ಕ್ರಿಕೆಟ್

ಟೆಸ್ಟ್ ಕ್ರಿಕೆಟ್‌ಗೆ ಮೊಹಮ್ಮದ್ ಶಮಿ ವಿದಾಯ!: ಸೀಮಿತ ಓವರ್‌ಗಳ ಕ್ರಿಕೆಟ್ ಕುರಿತು ಮಹತ್ವದ ಹೇಳಿಕೆ | Mohammad Shami Retirement

Mohammad Shami Retirement: ಮೊಹಮ್ಮದ್ ಶಮಿ ಅವರ ವೃತ್ತಿಜೀವನದಲ್ಲಿ ನವೆಂಬರ್ 6 ವಿಶೇಷ ಮಹತ್ವವನ್ನು ಪಡೆದುಕೊಂಡಿದೆ. ಇದೇ ದಿನ ಅಂದರೆ 2013ರ ನವೆಂಬರ್ 6ರಂದು ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ಟೆಸ್ಟ್ ಕ್ರಿಕೆಟ್ ಜೀವನಕ್ಕೆ ಪದಾರ್ಪಣೆ ಮಾಡಿದ್ದರು. ಬರೊಬ್ಬರಿ ಹದಿಮೂರು ವರ್ಷಗಳ ಬಳಿಕ, ಅದೇ ದಿನದಂದು ಅವರು ಕ್ರಿಕೆಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಮೂಲಕ ತಮ್ಮ ಬಿಳಿ ಜರ್ಸಿಯ ರೋಚಕ ಹಾಗೂ ಸ್ಮರಣೀಯ ಪಯಣಕ್ಕೆ ಅಧಿಕೃತ ತೆರೆ ಎಳೆದಿದ್ದಾರೆ.

ವಿದಾಯದ ಭಾವುಕ ಸಂದೇಶ

ತಮ್ಮ ಟೆಸ್ಟ್ ಪಯಣದ ಆರಂಭಿಕ ದಿನಗಳನ್ನು ನೆನಪಿಸಿಕೊಂಡು ಭಾವುಕರಾದ 35 ವರ್ಷ ವಯಸ್ಸಿನ ಶಮಿ, ಭಾರತದ ಟೆಸ್ಟ್ ಜರ್ಸಿಯನ್ನು ಮೊದಲ ಬಾರಿ ಧರಿಸಿದಾಗ, ದೇಶಕ್ಕಾಗಿ ಏನಾದರೂ ಸಾಧಿಸಬೇಕು ಎಂಬ ಒಂದೇ ಒಂದು ಕನಸು ನನ್ನಲ್ಲಿತ್ತು (ಜಬ್ ಪೆಹ್ಲಿ ಬಾರ್ ಭಾರತ್ ಕಿ ಟೆಸ್ಟ್ ಜರ್ಸಿ ಪೆಹ್ನಿ ಥಿ, ತಬ್ ಸಿರ್ಫ್ ಏಕ್ ಸಪ್ನಾ ಥಾ, ಅಪ್ನೇ ದೇಶ್ ಕೆ ಲಿಯೇ ಕುಚ್ ಕರ್ ದಿಖಾನೆ ಕಾ") ಎಂದು ಬರೆದುಕೊಂಡಿದ್ದಾರೆ.

ಟೆಸ್ಟ್ ಕ್ರಿಕೆಟ್ ಕೇವಲ ತಮಗೊಂದು ಮಾದರಿಯಾಗಿರಲಿಲ್ಲ, ಬದಲಿಗೆ ತಮ್ಮ ಜೀವನದ ಅತ್ಯಂತ ವಿಶೇಷವಾದ ಭಾಗವಾಗಿತ್ತು ಎಂದಿರುವ ಶಮಿ, ತಮ್ಮ ವೃತ್ತಿಜೀವನದಲ್ಲಿ ಎದುರಾದ ಪ್ರತಿಯೊಂದು ವಿಕೆಟ್, ಕಷ್ಟ, ಗಾಯ ಮತ್ತು ಅದ್ಭುತ ಪುನರಾಗಮನಗಳು ತಮಗೆ ಅಮೂಲ್ಯವಾದ ಪಾಠಗಳನ್ನು ಕಲಿಸಿವೆ ಎಂದು ಸ್ಮರಿಸಿದ್ದಾರೆ. ತಮ್ಮ ಸುದೀರ್ಘ ಪಯಣದಲ್ಲಿ ಬೆನ್ನೆಲುಬಾಗಿ ನಿಂತು ನಂಬಿಕೆ ಇಟ್ಟಿದ್ದ ಸಹಆಟಗಾರರು, ತರಬೇತುದಾರರು, ಕುಟುಂಬ ವರ್ಗದವರು ಮತ್ತು ಕೋಟ್ಯಂತರ ಭಾರತೀಯ ಅಭಿಮಾನಿಗಳಿಗೆ ಅವರು ಧನ್ಯವಾದ ಅರ್ಪಿಸಿದ್ದಾರೆ. ಇದರೊಂದಿಗೆ ಬಿಸಿಸಿಐ ಹಾಗೂ ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ ಸಂಸ್ಥೆಗಳಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.

ಶಮಿ ಅವರು ಸಂಪೂರ್ಣವಾಗಿ ಕ್ರಿಕೆಟ್‌ಗೆ ವಿದಾಯ ಹೇಳುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದು, ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಮುಂದುವರಿಯಲು ನಿರ್ಧರಿಸಿದ್ದಾರೆ. ಅಲ್ಲದೆ, ತಮ್ಮ ಫಿಟ್‌ನೆಸ್ ಕಾಪಾಡಿಕೊಳ್ಳಲು ಅಥವಾ ಅಗತ್ಯವಿದ್ದಲ್ಲಿ ಪ್ರಥಮ ದರ್ಜೆ ಪಂದ್ಯಗಳಲ್ಲೂ ಆಡಲು ಮುಕ್ತವಾಗಿರುವುದಾಗಿ ತಿಳಿಸಿದ್ದಾರೆ.

