ಇತಿಹಾಸ ಬರೆದ ಶಮಿ... 19 ವರ್ಷದ IPL ಇತಿಹಾಸದಲ್ಲಿ ಈ ಸಾಧನೆ ಮಾಡಿದ ಏಕೈಕ ಬೌಲರ್ ಎಂಬ ಹೆಗ್ಗಳಿಕೆ! Mohammed Shami
- ಟೀಮ್ ಇಂಡಿಯಾದ ಅನುಭವಿ ಆಟಗಾರ ಮೊಹಮ್ಮದ್ ಶಮಿ ಐಪಿಎಲ್‌ನಲ್ಲಿ ಅಪರೂಪದ ಸಾಧನೆ
- ನಿನ್ನೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕೆ.ಎಲ್. ರಾಹುಲ್ ವಿಕೆಟ್ ಪಡೆಯುವ ಮೂಲಕ ಇತಿಹಾಸ ಸೃಷ್ಟಿ
- ಐಪಿಎಲ್‌ನಲ್ಲಿ ಮೊದಲ ಎಸೆತದಲ್ಲೇ 5 ಬಾರಿ ವಿಕೆಟ್ ಪಡೆದ ಏಕೈಕ ಬೌಲರ್ ಎಂಬ ಹೆಗ್ಗಳಿಕೆಗೆ ಶಮಿ ಪಾತ್ರ
Mohammed Shami : ಟೀಮ್ ಇಂಡಿಯಾದ ಅನುಭವಿ ಆಟಗಾರ ಮೊಹಮ್ಮದ್ ಶಮಿ ಐಪಿಎಲ್‌ನಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ. ನಿನ್ನೆ (ಏಪ್ರಿಲ್ 01) ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ತಾವು ಎಸೆದ ತಮ್ಮ ಮೊದಲನೇ ಓವರ್ನ ಮೊದಲ ಎಸೆತದಲ್ಲೇ ಕೆ.ಎಲ್. ರಾಹುಲ್ ಅವರನ್ನು ಔಟ್ ಮಾಡಿದರು. ಈ ಮೂಲಕ ಮೊದಲ ಎಸೆತದಲ್ಲೇ 5 ಬಾರಿ ವಿಕೆಟ್ ಪಡೆದ ಏಕೈಕ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಇನ್ನಿಂಗ್ಸ್ ವೇಳೆ ಕೆ.ಎಲ್. ರಾಹುಲ್ ಹಾಗೂ ಪಥುಮ್ ನಿಸ್ಸಾನ್ ಅವರು ಆರಂಭಿಕರಾಗಿ ಕಣಕ್ಕಿಳಿದರು. ಈ ವೇಳೆ ಪಥಮ್ ನಾನ್ ಸ್ಟ್ರೈಕರ್ ಎಂಡ್ಗೆ ಹೋದರೆ, ರಾಹುಲ್ ಅವರು ಸ್ಟ್ರೈಕರ್ ತುದಿಯಲ್ಲಿ ಬ್ಯಾಟಿಂಗ್ ಆರಂಭಿಸಿದರು. ಎಲ್ಎಸ್ಜಿ ಪರ ಮೊದಲ ಓವರ್ ಎಸೆದ ಶಮಿ, ತಮ್ಮ ಮೊದಲ ಎಸೆತದಲ್ಲೇ ರಾಹುಲ್ ಅವರನ್ನು ಔಟ್ ಮಾಡಿದರು. ಈ ಮೂಲಕ ಐದನೇ ಬಾರಿಗೆ ತಮ್ಮ ಮೊದಲ ಎಸೆತದಲ್ಲೇ ವಿಕೆಟ್ ಪಡೆದ ಅಪರೂಪದ ಸಾಧನೆ ಮಾಡಿದರು.
* ಪ್ರವೀಣ್ ಕುಮಾರ್ - 3 ಬಾರಿ
* ಟ್ರೆಂಟ್ ಬೌಲ್ಟ್ - 3 ಬಾರಿ
* ಭುವನೇಶ್ವರ್ ಕುಮಾರ್ - 3 ಬಾರಿ
* ಪ್ಯಾಟ್ ಕಮ್ಮಿನ್ಸ್ - 3 ಬಾರಿ
ಅಂದಹಾಗೆ, ಶಮಿ ಅವರು 2013 ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ಅವರು ಇಲ್ಲಿಯವರೆಗೆ 121 ಪಂದ್ಯಗಳನ್ನು ಆಡಿದ್ದಾರೆ ಮತ್ತು 8.62 ರ ಎಕಾನಮಿ ದರದಲ್ಲಿ 134 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದರಲ್ಲಿ ಎರಡು ಬಾರಿ ನಾಲ್ಕು ವಿಕೆಟ್‌ಗಳ ಗೊಂಚಲೂ ಸೇರಿದೆ.
ಇನ್ನೂ ಪಂದ್ಯದ ವಿಚಾರಕ್ಕೆ ಬರುವುದಾದರೆ, ಬುಧವಾರ (ಏಪ್ರಿಲ್ 01) ಲಖನೌದ ಏಕನಾ ಸ್ಟೇಡಿಯಂನಲ್ಲಿ ನಡೆದ ಐದನೇ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆದ್ದು ಬೀಗಿತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಎಲ್ಎಸ್ಜಿ, 18.4 ಓವರ್ಗೆ ಕೇವಲ 141 ರನ್ ಕಲೆಹಾಕಿತು.
ಈ ಸಾಧಾರಣ ಗುರಿಯನ್ನು ಬೆನ್ನತ್ತಿದ ಅಕ್ಷರ್ ಪಡೆಗೆ ಆರಂಭಿಕ ಆಘಾತ ಎದುರಾಯಿತು. ಓಪನರ್ಗಳಾದ ಕೆ.ಎಲ್. ರಾಹುಲ್ ಡಕ್ ಔಟ್ ಆದರೆ, ಪತ್ತಮ್ ನಿಸ್ಸಂಕಾ ಒಂದು ರನ್ಗೆ ಪೆವಿಲಿಯನ್ ಹಾದಿ ಹಿಡಿದರು. ಆರಂಭಿಕರ ಬಳಿಕ ಬಂದ ನಿತೀಶ್ ರಾಣಾ 15 ರನ್ ಬಾರಿಸಿದರೆ, ಅಕ್ಷರ್ ಪಟೇಲ್ ಶೂನ್ಯಕ್ಕೆ ಔಟ್ ಆದರು. ಪವರ್ಪ್ಲೇ ಹಂತದಲ್ಲಿ ಕೇವಲ 33 ರನ್ಗೆ 4 ಬಹುಮುಖ್ಯ ವಿಕೆಟ್‌ಗಳನ್ನು ಕಳೆದುಕೊಂಡು ಕಂಗಾಲಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್ಗೆ ಆಸರೆಯಾಗಿದ್ದು ಸಮೀರ್ ರಿಜ್ವಿ ಮತ್ತು ಟ್ರಿಸ್ಟನ್ ಸ್ಟಬ್ಸ್ ಅವರ ಭರ್ಜರಿ ಇನ್ನಿಂಗ್ಸ್. ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ 17.1 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಗುರಿ ಮುಟ್ಟಿತು. ಈ ಮೂಲಕ ಡೆಲ್ಲಿ ಶುಭಾರಂಭ ಮಾಡಿತು, (ಏಜೆನ್ಸೀಸ್).