ಸಂಜು ಸ್ಯಾಮ್ಸನ್ ಸೈಲೆಂಟ್ ಆಟ!... ಆಯುಷ್ ಮಾತ್ರೆ, ಬ್ರೆವಿಸ್​ ವಯಲೆನ್ಸ್! ಕೆಕೆಆರ್​ಗೆ 193 ರನ್ ಟಾರ್ಗೆಟ್ | KKRvCSK

KKRvCSK
KKRvCSK
Published on
KKRvCSK: ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಹಣಾಹಣಿಯಲ್ಲಿ ಸಂಜು ಸ್ಯಾಮ್ಸನ್ ಜವಾಬ್ದಾರಿಯುತ ಆಟ ಮತ್ತು ಯುವ ಆಟಗಾರರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಸಿಎಸ್‌ಕೆ ತಂಡವು ಕೆಕೆಆರ್‌ಗೆ 193 ರನ್‌ಗಳ ಸವಾಲಿನ ಗುರಿ ನೀಡಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಚೆನ್ನೈ ತಂಡಕ್ಕೆ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಭದ್ರ ಬುನಾದಿ ಹಾಕಿಕೊಟ್ಟರು. ಆರಂಭದಿಂದಲೇ ಕೆಕೆಆರ್ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಸಂಜು, ಕೇವಲ 32 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಅಮೋಘ ಸಿಕ್ಸರ್‌ಗಳ ನೆರವಿನಿಂದ 48 ರನ್ ಗಳಿಸಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಯುವ ಪ್ರತಿಭೆ ಆಯುಷ್ ಮಾತ್ರೆ ಕೇವಲ 17 ಎಸೆತಗಳಲ್ಲಿ 38 ರನ್ ಚಚ್ಚಿದರು.
ಪಂದ್ಯದ ಅಂತಿಮ ಹಂತದಲ್ಲಿ ಬೇಬಿ ಎಬಿ ಖ್ಯಾತಿಯ ಡೆವಾಲ್ಡ್ ಬ್ರೆವಿಸ್ ಅದ್ಭುತ ಪ್ರದರ್ಶನ ನೀಡಿದರು. 29 ಎಸೆತಗಳನ್ನು ಎದುರಿಸಿದ ಬ್ರೆವಿಸ್ 41 ರನ್ ಗಳಿಸಿ ತಂಡದ ಮೊತ್ತವನ್ನು 190ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಡೆತ್ ಓವರ್‌ಗಳಲ್ಲಿ ಕೆಕೆಆರ್ ಬೌಲರ್‌ಗಳು ರನ್ ವೇಗಕ್ಕೆ ಕಡಿವಾಣ ಹಾಕಿದರು. ಇನ್ನು ಕೋಲ್ಕತ್ತಾ ನೈಟ್ ರೈಡರ್ಸ್ ಬೌಲಿಂಗ್ ವಿಭಾಗದಲ್ಲಿ ಕಾರ್ತಿಕ್ ತ್ಯಾಗಿ ಅತ್ಯಂತ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದರು. ಶಿಸ್ತಿನ ದಾಳಿ ಸಂಘಟಿಸಿದ ತ್ಯಾಗಿ ಪ್ರಮುಖ 2 ವಿಕೆಟ್ ಪಡೆಯುವ ಮೂಲಕ ಸಿಎಸ್‌ಕೆ ರನ್ ವೇಗಕ್ಕೆ ಕಡಿವಾಣ ಹಾಕಲು ಪ್ರಯತ್ನಿಸಿದರು. ಇವರಿಗೆ ಸಾಥ್ ನೀಡಿದ ಅನುಭವಿ ಸ್ಪಿನ್ನರ್ ಸುನೀಲ್ ನರೈನ್, ವೇಗಿ ವೈಭವ್ ಅರೋರಾ ಮತ್ತು ಅನುಕುಲ್ ರಾಯ್ ತಲಾ ಒಂದು ವಿಕೆಟ್ ಪಡೆಯುವ ಮೂಲಕ ಚೆನ್ನೈ ಬ್ಯಾಟರ್‌ಗಳಿಗೆ ಸವಾಲಾದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net