ಐಪಿಎಲ್​ಗೂ ಮಹೇಂದ್ರ ಸಿಂಗ್ ಧೋನಿ ವಿದಾಯ 
ಕ್ರಿಕೆಟ್

ಐಪಿಎಲ್​ಗೂ ಮಹೇಂದ್ರ ಸಿಂಗ್ ಧೋನಿ ವಿದಾಯ: CSK ತಂಡದ ಮೆಂಟರ್ ಆಗಿ ಮುಂದುವರಿಯಲಿದ್ದಾರೆ ಮಹಿ! MS Dhoni

ನವದೆಹಲಿ: ಭಾರತೀಯ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ನಾಯಕ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಜೀವನಾಡಿಯಾಗಿರುವ ಮಹೇಂದ್ರ ಸಿಂಗ್ ಧೋನಿ ( MS Dhoni ) ಅವರು ಇಂಡಿಯನ್​ ಪ್ರೀಮಿಯರ್​ ಲೀಗ್​ (IPL) ಗೂ ವಿದಾಯ ಹೇಳಿದ್ದಾರೆ. ಆಟಗಾರನಾಗಿ ನಿವೃತ್ತಿ ಘೋಷಿಸಿರುವ ಧೋನಿ ಮುಂಬರುವ ಐಪಿಎಲ್ 2027ರ ಆವೃತ್ತಿಯಲ್ಲಿ ತಂಡದ ನೂತನ ಮೆಂಟರ್ (Mentor) ಆಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಈ ಕುರಿತು ಸಿಎಸ್​ಕೆ ಫ್ರಾಂಚೈಸಿ ಅಧಿಕೃತವಾಗಿ ಘೋಷಿಸಿದೆ. ದಶಕಗಳ ಕಾಲ ತಂಡವನ್ನು ಮುನ್ನಡೆಸಿ ಬಹು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದುಕೊಟ್ಟಿರುವ ಧೋನಿ, ಇನ್ನು ಮುಂದೆ ಮಾರ್ಗದರ್ಶಕರಾಗಿ ಸಿಎಸ್‌ಕೆ ಜೊತೆ ಹೆಜ್ಜೆ ಹಾಕಲಿದ್ದಾರೆ.

ಸಿಎಸ್‌ಕೆ ಫ್ರಾಂಚೈಸಿಯ ಮಾಲೀಕ ಎನ್. ಶ್ರೀನಿವಾಸನ್ ಅವರು ಧೋನಿಯ ಹೊಸ ಜವಾಬ್ದಾರಿಯ ಕುರಿತು ಮಾತನಾಡಿ, ತಂಡದೊಂದಿಗೆ ಧೋನಿ ಹೊಂದಿರುವ ಅವಿನಾಭಾವ ಸಂಬಂಧವನ್ನು ಸ್ಮರಿಸಿದ್ದಾರೆ. "ಎಂ.ಎಸ್. ಧೋನಿ ಇಲ್ಲದೆ ಸಿಎಸ್‌ಕೆ ಇಲ್ಲ. ಕಳೆದ ಸುಮಾರು ಎರಡು ದಶಕಗಳಿಂದ ನಾವು ಏಳು-ಬೀಳುಗಳಲ್ಲಿ ಜತೆಯಾಗಿ ಬೆಳೆದಿದ್ದೇವೆ. ನಮ್ಮ ಸಂಬಂಧ ಗಟ್ಟಿಯಾಗಿರಲು ಕಾರಣ ನಾವು ಪರಸ್ಪರರ ಉದ್ದೇಶಗಳನ್ನು ಪ್ರಶ್ನಿಸುವುದಿಲ್ಲ" ಎಂದು ಶ್ರೀನಿವಾಸನ್ ತಿಳಿಸಿದ್ದಾರೆ.

