ಕೆ.ಎಲ್. ರಾಹುಲ್ ಮತ್ತು ಟೆಂಬಾ ಬವುಮಾ
- ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ನಾಳೆಯಿಂದ ಶುರು
- ಭಾನುವಾರ ನಡೆಯಲಿರುವ ಮೊದಲ ಪಂದ್ಯಕ್ಕಾಗಿ ಕಠಿಣ ಅಭ್ಯಾಸ ನಡೆಸುತ್ತಿದೆ ಭಾರತ ತಂಡ
- ರಾಂಚಿಯ ಜೆಎಸ್‌ಸಿಎ ಕ್ರೀಡಾಂಗಣದಲ್ಲಿ ಸತತ ಮೂರನೇ ದಿನ ಬೆವರು ಸುರಿಸಿದ ಭಾರತೀಯ ಆಟಗಾರರು
Temba Bavuma : ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಎದುರಿಸಿದ ಹೀನಾಯ ಸೋಲಿಗೆ ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗಿರುವ ಟೀಮ್ ಇಂಡಿಯಾ ನಾಳೆಯಿಂದ ಆರಂಭವಾಗುವ ಏಕದಿನ ಸರಣಿಯಲ್ಲಿ ತನ್ನ ಶಕ್ತಿ ಪ್ರದರ್ಶಿಸಲು ಸಕಲ ಸಿದ್ಧತೆ ನಡೆಸಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ನವೆಂಬರ್ 30ರಿಂದ ಆರಂಭವಾಗಲಿದ್ದು, ಭಾನುವಾರ ನಡೆಯಲಿರುವ ಮೊದಲ ಪಂದ್ಯಕ್ಕಾಗಿ ಭಾರತ ತಂಡ ಈಗಾಗಲೇ ಕಠಿಣ ಅಭ್ಯಾಸ ನಡೆಸುತ್ತಿದೆ.
ರಾಂಚಿಯ ಜೆಎಸ್‌ಸಿಎ ಕ್ರೀಡಾಂಗಣದಲ್ಲಿ ಸತತ ಮೂರನೇ ದಿನವೂ ಭಾರತೀಯ ಆಟಗಾರರು ಬೆವರು ಸುರಿಸುತ್ತಿದ್ದಾರೆ. ಆದಾಗ್ಯೂ, ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತದ ನಿಯಮಿತ ನಾಯಕ ಶುಭಮಾನ್ ಗಿಲ್ ಲಭ್ಯವಿರುವುದಿಲ್ಲ. ಏಕೆಂದರೆ, ಕೋಲ್ಕತದಲ್ಲಿ ನಡೆದ ಟೆಸ್ಟ್ ಪಂದ್ಯದ ಸಮಯದಲ್ಲಿ ಗಾಯಗೊಂಡ ಕಾರಣ ಗಿಲ್ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ, ಕೆಎಲ್ ರಾಹುಲ್ ಅವರು ಏಕದಿನ ಸರಣಿಯನ್ನು ಮುನ್ನಡೆಸಲಿದ್ದಾರೆ.
ಈ ಏಕದಿನ ಸರಣಿಗಾಗಿ ಹಿರಿಯ ಆಟಗಾರರಾದ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ರಾಂಚಿ ನೆಟ್‌ನಲ್ಲಿ ಮೂರು ದಿನಗಳಿಂದ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. ಈ ಇಬ್ಬರು ಅನುಭವಿ ಆಟಗಾರರ ಆಗಮನವು ತಂಡದಲ್ಲಿ ಹೊಸ ಉತ್ಸಾಹವನ್ನು ತುಂಬುತ್ತಿದೆ. ಗಿಲ್ ಮತ್ತು ಶ್ರೇಯಸ್ ಅಯ್ಯರ್ ಗಾಯಗಳಿಂದಾಗಿ ತಂಡದಿಂದ ದೂರವಿರುವುದರಿಂದ, ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಮೇಲಿನ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ. ಈ ಅನುಭವಿಗಳು ತಂಡದ ಬ್ಯಾಟಿಂಗ್ ಹೊರೆಯನ್ನು ಹೊರಬೇಕಾಗಿದೆ.
