RCB ಪಂದ್ಯದ ವೇಳೆ ಮೊಬೈಲ್ ಕಳೆದುಕೊಂಡು ಕ್ರಿಕೆಟ್ ಫ್ಯಾನ್ಸ್​ ಕಂಗಾಲು: ಹೊರಬಿತ್ತು ಆಘಾತಕಾರಿ ಮಾಹಿತಿ! Mobiles Stolen  
ಕ್ರಿಕೆಟ್

RCB ಪಂದ್ಯದ ವೇಳೆ ಮೊಬೈಲ್ ಕಳೆದುಕೊಂಡು ಕ್ರಿಕೆಟ್ ಫ್ಯಾನ್ಸ್​ ಕಂಗಾಲು: ಹೊರಬಿತ್ತು ಆಘಾತಕಾರಿ ಮಾಹಿತಿ! Mobiles Stolen

ರಮೇಶ್​ ಕುಮಾರ್​​ ಬಿ ಎಡಮೋಳೆ

ಪ್ರಮುಖ ಮುಖ್ಯಾಂಶಗಳು

  • ಶನಿವಾರ ನಡೆದ ಆರ್​ಸಿಬಿ ಪಂದ್ಯದ ವೇಳೆ ಮೊಬೈಲ್ ಕಳೆದುಕೊಂಡ ಹಲವು ಕ್ರಿಕೆಟ್ ಅಭಿಮಾನಿಗಳು
  • ವಿಶೇಷವಾಗಿ ಚಿನ್ನಸ್ವಾಮಿ ಕ್ರೀಡಾಂಗಣದ P3 ಸ್ಟ್ಯಾಂಡ್ ನಲ್ಲಿ ಹೆಚ್ಚು ಫೋನ್​ಗಳ ಕಳ್ಳತನ ಆಗಿದೆ
  • ಸುಮಾರು 50 ರಿಂದ 60 ಮೊಬೈಲ್ ಫೋನ್‌ಗಳನ್ನು ಕಳವು ಮಾಡಲಾಗಿದೆ ಎಂಬ ವರದಿ ಇದೆ
  • ಇನ್ನು ಈ ಪ್ರಕರಣದಲ್ಲಿ ಪೊಲೀಸರು 10ಕ್ಕೂ ಹೆಚ್ಚು ಅಪ್ರಾಪ್ತ ವಯಸ್ಕರನ್ನು ಬಂಧಿಸಿದ್ದಾರೆ
Mobiles Stolen : ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ನಡುವೆ ನಡೆದ 19ನೇ ಆವೃತ್ತಿಯ ಉದ್ಘಾಟನಾ ಪಂದ್ಯ ಕೆಲ ಕ್ರಿಕೆಟ್ ಅಭಿಮಾನಿಗಳಿಗೆ ಕಹಿ ನೆನಪುಗಳನ್ನು ಬಿಟ್ಟು ಹೋಗಿದೆ. ಏಕೆಂದರೆ, ಕ್ರೀಡಾಂಗಣದಲ್ಲಿ ಪಂದ್ಯವನ್ನು ಆನಂದಿಸುತ್ತಿದ್ದ ಪ್ರೇಕ್ಷಕರನ್ನು ಗುರಿಯಾಗಿಸಿಕೊಂಡು ಒಂದು ಗ್ಯಾಂಗ್ ಸಾಕಷ್ಟು ಮೊಬೈಲ್​​ಗಳನ್ನು ಕಳ್ಳತನ ಮಾಡಿದೆ. ಫೋನ್​ ಕಳೆದುಕೊಂಡ ಸಂತ್ರಸ್ತರು ತಮ್ಮ ದುಃಖವನ್ನು ತೋಡಿಕೊಂಡು, ಪೊಲೀಸರ ನಿರ್ಲಕ್ಷ್ಯದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ.
ವರದಿಗಳ ಪ್ರಕಾರ, ಕ್ರೀಡಾಂಗಣದ 'ಪಿ3' ಸ್ಟ್ಯಾಂಡ್‌ನಿಂದ ಸುಮಾರು 50 ರಿಂದ 60 ಮೊಬೈಲ್ ಫೋನ್‌ಗಳನ್ನು ಕಳವು ಮಾಡಲಾಗಿದೆ. ತಮ್ಮ ಇನ್​ಸ್ಟಾಗ್ರಾಂನಲ್ಲಿ ರಿತು ತಿವಾರಿ ಎಂಬುವರು ಒಂದು ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಆ ವಿಡಿಯೋದಲ್ಲಿ, ತಮ್ಮ ಪತಿಯ ಫೋನ್ ಹೇಗೆ ಕಳೆದುಹೋಯಿತು ಎಂಬುದನ್ನು ತಿವಾರಿ ವಿವರಿಸಿದ್ದಾರೆ.
