CSKvsKKR 
ಕ್ರಿಕೆಟ್

ನೂರ್ ಅಹ್ಮದ್ ಸ್ಪಿನ್ ಜಾಲಕ್ಕೆ ನೈಟ್ ರೈಡರ್ಸ್ ಪಲ್ಟಿ!.. ಸಿಎಸ್​ಕೆ 32 ರನ್​ಗಳ ಭರ್ಜರಿ ಜಯ | CSKvsKKR

CSKvsKKR: ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಈ ಆವೃತಿಯ 22ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 32 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನೊಂದಿಗೆ ಸಿಎಸ್‌ಕೆ ಸತತ ಎರಡನೇ ಜಯದ ಸಂಭ್ರಮದಲ್ಲಿದ್ದರೆ, ಕೆಕೆಆರ್ ತಂಡ ಈ ಋತುವಿನಲ್ಲಿ ಇನ್ನೂ ಮೊದಲ ಗೆಲುವಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದೆ.
ಸಿಎಸ್​​ಕೆ ನೀಡಿದ್ದ 193 ರನ್​ಗಳ ಬೃಹತ್​ ಗುರಿ ಬೆನ್ನತ್ತಿದ ಕೆಕೆಆರ್​ಗೆ ಸುನಿಲ್ ನರೈನ್ ಮತ್ತು ಫಿನ್ ಅಲೆನ್ ಜೋಡಿ ಆಕ್ರಮಣಕಾರಿ ಆರಂಭ ನೀಡಲು ವಿಫಲವಾಯಿತು. ರಮಣದೀಪ್ ಸಿಂಗ್ (35) ಮತ್ತು ರೋವ್ಮನ್ ಪೊವೆಲ್ (31) ಕೊನೆಯಲ್ಲಿ ಹೋರಾಟ ನಡೆಸಿದರೂ ಅದು ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.
ಸಿಎಸ್‌ಕೆ ಪರ ನೂರ್ ಅಹ್ಮದ್ ಕೇವಲ 21 ರನ್ ನೀಡಿ 3 ಪ್ರಮುಖ ವಿಕೆಟ್ ಪಡೆಯುವ ಮೂಲಕ ಕೆಕೆಆರ್ ಮಧ್ಯಮ ಕ್ರಮಾಂಕವನ್ನು ಧೂಳೀಪಟ ಮಾಡಿದರು. ವೇಗಿ ಅನ್ಶುಲ್ ಕಾಂಬೋಜ್ ಕೂಡ ಎರಡು ವಿಕೆಟ್ ಪಡೆದು ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಅಂತಿಮವಾಗಿ ಕೆಕೆಆರ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಲಷ್ಟೇ ಶಕ್ತವಾಯಿತು.

ಸಂಜು ಸ್ಯಾಮ್ಸನ್ ಮತ್ತು ಬ್ರೆವಿಸ್ ಅಬ್ಬರ

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆರಂಭಿಕ ಆಘಾತ ಎದುರಾದರೂ, ಸಂಜು ಸ್ಯಾಮ್ಸನ್ ಮತ್ತು ಯುವ ಆಟಗಾರರ ಸಾಹಸದಿಂದ ಸವಾಲಿನ ಮೊತ್ತ ಪೇರಿಸಿತು. ನಾಯಕ ರುತುರಾಜ್ ಗಾಯಕ್ವಾಡ್ (7) ಬೇಗನೆ ನಿರ್ಗಮಿಸಿದರು. ಕಳೆದ ಪಂದ್ಯದ ಹೀರೋ ಸಂಜು ಸ್ಯಾಮ್ಸನ್ 48 ರನ್ (32 ಎಸೆತ) ಸಿಡಿಸಿ ಅಬ್ಬರಿಸಿದರು. ಅವರಿಗೆ ಸಾಥ್ ನೀಡಿದ ಡೆವಾಲ್ಡ್ ಬ್ರೆವಿಸ್ 41 ರನ್ ಮತ್ತು ಆಯುಷ್ ಮ್ಹಾತ್ರೆ ಸ್ಫೋಟಕ 38 ರನ್‌ಗಳ ನೆರವಿನಿಂದ ಸಿಎಸ್‌ಕೆ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 192 ರನ್ ಕಲೆಹಾಕಿತು.
ಒಂದು ಹಂತದಲ್ಲಿ ಸಿಎಸ್‌ಕೆ 200ರ ಗಡಿ ದಾಟುವ ಮುನ್ಸೂಚನೆ ನೀಡಿತ್ತು. ಆದರೆ ಕೆಕೆಆರ್ ಪರ ಕಾರ್ತಿಕ್ ತ್ಯಾಗಿ ಅದ್ಭುತ ಬೌಲಿಂಗ್ ಪ್ರದರ್ಶಿಸಿ ರನ್ ವೇಗಕ್ಕೆ ಕಡಿವಾಣ ಹಾಕಿದರು(ಏಜೆನ್ಸೀಸ್​).