ಇನ್ನು ಈ ಏಕದಿನ ಸರಣಿಯಲ್ಲಿ ಯಶಸ್ವಿ ಜೈಸ್ವಾಲ್ ಜೊತೆಗೆ ರೋಹಿತ್ ಶರ್ಮ ಇನ್ನಿಂಗ್ಸ್ ಆರಂಭಿಸಬಹುದೆಂದು ನಿರೀಕ್ಷಿಸಲಾಗಿದೆ. ಆದಾಗ್ಯೂ, ಈ ಏಕದಿನ ಸರಣಿ ಪ್ರಾರಂಭವಾಗುವ ಕೆಲವು ದಿನಗಳ ಮೊದಲು, ರೋಹಿತ್ ಶರ್ಮ ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಮತ್ತೆ ನಂಬರ್ 1 ಸ್ಥಾನವನ್ನು ಪಡೆದಿರುವುದು ತಂಡಕ್ಕೆ ಪಾಸಿಟಿವ್ ಆಗಿದೆ. ಆದರೆ, ಈ ಏಕದಿನ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದು ಇದೀಗ ನಿರ್ಣಾಯಕವಾಗಿದೆ. ಏಕೆಂದರೆ, ಏಕದಿನ ವಿಶ್ವಕಪ್ ಆಡಲು ಉತ್ತಮ ಫಾರ್ಮ್ ಕಾಯ್ದುಕೊಳ್ಳುವುದು ತುಂಬಾನೇ ಮುಖ್ಯವಾಗಿದೆ.
ಇದರ ನಡುವೆ ದಕ್ಷಿಣ ಆಫ್ರಿಕಾದ ನಾಯಕ ಟೆಂಬಾ ಬವುಮಾ ರೋಹಿತ್ ಶರ್ಮ ಹಾಗೂ ವಿರಾಟ್ ಕೊಹ್ಲಿಯ ಬಗ್ಗೆ ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡಿದ್ದಾರೆ. ನಾಯಕ ಶುಭಮಾನ್ ಗಿಲ್, ಟೆಸ್ಟ್ ಪಂದ್ಯದ ಮಧ್ಯದಲ್ಲೇ ತಂಡದಿಂದ ಹೊರಗೆ ಉಳಿದಿದ್ದು ನಮಗೆ ಒಳ್ಳೆಯದೇ ಆಯಿತು. ಆದರೆ, ಏಕದಿನ ಸರಣಿಯಲ್ಲಿ ಗಿಲ್ ಅನುಪಸ್ಥಿತಿ ಭಿನ್ನವಾಗಿರಬಹುದು. ಏಕೆಂದರೆ, ನಾಯಕ ಕೆ.ಎಲ್. ರಾಹುಲ್ ಉತ್ತಮ ಕ್ರಿಕೆಟಿಗ. ಸದ್ಯ ಅವರು ಉತ್ತಮ ಸ್ಥಾನದಲ್ಲಿದ್ದಾರೆ. ಅಲ್ಲದೆ, ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ತಂಡಕ್ಕೆ ಮರಳಿದ್ದಾರೆ. ಅವರು ಸಾಮಾನ್ಯವಾಗಿ ಕೆಲವು ಜವಾಬ್ದಾರಿಗಳನ್ನು ತೆಗೆದುಕೊಳ್ಳುತ್ತಾರೆ. ಇದು ನಾಯಕನ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಹಾಗಾಗಿ, ಈ ಏಕದಿನ ಸರಣಿ ನಿಜವಾಗಿಯೂ ರೋಮಾಂಚಕಾರಿಯಾಗಿರುತ್ತದೆ. ಅಲ್ಲದೆ, ಇದು ಭಾರತೀಯ ಕ್ರೀಡಾ ಅಭಿಮಾನಿಗಳಿಗೆ ತುಂಬಾ ವಿಶೇಷವೂ ಆಗಿದೆ ಎಂದಿದ್ದಾರೆ.
ಇಬ್ಬರು ದಿಗ್ಗಜರಾದ ಕೊಹ್ಲಿ ಮತ್ತು ರೋಹಿತ್ ಬಹಳ ಸಮಯದ ನಂತರ ಮತ್ತೆ ಮೈದಾನಕ್ಕೆ ಕಾಲಿಡುವುದನ್ನು ನೋಡುವುದು ಒಂದು ಅದ್ಭುತ ಅನುಭವ ಎಂದು ಬವುಮಾ ಹೇಳಿದರು. ರೋ-ಕೊ ಜೋಡಿಯನ್ನು ಹೇಗೆ ತಡೆಯುತ್ತೀರಾ? ಎಂದು ಪ್ರಶ್ನೆ ಮಾಡಿದಾಗ, ಇತರ ಆಟಗಾರರಂತೆಯೇ ನಾವು ಅವರಿಬ್ಬರ ವಿರುದ್ಧ ನಮ್ಮದೇಯಾದ ತಂತ್ರವನ್ನು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಹೇಳಿದರು, (ಏಜೆನ್ಸೀಸ್).