ಶಮಿ ಟೆಸ್ಟ್ ವೃತ್ತಿಜೀವನದ ಮೈಲಿಗಲ್ಲುಗಳು

ಮೊಹಮ್ಮದ್ ಶಮಿ ಅವರು 2013ರ ನವೆಂಬರ್ 6 ರಂದು ಕೋಲ್ಕತ್ತಾದ ಐತಿಹಾಸಿಕ ಈಡನ್ ಗಾರ್ಡನ್ಸ್ ಮೈದಾನದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದ ಮೂಲಕ ತಮ್ಮ ಟೆಸ್ಟ್ ಕ್ರಿಕೆಟ್ ಜೀವನಕ್ಕೆ ಪದಾರ್ಪಣೆ ಮಾಡಿದರು. ತಮ್ಮ ಮಾರಕ ದಾಳಿಯಿಂದ ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳನ್ನು ನಡುಗಿಸುತ್ತಿದ್ದ ಶಮಿ, ಭಾರತಕ್ಕಾಗಿ ಒಟ್ಟು 64 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 27.71ರ ಸರಾಸರಿಯಲ್ಲಿ ಒಟ್ಟು 229 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅವರ ಟೆಸ್ಟ್ ವೃತ್ತಿಜೀವನದಲ್ಲಿ 6 ಬಾರಿ ಐದು ವಿಕೆಟ್ ಗೊಂಚಲುಗಳನ್ನು ಪಡೆದ ಹೆಗ್ಗಳಿಕೆ ಇದೆ. ಇಂಗ್ಲೆಂಡ್ ವಿರುದ್ಧ 56 ರನ್ ನೀಡಿ 6 ವಿಕೆಟ್ ಪಡೆದಿರುವುದು ಅವರ ಅತ್ಯುತ್ತಮ ವೈಯಕ್ತಿಕ ಬೌಲಿಂಗ್ ಸಾಧನೆಯಾಗಿದೆ.

ನಿಖರ ವೇಗ, ರಿವರ್ಸ್ ಸ್ವಿಂಗ್ ಮಾಡುವ ಅದ್ಭುತ ಕಲೆ ಮತ್ತು ಹಳೆಯ ಬಾಲ್​ನಲ್ಲೂ ಸ್ಪೀಡ್ ಬೌಲ್​​​ ಮಾಡುವ ವಿಶಿಷ್ಟ ನೈಪುಣ್ಯತೆಗೆ ಶಮಿ ಹೆಸವಾಸಿಯಾಗಿದ್ದರು. ಯಾವುದೇ ಪಿಚ್ ಪರಿಸ್ಥಿತಿಯಲ್ಲೂ ವಿಕೆಟ್ ಕಬಳಿಸುವ ಸಾಮರ್ಥ್ಯ ಹೊಂದಿದ್ದ ಅವರು, ಭಾರತೀಯ ಬೌಲಿಂಗ್ ದಾಳಿಗೆ ಪ್ರಮುಖ ಅಸ್ತ್ರವಾಗಿದ್ದರು. ವಿದೇಶಿ ನೆಲದ ಟೆಸ್ಟ್ ಸರಣಿಗಳಲ್ಲಿ, ವಿಶೇಷವಾಗಿ ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾದ ಸವಾಲಿನ ಪಿಚ್‌ಗಳಲ್ಲಿ ಟೀಮ್​ ಇಂಡಿಯಾ ಗೆಲ್ಲಲು ಶಮಿ ನಿರ್ಣಾಯಕ ಪಾತ್ರ ವಹಿಸಿದ್ದರು. ಜಸ್ಪ್ರಿತ್​ ಬುಮ್ರಾ ಅವರೊಂದಿಗೆ ಅವರು ರೂಪಿಸಿದ ವೇಗದ ಜೋಡಿಯು ವಿಶ್ವ ಕ್ರಿಕೆಟ್‌ನಲ್ಲಿ ಅತ್ಯಂತ ಭಯಾನಕ ಮತ್ತು ಬಲಿಷ್ಠ ಜೋಡಿಯಾಗಿ ಗುರುತಿಸಿಕೊಂಡಿತ್ತು.

ಕೊನೆಯದಾಗಿ ತಮ್ಮ ಸಂದೇಶದಲ್ಲಿ, ನಾನು ಆಡಿದ ನನ್ನ ಕೊನೆಯ ಟೆಸ್ಟ್ ಎಸೆತವನ್ನು ಬೌಲ್ ಮಾಡಿರಬಹುದು, ಆದರೆ ಭಾರತಕ್ಕಾಗಿ ಆಡಿದ ಹೆಮ್ಮೆ ಮಾತ್ರ ನನ್ನ ಹೃದಯದಲ್ಲಿ ಸದಾ ಜೀವಂತವಾಗಿರುತ್ತದೆ ಎಂದು ಬರೆಯುವ ಮೂಲಕ ಶಮಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದರು. ಶಮಿ ಅವರ ಈ ನಿರ್ಗಮನದೊಂದಿಗೆ ಭಾರತೀಯ ಕ್ರಿಕೆಟ್‌ನಲ್ಲಿ ಒಂದು ಸುವರ್ಣ ಅಧ್ಯಾಯ ಮುಕ್ತಾಯಗೊಂಡಂತಾಗಿದೆ(ಏಜೆನ್ಸೀಸ್​).