17 ನಿಮಿಷ ಹಾರಾಟ, 400 ಕಿ.ಮೀ ಸಾಮರ್ಥ್ಯ! ಇಂಧನ ಬಳಸದೇ ಫ್ಲೈಟ್​ಗೆ ರೆಕ್ಕೆ ಕೊಟ್ಟ ಚೀನಾ ಮತ್ತೊಂದು ಮೈಲಿಗಲ್ಲು | CE-25A

 CE-25A
17 ನಿಮಿಷ ಹಾರಾಟ, 400 ಕಿ.ಮೀ ಸಾಮರ್ಥ್ಯ! ಇಂಧನ ಬಳಸದೇ ಫ್ಲೈಟ್​ಗೆ ರೆಕ್ಕೆ ಕೊಟ್ಟ ಚೀನಾ ಮತ್ತೊಂದು ಮೈಲಿಗಲ್ಲು | CE-25A
Published on: 

ಬೀಜಿಂಗ್: ವಾಯುಯಾನ ಕ್ಷೇತ್ರದಲ್ಲಿ ಹೊಸದೊಂದು ಮೈಲಿಗಲ್ಲು ತಲುಪಿರುವ ಚೀನಾ, ಇಂಧನ ರಹಿತ ವಿಶೇಷ ವಿಮಾನವೊಂದನ್ನು ಆಕಾಶದಲ್ಲಿ ಬರೋಬ್ಬರಿ 17 ನಿಮಿಷಗಳ ಕಾಲ ಯಶಸ್ವಿಯಾಗಿ ಹಾರಾಡಿಸಿದೆ.

ಜೆಟ್​ ಇಂಧನವನ್ನು ಹೆಚ್ಚಾಗಿ ಬಳಸಿಕೊಳ್ಳುವ ವಿಮಾನಗಳ ಇಂಧನ ಬೇಡಿಕೆಯನ್ನು ಇಳಿಸುವ ನಿಟ್ಟಿನಲ್ಲಿ ಇದೀಗ ಚೀನಾ ಮಹತ್ವದ ಹೆಜ್ಜೆಯಿಟ್ಟಿದೆ. ಜೆಟ್ ಇಂಧನದ ಬದಲಿಗೆ ಸಂಪೂರ್ಣ ಬ್ಯಾಟರಿ ವಿದ್ಯುತ್‌ನಿಂದಲೇ ಕಾರ್ಯನಿರ್ವಹಿಸುವ 19 ಸೀಟರ್​ ಸಾಮರ್ಥ್ಯದ ಎಲೆಕ್ಟ್ರಿಕ್ ವಿಮಾನವನ್ನು ಯಶಸ್ವಿಯಾಗಿ ಹಾರಿಸಿದೆ.

ಸುಮಾರು 17 ನಿಮಿಷಗಳ ಕಾಲ ಆಕಾಶದಲ್ಲಿ ಹಾರಿದ ಈ ವಿಮಾನ, ಭವಿಷ್ಯದ ಪರಿಸರ ಸ್ನೇಹಿ ವಿಮಾನಯಾನಕ್ಕೆ ಹೊಸ ಭರವಸೆ ಮೂಡಿಸಿದೆ. ಈ ಟೆಕ್ನಾಲಜಿ ವಾಣಿಜ್ಯ ವಾಯುಯಾನದಲ್ಲಿ ಬಳಕೆಗೆ ಬಂದರೆ ಇಂಧನ ಬಳಕೆ ಮತ್ತು ವಾಯುಮಾಲಿನ್ಯವನ್ನು ತಗ್ಗಿಸುವಲ್ಲಿ ಮಹತ್ವದ ಬದಲಾವಣೆ ತರಬಹುದು ಎಂಬ ಚಿಂತನೆ ಚೀನಾದ್ದು. ಈ ಯಶಸ್ವಿ ಹಾರಾಟದ ಮೂಲಕ ಇದೀಗ ಚೀನಾ ವಾಯುಯಾನ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ತಲುಪಿದೆ.

17 ನಿಮಿಷಗಳ ಹಾರಾಟ, 60.4 ಕಿ.ಮೀ ಪ್ರಯಾಣ

ಚೀನಾದ ಕಮರ್ಷಿಯಲ್ ಏರ್‌ಕ್ರಾಫ್ಟ್ ಕಾರ್ಪೊರೇಷನ್ ಅಭಿವೃದ್ಧಿಪಡಿಸಿರುವ CE-25A ವಿಮಾನವು ತನ್ನ ಮೊದಲ ಪ್ರಾಯೋಗಿಕ ಹಾರಾಟದಲ್ಲಿ 17 ನಿಮಿಷಗಳ ಕಾಲ ಯಶಸ್ವಿಯಾಗಿ ಹಾರಾಡಿದೆ. ಈ ವೇಳೆ, ಸುಮಾರು 60.4 ಕಿಲೋಮೀಟರ್ ದೂರ ಕ್ರಮಿಸಿದೆ. ಪೂರ್ತಿ ಬ್ಯಾಟರಿ ಚಾರ್ಚ್​ನ ಪ್ರಯಾಣದಲ್ಲಿ ಸುಮಾರು 400 ಕಿ.ಮೀ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದೆ ಎಂದು ವರದಿಗಳು ಉಲ್ಲೇಖಿಸಿವೆ.

