2026ರ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಹಾಗೂ ಟ್ರಾವಿಸ್ ಹೆಡ್ ನಡುವಿನ ಹ್ಯಾಂಡ್‌ಶೆಕ್ ವಿವಾದ
- 2026ರ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಹಾಗೂ ಟ್ರಾವಿಸ್ ಹೆಡ್ ನಡುವಿನ ಹ್ಯಾಂಡ್‌ಶೆಕ್ ವಿವಾದ
- ಹ್ಯಾಂಡ್‌ಶೆಕ್ ವಿವಾದದ ಅಸಲಿ ಸತ್ಯವನ್ನು ಬಿಚ್ಚಿಟ್ಟ ಟ್ರಾವಿಸ್ ಹೆಡ್
- ವೈರಲ್ ವೀಡಿಯೋ ಹಿಂದಿನ ಸ್ಪಷ್ಟನೆ ಮತ್ತು ಕುಟುಂಬವನ್ನು ಟ್ರೋಲ್ ಮಾಡಿದವರ ವಿರುದ್ಧ ಹೆಡ್ ಆಕ್ರೋಶ
ಕ್ರಿಕೆಟ್: ಐಪಿಎಲ್ ಅನ್ನು ಭಾರತದಲ್ಲಿ ಕ್ರಿಕೆಟ್ ಹಬ್ಬದಂತೆ ಸಂಭೃಮಿಸುತ್ತಾರೆ. ಅಷ್ಟೇ ಅಲ್ಲದೇ ತಾವು ಇಷ್ಟ ಪಡುವ ತಂಡದ ಆಟಗಾರರನ್ನು ಮನೆಯ ಸದಸ್ಯರಂತೆ ಕಾಣ ಸಿಗುವುದು ಐಪಿಎಲ್‌ನಲ್ಲಿ ಮಾತ್ರ.
ಹೀಗಾಗಿ ಈ ಟೂರ್ನಿಯಲ್ಲಿ ನಡೆಯುವ ಜನಳಗಳು ಕೂಡ ಅಷ್ಟೇ ಖ್ಯಾತಿಗೆ ಅಪಖ್ಯಾತಿಗೆ ಗುರಿಯಾಗುತ್ತದೆ. ಈ ಬಾರಿಯ ಅಂದರೆ 2026 ರ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಪಂದ್ಯದ ಬಳಿಕ ನಡೆದ ಒಂದು ಘಟನೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು.
ಪಂದ್ಯ ಮುಗಿದ ಬಳಿಕ ಆರ್ಸಿಬಿಯ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತು ಆಸ್ಟ್ರೇಲಿಯಾದ ಸ್ಫೋಟಕ ಆಟಗಾರ ಟ್ರಾವಿಸ್ ಹೆಡ್ (Travis Head on Virat Kohli) ಪರಸ್ಪರ ಕೈಕುಲುಕಲಿಲ್ಲ ಎನ್ನಲಾದ ವೀಡಿಯೊವೊಂದು ಸಕ್ಕತ್ ವೈರಲ್ ಆಗಿತ್ತು. ಇದನ್ನು ನೋಡಿದ ಅಭಿಮಾನಿಗಳು ಇವರಿಬ್ಬರ ನಡುವೆ ದೊಡ್ಡ ಜಗಳ ನಡೆದಿದೆ, ಕೈ-ಕೈ ಮಿಲಾಯಿಸುವ ಮಟ್ಟಕ್ಕೆ ಪರಿಸ್ಥಿತಿ ತಲುಪಿತ್ತು ಎಂಬೆಲ್ಲಾ ದ್ವೇಷದ ಕಥೆಗಳನ್ನು ಹಬ್ಬಿಸಿದ್ದರು.
ಆದರೆ ಈಗ ಈ ಎಲ್ಲಾ ವದಂತಿಗಳಿಗೆ ಸ್ವತಃ ಟ್ರಾವಿಸ್ ಹೆಡ್ ತೆರೆ ಎಳೆದಿದ್ದಾರೆ. ವಿರಾಟ್ ಕೊಹ್ಲಿ ಜತೆಗಿನ ವಿವಾದದ ಬಗ್ಗೆ ಮೊದಲ ಬಾರಿಗೆ ಬಹಿರಂಗವಾಗಿ ಮಾತನಾಡಿರುವ ಅವರು, ನಮ್ಮಿಬ್ಬರ ನಡುವೆ ಯಾವುದೇ ವೈಮನಸ್ಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಲ್ಲಿ ಏನು ಆಗಿಯೇ ಇಲ್ಲ!
ಪ್ರಮುಖ ಕ್ರೀಡಾ ಜಾಲತಾಣವೊಂದರ ಜತೆ ಮಾತನಾಡಿದ ಟ್ರಾವಿಸ್ ಹೆಡ್, ಆ ವಿಡಿಯೋದ ಹಿಂದೆ ಯಾವುದೇ ಗಂಭೀರ ವಿಚಾರವಿರಲಿಲ್ಲ ಎಂದಿದ್ದಾರೆ.
