ಶ್ರೇಯಸ್ ಅಯ್ಯರ್ ಹಿಡಿದ ಅದ್ಭುತ ಕ್ಯಾಚ್ಗೆ ತಲೆಬಾಗಿದ ಕ್ರೀಡಾ ಜಗತ್ತು: ರೋಹಿತ್, ಸೂರ್ಯ ರಿಯಾಕ್ಷನ್ ವೈರಲ್...Shreyas Iyer
- 19ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಪಂಜಾಬ್ ಕಿಂಗ್ಸ್ ತಂಡ
- ಆಡಿರುವ 5 ಪಂದ್ಯಗಳಲ್ಲಿ ಒಂದು ಪಂದ್ಯ ಮಳೆಯಿಂದ ರದ್ದಾದರೆ, ಉಳಿದ ನಾಲ್ಕರಲ್ಲಿ ಗೆಲವು
- ಐಪಿಎಲ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿದ ಶ್ರೇಯಸ್ ಅಯ್ಯರ್ ಪಡೆ
- ನಿನ್ನೆ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಭರ್ಜರಿ ಗೆಲುವು
Shreyas Iyer : ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡ ಭರ್ಜರಿ ಪ್ರದರ್ಶನ ನೀಡುತ್ತಿದೆ. ಇದುವರೆಗೂ ಆಡಿರುವ 5 ಪಂದ್ಯಗಳಲ್ಲಿ ಒಂದು ಪಂದ್ಯ ಮಳೆಯಿಂದ ರದ್ದಾದರೆ, ಉಳಿದ ನಾಲ್ಕರಲ್ಲಿ ಗೆಲವು ಸಾಧಿಸಿ, ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಗುರುವಾರ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 7 ವಿಕೆಟ್‌ಗಳಿಂದ ಭರ್ಜರಿ ಜಯಗಳಿಸಿತು.
ಈ ಪಂದ್ಯದಲ್ಲಿ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಮಾತ್ರವಲ್ಲದೆ, ತಮ್ಮ ಅದ್ಭುತವಾದ ಫೀಲ್ಡಿಂಗ್ ಕೌಶಲ್ಯದಿಂದ ಎಲ್ಲರ ಗಮನ ಸೆಳೆದರು. ಅದರಲ್ಲೂ ವಿಶ್ವಕಪ್ ವಿಜೇತ ನಾಯಕರಾದ ಸೂರ್ಯಕುಮಾರ್ ಯಾದವ್ ಮತ್ತು ರೋಹಿತ್ ಶರ್ಮಾ, ಅಯ್ಯರ್ ಫೀಲ್ಡಿಂಗ್ ನೋಡಿ ಮೂಕವಿಸ್ಮಿತರಾದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ನಡೆದಿದ್ದೇನು?
ಮುಂಬೈ ತಂಡ ಬ್ಯಾಟಿಂಗ್ ಮಾಡುವಾಗ 18ನೇ ಓವರ್‌ನಲ್ಲಿ ಈ ಘಟನೆ ನಡೆಯಿತು. ಈ ಓವರ್ ಅನ್ನು ಪಂಜಾಬ್ ಬೌಲರ್ ಮಾರ್ಕೊ ಜಾನ್ಸೆನ್ ಬೌಲ್ ಮಾಡಿದರು. ಮುಂಬೈ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಸ್ಟ್ರೈಕಿಂಗ್ ಎಂಡ್‌ನಲ್ಲಿದ್ದರು. ಪಾಂಡ್ಯ ಮೊದಲ ಎಸೆತವನ್ನು ಸಿಕ್ಸರ್‌ಗೆ ಬಾರಿಸಿದರು. ಎರಡನೇ ಎಸೆತ ಡಾಟ್ ಆಯಿತು. ಮೂರನೇ ಎಸೆತದಲ್ಲಿ ಪಾಂಡ್ಯ ಲಾಂಗ್ ಆನ್ ಕಡೆಗೆ ಬೃಹತ್ ಶಾಟ್ ಆಡಿದರು. ಈ ವೇಳೆ ಗಾಳಿಯಲ್ಲಿ ಹಾರಿದ ಚೆಂಡು ಇನ್ನೇನು ಬೌಂಡರಿ ಗೆರೆಯನ್ನು ದಾಟಬೇಕು ಎನ್ನುವಷ್ಟರಲ್ಲಿ ಲಾಂಗ್ಆನ್ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಅಯ್ಯರ್, ಗಾಳಿಯಲ್ಲಿ ಹಾರಿ ಚೆಂಡನ್ನು ಹಿಡಿದರು. ಆದರೆ, ಗಾಳಯಲ್ಲಿರುವಾಗಲೇ ಬೌಂಡರಿ ಗೆರಯನ್ನು ದಾಟಿದ್ದರು. ಇದು ಗೊತ್ತಾದ ಕೂಡಲೇ ತಕ್ಷಣ ಚೆಂಡನ್ನು ಮೈದಾನದ ಒಳಗೆ ಎಸೆದು ಕೆಳಗೆ ಬಿದ್ದರು. ಅಷ್ಟರಲ್ಲಿ ಮೈದಾನದ ಒಳಗೆ ಇದ್ದ ಬಾರ್ಟ್ಲೆಟ್, ಸುಲಭವಾಗಿ ಆ ಕ್ಯಾಚ್ ಹಿಡಿದರು.