ಸುಮಾರು 10,000 ಕೆಜಿ ತೂಕದವರೆಗೆ ಟೇಕಾಫ್ ಮಾಡುವ ಸಾಮರ್ಥ್ಯ ಹೊಂದಿರುವ ಈ ವಿಮಾನವು 19 ಪ್ರಯಾಣಿಕರನ್ನು ಸಾಗಿಸಬಲ್ಲದು ಎಂದು ವಿವರಿಸಲಾಗಿದೆ. ಆದರೆ, ಫ್ಲೈಟ್​ ಯಾವಾಗ ವಾಣಿಜ್ಯ ಸೇವೆಗೆ ಮುಕ್ತವಾಗಿ ಪ್ರವೇಶಿಸಲಿದೆ? ಎಂಬುದರ ಕುರಿತು ಇನ್ನೂ ಯಾವುದೇ ಮಾಹಿತಿ ಅಥವಾ ಅಧಿಕೃತ ದಿನಾಂಕವಾಗಲಿ ಲಭ್ಯವಾಗಿಲ್ಲ.

ಸಾಮಾನ್ಯ ಫ್ಲೈಟ್​ಗಿಂತಲೂ ಭಿನ್ನ!

ಸಾಮಾನ್ಯ ವಿಮಾನಗಳಲ್ಲಿ ರೆಕ್ಕೆಗಳ ಕೆಳಭಾಗದಲ್ಲಿ ದೊಡ್ಡದಾದ ಎರಡು ಇಂಜಿನ್‌ಗಳನ್ನು ಅಳವಡಿಸಲಾಗಿರುತ್ತದೆ. ಆದರೆ, CE-25A ವಿನ್ಯಾಸ ವಿಭಿನ್ನವಾಗಿದೆ. ಇದರ ರೆಕ್ಕೆಗಳ ಮೇಲೆ ಎರಡೂ ಬದಿಗೆ ತಲಾ ಐದು, ಒಟ್ಟು ಹತ್ತು ವಿದ್ಯುತ್ ಚಾಲಿತ ಡಕ್ಟೆಡ್ ಫ್ಯಾನ್‌ಗಳನ್ನು ಅಳವಡಿಸಲಾಗಿದೆ. ಈ ತಂತ್ರಜ್ಞಾನವನ್ನು 'ಡಿಸ್ಟ್ರಿಬ್ಯೂಟೆಡ್ ಎಲೆಕ್ಟ್ರಿಕ್ ಪ್ರೊಪಲ್ಷನ್' ಎಂದು ಕರೆಯಲಾಗಿದೆ. ಹಲವು ಸಣ್ಣ ಫ್ಯಾನ್‌ಗಳ ಮೂಲಕ ವಿಮಾನಕ್ಕೆ ಅಗತ್ಯವಿದ್ದಷ್ಟು ಒತ್ತಡವನ್ನು ಸೃಷ್ಟಿಸುವುದು ಇದರ ವಿಶೇಷತೆ. ಇದರಿಂದ ಗಾಳಿಯ ಹರಿವನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಇಂಜಿನಿಯರ್‌ಗಳು ನಿರೀಕ್ಷಿಸಿದ್ದಾರೆ.

ಗಾಳಿಯ ಹರಿವಿನಿಂದಲೇ ಹೆಚ್ಚಲಿದೆ ದಕ್ಷತೆ

ವಿಮಾನ ಹಾರಾಟದ ವೇಳೆ ಅದರ ಮೇಲ್ಮೈಗೆ ಅಂಟಿಕೊಂಡಂತೆ ನಿಧಾನವಾಗಿ ಚಲಿಸುವ ಗಾಳಿಯ ಪದರವನ್ನು 'ಬೌಂಡರಿ ಲೇಯರ್' ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಈ ಗಾಳಿಯ ಹರಿವಿನಿಂದ ಉಂಟಾಗುವ ಶಕ್ತಿಯ ನಷ್ಟವನ್ನು ಇಳಿಸಲು ವಿಮಾನ ವಿನ್ಯಾಸದಲ್ಲಿ ದೊಡ್ಡ ಸವಾಲಾಗಿದೆ.