ನಮ್ಮಿಬ್ಬರ ಸಂಬಂಧದ ನಡುವೆ ತಿದ್ದುಪಡಿ ಮಾಡಲು ಅಥವಾ ಸರಿಪಡಿಸಲು ಅಲ್ಲಿ ಏನೂ ಇರಲಿಲ್ಲ ಎಂದು ನಾನು ಭಾವಿಸುತ್ತೇನೆ. ಅಂತಹದ್ದೇನೂ ಅಲ್ಲಿ ನಡೆದಿರಲಿಲ್ಲ. ಪಂದ್ಯಾವಳಿ ಎಂದಿನಂತೆ ಸಾಗಿತು, ಅದರಲ್ಲಿ ಯಾವುದೇ ಆಶ್ಚರ್ಯಪಡುವ ಸಂಗತಿ ಇರಲಿಲ್ಲ ಎಂದು ಹೆಡ್ ತಿಳಿಸಿದ್ದಾರೆ. ಮೈದಾನದಲ್ಲಿ ಆಟಗಾರರ ನಡುವೆ ತೀವ್ರ ಪೈಪೋಟಿ ಇರುವುದು ಸಹಜ. ಆದರೆ ಅದನ್ನೇ ದೊಡ್ಡದು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಕಥೆಗಳನ್ನು ಸೃಷ್ಟಿಸಲಾಗುತ್ತದೆ ಎಂದು ಅವರು ಹೇಳಿದರು.
ಕುಟುಂಬವನ್ನು ಟ್ರೋಲ್ ಮಾಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಹೆಡ್ ಮೈದಾನದ ಒಳಗೆ ಏನೇ ನಡೆಯಲಿ, ವೃತ್ತಿಪರ ಆಟಗಾರರಾಗಿ ಅದನ್ನು ಹೇಗೆ ನಿರ್ವಹಿಸಬೇಕು ಎಂಬುದು ನಮಗೆ ಗೊತ್ತು. ಆದರೆ ಈ ವಿವಾದದ ಬೆನ್ನಲ್ಲೇ ಕೆಲವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕುಟುಂಬವನ್ನು ಗುರಿಯಾಗಿಸಿ ಹಲ್ಲೆ ನಡೆಸಿದ್ದಕ್ಕೆ ಟ್ರಾವಿಸ್ ಹೆಡ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ನಾನು ಮತ್ತು ನನ್ನ ಪತ್ನಿ ಜೆಸ್ಸಿಕಾ ಈ ಎಲ್ಲ ಪರಿಸ್ಥಿತಿಗಳನ್ನು ಪ್ರಬುದ್ಧತೆಯಿಂದ ನೋಡುತ್ತೇವೆ. ಇದು ಕ್ರೀಡಾ ಲೋಕದ ಒಂದು ಭಾಗ ಎನ್ನುವುದು ನಮಗೆ ತಿಳಿದಿದೆ. ಆದರೆ ಯಾವಾಗ ನೋವಾಗುತ್ತದೆ ಎಂದರೆ ಈ ಸೋಷಿಯಲ್ ಮೀಡಿಯಾದಲ್ಲಿ ಆಟಕ್ಕೆ ಸಂಬಂಧವೇ ಇಲ್ಲದ ಕುಟುಂಬ ಸದಸ್ಯರ ಬಗ್ಗೆ ಕೆಟ್ಟದಾಗಿ ಮಾತನಾಡಿದಾಗ ಖಂಡಿತವಾಗಿ ದುಃಖವಾಗುತ್ತದೆ ಎಂದಿದ್ದಾರೆ.
ಪತ್ನಿ ಜೆಸ್ಸಿಕಾ ಪ್ರಬುದ್ಧತೆಯನ್ನು ಕೊಂಡಾಡಿದ ಹೆಡ್
ಈ ವಿವಾದದ ಸಮಯದಲ್ಲಿ ಟ್ರಾವಿಸ್ ಹೆಡ್ ಅವರ ಪತ್ನಿ ಜೆಸ್ಸಿಕಾ ಹೆಡ್ ಅವರ ಮೇಲೆ ತೀವ್ರ ಟ್ರೋಲ್‌ಗಳು ಮತ್ತು ಆನ್‌ಲೈನ್ ನಿಂದನೆಗಳು ಹರಿದುಬಂದಿದ್ದವು. ಈ ಕುರಿತು ಮಾತನಾಡಿದ ಹೆಡ್, ಜನರು ಯಾವುದೋ ಒಂದು ವಿಷಯವನ್ನು ಕೆಲವು ದಿನಗಳವರೆಗೆ ಮಾತ್ರ ಮಾತನಾಡುತ್ತಾರೆ, ಬಳಿಕ ಎಲ್ಲವನ್ನೂ ಮರೆತುಬಿಡುತ್ತಾರೆ. ಆದರೆ ನನ್ನ ಪತ್ನಿ ಜೆಸ್ಸಿಕಾ ಇಡೀ ಪರಿಸ್ಥಿತಿಯನ್ನು ಅದ್ಭುತವಾಗಿ ಮತ್ತು ಅತ್ಯಂತ ಪ್ರಬುದ್ಧತೆಯಿಂದ ನಿರ್ವಹಿಸಿದರು ಎಂದು ಪ್ರಶಂಸಿಸಿದ್ದಾರೆ.
ಆಟಗಾರರ ಪ್ರದರ್ಶನವನ್ನು ಅಥವಾ ಅವರನ್ನು ಮೈದಾನದಲ್ಲಿ ಟೀಕಿಸುವುದು ಆಟದ ಒಂದು ಭಾಗವಾಗಿರಬಹುದು. ಆದರೆ ಅದಕ್ಕಾಗಿಯೇ ಅವರ ಮನೆ ಮಂದಿಯನ್ನು, ಕುಟುಂಬದವರನ್ನು ಜಾಲತಾಣಗಳಲ್ಲಿ ಗುರಿಯಾಗಿಸಿ ನಿಂದಿಸುವುದು ಎಷ್ಟು ಸರಿ ಎಂದು ಟ್ರಾವಿಸ್ ಹೆಡ್ ಪ್ರಶ್ನಿಸಿದ್ದಾರೆ, (ಏಜನ್ಸೀಸ್).