ಭಾರತದ ರಾಷ್ಟ್ರಗೀತೆ ಹಾಡುವಾಗ ಭಾವುಕರಾಗಿ ಕಣ್ಣೀರು ಹಾಕಿದ ನ್ಯೂಜಿಲೆಂಡ್ ಕ್ರಿಕೆಟಿಗ! ಯಾರು ಇಶ್ ಸೋಧಿ? National Anthem
- ಭಾರತ ಟಿ20 ವಿಶ್ವಕಪ್‌ನಲ್ಲಿ ಗೆಲುವು ಸಾಧಿಸಿರುವುದನ್ನು ಇಡೀ ದೇಶವೇ ಸಂಭ್ರಮಿಸುತ್ತಿದೆ
- ವಿಜಯೋತ್ಸವದ ವಿವಿಧ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ
- ಭಾರತದ ರಾಷ್ಟ್ರಗೀತೆ ನುಡಿಸುತ್ತಿರುವಾಗ ನ್ಯೂಜಿಲೆಂಡ್ ಆಟಗಾರನೊಬ್ಬ ಕಣ್ಣೀರು ಹಾಕಿರುವುದು ಎಲ್ಲರ ಗಮನ ಸೆಳೆದಿದೆ
National Anthem : ಆತಿಥೇಯ ಟೀಮ್ ಇಂಡಿಯಾ, ನ್ಯೂಜಿಲೆಂಡ್ ತಂಡವನ್ನು 96 ರನ್‌ಗಳಿಂದ ಸೋಲಿಸಿ ಟಿ20 ವಿಶ್ವಕಪ್‌ನಲ್ಲಿ ಗೆಲುವು ಸಾಧಿಸಿರುವುದನ್ನು ಇಡೀ ದೇಶವೇ ಸಂಭ್ರಮಿಸುತ್ತಿದೆ. ಫೈನಲ್ ಪಂದ್ಯದ ಆರಂಭದಿಂದ ಹಿಡಿದು ವಿಜಯೋತ್ಸವದವರೆಗಿನ ವಿವಿಧ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಇದರ ನಡುವೆ, ಭಾವನಾತ್ಮಕ ವಿಡಿಯೋವೊಂದು ಎಲ್ಲರ ಗಮನ ಸೆಳೆಯುತ್ತಿದೆ. ಕ್ರೀಡಾಂಗಣದಲ್ಲಿ ಭಾರತದ ರಾಷ್ಟ್ರಗೀತೆ ನುಡಿಸುತ್ತಿರುವಾಗ ನ್ಯೂಜಿಲೆಂಡ್ ಆಟಗಾರನೊಬ್ಬ ಕಣ್ಣೀರು ಹಾಕಿರುವುದು ಇದೀಗ ಎಲ್ಲರ ಗಮನ ಸೆಳೆದಿದೆ.
ನಿನ್ನೆ (ಮಾರ್ಚ್ 08) ಗುಜರಾತಿನ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟಾಸ್‌ಗಾಗಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಸಾಲುಗಟ್ಟಿ ನಿಂತಿದ್ದವು. ಇದೇ ಸಂದರ್ಭದಲ್ಲಿ ನ್ಯೂಜಿಲೆಂಡ್‌ನ ಅಂತಾರಾಷ್ಟ್ರೀಯ ಆಟಗಾರ ಇಶ್ ಸೋಧಿ ಭಾರತದ ರಾಷ್ಟ್ರಗೀತೆ ನುಡಿಸುತ್ತಿದ್ದಂತೆ ಭಾವುಕರಾಗಿ ಕಣ್ಣೀರು ಹಾಕಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಸೋಧಿ ನಡೆಗೆ ಭಾರತೀಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಎಷ್ಟೇ ಬೆಳೆದರೂ ಮತ್ತು ಎಲ್ಲೇ ಹೋದರು ತಮ್ಮ ಮೂಲವನ್ನು ಎಂದಿಗೂ ಮರೆಯಬಾರದು ಎಂಬ ಮಾತಿದೆ. ಅದಕ್ಕೆ ಪೂರಕವಾಗಿ ಸೋಧಿ ನಡೆದುಕೊಂಡಿದ್ದಾರೆ. ಅವರು ತಮ್ಮ ದೇಶವನ್ನು ಬಿಟ್ಟು ಹೋಗಿರಬಹುದು ಆದರೆ, ತಮ್ಮ ದೇಶದ ಮೇಲಿನ ಪ್ರೇಮವನ್ನು ಬಿಟ್ಟಿಲ್ಲ ಎಂದು ಹೊಗಳಿಕೆಯ ಕಾಮೆಂಟ್ ಮಾಡುತ್ತಿದ್ದಾರೆ.
