ಟೀಮ್ ಇಂಡಿಯಾ  
ಕ್ರಿಕೆಟ್

ಒಂದು ಮಾತಿಲ್ಲ, ಹ್ಯಾಂಡ್​ಶೇಕ್​ ಮಾಡಲೇ ಇಲ್ಲ! ಅಂಡರ್-19 ಬಾಂಗ್ಲಾ ಕ್ಯಾಪ್ಟನ್​ ಜತೆ ಕೈಕುಲುಕದ ಆಯುಷ್​ ಮ್ಹಾತ್ರೆ

ಪ್ರಮುಖ ಮುಖ್ಯಾಂಶಗಳು

  • ಜಿಂಬಾಬ್ವೆಯಲ್ಲಿ ಅಂಡರ್​-19 ವಿಶ್ವಕಪ್​ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ ಮುಖಾಮುಖಿ
  • ಕ್ರೀಡೆಗೂ ತಟ್ಟಿತು ಎರಡೂ ದೇಶಗಳ ನಡುವಿನ ಉದ್ವಿಗ್ನತೆ
  • ಟಾಸ್​ ವೇಳೆ ಕೈಕುಲಕಲಿಲ್ಲ ಬಾಂಗ್ಲಾ-ಭಾರತ ತಂಡಗಳ ನಾಯಕರು
ಜಿಂಬಾಬ್ವೆ: ಬುಲವಾಯೊದಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಐಸಿಸಿ ಅಂಡರ್-19 ವಿಶ್ವಕಪ್ 2026 ಪಂದ್ಯ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಒಂದು ಕುತೂಹಲಕಾರಿ ಬೆಳವಣಿಗೆ ಕಂಡುಬಂದಿದೆ. ಕಳೆದ ಕೆಲವು ದಿನಗಳಿಂದ ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಿನ ದೌರ್ಜನ್ಯ, ಅಟ್ಟಹಾಸ, ಬರ್ಬರ ಕೊಲೆ ಪ್ರಕರಣಗಳು ಭಾರತೀಯರನ್ನು ಕೆರಳಿಸಿದೆ. ಇದು ಎರಡೂ ದೇಶಗಳ ಮಧ್ಯೆ ಉದ್ವಿಗ್ನತೆಗೆ ಸಾಕ್ಷಿಯಾಗಿದೆ. ಈ ನೆರಳು ಕ್ರೀಡೆ ಮೇಲೂ ಬಿದ್ದಿದ್ದು, ಮೈದಾನದಲ್ಲಿ ಟಾಸ್​ಗೆ ಬಂದ ಎರಡೂ ತಂಡಗಳ ನಾಯಕರು ಕೈಕುಲಕದೆ ಹೊರಟಿರುವುದು ಸದ್ಯ ಹಲವರ ಹುಬ್ಬೇರಿಸಿದೆ. 

ಕೈಕುಲಕಲಿಲ್ಲ, ಮುಖ ನೋಡಲಿಲ್ಲ

ಭಾರತ ಮತ್ತು ಬಾಂಗ್ಲಾದೇಶದ ಪಂದ್ಯದ ಟಾಸ್ ಸಮಯದಲ್ಲಿ ಎರಡೂ ತಂಡಗಳ ನಾಯಕರ ವರ್ತನೆ ಎಲ್ಲರನ್ನೂ ಅಚ್ಚರಿಗೊಳಿಸಿತು. ಬಾಂಗ್ಲಾ ಕ್ಯಾಪ್ಟನ್​ ಅಜೀಜುಲ್ ಹಕೀಮ್ ತಮೀಮ್ ಅನಾರೋಗ್ಯದ ಕಾರಣ ಪಂದ್ಯದಲ್ಲಿ ಅಲಭ್ಯ ಎಂದು ಘೋಷಿಸಲಾಯಿತು. ಅವರು ಬಾರದ ಹಿನ್ನೆಲೆ ಉಪನಾಯಕನ ಸ್ಥಾನಕ್ಕೆ ಜವಾದ್ ಅಬ್ರಾರ್ ತಂಡದ ಜವಾಬ್ದಾರಿಯನ್ನು ಹೊತ್ತರು. 
ಬಾಂಗ್ಲಾದೇಶ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಮೂಲಕ ಟೀಮ್ ಇಂಡಿಯಾಗೆ ಬ್ಯಾಟ್​ ಮಾಡುವಂತೆ ಆಹ್ವಾನಿಸಿತು. ಆದರೆ, ಟಾಸ್​ ಸಮಯದಲ್ಲಿ ಮೈದಾನಕ್ಕೆ ಬಂದ ಭಾರತ ತಂಡದ ನಾಯಕ ಆಯುಷ್ ಮ್ಹಾತ್ರೆ ಮತ್ತು ಬಾಂಗ್ಲಾದೇಶದ ಕ್ಯಾಪ್ಟನ್​ ಜವಾದ್ ಅಬ್ರಾರ್ ಅಕ್ಕಪಕ್ಕದಲ್ಲಿ ನಿಂತರೆ ಹೊರತು, ಪರಸ್ಪರ ಮುಖ ನೋಡಿ ಮಾತನಾಡಲಿಲ್ಲ. ಒಬ್ಬರ ಮುಖ ಮತ್ತೊಬ್ಬರು ನೋಡಲಿಲ್ಲ. ಅಸಲಿಗೆ, ಇಬ್ಬರ ಮುಖಗಳಲ್ಲಿಯೂ ಕೋಪ, ಬೇಸರ ಸ್ಪಷ್ಟವಾಗಿ ಗೋಚರಿಸಿದಂತು ಸತ್ಯ ಎನ್ನಬಹುದು.
ಈ ಕೋಪ ಅಲ್ಲಿಗೆ ನಿಲ್ಲಲಿಲ್ಲ. ರಾಷ್ಟ್ರಗೀತೆ ಹಾಡುವ ಸಮಯದಲ್ಲಿ ಮತ್ತು ಆಟಗಾರರು ಮೈದಾನಕ್ಕೆ ಕಾಲಿಡುವಾಗಲೂ ಇದೇ ಪರಿಸ್ಥಿತಿ ಕಂಡುಬಂದಿತು. ಎರಡೂ ತಂಡಗಳ ಆಟಗಾರರು ಬೌಂಡರಿ ಲೈನ್​ನಲ್ಲಿ ಒಟ್ಟಿಗೆ ಕಂಡರೂ ಯಾರೂಬ್ಬರು ಪರಸ್ಪರ ಕೈಕುಲುಕಲಿಲ್ಲ ಮತ್ತು ಮಾತನಾಡುವ ಪ್ರಯತ್ನ ಕೂಡ ಮಾಡಲಿಲ್ಲ. ಈ ಘಟನೆ ಭಾರತ ಮತ್ತು ಬಾಂಗ್ಲಾದೇಶ ತಂಡಗಳ ನಡುವಿನ ಉದ್ವಿಗ್ನ ವಾತಾವರಣವನ್ನು ಪ್ರತಿಬಿಂಬಿಸಿತು ಎಂಬುದರಲ್ಲಿ ಕಿಂಚಿತ್ತು ಅನುಮಾನ ಬೇಡ,(ಏಜೆನ್ಸೀಸ್).