ನವದೆಹಲಿ: ಭಾರತೀಯ ಕ್ರಿಕೆಟ್ ತಂಡದಲ್ಲಿ ಮಹತ್ವದ ಬೆಳವಣಿಗೆವೊಂದು ಕಂಡುಬಂದಿದ್ದು, ಟೀಮ್ ಇಂಡಿಯಾ ಪುರುಷರ ಆಯ್ಕೆ ಸಮಿತಿಗೆ ಬಿಸಿಸಿಐ (BCCI) ಭರ್ಜರಿ ಸರ್ಜರಿ ಮಾಡಿದೆ. ಭಾರತ ತಂಡದ ಮಾಜಿ ಸ್ಪಿನ್ನರ್ ಪ್ರಗ್ಯಾನ್ ಓಜಾ ಅವರನ್ನು ನೂತನ ಮುಖ್ಯ ಆಯ್ಕೆಗಾರರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.
ಇಷ್ಟು ದಿನ ಈ ಹುದ್ದೆಯಲ್ಲಿದ್ದ ಅಜಿತ್ ಅಗರ್ಕರ್ ಜಾಗಕ್ಕೆ ಈಗ ಓಜಾ ಎಂಟ್ರಿ ಕೊಟ್ಟಿದ್ದಾರೆ. ಇವರ ಜೊತೆಗೆ ಮತ್ತೊಬ್ಬ ಮಾಜಿ ಆಟಗಾರ, ಅನುಭವಿ ಕೋಚ್ ರಮೇಶ್ ಪವಾರ್ ಕೂಡ ಆಯ್ಕೆ ಸಮಿತಿಗೆ ಸೇರ್ಪಡೆಗೊಂಡಿದ್ದಾರೆ.
ಬಿಸಿಸಿಐ ನಿಯಮಗಳ ಪ್ರಕಾರ, ಆಯ್ಕೆ ಸಮಿತಿಯಲ್ಲಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ ಅನುಭವ ಹೊಂದಿರುವ ಹಿರಿಯ ಕ್ರಿಕೆಟಿಗರಿಗೆ ಚೀಫ್ ಸೆಲೆಕ್ಟರ್ ಹುದ್ದೆ ಒಲಿಯುತ್ತದೆ. ಈ ಹಿನ್ನೆಲೆಯಲ್ಲಿ ಅಶೋಕ್ ಮಲ್ಹೋತ್ರಾ ಮತ್ತು ಜತಿನ್ ಪರಾಂಜಪೆ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿ, ಅರ್ಜಿಗಳ ಪರಿಶೀಲನೆ ನಡೆಸಿ ಅಂತಿಮವಾಗಿ ಪ್ರಗ್ಯಾನ್ ಓಜಾ ಅವರನ್ನು ಸಮಿತಿಯ ಸಾರಥಿಯನ್ನಾಗಿ ಆಯ್ಕೆ ಮಾಡಿದೆ ಎನ್ನಲಾಗಿದೆ.
ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ವಿಷಯವನ್ನು ಅಧಿಕೃತವಾಗಿ ಪ್ರಕಟಿಸಿದೆ. ಶ್ರೀ ರಮೇಶ್ ಪವಾರ್ ಅವರನ್ನು ಪುರುಷರ ಆಯ್ಕೆ ಸಮಿತಿಗೆ ನೇಮಿಸಲಾಗಿದೆ. ಹಿರಿತನದ ಆಧಾರದ ಮೇಲೆ ಪ್ರಗ್ಯಾನ್ ಓಜಾ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ತಮ್ಮ ಅಧಿಕಾರಾವಧಿಯಲ್ಲಿ ತಂಡಕ್ಕೆ ನೀಡಿದ ಅಪಾರ ಕೊಡುಗೆ ಮತ್ತು ಬದ್ಧತೆಗಾಗಿ ಅಜಿತ್ ಅಗರ್ಕರ್ ಅವರಿಗೆ ಧನ್ಯವಾದಗಳು ಎಂದು ಬಿಸಿಸಿಐ ತಿಳಿಸಿದೆ.
ಟೀಮ್ ಇಂಡಿಯಾ ಪರ ಕೇವಲ 2 ಟೆಸ್ಟ್ ಹಾಗೂ 31 ಏಕದಿನ ಪಂದ್ಯಗಳನ್ನು ಆಡಿರುವ ಸ್ಪಿನ್ನರ್ ರಮೇಶ್ ಪವಾರ್, ಕೋಚಿಂಗ್ ಕ್ಷೇತ್ರದಲ್ಲಿ ಅಪಾರ ಅನುಭವವನ್ನು ಹೊಂದಿದ್ದಾರೆ. ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಹೆಡ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದ ಇವರ ಮಾರ್ಗದರ್ಶನದಲ್ಲೇ ಭಾರತ ಏಷ್ಯಾ ಕಪ್ ಗೆದ್ದಿತ್ತು ಎನ್ನುವುದು ವಿಶೇಷವಾಗಿದೆ.
ಇದಲ್ಲದೆ ಮುಂಬೈ ಮತ್ತು ಗುಜರಾತ್ ದೇಶೀಯ ತಂಡಗಳ ಕೋಚ್ ಆಗಿ, ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಬೌಲಿಂಗ್ ಕೋಚ್ ಆಗಿ ಯುವ ಪ್ರತಿಭೆಗಳನ್ನು ಬೆಳೆಸಿದ ಅನುಭವ ಪವಾರ್ ಅವರಿಗಿದೆ. ಇವರ ಈ ಅನುಭವ ಭಾರತೀಯ ಕ್ರಿಕೆಟ್‌ನ ಮುಂದಿನ ಪೀಳಿಗೆಯನ್ನು ಆಯ್ಕೆ ಮಾಡಲು ನೆರವಾಗಲಿದೆ ಎನ್ನಲಾಗುತ್ತಿದೆ.
ಹೊಸ ಆಯ್ಕೆ ಸಮಿತಿಯ ಮುಂದೆ ಈಗ ದೊಡ್ಡ ಜವಾಬ್ದಾರಿಯೇ ಇದೆ. ಭಾರತ ತಂಡ ಶೀಘ್ರದಲ್ಲೇ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಕಿವೀಸ್ ನೆಲದಲ್ಲಿ 5 ಟಿ20, 5 ಏಕದಿನ ಹಾಗೂ 2 ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲಿದೆ. ಮೊದಲಿಗೆ ಟಿ20 ಸರಣಿ ಆರಂಭವಾಗಲಿದ್ದು, ಅಕ್ಟೋಬರ್ 22 ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಬಲಿಷ್ಠ ನ್ಯೂಜಿಲೆಂಡ್ ತಂಡವನ್ನು ಅವರದ್ದೇ ನೆಲದಲ್ಲಿ ಎದುರಿಸಲು ಬಲಿಷ್ಠ ಪಡೆಯನ್ನು ಕಣಕ್ಕಿಳಿಸುವುದು ಹೊಸ ಸಾರಥಿ ಪ್ರಗ್ಯಾನ್ ಓಜಾ ನೇತೃತ್ವದ ಸಮಿತಿಗೆ ಮೊದಲ ಅಗ್ನಿಪರೀಕ್ಷೆಯಾಗಲಿದೆ, (ಏಜೆನ್ಸೀಸ್).