ಕಾಂಗ್ರೆಸ್ ಸಂಸದನಿಗೆ ಸ್ವಪಕ್ಷೀಯ ನಾಯಕಿಯಿಂದಲೇ ಖಡಕ್ ತಿರುಗೇಟು!  
ಕ್ರಿಕೆಟ್

ಸಿರಾಜ್ ಆಯ್ಕೆ ವಿವಾದ: ಧರ್ಮದ ಲೇಪನ ಹಚ್ಚಿದ್ದ ಕಾಂಗ್ರೆಸ್ ಸಂಸದನಿಗೆ ಸ್ವಪಕ್ಷೀಯ ನಾಯಕಿಯಿಂದಲೇ ಖಡಕ್ ತಿರುಗೇಟು! | Siraj Selection Controversy

ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಆಡುವ ಹನ್ನೊಂದರ ಬಳಗದಿಂದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರನ್ನು ಕೈಬಿಟ್ಟಿರುವುದಕ್ಕೆ ಧಾರ್ಮಿಕ ತಾರತಮ್ಯವೇ ಕಾರಣ ಎಂದು ಆರೋಪಿಸಿದ್ದ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಅವರನ್ನು ಸ್ವಪಕ್ಷೀಯ ಸಂಸದೆಯೇ ತರಾಟೆಗೆ ತೆಗೆದುಕೊಂಡಿದ್ದಾರೆ.

ಕ್ರೀಡೆಯೊಳಗೆ ಧರ್ಮ ಮತ್ತು ರಾಜಕೀಯವನ್ನು ಎಳೆದು ತರಬೇಡಿ ಎಂದು ಕಾಂಗ್ರೆಸ್ ರಾಜ್ಯಸಭಾ ಸದಸ್ಯೆ ರಂಜೀತ್ ರಂಜನ್ ಅವರು ಇಮ್ರಾನ್ ಮಸೂದ್‌ಗೆ ಬುದ್ಧಿವಾದ ಹೇಳಿದ್ದಾರೆ. ಮಸೂದ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ರಂಜನ್, ರಾಜಕೀಯ ಮತ್ತು ಕ್ರೀಡೆಯನ್ನು ಪ್ರತ್ಯೇಕವಾಗಿ ಇಡುವಂತೆ ನಾನು ಮಸೂದ್ ಜೀ ಅವರಿಗೆ ವಿನಂತಿಸುತ್ತೇನೆ. ದಯವಿಟ್ಟು ಕ್ರೀಡೆಯಲ್ಲಿ ಹಸ್ತಕ್ಷೇಪ ಮಾಡಬೇಡಿ. ಆಟಗಳಿಗೆ ತನ್ನದೇ ಆದ ವ್ಯಾಪ್ತಿ ಮತ್ತು ಅರ್ಹತೆಯ ಮಾನದಂಡಗಳಿವೆ. ಪ್ರತಿಯೊಬ್ಬ ಆಟಗಾರನಿಗೂ ತನ್ನದೇ ಆದ ಹೋರಾಟವಿರುತ್ತದೆ. ನಾವು ರಾಜಕೀಯ ತಂತ್ರಗಾರಿಕೆಗಳಲ್ಲಿ ತೊಡಗಬಹುದು, ಆದರೆ ಕ್ರೀಡೆ ಅಥವಾ ಕ್ರೀಡಾಪಟುಗಳನ್ನು ನಮ್ಮ ರಾಜಕೀಯ ಚರ್ಚೆಗಳಿಗೆ ಎಳೆದು ತರಬಾರದು. ಇದನ್ನು ನಾನು ಒಪ್ಪಲು ಸಾಧ್ಯವೇ ಇಲ್ಲ ಎಂದು ರಂಜಿತ್ ಖಡಕ್ ಆಗಿ ಹೇಳಿದ್ದಾರೆ.

ಇಮ್ರಾನ್ ಮಸೂದ್ ಹೇಳಿದ್ದೇನು..?

