

ಮುಂಬೈ: ಭಾನುವಾರ (ಅ.18) ಮುಂಬೈನ ಜುಹುವಿನಲ್ಲಿ ಬಾಲಿವುಡ್‌ನ ಆಕ್ಷನ್ ಸ್ಟಾರ್ ಟೈಗರ್ ಶ್ರಾಫ್ ಕಾರಿನ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದು, ತನಿಖೆ ವೇಳೆ ಬೆಚ್ಚಿಬೀಳಿಸುವ ಮಾಹಿತಿ ಹೊರಬಿದ್ದಿದೆ.
ಬಂಧಿತ ಮೂವರು ಶಂಕಿತರಲ್ಲಿ ಇಬ್ಬರು ಹರಿಯಾಣದ ಸೋನಿಪತ್‌ನವರಾದರೆ, ಮತ್ತೊಬ್ಬ ಬಿಹಾರ ಮೂಲದವನು ಎಂದು ಪೊಲೀಸರು ತಿಳಿಸಿದ್ದಾರೆ. ಅರೆಸ್ಟ್ ಆಗಿರುವ ಮೂವರಲ್ಲಿ ರೆಹಾನ್ ಎಂಬಾತ ಟೈಗರ್ ಮೇಲೆ ಗುಂಡನ್ನು ಹಾರಿಸಿದ ಪ್ರಮುಖ ಶೂಟರ್ ಎನ್ನಲಾಗುತ್ತಿದೆ.
ಹರಿಯಾಣದ ಸೋನಿಪತ್ ಜಿಲ್ಲೆಯ ದೇವದು ಗ್ರಾಮದ ನಿವಾಸಿಯಾದ ರೆಹಾನ್‌ನ ಹಿನ್ನೆಲೆ ಕೆದಕಿದ ಪೊಲೀಸರಿಗೆ ಆಘಾತಕಾರಿ ಸತ್ಯಗಳು ತಿಳಿದುಬಂದಿವೆ. ರೆಹಾನ್ 9ನೇ ತರಗತಿಯಲ್ಲೇ ಫೇಲ್ ಆಗಿ ಶಾಲೆ ತೊರೆದಿದ್ದ. ಓದನ್ನು ಅರ್ಧಕ್ಕೆ ನಿಲ್ಲಿಸಿ ಅಪರಾಧ ಲೋಕದ ನಂಟು ಬೆಳೆಸಿಕೊಂಡಿದ್ದ ಈತ, ಈ ಹಿಂದೆ ಅಕ್ರಮವಾಗಿ ಪಿಸ್ತೂಲ್ ಇಟ್ಟುಕೊಂಡಿದ್ದ ಆರೋಪದ ಮೇಲೆ ಜೈಲುಪಾಲಾಗಿದ್ದ. ಜೈಲಿನಿಂದ ಹೊರ ಬಂದ ನಂತರ ಗುರುಗ್ರಾಮ್‌ನಲ್ಲಿ ವೆಲ್ಡರ್ ಆಗಿ ಕೆಲಸ ಮಾಡುತ್ತಿದ್ದ ರೆಹಾನ್, ಒಳಗೊಳಗೆ ಅಂಡರ್‌ವರ್ಲ್ಡ್ ಜೊತೆ ಕನೆಕ್ಷನ್ ಇಟ್ಟುಕೊಂಡಿದ್ದ ಎಂಬುದು ಈಗ ಬಯಲಾಗಿದೆ.
ಟೈಗರ್ ಶ್ರಾಫ್ ಮೇಲೆ ಗುಂಡು ಹಾರಿಸಿದ್ದು ತಮ್ಮ ಮಗನೇ ಎಂದು ತಿಳಿದ ನಂತರ ರೆಹಾನ್‌ನ ತಂದೆ ರಿಶಿಯುದ್ದೀನ್ ಅನ್ಸಾರಿ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದಾರೆ. "ರೆಹಾನ್ ಕಳೆದ 12 ವರ್ಷಗಳಿಂದ ನನ್ನ ಜೊತೆ ಇರಲಿಲ್ಲ. ಆತ ತನ್ನ ತಾಯಿ ಮತ್ತು ಅತ್ತೆಯ ಮನೆಯಲ್ಲೇ ವಾಸಿಸುತ್ತಿದ್ದ. ಇತ್ತೀಚೆಗೆ ಮಾತನಾಡಿದಾಗ ಗುರುಗ್ರಾಮ್‌ನಲ್ಲಿ ವೆಲ್ಡರ್ ಕೆಲಸ ಮಾಡ್ತಿದ್ದೀನಿ ಎಂದಿದ್ದ.
