ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಸುರೇಶ್ ರೈನಾ
ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ಸುರೇಶ್ ರೈನಾ (Suresh Raina) ಈಗ ತಮ್ಮ ಕ್ರೀಡಾ ನಿವೃತ್ತಿ ಬಗ್ಗೆ ಮೌನ ಮುರಿದಿದ್ದಾರೆ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾದಿಂದ ತಮ್ಮನ್ನು ಹಠಾತ್ ಆಗಿ ಹೊರಗಿಟ್ಟಿದ್ದೇಕೆ ಎಂಬ ಬಗ್ಗೆ ರೈನಾ ಬಿಚ್ಚಿಟ್ಟಿರುವ ಸತ್ಯಗಳು ಈಗ ಕ್ರಿಕೆಟ್ ಲೋಕದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ.
ಖ್ಯಾತ ಕಾಮೆಂಟೇಟರ್ ಹಾಗೂ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡುತ್ತಾ ರೈನಾ ಈ ಅಚ್ಚರಿಯ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಭಾರತದ ಪರವಾಗಿ ದೀರ್ಘಕಾಲ ಆಡಿ, ನೂರಾರು ಪಂದ್ಯಗಳಲ್ಲಿ ಗೆಲುವಿಗೆ ಕಾರಣರಾಗಿದ್ದ ರೈನಾ 2018ರ ಬಳಿಕ ಭಾರತ ತಂಡದಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಎಂಎಸ್ ಧೋನಿ ಬಳಿಕ ವಿರಾಟ್ ಕೊಹ್ಲಿ ತಂಡದ ನಾಯಕತ್ವ ಕೈಗೆತ್ತಿಕೊಂಡಾಗ ಕ್ರಿಕೆಟ್‌ನಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದವು. ಅದೇ ಸಮಯದಲ್ಲಿ ತಮ್ಮ ವೃತ್ತಿಜೀವನಕ್ಕೆ ಎದುರಾದ ಅಗ್ನಿಪರೀಕ್ಷೆಯ ಬಗ್ಗೆ ರೈನಾ ಕಣ್ಣೀರಿಟ್ಟಿದ್ದಾರೆ.
ಯೋ-ಯೋ ಟೆಸ್ಟ್ ಪಾಸ್ ಆದರೂ ಸಿಗದ ಅವಕಾಶ!
ಸಂದರ್ಶನದಲ್ಲಿ ಮಾತನಾಡುತ್ತಾ ರೈನಾ, ನಮ್ಮ ಕಾಲದಲ್ಲಿ ನಿಯಮಗಳು ಬದಲಾಗಿದ್ದವು. ಯುವರಾಜ್ ಸಿಂಗ್ ಮತ್ತು ನಾನು ಆರಂಭದಲ್ಲಿ ಯೋ-ಯೋ ಫಿಟ್‌ನೆಸ್ ಪರೀಕ್ಷೆಯಲ್ಲಿ ವಿಫಲರಾಗಿದ್ದೆವು ಎಂಬುದು ನಿಜ. ಆದರೆ ನಾವು ಕಷ್ಟಪಟ್ಟು ಅಭ್ಯಾಸ ಮಾಡಿ, ಅದೇ ಯೋ-ಯೋ ಪರೀಕ್ಷೆಯಲ್ಲಿ ಸಕ್ಸಸ್ ಆಗಿ ತೋರಿಸಿದೆವು. ಅಷ್ಟೇ ಅಲ್ಲ, ದೇಶೀಯ ಕ್ರಿಕೆಟ್‌ನಲ್ಲಿ ಭರ್ಜರಿಯಾಗಿ ರನ್ ಗಳಿಸಿ ನಮ್ಮಲ್ಲಿರುವ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದೆವು.
ಆದರೂ ನಮಗೆ ಭಾರತ ತಂಡದಲ್ಲಿ ಯಾಕೆ ಅವಕಾಶ ಸಿಗುತ್ತಿಲ್ಲ ಎಂದು ಅಂದು ನಾನು ನಾಯಕ ಹಾಗೂ ಕೋಚ್‌ಗಳನ್ನು ನೇರವಾಗಿಯೇ ಪ್ರಶ್ನಿಸಿದ್ದೆ. ಆದರೆ ಯಾರು ಕೂಡ ನನಗೆ ಸರಿಯಾದ ಹಾಗೂ ಸ್ಪಷ್ಟವಾದ ಉತ್ತರ ನೀಡಲಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ.