ಯಾರು ಈ ಇಶ್ ಸೋಧಿ?
ಇಶ್ ಸೋಧಿ ನ್ಯೂಜಿಲೆಂಡ್ ತಂಡದಲ್ಲಿ ಅತ್ಯುತ್ತಮ ಸ್ಪಿನ್ ಬೌಲರ್. 33 ವರ್ಷದ ಇಶ್, ಪಂಜಾಬ್‌ನ ಲೂಧಿಯಾನದಲ್ಲಿ ಜನಿಸಿದರು. ಅವರ ಪೂರ್ಣ ಹೆಸರು ಇಂದರ್ಬೀರ್ ಸಿಂಗ್. ಅವರು ನಾಲ್ಕನೇ ವಯಸ್ಸಿನಲ್ಲಿ ತಮ್ಮ ಕುಟುಂಬದೊಂದಿಗೆ ನ್ಯೂಜಿಲೆಂಡ್‌ನ ಪಾಪಟೋಟೊಗೆ ವಲಸೆ ಬಂದರು. 2013ರಲ್ಲಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು.
ಸೋಧಿ ಅವರು 2014, ಜುಲೈ ತಿಂಗಳಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟಿ20 ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು. 2015, ಆಗಸ್ಟ್ 2015 ತಿಂಗಳಲ್ಲಿ ಜಿಂಬಾಬ್ವೆ ವಿರುದ್ಧ ನ್ಯೂಜಿಲೆಂಡ್ ಪರ ತಮ್ಮ ಮೊದಲ ಏಕದಿನ ಪಂದ್ಯವನ್ನು ಆಡಿದರು. 2018ರಲ್ಲಿ, ಐಸಿಸಿ ಟಿ20 ಬೌಲರ್‌ಗಳ ಶ್ರೇಯಾಂಕದಲ್ಲಿ ನಂಬರ್ ಒನ್ ಸ್ಥಾನಕ್ಕೆ ಏರಿದರು. 2019ರ ಕ್ರಿಕೆಟ್ ವಿಶ್ವಕಪ್‌ನಲ್ಲಿ ರನ್ನರ್-ಅಪ್ ಸ್ಥಾನ ಪಡೆದ ನ್ಯೂಜಿಲೆಂಡ್ ತಂಡದ ಸದಸ್ಯರೂ ಆಗಿದ್ದರು. ಭಾರತದ ವಿರುದ್ಧ ಅತಿ ಹೆಚ್ಚು ಟಿ20 ವಿಕೆಟ್‌ಗಳನ್ನು ಪಡೆದ ನ್ಯೂಜಿಲೆಂಡ್ ಬೌಲರ್ ಎಂಬ ದಾಖಲೆಯನ್ನೂ ಹೊಂದಿದ್ದಾರೆ. ಅವರು 25 ಪಂದ್ಯಗಳಲ್ಲಿ 23.80 ಸರಾಸರಿಯಲ್ಲಿ 30 ವಿಕೆಟ್‌ಗಳನ್ನು ಪಡೆದಿದ್ದಾರೆ, (ಏಜೆನ್ಸೀಸ್).