ಪಾಕಿಸ್ತಾನದ​​ ಮಿಸ್ಟರಿ ಸ್ಪಿನ್ನರ್ ಉಸ್ಮಾನ್​​ ತಾರಿಕ್​ (Usman Tariq ) ಮತ್ತು ಟೀಮ್​ ಇಂಡಿಯಾ ಮಾಜಿ ಕ್ರಿಕೆಟಿಗ ಎಂ.ಎಸ್​. ಧೋನಿ  
ಕ್ರಿಕೆಟ್

ಪಾಕ್​​ ಮಿಸ್ಟರಿ ಸ್ಪಿನ್ನರ್​ ತಾರಿಕ್​ ಇಂದು ಈ ಹಂತಕ್ಕೆ ಬರಲು ಧೋನಿಯೇ ಕಾರಣ: ಅಚ್ಚರಿ ಸಂಗತಿ ಬಯಲು! Usman Tariq

ಪ್ರಮುಖ ಮುಖ್ಯಾಂಶಗಳು

  • ಭಾರತದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್​ ಟೂರ್ನಮೆಂಟ್​ ತುಂಬಾ ರೋಚಕ ಹಾದಿಯಲ್ಲಿ ಸಾಗುತ್ತಿದೆ
  • ಕ್ರಿಕೆಟ್​ ಪ್ರೇಮಿಗಳು ಬಹಳ ಕಾತರದಿಂದ ಎದುರು ನೋಡುತ್ತಿದ್ದ ಹೈ-ವೋಲ್ಟೇಜ್​ ಪಂದ್ಯಕ್ಕೆ ಕ್ಷಣಗಣನೆ
  • ಫೆ.15ರಂದು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವೆ ಪ್ರತಿಷ್ಠಿತ ಪಂದ್ಯ
  • ಪಂದ್ಯಕ್ಕೂ ಮುನ್ನವೇ ಪಾಕಿಸ್ತಾನದ ಮಿಸ್ಟರಿ ಸ್ಪಿನ್ನರ್​ ಉಸ್ಮಾನ್ ತಾರಿಕ್ ಹೆಸರು ಸಾಕಷ್ಟು ಸುದ್ದಿಯಲ್ಲಿದೆ
Usman Tariq : ಭಾರತದಲ್ಲಿ ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್​ ಟೂರ್ನಮೆಂಟ್​ ತುಂಬಾ ರೋಚಕ ಹಾದಿಯಲ್ಲಿ ಸಾಗುತ್ತಿದೆ. ಕ್ರಿಕೆಟ್​ ಪ್ರೇಮಿಗಳು ಬಹಳ ಕಾತರದಿಂದ ಎದುರು ನೋಡುತ್ತಿದ್ದ ಹೈ-ವೋಲ್ಟೇಜ್​ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಾಳೆ (ಫೆ.15) ಶ್ರೀಲಂಕಾದ ರಾಜಧಾನಿ ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಪ್ರತಿಷ್ಠಿತ ಗೆಲುವಿಗಾಗಿ ಕಾದಾಡಲಿವೆ.
ಅಂದಹಾಗೆ, ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೂ ಮುನ್ನವೇ ಪಾಕಿಸ್ತಾನದ ಮಿಸ್ಟರಿ ಸ್ಪಿನ್ನರ್​ ಉಸ್ಮಾನ್ ತಾರಿಕ್ ಹೆಸರು ಸಾಕಷ್ಟು ಸುದ್ದಿಯಲ್ಲಿದೆ. ಈ ಆಫ್-ಸ್ಪಿನ್ನರ್ ತನ್ನ ವಿಶಿಷ್ಟ ಸ್ಟಾಪ್-ಅಂಡ್-ಪಾಸ್ ಸೈಡ್-ಆರ್ಮ್ ಆಕ್ಷನ್ ಮೂಲಕ ಕ್ರಿಕೆಟ್ ಜಗತ್ತನ್ನು ಅಚ್ಚರಿಗೊಳಿಸುತ್ತಿದ್ದಾರೆ. ಇಲ್ಲಿಯವರೆಗೆ ನಾಲ್ಕು ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ತಾರಿಕ್ 11 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅಲ್ಲದೆ, ಪ್ರತಿ ಓವರ್‌ಗೆ ಆರು ರನ್‌ಗಳಿಗಿಂತ ಕಡಿಮೆ ಎಕಾನಮಿ ದರದಲ್ಲಿ ಉತ್ತಮ ದಾಖಲೆ ಒಂದಿದ್ದಾರೆ.
