನೆ ನಡೆಸಿತು.

ನಿಯಮ ಉಲ್ಲಂಘನೆ ಆರೋಪ

ಕ್ರಿಕೆಟ್ ಅಸೋಸಿಯೇಷನ್ ​​ಫಾರ್ ದಿ ಬ್ಲೈಂಡ್ ಇನ್ ಇಂಡಿಯಾ (CABI) ಹೇಳಿಕೆಯ ಪ್ರಕಾರ, ಟೂರ್ನಿಯ ತಾಂತ್ರಿಕ ನಿಯಮಾವಳಿಯ ಸೆಕ್ಷನ್ 27ರಲ್ಲಿ ಫೈನಲ್ ಪಂದ್ಯ ಟೈ ಆದ ಸಂದರ್ಭದಲ್ಲಿ ಅನುಸರಿಸಬೇಕಾದ ನಿಯಮಗಳನ್ನು ಉಲ್ಲಂಘಿಸಲಾಗಿದೆ. ನಿಯಮಗಳ ಪ್ರಕಾರ, ಎರಡೂ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಬೇಕಿತ್ತು. ಆದರೆ, ಇಲ್ಲಿ ಅದಾಗಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದೆ.

ಕ್ಯಾಪ್ಟನ್​ ದುರ್ಗಾ ರಾವ್ ಕಿಡಿ

ವಿಡಿಯೋದಲ್ಲಿ ಭಾರತ ತಂಡದ ನಾಯಕ ಟಿ. ದುರ್ಗಾ ರಾವ್, ಫೈನಲ್ ಪಂದ್ಯ ರದ್ದಾದ ಬಳಿಕ ರೆಫರಿ ತಮ್ಮನ್ನು ಕರೆದು ರನ್‌ರೇಟ್ ಆಧಾರದ ಮೇಲೆ ಪಾಕಿಸ್ತಾನವನ್ನು ವಿಜೇತ ತಂಡವೆಂದು ಹಾಗೂ ಭಾರತವನ್ನು ರನ್ನರ್-ಅಪ್ ಎಂದು ಘೋಷಿಸುವುದಾಗಿ ಹೇಳಿದ್ರು. ಆದರೆ, ಈ ನಿರ್ಧಾರವನ್ನು ನಾವು ವಿರೋಧಿಸಿದೆವು. ಇಂತಹ ಪರಿಸ್ಥಿತಿಗಳಲ್ಲಿ ಈ ಹಿಂದೆ ಎರಡೂ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಿರುವ ಉದಾಹರಣೆಗಳಿವೆ. ಹೀಗಾಗಿ, ಈಗಿನ ನಿರ್ಧಾರ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಕಿಡಿಕಾರಿದ್ದಾರೆ,(ಏಜೆನ್ಸೀಸ್).