ಭಾರತದ ಯುವ ಸ್ಫೋಟಕ ಬ್ಯಾಟರ್ ವೈಭವ್ ಸೂರ್ಯವಂಶಿ  
ಕ್ರಿಕೆಟ್

ವೈಭವ್ ಸೂರ್ಯವಂಶಿಯನ್ನು ಬೇಗ ಔಟ್ ಮಾಡ್ಬೇಕಾ? ಹಾಗಾದ್ರೆ ಈ ರಣತಂತ್ರ ಪ್ರಯೋಗಿಸಿ ಎಂದ ನ್ಯೂಜಿಲೆಂಡ್‌ ದಿಗ್ಗಜ! Vaibhav Sooryavanshi

ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್ ಮೈದಾನದ ಬಳಿ ಪಿಟಿಐ (PTI) ಸುದ್ದಿಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ 57 ವರ್ಷದ ಕ್ರಿಸ್ ಹ್ಯಾರಿಸ್, ಇಂದಿನ ಐಪಿಎಲ್ ಯುಗದಲ್ಲಿ ವೈಭವ್ ಸೂರ್ಯವಂಶಿಯಂತಹ ಆಕ್ರಮಣಕಾರಿ ಬ್ಯಾಟರ್‌ಗೆ ಬೌಲಿಂಗ್ ಮಾಡುವ ಸವಾಲಿನ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ನವದೆಹಲಿ: ತಮ್ಮ ನಿಧಾನಗತಿಯ ಹಾಗೂ ವಿಭಿನ್ನ ಶೈಲಿಯ ಬೌಲಿಂಗ್ ಮೂಲಕ ಘಟಾನುಘಟಿ ಬ್ಯಾಟರ್‌ಗಳನ್ನು ಕಟ್ಟಿಹಾಕುತ್ತಿದ್ದ ನ್ಯೂಜಿಲೆಂಡ್‌ನ ಮಾಜಿ ಆಲ್‌ರೌಂಡರ್ ಕ್ರಿಸ್ ಹ್ಯಾರಿಸ್, ಇದೀಗ ಭಾರತದ ಯುವ ಸ್ಫೋಟಕ ಬ್ಯಾಟರ್ ವೈಭವ್ ಸೂರ್ಯವಂಶಿ ( Vaibhav Sooryavanshi ) ಅವರನ್ನು ಕಟ್ಟಿಹಾಕುವ ರಣತಂತ್ರವನ್ನು ಬಿಚ್ಚಿಟ್ಟಿದ್ದಾರೆ.

ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್ ಮೈದಾನದ ಬಳಿ ಪಿಟಿಐ (PTI) ಸುದ್ದಿಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ 57 ವರ್ಷದ ಕ್ರಿಸ್ ಹ್ಯಾರಿಸ್, ಇಂದಿನ ಐಪಿಎಲ್ ಯುಗದಲ್ಲಿ ವೈಭವ್ ಸೂರ್ಯವಂಶಿಯಂತಹ ಆಕ್ರಮಣಕಾರಿ ಬ್ಯಾಟರ್‌ಗೆ ಬೌಲಿಂಗ್ ಮಾಡುವ ಸವಾಲಿನ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ನ್ಯೂಜಿಲೆಂಡ್‌ನ ಮಾಜಿ ಆಲ್‌ರೌಂಡರ್ ಕ್ರಿಸ್ ಹ್ಯಾರಿಸ್

