ಪಂದ್ಯಕ್ಕೂ ಮುನ್ನ ಟೀಮ್​ ಇಂಡಿಯಾಗೆ ಸವಾಲು ಹಾಕಿದ ನಮೀಬಿಯಾ ( Namibia Challenges India ) 
ಕ್ರಿಕೆಟ್

ನಾವು ಭಾರತಕ್ಕೆ ಒಂದು ಇಂಚು... ಪಂದ್ಯಕ್ಕೂ ಮುನ್ನ ಟೀಮ್​ ಇಂಡಿಯಾಗೆ ಸವಾಲು ಹಾಕಿದ ನಮೀಬಿಯಾ! Namibia Challenges India

ಪ್ರಮುಖ ಮುಖ್ಯಾಂಶಗಳು

  • ಫೆಬ್ರವರಿ 7ರಂದು ಆರಂಭವಾದ ಟಿ20 ವಿಶ್ವಕಪ್ ಮೆಗಾ ಟೂರ್ನಮೆಂಟ್ ರೋಚಕ ಹಾದಿಯಲ್ಲಿ ಸಾಗುತ್ತಿದೆ
  • ಪ್ರತಿ ಪಂದ್ಯದಲ್ಲೂ, ಕ್ರಿಕೆಟ್​ ಶಿಶುಗಳು ಅಂದರೆ, ಯುವ ತಂಡಗಳೇ ಅತ್ಯುತ್ತಮ ಪ್ರದರ್ಶನ ನೀಡುತ್ತಿವೆ
  • ನಮೀಬಿಯಾ ನಾಯಕ ಗೆರ್ಹಾರ್ಡ್ ಎರಾಸ್ಮಸ್ ಭಾರತಕ್ಕೆ ಬಲವಾದ ಎಚ್ಚರಿಕೆ ಸಂದೇಶವೊಂದನ್ನು ರವಾನಿಸಿದ್ದಾರೆ
Namibia Challenges India : ಫೆಬ್ರವರಿ 7ರಂದು ಆರಂಭವಾದ ಟಿ20 ವಿಶ್ವಕಪ್ ಮೆಗಾ ಟೂರ್ನಮೆಂಟ್ ರೋಚಕ ಹಾದಿಯಲ್ಲಿ ಸಾಗುತ್ತಿದೆ. ದಿನದಿಂದ ದಿನಕ್ಕೆ ಟೂರ್ನಿಯ ಖ್ಯಾತಿ ಹೆಚ್ಚಾಗುತ್ತಿದೆ. ಈ ಟೂರ್ನಮೆಂಟ್ ಪ್ರಾರಂಭವಾಗಿ ಈಗಾಗಲೇ ಮೂರು ದಿನಗಳು ಕಳೆದಿವೆ. ಈ ಮೂರು ದಿನಗಳಲ್ಲಿ ದಿನಕ್ಕೆ ಮೂರು ಪಂದ್ಯಗಳಂತೆ ಒಟ್ಟು 9 ಪಂದ್ಯಗಳು ನಡೆದಿವೆ. ಅಚ್ಚರಿಯ ಸಂಗತಿ ಏನೆಂದರೆ, ಪ್ರತಿ ಪಂದ್ಯದಲ್ಲೂ, ಕ್ರಿಕೆಟ್​ ಶಿಶುಗಳು ಅಂದರೆ, ಯುವ ತಂಡಗಳೇ ಅತ್ಯುತ್ತಮ ಪ್ರದರ್ಶನ ನೀಡುತ್ತಿವೆ. ಬಲಿಷ್ಠ ತಂಡಗಳಿಗೆ ಶಾಕ್​ ನೀಡಿವೆ.
ಅಮೆರಿಕ ತಂಡ ಭಾರತವನ್ನು ಭಯ ಬೀಳಿಸಿದ್ದು ಗೊತ್ತೇ ಇದೆ. ಅದೇ ರೀತಿ, ನೆದರ್ಲ್ಯಾಂಡ್ಸ್ ತಂಡ ಪಾಕಿಸ್ತಾನಕ್ಕೆ ಆಘಾತ ಉಂಟು ಮಾಡಿತು. ಫೆ.8ರಂದು ನೇಪಾಳ ತಂಡವು ಕ್ರಿಕೆಟ್​ ಜನಕ ಇಂಗ್ಲೆಂಡ್​ ತಂಡಕ್ಕೆ ಬಿಗ್​ ಶಾಕ್​ ನೀಡಿತು. ಆಂಗ್ಲ ಪಡೆ ನೀಡಿದ 184 ರನ್​ಗಳ ಗುರಿ ಬೆನ್ನತ್ತಿದ ನೇಪಾಳ ಕೇವಲ 4 ರನ್​ ಅಂತರದಲ್ಲಿ ಸೋಲುಂಡಿತು.
ಅಂದಹಾಗೆ, ನಮೀಬಿಯಾ, ನೇಪಾಳ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ, ಸ್ಕಾಟ್ಲೆಂಡ್ ಮತ್ತು ನೆದರ್ಲ್ಯಾಂಡ್ಸ್‌ನಂತಹ ಸಣ್ಣ ತಂಡಗಳು ಉತ್ತಮವಾಗಿ ಆಡುತ್ತಿವೆ. ಈಗಾಗಲೇ ಯುಎಸ್ಎ ವಿರುದ್ಧ ತಿಣುಕಾಡಿ ಗೆದ್ದಿರುವ ಭಾರತ ತನ್ನ ಎರಡನೇ ಲೀಗ್​ ಪಂದ್ಯದಲ್ಲಿ ಕ್ರಿಕೆಟ್​ ಶಿಶು ನಮೀಬಿಯಾವನ್ನು ಎದುರಿಸಲಿದೆ. ಈ ಎರಡೂ ತಂಡಗಳು ಫೆಬ್ರವರಿ 12 ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ.
ಇದೇ ಸಂದರ್ಭದಲ್ಲಿ, ನಮೀಬಿಯಾ ನಾಯಕ ಗೆರ್ಹಾರ್ಡ್ ಎರಾಸ್ಮಸ್ ಭಾರತಕ್ಕೆ ಬಲವಾದ ಎಚ್ಚರಿಕೆ ಸಂದೇಶವೊಂದನ್ನು ರವಾನಿಸಿದ್ದಾರೆ. ನಮ್ಮ ತಂಡದ ಆಟ ಖಂಡಿತವಾಗಿಯೂ ಟೀಮ್ ಇಂಡಿಯಾವನ್ನು ಸೋಲಿಸುವ ಗುರಿಯನ್ನು ಹೊಂದಿರುತ್ತದೆ ಎಂದು ಎರಾಸ್ಮಸ್ ಹೇಳಿಕೆ ನೀಡಿದ್ದಾರೆ.