ಒಟ್ಟು 42 ಟಿ20 ಪಂದ್ಯಗಳಲ್ಲಿ 70 ವಿಕೆಟ್‌ಗಳನ್ನು ಕಬಳಿಸಿದ್ದಾರೆ ಮತ್ತು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ. ನಾಳೆ ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಟೀಮ್​ ಇಂಡಿಯಾ ಆಟಗಾರರಿಗೆ ದೊಡ್ಡ ಬೆದರಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಪಾಕಿಸ್ತಾನ ತಂಡವು ಉಸ್ಮಾನ್ ತಾರಿಕ್ ಅವರನ್ನು ತಮ್ಮ ಪ್ರಮುಖ ಅಸ್ತ್ರವಾಗಿ ಬಳಸುತ್ತಿದೆ. ಈ ಹಿಂದಿನ ಪಂದ್ಯದಲ್ಲಿ ಅಮೆರಿಕದ ಬ್ಯಾಟ್ಸ್‌ಮನ್‌ಗಳು ತಾರಿಕ್​ ಅವರ ಬೌಲಿಂಗ್​ನಲ್ಲಿ ಆಡಲು ಹೆಣಗಾಡಿದರು. ಅಲ್ಲದೆ, ಅನೇಕರು ತಾರಿಕ್​ ಅವರ ಬೌಲಿಂಗ್​ ಶೈಲಿಯನ್ನೂ ಪ್ರಶ್ನಿಸುತ್ತಿದ್ದಾರೆ. ಬೌಲಿಂಗ್​ ಮಾಡುವಾಗ ಕ್ರೀಸ್​ ಬಳಿ ಒಂದೆರೆಡು ಸೆಕಂಡ್​ ನಿಂತು ಆ ಬಳಿಕ ಬಾಲ್​ ಅನ್ನು ಬಿಡುಗಡೆ ಮಾಡುತ್ತಾರೆ. ಈ ರೀತಿಯ ಬೌಲಿಂಗ್​ ಇದೇ ಮೊದಲು ಹೀಗಾಗಿ, ತಾರಿಕ್​ ಇದೀಗ ಎಲ್ಲರ ಪ್ರಶ್ನೆಯಾಗಿದ್ದಾರೆ. ಆದರೂ ಐಸಿಸಿ ಮಾತ್ರ ಈವರೆಗೂ ತಾರಿಕ್​ ಬೌಲಿಂಗ್​ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ.