ಆದರೆ, ಈಗ ಮುಂಬೈನಲ್ಲಿ ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲೆ ಗುಂಡು ಹಾರಿಸಿದ್ದಾನೆ, ಪೊಲೀಸರು ಅವನನ್ನು ಬಂಧಿಸಿದ್ದಾರೆ ಅನ್ನೋ ವಿಷಯ ಕೇಳಿ ನನಗೆ ಭಯವಾಗುತ್ತಿದೆ. ಯಾರೋ ಆತನನ್ನು ಈ ಕ್ರೈಂ ಜಗತ್ತಿಗೆ ಎಳೆದು ತಂದಿದ್ದಾರೆ. ಆತ ಮಾಡಿದ್ದು ಮಹಾಪರಾಧ. ಕಾನೂನಿನ ಪ್ರಕಾರ ಆತನಿಗೆ ಕಠಿಣ ಶಿಕ್ಷೆಯಾಗಲೇಬೇಕು" ಎಂದು ತಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೆಹಾನ್‌ನ ಅತ್ತೆ ಅಫ್ಸಾನಾ ಪ್ರಕಾರ, ಈ ಹಿಂದೆ ಆತ ಅಕ್ರಮ ಬಂದೂಕು ಪ್ರಕರಣದಲ್ಲಿ ಜೈಲು ಸೇರಿದಾಗಲೇ ಕುಟುಂಬಸ್ಥರು ಕಂಗೆಟ್ಟಿದ್ದರು. ಜೈಲಿನಿಂದ ಹೊರಬಂದ ಮೇಲೆ ಕೆಟ್ಟವರ ಸಹವಾಸ ಬಿಟ್ಟು, ದುಡಿದು ಬದುಕುವಂತೆ ಬುದ್ಧಿವಾದ ಹೇಳಿದ್ದರು. ಆದರೂ ಎಲ್ಲರ ಕಣ್ಣುತಪ್ಪಿಸಿ, ಕ್ರೈಂ ಸಿಂಡಿಕೇಟ್‌ನ ಕೈಗೊಂಬೆಯಾಗಿ ಮುಂಬೈಗೆ ಬಂದು ಇಷ್ಟೊಂದು ದೊಡ್ಡ ದಾಳಿ ನಡೆಸಿದ್ದಾನೆ. ನೆರೆಹೊರೆಯವರು, "ರೆಹಾನ್ ಸಾಮಾನ್ಯ ಹುಡುಗನಂತೆಯೇ ಓಡಾಡಿಕೊಂಡಿದ್ದ, ಆತ ಬಾಲಿವುಡ್ ನಟನ ಮೇಲೆ ಗುಂಡು ಹಾರಿಸುವ ಮಟ್ಟಕ್ಕೆ ಹೋಗ್ತಾನೆ ಅಂತ ಕನಸಲ್ಲೂ ಅಂದುಕೊಂಡಿರಲಿಲ್ಲ" ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ವೆಲ್ಡರ್ ಕೆಲಸ ಮಾಡುತ್ತಿದ್ದ ಸಾಮಾನ್ಯ ಹಳ್ಳಿ ಹುಡುಗನ ಕೈಗೆ ಆಧನಿಕ ಪಿಸ್ತೂಲ್ಗಳು ಹೇಗೆ ಸಿಕ್ಕವು? ಮುಂಬೈನಂತಹ ಮಹಾನಗರಕ್ಕೆ ಆತನನ್ನು ಕರೆತಂದು, ಬಾಲಿವುಡ್ ನಟನನ್ನೇ ಗುರಿಯಾಗಿಸಿ ಗುಂಡು ಹಾರಿಸಲು ಸುಪಾರಿ ಕೊಟ್ಟಿದ್ದು ಯಾರು? ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಈತನನ್ನು ಶೂಟರ್ ಆಗಿ ಬಳಸಿಕೊಂಡಿತ್ತೇ? ಎಂಬ ಪ್ರಶ್ನೆಗಳಿಗೆ ಮುಂಬೈ ಕ್ರೈಂ ಬ್ರಾಂಚ್ ತನ್ನ ತನಿಖೆ ಮುಗಿಸಿ ವರದಿ ಸಲ್ಲಿಸಿದ ನಂತರವೇ ಉತ್ತರ ದೊರೆಯಬೇಕಿದೆ, (ಏಜೆನ್ಸೀಸ್).