ಒಂದು ಇಂಚು ಅವಕಾಶ ಕೊಡಲ್ಲ

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಎರಸ್ಮಾಸ್​ ಅವರಿಗೆ ಒಂದು ಪ್ರಶ್ನೆ ಎದುರಾಯಿತು. ಅದೇನೆಂದರೆ, ಭಾರತ ವಿರುದ್ಧದ ಪಂದ್ಯದಲ್ಲಿ ನಿಮಗೆ ಯಾವ ರೀತಿಯ ಒತ್ತಡ ಇರುತ್ತದೆ? ಎಂದು ಪ್ರಶ್ನಿಸಲಾಯಿತು. ಇದಕ್ಕೆ ಉತ್ತರಿಸಿದ ಎರಾಸ್ಮಸ್​, ಹೌದು, ಅದು ನಿಜ. ಭಾರತ ತುಂಬಾ ದೊಡ್ಡ ತಂಡ ಮತ್ತು ಭಾರತ ತಂಡವು ಅತ್ಯಂತ ಬಲಿಷ್ಠವಾಗಿದೆ. ಅವರು ಹಾಲಿ ಚಾಂಪಿಯನ್‌ ಕೂಡ ಹೌದು. ಆದರೆ, ನಮ್ಮ ಮೇಲೆ ಯಾವುದೇ ಒತ್ತಡವಿರುವುದಿಲ್ಲ. ತವರಿನಲ್ಲಿ ಆಡುವಾಗ, ಒತ್ತಡ ಭಾರತದ ಮೇಲೆ ಇರುತ್ತದೆ. ನಾವು ಭಾರತಕ್ಕೆ ಒಂದು ಇಂಚು ಅವಕಾಶ ಕೂಡ ಬಿಟ್ಟುಕೊಡುವುದಿಲ್ಲ ಎಂದು ಸವಾಲು ಹಾಕಿದ್ದಾರೆ.
ಸದ್ಯ ಎರಾಸ್ಮಸ್​ ನೀಡಿರುವ ಹೇಳಿಕೆಗಲು ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಭಾರತೀಯ ಅಭಿಮಾನಿಗಳು, ಯಾರು ಗೆಲ್ಲುತ್ತಾರೆ ಅನ್ನೋದು ಫೆ.12ರಂದು ಗೊತ್ತಾಗುತ್ತದೆ ಎಂದು ಕಾಮೆಂಟ್​ ಮಾಡುತ್ತಿದ್ದಾರೆ.

ಭಾರತಕ್ಕೆ ಗಾಯಾಳುಗಳ ಎಫೆಕ್ಟ್​

ಅಂದಹಾಗೆ, ಟಿ20 ವಿಶ್ವಕಪ್​ ಆರಂಭದ ಬೆನ್ನಲ್ಲೇ ಟೀಮ್​ ಇಂಡಿಯಾಗೆ ಗಾಯಾಳುಗಳ ಸಮಸ್ಯೆ ಕಾಡುತ್ತಿದೆ. ಅರ್ಧದಷ್ಟು ಆಟಗಾರರು ಈಗಾಗಲೇ ಜ್ವರ ಮತ್ತು ಗಾಯಗಳಿಂದ ಬಳಲುತ್ತಿದ್ದಾರೆ. ವಾಷಿಂಗ್ಟನ್ ಸುಂದರ್ ಆಶಾದಾಯಕವಾಗಿ ಕಾಣುತ್ತಿಲ್ಲ. ಹರ್ಷಿತ್ ರಾಣಾ ಕೂಡ ಪಂದ್ಯಾವಳಿಯಿಂದ ಮನೆಗೆ ತೆರಳಿದ್ದಾರೆ. ಅವರು ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಬುಮ್ರಾ ಮತ್ತು ಅಪಾಯಕಾರಿ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಇತ್ತೀಚೆಗೆ ತೀವ್ರ ಜ್ವರದಿಂದ ಬಳಲುತ್ತಿದ್ದಾರೆ, (ಏಜೆನ್ಸೀಸ್​).