2019ರ ವಿಶ್ವಕಪ್ ಕನಸು ಭಗ್ನ!
ತಮ್ಮ ವೃತ್ತಿಜೀವನಕ್ಕೆ ದೊಡ್ಡ ತಿರುವು ಸಿಗಬೇಕಿದ್ದ 2019ರ ಏಕದಿನ ವಿಶ್ವಕಪ್ ಬಗ್ಗೆಯೂ ರೈನಾ ಬೇಸರ ವ್ಯಕ್ತಪಡಿಸಿದ್ದಾರೆ. ಪ್ರತಿಯೊಬ್ಬ ನಾಯಕನಿಗೂ ತನ್ನದೇ ಆದ ಆದ್ಯತೆಗಳಿರುತ್ತವೆ, ಅವರು ತಮ್ಮ ಪ್ಲಾನ್ ಪ್ರಕಾರ ತಂಡ ಕಟ್ಟುತ್ತಾರೆ ಅದನ್ನು ನಾನು ಒಪ್ಪುತ್ತೇನೆ.
ಆದರೆ ನನ್ನ ಮತ್ತು ಯುವರಾಜ್ ಸಿಂಗ್ ಅವರಂತಹ ಅನುಭವಿ ಆಟಗಾರರು ಆ ಸಮಯದಲ್ಲಿ ತಂಡದಲ್ಲಿದ್ದರೆ, ನಮ್ಮ ಸುದೀರ್ಘ ಅನುಭವ ಖಂಡಿತವಾಗಿಯೂ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾಗೆ ದೊಡ್ಡ ಪ್ಲಸ್ ಆಗುತ್ತಿತ್ತು. ಆದರೆ ಆಯ್ಕೆಗಾರರು ಬೇರೆ ಬೇರೆ ಬ್ಯಾಟ್ಸ್‌ಮನ್‌ಗಳು ಮತ್ತು ಕೀಪರ್‌ಗಳ ಮೇಲೆ ನಂಬಿಕೆ ಇಟ್ಟರು. ಇದರಿಂದಾಗಿ ವಿಶ್ವಕಪ್ ಆಡುವ ನಮ್ಮ ಕನಸು ನುಚ್ಚುನೂರಾಯಿತು ಎಂದಿದ್ದಾರೆ.
ಧೋನಿ ಜೊತೆ ನಿವೃತ್ತಿ ಘೋಷಿಸಿದ್ದ ರೈನಾ
ಭಾರತದ ಪರ 226 ಏಕದಿನ, 78 ಟಿ20 ಹಾಗೂ 18 ಟೆಸ್ಟ್ ಪಂದ್ಯಗಳನ್ನು ಆಡಿರುವ ರೈನಾ, ತಮ್ಮ ಆಟದಿಂದಲೇ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದವರು. ಆದರೆ ತಮ್ಮ ಕ್ರಿಕೆಟ್ ಕೆರಿಯರ್ ಉತ್ತುಮದಲ್ಲಿದ್ದಾಗಲೇ, ಅಂದರೆ ಕೇವಲ 33ನೇ ವಯಸ್ಸಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಹೊರಗುಳಿಯಬೇಕಾಯಿತು.
2020ರ ಆಗಸ್ಟ್ 15ರಂದು ಎಂಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಬೆನ್ನಲ್ಲೇ, ರೈನಾ ಕೂಡ ಅದೇ ದಿನ ಧೋನಿ ಜೊತೆ ತಾವೂ ನಿವೃತ್ತರಾಗುತ್ತಿರುವುದಾಗಿ ಘೋಷಿಸಿ ಎಲ್ಲರಿಗೂ ಶಾಕ್ ನೀಡಿದ್ದರು, (ಏಜನ್ಸೀಸ್).