2008ರಲ್ಲಿ ನಾನೇ ಧೋನಿಯನ್ನು ತಂಡಕ್ಕೆ ಕರೆತಂದಿದ್ದು ತಮ್ಮ ಜೀವನದ ಅತ್ಯುತ್ತಮ ನಿರ್ಧಾರ ಎಂದಿರುವ ಶ್ರೀನಿವಾಸನ್​ ಅವರು, ಧೋನಿ ಕೇವಲ ಸಾಧನೆಗಳಿಗಾಗಿ ಮಾತ್ರವಲ್ಲದೆ ಅವರು ಒಬ್ಬ ಉತ್ತಮ ವ್ಯಕ್ತಿಯಾಗಿರುವುದರಿಂದ ತಂಡದ ನಿಜವಾದ ಗುರುತಾಗಿದ್ದಾರೆ ಎಂದಿದ್ದಾರೆ.

ಸಿಎಸ್‌ಕೆ ಜತೆಗಿನ ಅಳಿಸಲಾಗದ ಪರಂಪರೆ

ಐಪಿಎಲ್ ಆರಂಭವಾದಾಗಿನಿಂದಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹೃದಯಭಾಗವಾಗಿರುವ ಧೋನಿ, ಹಳದಿ ಜೆರ್ಸಿಯ ಸಮಾನಾರ್ಥಕವಾಗಿ ರೂಪುಗೊಂಡಿದ್ದಾರೆ. ನಾಯಕನಾಗಿ ತಂಡವನ್ನು ಹಲವು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿರುವ ಧೋನಿ ಅವರು, ಇದೀಗ ಆಟಗಾರನ ಪಾತ್ರದಿಂದ ನಿವೃತ್ತರಾಗಿ ಮೆಂಟರ್ ಹುದ್ದೆಯನ್ನು ಅಲಂಕರಿಸುತ್ತಿರುವುದು ಅಭಿಮಾನಿಗಳಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಧೋನಿ ಯಾವಾಗಲೂ ನಮ್ಮ ತಂಡದ ಅಸ್ಮಿತೆಯ ಭಾಗವಾಗಿರುತ್ತಾರೆ ಮತ್ತು ಇದು ಎಂದಿಗೂ ಅವರ ಸ್ವಂತ ಮನೆಯಾಗಿರುತ್ತದೆ ಎಂದು ಎನ್. ಶ್ರೀನಿವಾಸನ್ ಮಾಧ್ಯಮ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಮುಂಬರುವ ಐಪಿಎಲ್ 2027ರತ್ತ ಚಿತ್ತ

ಆಟಗಾರನಾಗಿ ಕಣಕ್ಕಿಳಿಯದಿದ್ದರೂ, ತಂಡದ ಆಟಗಾರರಿಗೆ ಮಾರ್ಗದರ್ಶನ ನೀಡುವ ಮೂಲಕ ಧೋನಿ ತಮ್ಮ ಅಪಾರ ಅನುಭವವನ್ನು ಹಂಚಿಕೊಳ್ಳಲಿದ್ದಾರೆ. ತಂತ್ರಗಾರಿಕೆ ಮತ್ತು ಡ್ರೆಸ್ಸಿಂಗ್ ರೂಮ್ ವಾತಾವರಣವನ್ನು ಹತ್ತಿರದಿಂದ ಮುನ್ನಡೆಸುವ ಇವರ ಈ ಹೊಸ ಇನ್ನಿಂಗ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮತ್ತಷ್ಟು ಬಲಪಡಿಸಲಿದೆ. ದಶಕಗಳ ಕಾಲ ಮೈದಾನದಲ್ಲಿ ಮ್ಯಾಜಿಕ್ ಮಾಡಿದ್ದ ಕೂಲ್ ಕ್ಯಾಪ್ಟನ್, ಇನ್ನು ಮುಂದೆ ಮೆಂಟರ್ ರೂಪದಲ್ಲಿ ಯುವ ಆಟಗಾರರನ್ನು ಬೆಳೆಸಲು ಸಿದ್ಧರಾಗಿದ್ದು, ಐಪಿಎಲ್ ಇತಿಹಾಸದಲ್ಲಿ ಈ ಹೊಸ ಅಧ್ಯಾಯವು ಭಾರೀ ಕುತೂಹಲ ಮೂಡಿಸಿದೆ.

ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದೊಂದಿಗೆ 17 ಸೀಸನ್‌ಗಳ ಸುದೀರ್ಘ ಪಯಣ ನಡೆಸಿರುವ ಮಹೇಂದ್ರ ಸಿಂಗ್ ಧೋನಿ, 2008ರಲ್ಲಿ ಫ್ರಾಂಚೈಸಿಗೆ ಸೇರಿದಾಗಿನಿಂದ 5 ಐಪಿಎಲ್ ಪ್ರಶಸ್ತಿಗಳು ಹಾಗೂ 2 ಚಾಂಪಿಯನ್ಸ್ ಲೀಗ್ ಕಿರೀಟಗಳನ್ನು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಸಿಎಸ್‌ಕೆ ತಂಡಕ್ಕೆ ನಿಷೇಧವಿದ್ದ 2016 ಮತ್ತು 2017ರ ಅವಧಿಯಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದ ಪರ ಆಡಿದ್ದ ಧೋನಿ, ತಮ್ಮ ಅದ್ಭುತ ಐಪಿಎಲ್ ವೃತ್ತಿಜೀವನದಲ್ಲಿ ಒಟ್ಟು 5439 ರನ್‌ಗಳನ್ನು ಕಲೆಹಾಕಿದ್ದು, 38.30ರ ಸರಾಸರಿ ಹಾಗೂ 137.45ರ ಸ್ಟ್ರೈಕ್ ರೇಟ್ ಅನ್ನು ಹೊಂದಿದ್ದಾರೆ.

ಅಂದಹಾಗೆ, ಮಹೇಂದ್ರ ಸಿಂಗ್ ಧೋನಿ ಅವರು 2020ರ ಆಗಸ್ಟ್ 15 ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದರು. ಭಾರತೀಯ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ನಾಯಕ ಮತ್ತು ಶ್ರೇಷ್ಠ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಆಗಿರುವ ಧೋನಿ ತಮ್ಮ ಸುದೀರ್ಘ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಅಸಾಧಾರಣ ಸಾಧನೆಗಳನ್ನು ಮಾಡಿದ್ದಾರೆ. ಭಾರತ ತಂಡವನ್ನು ಮೂರು ಐಸಿಸಿ ಪ್ರಶಸ್ತಿಗಳಾದ 2007ರ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಮತ್ತು 2013ರ ಚಾಂಪಿಯನ್ಸ್ ಟ್ರೋಫಿ ವಿಜಯಗಳತ್ತ ಮುನ್ನಡೆಸಿದ ಏಕೈಕ ನಾಯಕ ಎಂಬ ಐತಿಹಾಸಿಕ ದಾಖಲೆ ಇವರ ಹೆಸರಲ್ಲಿದೆ. ಟೆಸ್ಟ್, ಏಕದಿನ ಮತ್ತು ಟಿ20 ಮೂರು ಮಾದರಿಗಳಲ್ಲೂ ಅಪ್ರತಿಮ ನಾಯಕತ್ವ ಹಾಗೂ ಅತ್ಯುತ್ತಮ ಫಿನಿಷರ್ ಜವಾಬ್ದಾರಿಯನ್ನು ನಿರ್ವಹಿಸಿರುವ ಧೋನಿ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 17,000ಕ್ಕೂ ಅಧಿಕ ರನ್‌ಗಳನ್ನು ಕಲೆಹಾಕುವುದರ ಜತೆಗೆ ವಿಕೆಟ್ ಕೀಪಿಂಗ್‌ನಲ್ಲಿ ನೂರಾರು ಬ್ಯಾಟ್ಸ್‌ಮನ್‌ಗಳನ್ನು ಸ್ಟಂಪಿಂಗ್ ಮತ್ತು ರನೌಟ್ ಮಾಡುವ ಮೂಲಕ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾಗಿ ಅಳಿಸಲಾಗದ ಮುದ್ರೆ ಒತ್ತಿದ್ದಾರೆ, (ಏಜೆನ್ಸೀಸ್​).