ವೈಭವ್ ಎಡಗೈ ಬ್ಯಾಟರ್ ಆಗಿರುವುದರಿಂದ, ನಾನು ಅವರಿಗೆ ಸ್ವಲ್ಪ 'ಬ್ಯಾಕ್ ಆಫ್ ಎ ಲೆಂತ್' (Back of a length) ಎಸೆತಗಳನ್ನು ಹಾಕಿ ಚೆಂಡನ್ನು ಅವರಿಂದ ದೂರ ತೆಗೆದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದೆ. ಅವರು ನನ್ನ ಮೇಲೆ ದಾಳಿ ಮಾಡುತ್ತಾರೆ ಎಂದು ನನಗೆ ತಿಳಿದಿದೆ, ಆದರೆ ಚೆಂಡು ಸ್ವಲ್ಪ ನಿಂತು ಬರುವಂತಹ ಪಿಚ್‌ಗಳಲ್ಲಿ ಅವರು ಮಿಡ್-ವಿಕೆಟ್ ಮತ್ತು ಲೆಗ್ ಸೈಡ್ ಕಡೆಗೆ ದೊಡ್ಡ ಹೊಡೆತಗಳನ್ನು ಬಾರಿಸಲು ಹೋಗಿ ಅಪಾಯಕ್ಕೆ ಸಿಲುಕಬಹುದು ಎಂದು ಹ್ಯಾರಿಸ್ ವಿಶ್ಲೇಷಿಸಿದ್ದಾರೆ.

ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ಶಕ್ತಿಯನ್ನು ಕೊಂಡಾಡಿದ ಹ್ಯಾರಿಸ್, "ಅವರಲ್ಲಿ ಅದ್ಭುತವಾದ ಪವರ್ ಇದೆ ಮತ್ತು ಮೈದಾನದ ಎಲ್ಲಾ ಮೂಲೆಗಳಿಗೂ ಚೆಂಡನ್ನು ಬಾರಿಸುವ ಸಾಮರ್ಥ್ಯವಿದೆ. ಹೀಗಾಗಿ ಒಂದೇ ರೀತಿಯ ಬೌಲಿಂಗ್ ಮಾಡದೆ, ಚೆಂಡನ್ನು ಅವರ ದೇಹದಿಂದ ಅಡ್ಡಲಾಗಿ (Across) ಹೋಗುವಂತೆ ಎಸೆಯುತ್ತಾ, ವೇಗ ಮತ್ತು ಲೆಂತ್‌ನಲ್ಲಿ ನಿರಂತರವಾಗಿ ವೈವಿಧ್ಯತೆಯನ್ನು. ಆಗ ಅವರು ಹೊಡೆತ ತಪ್ಪಿಸಿಕೊಳ್ಳುವ ಅಥವಾ ಬ್ಯಾಟ್‌ನ ಅಂಚಿಗೆ ತಗುಲಿ ಔಟ್ ಆಗುವ ಸಾಧ್ಯತೆ ಇರುತ್ತದೆ. ಆದರೆ, ಇಂತಹ ಬ್ಯಾಟರ್‌ಗಳು ಒಮ್ಮೆ ಕ್ರೀಸ್‌ನಲ್ಲಿ ನೆಲೆಯೂರಿದರೆ ಅವರನ್ನು ತಡೆಯುವುದು ಅಸಾಧ್ಯ ಎಂದು ಹ್ಯಾರಿಸ್​ ಹೇಳಿದ್ದಾರೆ.

ಇಂದಿನ ಆಧುನಿಕ ಟಿ20 ಕ್ರಿಕೆಟ್‌ನಲ್ಲಿ ಬ್ಯಾಟರ್‌ಗಳಿಗೆ ಯಾವುದೇ ಭಯವಿಲ್ಲದಿರುವುದರಿಂದ ಬೌಲರ್‌ಗಳು ನಿರಂತರವಾಗಿ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇರಬೇಕು ಎಂದು ಇದೇ ಸಂದರ್ಭದಲ್ಲಿ ಹ್ಯಾರಿಸ್​ ಅವರು ಕಿವಿಮಾತು ಹೇಳಿದ್ದಾರೆ.