28 ವರ್ಷದ ತಾರಿಕ್ ಅವರ ವೃತ್ತಿ ಜೀವನವು ಸಾಕಷ್ಟು ಏರಿಳಿತಗಳನ್ನು ಕಂಡಿವೆ. ಒಂದು ಹಂತದಲ್ಲಿ, ಕ್ರಿಕೆಟ್‌ನಲ್ಲಿ ದೊಡ್ಡ ಹೆಸರು ಮಾಡುವ ಭರವಸೆಯನ್ನೇ ತ್ಯಜಿಸಿದ್ದರು. ಆದರೆ, 2016 ರಲ್ಲಿ ತೆರೆಕಂಡ ಎಂಎಸ್ ಧೋನಿ ಅವರ ಜೀವನ ಆಧಾರಿತ "ಎಂ.ಎಸ್​. ಧೋನಿ: ದಿ ಅನ್​ಟೋಲ್ಡ್​ ಸ್ಟೋರಿ" ಸಿನಿಮಾ ನೋಡಿದ ನಂತರ ತಾರಿಕ್​ ಅವರು ಮತ್ತೆ ಸ್ಫೂರ್ತಿ ಪಡೆದರು. ಆ ಸಿನಿಮಾವನ್ನು ನೋಡಿದ ನಂತರ, ನಾನು ಸಹ ಸಾಧಿಸಬಲ್ಲೆ ಎಂಬ ವಿಶ್ವಾಸ ಬಂದಿತು ಎಂದು ಪಾಕಿಸ್ತಾನದ ನಿಗೂಢ ಸ್ಪಿನ್ನರ್ ಉಸ್ಮಾನ್ ತಾರಿಕ್ ಈ ಹಿಂದಿನ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
ದುಬೈನಲ್ಲಿ ಸೇಲ್ಸ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ತಾರಿಕ್, ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ 20 ವಿಕೆಟ್‌ಗಳನ್ನು ಪಡೆಯುವ ಮೂಲಕ ಎಲ್ಲರ ಗಮನ ಸೆಳೆದರು. ಕಳೆದ ವರ್ಷ ತನ್ನ ವಿವಾಹದ ಸಮಯದಲ್ಲೇ ತಾರಿಕ್​ ಅವರನ್ನು ಪಾಕಿಸ್ತಾನ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲಾಯಿತು. ಈ ವಿಚಾರವನ್ನು ಅವರ ಕೋಚ್ ಹೇಳಿದಾಗ, ಆರಂಭದಲ್ಲಿ ಅದೊಂದು ತಮಾಷೆ ಇರಬಹುದು ಎಂದು ತಾರಿಕ್​ ಭಾವಿಸಿದರು. ಆದರೆ, ನಿಜ ಅಂತ ಗೊತ್ತಾದಾಗ ತುಂಬಾ ಖುಷಿಪಟ್ಟರು ಮತ್ತು ನನ್ನ ಹೆಂಡತಿ ನನಗೆ ಅದೃಷ್ಟ ತಂದಿದ್ದಾಳೆ ಎಂದು ಹೇಳಿದರು.
ಆದರೂ, ತಾರಿಕ್​ ಅವರ ಬೌಲಿಂಗ್ ಶೈಲಿ ಇದೀಗ ವಿವಾದಕ್ಕೆ ಕಾರಣವಾಗಿದೆ. ಉಸ್ಮಾನ್ ಅವರ ಬೌಲಿಂಗ್ ಶೈಲಿಯಲ್ಲಿನ ವಿರಾಮವನ್ನು "ಕಾನೂನುಬಾಹಿರ" ಎಂದು ಇಂಗ್ಲೆಂಡ್‌ನ ಮಾಜಿ ನಾಯಕ ಕೆವಿನ್​ ಪೀಟರ್ಸನ್ ಹೇಳಿದ್ದಾರೆ. ಆದರೆ, ಭಾರತೀಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಾರಿಕ್ ಅವರ ಬೌಲಿಂಗ್ ಆಕ್ಷನ್ ಬಗ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಬೌಲಿಂಗ್​ ಶೈಲಿಯ ಕಾನೂನುಬದ್ಧತೆಯನ್ನು ನಿರ್ಧರಿಸುವುದು ICCಗೆ ಮಾತ್ರ ಸಾಧ್ಯ ಎಂದಿದ್ದಾರೆ. ಅಲ್ಲದೇ, ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ಸಲಹೆ ನೀರುವ ಅಶ್ವಿನ್​, ತಾರಿಕ್ ಏನಾದರೂ ರನ್-ಅಪ್‌ನಲ್ಲಿ ನಿಂತರೆ ಬ್ಯಾಟ್ಸ್‌ಮನ್ ಕ್ರೀಸ್‌ನಿಂದ ಸ್ವಲ್ಪ ಮುಂದೆ ಹೋಗಬಹುದು. ಇದು ಬೌಲರ್ ಮೇಲೆ ಮಾನಸಿಕ ಒತ್ತಡ ಹಾಕುತ್ತದೆ ಎಂಬ ಅಭಿಪ್ರಾಯಪಟ್ಟಿದ್ದಾರೆ, (ಏಜೆನ್ಸೀಸ್​).