ಶುಕ್ರವಾರ ಸುದ್ದಿಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ್ದ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್, ಉತ್ತಮ ಪ್ರದರ್ಶನದ ಹೊರತಾಗಿಯೂ ಸಿರಾಜ್ ಅವರ ಹೆಸರಿನ ಕಾರಣಕ್ಕಾಗಿ ತಂಡದಲ್ಲಿ ಅವಕಾಶ ನೀಡಿಲ್ಲ ಎಂದು ಆರೋಪಿಸಿದ್ದರು. ಅವರ ಹೆಸರು ಸಿರಾಜ್ ಎಂಬ ಕಾರಣಕ್ಕೆ ಸ್ಥಾನ ನೀಡಿಲ್ಲ. ಉತ್ತಮ ಪ್ರದರ್ಶನದ ನಡುವೆಯೂ ಆಯ್ಕೆ ಮಾಡದಿದ್ದರೆ, ಅಲ್ಲಿ ತಾರತಮ್ಯ ನಡೆದಿರುವುದು ಸ್ಪಷ್ಟ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಮಸೂದ್ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ, ಕ್ರಿಕೆಟ್ ತಂಡದ ಆಯ್ಕೆಯಲ್ಲೂ ಕಾಂಗ್ರೆಸ್ ವೊಟ್​ ಬ್ಯಾಂಕ್ ರಾಜಕೀಯ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ. ಕಾಂಗ್ರೆಸ್‌ಗೆ ನಾಚಿಕೆಯಾಗಬೇಕು! ಸಿರಾಜ್ ಮುಸ್ಲಿಂ ಎಂಬ ಕಾರಣಕ್ಕೆ ಕೈಬಿಡಲಾಗಿದೆ ಎಂದು ಕಾಂಗ್ರೆಸ್ ಹೇಳುತ್ತಿದೆ. ಅವರೊಂದಿಗೆ ರವೀಂದ್ರ ಜಡೇಜಾ ಅವರನ್ನೂ ಕೈಬಿಡಲಾಗಿದೆ, ಪ್ರತಿಯೊಬ್ಬ ಕ್ರಿಕೆಟಿಗನೂ ಭಾರತವನ್ನು ಪ್ರತಿನಿಧಿಸುವ ಜೆರ್ಸಿ ಧರಿಸುತ್ತಾನೆ. ವೋಟ್ ಬ್ಯಾಂಕ್ ಮತ್ತು ಕೋಮು ರಾಜಕೀಯಕ್ಕಾಗಿ ಟೀಮ್​ ಇಂಡಿಯಾ ಒಡೆಯುವುದನ್ನು ಮೊದಲು ನಿಲ್ಲಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಷ್ಟೆಲ್ಲಾ ವಿರೋಧದ ನಡುವೆಯೂ ತಮ್ಮ ನಿಲುವಿಗೆ ಅಂಟಿಕೊಂಡಿರುವ ಇಮ್ರಾನ್ ಮಸೂದ್, ಶನಿವಾರ ಮತ್ತೆ ಮೊಹಮ್ಮದ್ ಶಮಿ ಮತ್ತು ಸರ್ಫರಾಜ್ ಖಾನ್ ಅವರ ಹೆಸರುಗಳನ್ನು ಉಲ್ಲೇಖಿಸಿ ತಾರತಮ್ಯದ ಆರೋಪವನ್ನು ಪುನರುಚ್ಚರಿಸಿದ್ದಾರೆ. ಮೊಹಮ್ಮದ್ ಶಮಿ, ಸರ್ಫರಾಜ್ ಸೇರಿದಂತೆ ಇನ್ನೂ ಹಲವರಿದ್ದಾರೆ. ಆಯ್ಕೆಯು ಪ್ರದರ್ಶನದ ಆಧಾರದ ಮೇಲೆ ನಡೆಯಬೇಕು. ಒಬ್ಬ ಆಟಗಾರ ಉತ್ತಮವಾಗಿ ಆಡುತ್ತಿದ್ದರೆ, ಆತ ಎಲ್ಲಿಂದ ಬಂದಿದ್ದಾನೆ ಎಂಬುದು ಮುಖ್ಯವಾಗಬಾರದು ಎಂದಿದ್ದಾರೆ. ಎಐಎಂಐಎಂ ನಾಯಕ ವಾರಿಸ್ ಪಠಾಣ್ ಕೂಡ ಮಸೂದ್ ಹೇಳಿಕೆಗೆ ಧ್ವನಿಗೂಡಿಸಿದ್ದು, ತಂಡದ ಆಯ್ಕೆ ಪ್ರತಿಭೆಯ ಆಧಾರದ ಮೇಲೆ ನಡೆಯುತ್ತಿದೆಯೇ ಅಥವಾ ಹೆಸರಿನ ಆಧಾರದ ಮೇಲೆಯೇ ಎಂದು ಪ್ರಶ್ನಿಸಿದ್ದಾರೆ.