ಮೊದಲ ಇನ್ನಿಂಗ್ಸ್‌ನಲ್ಲಿ, ನನ್ನ ಪತಿ ನೀರು ತರಲು ಹೋದಾಗ, ಅವರು ತಮ್ಮ ಫೋನ್ ಅನ್ನು ಕಳೆದುಕೊಂಡರು. ನಾವು ಮಾತ್ರವಲ್ಲ, ಅದೇ ಸಮಯದಲ್ಲಿ ಅಲ್ಲಿದ್ದ ಡಜನ್​ಗಟ್ಟಲೆ ಜನರು ತಮ್ಮ ಫೋನ್‌ಗಳನ್ನು ಕಳೆದುಕೊಂಡಿದ್ದರಿಂದ ಬಹಳ ಚಿಂತಿತರಾಗಿದ್ದರು ಎಂದು ತಿವಾರಿ ಹೇಳಿದ್ದಾರೆ.
ಕಳ್ಳರು ಇದನ್ನೆಲ್ಲ ಬಹಳ ಯೋಜಿತ ರೀತಿಯಲ್ಲಿ ಮಾಡಿದ್ದಾರೆಂದು ತೋರುತ್ತದೆ. ಚೆನ್ನೈ ಮತ್ತು ಹೈದರಾಬಾದ್​ನಲ್ಲೂ ಇದೇ ರೀತಿ ಆಗಿತ್ತು. ಎರಡನೇ ಇನ್ನಿಂಗ್ಸ್ ಆರಂಭದಲ್ಲಿ ಪ್ರೇಕ್ಷಕರು ಆಹಾರ ತೆಗೆದುಕೊಂಡು ಬರಲು ತಮ್ಮ ಆಸನಗಳಿಂದ ಎದ್ದಂತಹ ಸಮಯವನ್ನು ಬಳಸಿಕೊಂಡು ಕಳ್ಳತನ ಮಾಡಿದ್ದಾರೆ. ಈ ಬಗ್ಗೆ ನಾವು ದೂರು ಕೊಡಲು ಹೋದಾಗ ನಮ್ಮ ರೀತಿಯೇ ಹಲವಾರು ಜನ ಮೊಬೈಲ್ ಕಳೆದುಕೊಂಡು ಪೊಲೀಸ್​​ ಠಾಣೆಗೆ ಬಂದಿದ್ದರು. ಅದನ್ನು ನೋಡಿ ನಮಗೆ ಆಘಾತವಾಯಿತು. ನಾವು ಕಂಪ್ಲೇಟ್ ಕೊಟ್ಟೆವು ಆದರೆ, ಪೊಲೀಸರು ಅದನ್ನು ಅಷ್ಟೇನೂ ಸೀರಿಯಸ್ ಆಗಿ ಪರಿಗಣಿಸಿಲ್ಲ ಎಂದಿದ್ದಾರೆ ತಿವಾರಿ.
ಇನ್ನು ಈ ಪ್ರಕರಣದಲ್ಲಿ ಪೊಲೀಸರು 10ಕ್ಕೂ ಹೆಚ್ಚು ಅಪ್ರಾಪ್ತ ವಯಸ್ಕರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಅವರೆಲ್ಲರೂ ತಂಡದ ಜೆರ್ಸಿಗಳನ್ನು ಧರಿಸಿ ಉಚಿತ ಟಿಕೆಟ್‌ಗಳೊಂದಿಗೆ ಕ್ರೀಡಾಂಗಣದಲ್ಲಿ ಸುತ್ತಾಡುತ್ತಾ ಈ ಕಳ್ಳತನಗಳನ್ನು ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಇದು ಯಾವುದೋ ಸಣ್ಣ ಕಳ್ಳತನವಲ್ಲ, ಬದಲಾಗಿ ಒಂದು ಗ್ಯಾಂಗ್‌ನ ಕೆಲಸ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಅಪ್ರಾಪ್ತರೇ ಇದರಲ್ಲಿ ಭಾಗಿಯಾಗಿರುವುದು ನಿಜಕ್ಕೂ ಆಘಾತಕಾರಿ ಸಂಗತಿಯಾಗಿದೆ.
ಇನ್ನು ಭಾರೀ ಭದ್ರತೆಯ ಕ್ರೀಡಾಂಗಣದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಕಳ್ಳತನ ನಡೆದಿರುವುದಕ್ಕೆ ಅಭಿಮಾನಿಗಳು, ಬೆಂಗಳೂರು ಪೊಲೀಸರನ್ನು ಟೀಕಿಸುತ್ತಿದ್ದಾರೆ. ಪೊಲೀಸರು ಪ್ರಸ್ತುತ ಘಟನೆಯ ಬಗ್ಗೆ ತೀವ್ರವಾಗಿ ತನಿಖೆ ನಡೆಸುತ್ತಿದ್ದಾರೆ, (ಏಜೆನ್ಸೀಸ್​).