ನೀವಿದನ್ನು ಗಮನಿಸಿದ್ರಾ?
ಅಯ್ಯರ್ ಅವರು ಮುಂಬೈ ಡಗೌಟ್ ಬಳಿ ಕ್ಯಾಚ್ ಹಿಡಿದರು. ಈ ವೇಳೆ ಅಲ್ಲಿಯೇ ಕುಳಿತಿದ್ದ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಒಂದು ಕ್ಷಣ ಹುಬ್ಬೇರಿಸಿದರು. ಎಂಥಾ ಕ್ಯಾಚಿದು ಎಂದು ಮೂಕವಿಸ್ಮಿತರಾದರು. ತಮ್ಮ ಕಣ್ಣುಗಳನ್ನು ಅರಳಿಸಿ ಶ್ರೇಯಸ್ ಅಯ್ಯರ್ ಅವರನ್ನೇ ನೋಡಿದರು. ಅತ್ತ ಕ್ರೀಡಾಂಗಣದಲ್ಲೂ ಅಯ್ಯರ್ ಕ್ಯಾಚ್ ನೋಡಿ ಎಲ್ಲರು ಅಚ್ಚರಿ ವ್ಯಕ್ತಪಡಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗುತ್ತಿದ್ದು, ಅಯ್ಯರ್ ಕ್ಯಾಚ್ ನೋಡಿವರು ನಿಜಕ್ಕೂ ಇದು ಅದ್ಭುತ ಎಂದು ಕೊಂಡಾಡುತ್ತಿದ್ದಾರೆ.
ನಿನ್ನೆ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ಗೆ ರೋಹಿತ್ ಶರ್ಮ ಅವರ ಅನುಪಸ್ಥಿತಿ ಕಾಡಿತು. ಕ್ವಿಂಟನ್ ಡಿಕಾಕ್ (ಅಜೇಯ 59 ಎಸೆತ, 112 ರನ್) ಮತ್ತು ನಮನ್ ಧಿರ್ (31 ಎಸೆತ, 50 ರನ್) ಅವರ ಭರ್ಜರಿ ಇನ್ನಿಂಗ್ಸ್ ಬಿಟ್ಟರೆ ಇನ್ಯಾರಿಂದಲೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ಬರಲಿಲ್ಲ. 20 ಓವರ್ ಅಂತ್ಯಕ್ಕೆ ಎಂಐ 195 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ಶ್ರೇಯಸ್ ಪಡೆ 3 ವಿಕೆಟ್ ನಷ್ಟಕ್ಕೆ ಸುಲಭ ಗೆಲುವು ಸಾಧಿಸಿತು.
ಆರಂಭದಲ್ಲೇ ಸುಲಭ ಕ್ಯಾಚ್ ಬಿಟ್ಟ ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಬೌಲಿಂಗ್ ಈ ಎಡವಟ್ಟು ಮಾಡಿದರು. ಇದೇನಾದರೂ ಮಿಸ್ ಮಾಡದೆ ಹಿಡಿದಿದ್ದರೆ, ಖಂಡಿತವಾಗಿ ಮುಂಬೈಗೆ ಇಂತಹ ಸೋಲಾಗುತ್ತಿರಲಿಲ್ಲ. ಪಂಜಾಬ್ ಪರ ಪ್ರಭ್ಸಿಮ್ರನ್ ಸಿಂಗ್ (80 ರನ್, 39 ಎಸೆತ) ಮತ್ತು ಶ್ರೇಯಸ್ ಅಯ್ಯರ್ (66 ರನ್, 36 ಎಸೆತ) ಆಡಿದ ಅದ್ಭುತ ಇನ್ನಿಂಗ್ಸ್ ತಂಡದ ಗೆಲುವಿಗೆ ಪ್ರಮುಖ ಕಾರಣವಾಯಿತು, (ಏಜೆನ್ಸೀಸ್).