ನಮ್ಮ ಸಿಂಹಗಳು ಘರ್ಜಿಸಿವೆ ಎಂದು ಟ್ವಿಟ್ ಮಾಡಿದ ವಿಜಯ್ ಮಲ್ಯ
- ಎರಡನೇ ಭಾರಿ ಚಾಂಪಿಯನ್ ಪಟ್ಟಕ್ಕೇರಿದ ಆರ್ಸಿಬಿ
- ನಮ್ಮ ಸಿಂಹಗಳು ಘರ್ಜಿಸಿವೆ ಎಂದು ಟ್ವಿಟ್ ಮಾಡಿದ ವಿಜಯ್ ಮಲ್ಯ
- ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಮಾಲೀಕನಾಗಿದ್ದ ವಿಜಯ್ ಮಲ್ಯ
ಲಂಡನ್: ಭಾನುವಾರ (ಮೇ.31) ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ 2026 ರ ಐಪಿಎಲ್ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುಜರಾತ್ ಟೈಟಾನ್ಸ್ ತಂಡವನ್ನು ಸೋಲಿಸಿ ಸತತ ಎರಡನೇ ಭಾರಿಗೆ ಚಾಂಪಿಯನ್ಸ್ ಆಗಿ ಹೊರಹೊಮ್ಮಿದ್ದಾರೆ.
ಈ ಅಭೂತಪೂರ್ವ ಗೆಲುವಿಗೆ ದೇಶದಾದ್ಯಂತ, ವಿಶೇಷವಾಗಿ ಕರ್ನಾಟಕದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಈಗ ಈ ಗೆಲುವಿಗೆ ಪ್ರತಿಕ್ರಿಯೆ ನೀಡುವ ಮೂಲಕ ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ (Vijay Mallya on RCB Victory) ಮತ್ತೆ ಮುನ್ನಲೆಗೆ ಬಂದಿದ್ದಾರೆ.
ನಮ್ಮ ಸಿಂಹಗಳು ಘರ್ಜಿಸಿವೆ!
ಸತತ ಎರಡನೇ ಭಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿದಿದ್ದು, ಈ ಗೆಲುವನ್ನು ಸಂಭ್ರಮಿಸಿರುವ ಮಾಜಿ ಮಾಲೀಕ ವಿಜಯ್ ಮಲ್ಯ ನಮ್ಮ ದೊಡ್ಡ ಸಿಂಹಗಳು ಮತ್ತೊಮ್ಮೆ ಘರ್ಜಿಸಿವೆ ಎಂದು ಸೋಷಿಯಲ್ ಮೀಡಿಯಾ ವೇದಿಕೆ ಎಕ್ಸ್ (ಟ್ವಿಟರ್) ನಲ್ಲಿ ಬರೆದುಕೊಂಡಿದ್ದಾರೆ.
ನಮ್ಮ ಸಿಂಹಗಳು ಮತ್ತೊಮ್ಮೆ ಘರ್ಜಿಸಿ ಎರಡನೇ ಸಲ ಕಪ್ನ್ನು ಗೆದ್ದಿರುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ. ತಂಡದ ಎಲ್ಲಾ ಆಟಗಾರರಿಗೆ ಶುಭಾಷಯಗಳು ಎಂದು ವಿಜಯ್ ಮಲ್ಯ ಶುಭಕೋರಿದ್ದಾರೆ.
ಆರ್ಸಿಬಿ ಮೊದಲ ಮಾಲೀಕ ಮಲ್ಯ!
2008 ರಲ್ಲಿ ಪ್ರಾರಂಭವಾದ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಅಂದಿನ ಯುನೈಟೆಡ್ ಸ್ಪಿರಿಟ್ಸ್ನ ಮುಖ್ಯಸ್ಥನಾಗಿದ್ದ ವಿಜಯ್ ಮಲ್ಯ ಸುಮಾರು 450 ಕೋಟಿ ರೂಪಾಯಿಗೆ ಖರೀದಿಸಿದ್ದರು.
2016 ರಲ್ಲಿ ಯುನೈಟೆಡ್ ಸ್ಪಿರಿಟ್ಸ್ನಿಂದ ಹೊರಬಂದ ಮಲ್ಯನ ಕೈಯಿಂದ ಆರ್ಸಿಬಿ ತಂಡ, ಬ್ರಿಟನ್ ಮೂಲದ ಡಿಯಾಗೋ ಗ್ರೂಪ್ನ ಕೈಸೇರಿತು. ಪ್ರಸ್ತುತ ಸುಮಾರು 16,660 ಕೋಟಿ ರೂಪಾಯಿಗೆ ಆದಿತ್ಯ ಬಿರ್ಲಾ ಗ್ರೂಪ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 2026 ರಲ್ಲಿ ಖರೀದಿಸಿದೆ.
ಗೆದ್ದು ಬೀಗಿದ ಆರ್ಸಿಬಿ!
ಈ ಭಾರಿಯ ಐಪಿಎಲ್ ಸೀಸನ್ನಿನ ಹಾಟ್ ಫೇವರೆಟ್ ಟೀಮ್ ಆಗಿದ್ದ ಆರ್ಸಿಬಿ ತಂಡ, ಗುಜರಾತ್ ಟೈಟಾನ್ಸ್ ತಂಡವನ್ನು ತವರಿನಲ್ಲಿಯೇ ಸೋಲಿಸಿ, ಸತತ ಎರಡನೇ ಭಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿ, ಈ ಸಲಾನೂ ಕಪ್ ನಮ್ದೇ ಎಂದು ಬೀಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡ ಉತ್ತಮ ಆರಂಭವನ್ನು ಪಡೆಯುದ ಕಾರಣ ಹಾಗೂ ಬ್ಯಾಟ್ಸ್ಮನ್ಗಳ ವಿಫಲ ಪ್ರದರ್ಶನದ ಹಿನ್ನಲೆ ದೊಡ್ಡ ಮೊತ್ತವನ್ನು ಕಲೆಹಾಕುವಲ್ಲಿ ವಿಫಲಾಯಿತು.
ಸೀಮಿತ 20 ಓವರ್ಗಳಲ್ಲಿ 8 ವಿಕೆಟ್ಗಳ ನಷ್ಟಕ್ಕೆ ಕೇವಲ 155 ಗಳಿಸಿದ ಗುಜರಾತ್ ಪರ ವಾಷಿಂಗ್ಟನ್ ಸುಂದರ್ ಅಜೇಯ 50 ಗಳಿಸಿದರೆ ಇನ್ಯಾರಿಂದಲೂ ಹೇಳಿಕೊಳ್ಳುವಂತ ಪ್ರದರ್ಶನ ದೊರೆಯಲಿಲ್ಲ.
ಸುಲಭ ಗುರಿಯನ್ನು ಬೆನ್ನತ್ತಿದ್ದ ಬೆಂಗಳೂರು ತಂಡ 18 ಓವರ್ಗಳಲ್ಲಿ ಗುರಿಯನ್ನು ತಲುಪಲು ಯಶಸ್ವಿಯಾಯಿತು. ವಿರಾಟ್ ಕೊಹ್ಲಿ 42 ಎಸೆತಗಳಲ್ಲಿ ಅಜೇಯ 75 ರನ್ ಗಳಿಸಿದರೆ, ವೆಂಕಟೇಶ್ ಅಯ್ಯರ್ 16 ಎಸೆತಗಳಲ್ಲಿ 32 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾದರು, (ಏಜನ್ಸೀಸ್).