ನ್ಯೂಜಿಲೆಂಡ್ ಪರ 250 ಏಕದಿನ ಹಾಗೂ 23 ಟೆಸ್ಟ್ ಪಂದ್ಯಗಳನ್ನು ಆಡಿರುವ ಹ್ಯಾರಿಸ್, ಟಿ20 ಕ್ರಿಕೆಟ್ ತಮ್ಮ ವೃತ್ತಿಜೀವನದ ಕೊನೆಯ ಹಂತದಲ್ಲಿ ಬಂದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಟಿ20 ಮಾದರಿಯು ನನಗೆ ಸುಮಾರು 10 ವರ್ಷ ತಡವಾಗಿ ಬಂತು ಅನಿಸುತ್ತದೆ. ನಾನು ಫೀಲ್ಡಿಂಗ್, ಬೌಲಿಂಗ್ ಮತ್ತು ಬ್ಯಾಟಿಂಗ್ ಮೂರರಲ್ಲೂ ತೊಡಗಿಸಿಕೊಳ್ಳುವ ಆಟಗಾರನಾಗಿದ್ದರಿಂದ ಚುಟುಕು ಕ್ರಿಕೆಟ್ ನನ್ನ ಸ್ವಭಾವಕ್ಕೆ ತುಂಬಾ ಹೊಂದಿಕೆಯಾಗುತ್ತಿತ್ತು ಎಂದಿದ್ದಾರೆ. ಅಲ್ಲದೆ, ಭವಿಷ್ಯದಲ್ಲಿ ಐಪಿಎಲ್ ತಂಡವೊಂದಕ್ಕೆ 'ಫೀಲ್ಡಿಂಗ್ ಕೋಚ್' ಆಗಿ ಕೆಲಸ ಮಾಡುವ ಬಯಕೆಯನ್ನೂ ಅವರು ವ್ಯಕ್ತಪಡಿಸಿದ್ದು, ಯುವ ಆಟಗಾರರಿಗೆ ಫೀಲ್ಡಿಂಗ್ ಕೌಶಲ್ಯಗಳನ್ನು ಕಲಿಸಲು ತಾವು ಉತ್ಸುಕರಾಗಿರುವುದಾಗಿ ತಿಳಿಸಿದ್ದಾರೆ.

ಕ್ರಿಕೆಟ್ ಮೈದಾನದಿಂದ ನಿವೃತ್ತಿಯಾದ ಬಳಿಕ ಕ್ರಿಸ್ ಹ್ಯಾರಿಸ್ ಅವರ ವೃತ್ತಿಜೀವನ ಅತ್ಯಂತ ವಿಭಿನ್ನ ತಿರುವುಗಳನ್ನು ಪಡೆದುಕೊಂಡಿದೆ. ಈ ಹಿಂದೆ ಸುಮಾರು ನಾಲ್ಕು ವರ್ಷಗಳ ಕಾಲ ವೈದ್ಯಕೀಯ ಪ್ರತಿನಿಧಿಯಾಗಿ ಕೆಲಸ ಮಾಡಿದ್ದ ಅವರು, ಅಮೆರಿಕದಿಂದ ಶಸ್ತ್ರಚಿಕಿತ್ಸಾ ಉಪಕರಣಗಳನ್ನು ತರಿಸಿ ಆಪರೇಷನ್ ಥಿಯೇಟರ್‌ಗಳಲ್ಲಿ ವೈದ್ಯರಿಗೆ ನೆರವಾಗುತ್ತಿದ್ದರು. ಪ್ರಸ್ತುತ ಅವರು ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದ ಸೂಪರ್ ಮಾರ್ಕೆಟ್‌ಗಳಲ್ಲಿ ಗಿಫ್ಟ್ ಕಾರ್ಡ್ ಮತ್ತು ಪ್ರಿಪೇಯ್ಡ್ ಕಾರ್ಡ್‌ಗಳನ್ನು ಮಾರಾಟ ಮಾಡುವ 'ePay' ಕಂಪನಿಯಲ್ಲಿ ಪೂರ್ಣಾವಧಿ ಉದ್ಯೋಗಿಯಾಗಿದ್ದು, ಜೊತೆಗೆ ರೇಡಿಯೋ ಮತ್ತು ಟಿವಿ ವೀಕ್ಷಕ ವಿವರಣೆಗಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ, (ಏಜೆನ್ಸೀಸ್​).