ತಂಡದ ಆಯ್ಕೆ ಬಗ್ಗೆ ಕ್ರಿಕೆಟ್ ದಿಗ್ಗಜರು ಹೇಳೋದೇನು..?

ಮತ್ತೊಂದೆಡೆ, ಕ್ರಿಕೆಟ್ ದಿಗ್ಗಜರಾದ ಸುನಿಲ್ ಗವಾಸ್ಕರ್ ಮತ್ತು ರವಿಶಾಸ್ತ್ರಿ ಕೂಡ ಸಿರಾಜ್ ಅವರನ್ನು ಕೈಬಿಟ್ಟಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸಿರಾಜ್ ಅವರ ಅನುಭವ ಮತ್ತು ಶ್ರಮವನ್ನು ತಂಡದ ಆಡಳಿತ ಮಂಡಳಿ ಪರಿಗಣಿಸಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಈ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ನೇತೃತ್ವದ ವೇಗದ ಬೌಲಿಂಗ್ ವಿಭಾಗದಲ್ಲಿ ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್ ಮತ್ತು ಅನ್ಶುಲ್ ಕಾಂಬೋಜ್ ಅವರಿಗೆ ಸ್ಥಾನ ನೀಡಲಾಗಿದೆ.

ಆದರೆ, ನಾಯಕ ಶುಭಮಾನ್​ ಗಿಲ್ ಮತ್ತು ಬ್ಯಾಟಿಂಗ್ ಕೋಚ್ ಸಿತಾಂಶು ಕೊಟಕ್ ತಂಡದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ನಮ್ಮ ಎಲ್ಲಾ ವೇಗದ ಬೌಲರ್‌ಗಳು ಉತ್ತಮವಾಗಿ ಬೌಲಿಂಗ್ ಮಾಡುತ್ತಿರುವುದರಿಂದ ಯಾವ ಸಂಯೋಜನೆಯೊಂದಿಗೆ ಕಣಕ್ಕಿಳಿಯಬೇಕು ಎಂಬ ಬಗ್ಗೆ ಕಳೆದ ಒಂದು ವಾರದಿಂದ ಚರ್ಚಿಸುತ್ತಿದ್ದೆವು. ಸಿರಾಜ್ ಮತ್ತು ಗುರ್ನೂರ್ ಇಬ್ಬರೂ ಅವಕಾಶ ವಂಚಿತರಾಗಿದ್ದು ಕಠಿಣ ನಿರ್ಧಾರವಾಗಿತ್ತು ಎಂದು ಗಿಲ್ ಹೇಳಿದ್ದಾರೆ. ಸಿರಾಜ್ ಅವರಲ್ಲಿ ಯಾವುದೇ ಸಮಸ್ಯೆಯಿಲ್ಲ, ತಂಡಕ್ಕೆ ಅತ್ಯುತ್ತಮ ಎನಿಸಿದ ಹನ್ನೊಂದರ ಬಳಗವನ್ನು ಆಯ್ಕೆ ಮಾಡಿದ್ದೇವೆ ಎಂದು ಕೊಟಕ್ ಸ್ಪಷ್ಟಪಡಿಸಿದ್ದಾರೆ(ಏಜೆನ್ಸೀಸ್​).