CE-25A ವಿಮಾನದಲ್ಲಿ ಅಳವಡಿಸಿರುವ ಫ್ಯಾನ್‌ಗಳು ಈ ಮಂದಗತಿಯ ಗಾಳಿಯನ್ನು ಮತ್ತೆ ಚಲನೆಗೆ ತರುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇದರಿಂದ ವಾಯುಪ್ರತಿರೋಧದಿಂದ ಉಂಟಾಗುವ ನಷ್ಟವನ್ನು ಕಡಿತಗೊಳಿಸಿ, ವಿಮಾನದ ಒಟ್ಟಾರೆ ಚಾಲನಾ ದಕ್ಷತೆಯನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ.

ಬ್ಯಾಟರಿ ಸಾಮರ್ಥ್ಯದ ಬಗ್ಗೆ ಮಾಹಿತಿ ಇಲ್ಲ

ಈ ವಿಮಾನದ ಮೊದಲ ಹಾರಾಟ ಯಶಸ್ವಿಯಾಗಿದ್ದರೂ, ಅದರ ಬ್ಯಾಟರಿ ವ್ಯವಸ್ಥೆಯ ಸಂಪೂರ್ಣ ವಿವರಗಳು ಇನ್ನೂ ಬಹಿರಂಗಪಡಿಸಿಲ್ಲ. ಬ್ಯಾಟರಿಯ ಸಾಮರ್ಥ್ಯ, ತೂಕ, ರಾಸಾಯನಿಕ ಸಂಯೋಜನೆ ಮತ್ತು ಚಾರ್ಜ್ ಮಾಡಲು ಬೇಕಾಗುವ ಸಮಯದ ಬಗ್ಗೆ ಸದ್ಯದ ಮಟ್ಟಿಗೆ ಮಾಹಿತಿಯನ್ನು ಹರಿಬಿಟ್ಟಿಲ್ಲ.

Also Read
ಈ ಕಾಡಿನ ಹಸಿರು ಬ್ಯೂಟಿಗಿಂತ ಇಲ್ಲಿನ ಸಾವುಗಳೇ ಹುಟ್ಟಿಸುತ್ತೆ ಭಯ! ಅಯೋಕಿಗಹಾರ ಅರಣ್ಯದ ಹಿಂದಿದೆ ಒಂದು ಕರಾಳ ಸ್ಟೋರಿ | Suicide Forest
 CE-25A

ಎಲೆಕ್ಟ್ರಿಕ್ ವಿಮಾನಗಳ ಅಭಿವೃದ್ಧಿಯಲ್ಲಿ ಬ್ಯಾಟರಿಯ ತೂಕವೇ ದೊಡ್ಡ ಸವಾಲಾಗಿದೆ. ಜೆಟ್ ಇಂಧನಕ್ಕೆ ಹೋಲಿಸಿದರೆ ಪ್ರತಿ ಕೆಜಿ ಬ್ಯಾಟರಿಯಲ್ಲಿ ಸಂಗ್ರಹಿಸಬಹುದಾದ ಶಕ್ತಿ ಕಡಿಮೆ. ಹೀಗಾಗಿ, ಅಧಿಕ ದೂರ ಹಾರಲು ಹೆಚ್ಚಿನ ಬ್ಯಾಟರಿಯ ಅವಶ್ಯಕತೆಯಿದೆ. ಇದರಿಂದ ವಿಮಾನದ ತೂಕ ಹೆಚ್ಚಾಗಿ, ಹಾರಾಟಕ್ಕೆ ಇನ್ನಷ್ಟು ಶಕ್ತಿಯ ಅಗತ್ಯ ಉಂಟಾಗುತ್ತದೆ.

ಹೀಗಾಗಿ, CE-25A ವಿಮಾನದ ಮೊದಲ ಹಾರಾಟವು ಮಹತ್ವದ ತಾಂತ್ರಿಕ ಸಾಧನೆಯಾಗಿದ್ದರೂ, ಇದನ್ನು ದೊಡ್ಡ ಮಟ್ಟದಲ್ಲಿ ವಾಣಿಜ್ಯ ಬಳಕೆಗೆ ತರುವುದು ಇನ್ನೂ ಹಲವು ಪರೀಕ್ಷೆಗಳು ಮತ್ತು ಸುಧಾರಣೆಗಳನ್ನು ಅವಲಂಬಿಸಿದೆ. ಪ್ರಯಾಣಿಕರನ್ನು ಹೊತ್ತ ಮೊದಲ ವಾಣಿಜ್ಯ ಹಾರಾಟ ಯಾವಾಗ ನಡೆಯಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ತಿಳಿಯಬೇಕಿದೆ,(ಏಜೆನ್ಸೀಸ್).