ಅವರು ತಂಡದ ಆಯ್ಕೆಯಲ್ಲಿ... ಎಸ್​ಆರ್​ಎಚ್​ ಓನರ್​ ವಿರುದ್ಧ ಹೊಸ ಬಾಂಬ್​ ಸಿಡಿಸಿದ ಲಿಯಾಮ್​ ಲಿವಿಂಗ್​​ಸ್ಟೋನ್! Kaviya Maran ​ 
ಕ್ರಿಕೆಟ್

ಅವರು ತಂಡದ ಆಯ್ಕೆಯಲ್ಲಿ... ಎಸ್​ಆರ್​ಎಚ್​ ಓನರ್​ ವಿರುದ್ಧ ಹೊಸ ಬಾಂಬ್​ ಸಿಡಿಸಿದ ಲಿಯಾಮ್​ ಲಿವಿಂಗ್​​ಸ್ಟೋನ್! Kaviya Maran ​

ಪ್ರಮುಖ ಮುಖ್ಯಾಂಶಗಳು

  • ಇತ್ತೀಚಿನ ಐಪಿಎಲ್ 2026ರ ಸೀಸನ್‌ನಲ್ಲಿ ತಮಗೆ ನಡೆದ ಅನುಭವ ಬಿಚ್ಚಿಟ್ಟ ಲಿಯಾಮ್​ ಲಿವಿಂಗ್​ಸ್ಟೋನ್​
  • ನನಗೆ ಸತತವಾಗಿ ಅವಕಾಶಗಳನ್ನು ನೀಡಿ ಪರೀಕ್ಷಿಸುವ ಪ್ರಯತ್ನವನ್ನು ಮಾಡಲೇ ಇಲ್ಲ ಎಂದ ಆಲ್​ರೌಂಡರ್​
  • ಯಾರಾದರೂ ಗಾಯಗೊಂಡರೆ ಮಾತ್ರ ನನಗೆ ಅವಕಾಶ ಸಿಗುತ್ತದೆ ಎಂಬುದು ನನಗೆ ಸ್ಪಷ್ಟವಾಗಿತ್ತು ಎಂದ ಲಿಯಾಮ್
Kaviya Maran : ಐಪಿಎಲ್​ ತಂಡಗಳ ಮಾಲೀಕರು ನೂರಾರು ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುವುದರಿಂದ ಹಿಡಿದು ಮೈದಾನದಲ್ಲಿ ತಮ್ಮ ತಂಡವನ್ನು ಸದಾ ಬೆಂಬಲಿಸುವವರೆಗೆ ಕ್ರಿಕೆಟ್‌ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುತ್ತಾರೆ. ಆದರೆ, ಅದೇ ಮಾಲೀಕರು ತಂಡದ ಆಟಗಾರರ ಆಯ್ಕೆಯಲ್ಲೂ ಹಸ್ತಕ್ಷೇಪ ಮಾಡುತ್ತಾರೆಯೇ ಎಂಬ ಚರ್ಚೆಗೆ ಯಾವುದೇ ಖಚಿತ ಪುರಾವೆಗಳಿಲ್ಲ. ಆದರೆ, ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಇತ್ತೀಚಿನ ಐಪಿಎಲ್ 2026ರ ಸೀಸನ್‌ನಲ್ಲಿ ತಮಗೆ ನಡೆದ ಅನುಭವವನ್ನೇ ಉದಾಹರಣೆಯಾಗಿ ನೀಡಿರುವುದು ಈ ಮಾತು ನಿಜವಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ಇತ್ತೀಚೆಗೆ ಮುಗಿದ 19ನೇ ಐಪಿಎಲ್​ ಆವೃತ್ತಿಯಲ್ಲಿ ಕೇವಲ ಎರಡು ಪಂದ್ಯಗಳನ್ನು ಆಡಿ 1 ಮತ್ತು 14 ರನ್ ಗಳಿಸಿದ ಲಿವಿಂಗ್‌ಸ್ಟೋನ್, ತಂಡದ ಮಾಲೀಕರಿಗೆ ಒಬ್ಬ ನಿರ್ದಿಷ್ಟ ಆಟಗಾರನೆಂದರೆ ತುಂಬಾ ಇಷ್ಟ ಎಂಬ ಒಂದೇ ಕಾರಣಕ್ಕೆ ತಮಗಿಂತ ಆ ಆಟಗಾರನಿಗೆ ಹೆಚ್ಚು ಆದ್ಯತೆ ನೀಡಲಾಯಿತು ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ಎಸ್‌ಆರ್‌ಎಚ್ ತಂಡವು ತನ್ನ ಪ್ಲೇಯಿಂಗ್ ಇಲೆವೆನ್‌ನಲ್ಲಿ ಕೇವಲ ಮೂವರು ವಿದೇಶಿ ಆಟಗಾರರನ್ನು ಮಾತ್ರ ಕಣಕ್ಕಿಳಿಸುತ್ತಿದ್ದರೂ, ತಮಗೆ ಸತತವಾಗಿ ಅವಕಾಶಗಳನ್ನು ನೀಡಿ ಪರೀಕ್ಷಿಸುವ ಪ್ರಯತ್ನವನ್ನು ಮಾಡಲೇ ಇಲ್ಲ ಎಂದು ಲಿವಿಂಗ್​ ಸ್ಟೋನ್​ ಬೇಸರ ಹೊರಹಾಕಿದ್ದಾರೆ.
ಐಪಿಎಲ್‌ನಲ್ಲಿ ಮೂರು ವಿಭಿನ್ನ ಪರಿಸ್ಥಿತಿಗಳಿರುತ್ತವೆ, ಒಂದೋ ನೀವು ಪ್ಲೇಯಿಂಗ್ ಇಲೆವೆನ್‌ನಲ್ಲಿ ಮೊದಲೇ ಫಿಕ್ಸ್ ಆಗಿರುತ್ತೀರಿ, ಇಲ್ಲವೇ ಆಡುವ ಅವಕಾಶ ಸಿಗಬಹುದು ಅಥವಾ ಸಿಗದೇ ಇರಬಹುದು ಎಂಬ ಅನಿಶ್ಚಿತತೆಯಲ್ಲಿರುತ್ತೀರಿ ಎಂದು ಲಿಯಾಮ್ ಲಿವಿಂಗ್‌ಸ್ಟೋನ್ ಪಾಡ್‌ಕಾಸ್ಟ್‌ ಒಂದರಲ್ಲಿ ವಿವರಿಸಿದ್ದಾರೆ. ಈ ಬಾರಿ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದಲ್ಲಿದ್ದ ತಮ್ಮ ಅನುಭವವನ್ನು ಹಂಚಿಕೊಂಡ ಅವರು, ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡ ಖರೀದಿಸಲು ಬಯಸಿದ್ದ ಸಲೀಲ್ ಅರೋರಾ ಎಂಬ ಯುವ ಆಟಗಾರನನ್ನು ನಮ್ಮ ತಂಡ ಹೆಚ್ಚು ಹಣ ನೀಡಿ ಖರೀದಿಸಿತು. ತಂಡದ ಮಾಲೀಕರಿಗೆ ಆ ಆಟಗಾರನೆಂದರೆ ಅಪಾರ ಪ್ರೀತಿ ಇದ್ದಿದ್ದರಿಂದ, ಆತನನ್ನು ಪ್ಲೇಯಿಂಗ್ ಇಲೆವೆನ್‌ನಲ್ಲಿ ಆಡಿಸುವುದು ಮೊದಲೇ ನಿರ್ಧಾರವಾಗಿತ್ತು. ನಾಯಕ ಪ್ಯಾಟ್ ಕಮಿನ್ಸ್ ಅನುಪಸ್ಥಿತಿಯಲ್ಲೂ ತಂಡ ಕೇವಲ ಮೂವರು ವಿದೇಶಿ ಆಟಗಾರರನ್ನು ಮಾತ್ರ ಕಣಕ್ಕಿಳಿಸುತ್ತಿದ್ದಾಗ, ನಾನು ಕೋಚ್ ಡೇನಿಯಲ್ ವೆಟ್ಟೋರಿಯವರನ್ನು ಇದರ ಹಿಂದಿನ ಕಾರಣ ಕೇಳಿದ್ದೆ ಎಂದು ಲಿವಿಂಗ್​ಸ್ಟೋನ್​ ಹೇಳಿದ್ದಾರೆ.
ಇದಕ್ಕೆ ಉತ್ತರಿಸಿದ್ದ ಕೋಚ್ ವೆಟ್ಟೋರಿ, ಮಾಲೀಕರಿಗೆ ಈ ಯುವ ಆಟಗಾರನೆಂದರೆ ತುಂಬಾ ಇಷ್ಟ, ಹೀಗಾಗಿ ಕಮಿನ್ಸ್ ವಾಪಸ್ ಬಂದ ಮೇಲೂ ನಾವು ನಮ್ಮ ಕಾಂಬಿನೇಷನ್ ಬದಲಾಯಿಸುವುದಿಲ್ಲ ಎಂದು ನೇರವಾಗಿ ಲಿವಿಂಗ್‌ಸ್ಟೋನ್‌ಗೆ ತಿಳಿಸಿದ್ದರು. ಯಾರಾದರೂ ಗಾಯಗೊಂಡರೆ ಮಾತ್ರ ನನಗೆ ಅವಕಾಶ ಸಿಗುತ್ತದೆ ಎಂಬುದು ಇದರಿಂದ ಸ್ಪಷ್ಟವಾಗಿತ್ತು. ಇದೇ ಸಂದರ್ಭದಲ್ಲಿ ಪಾಡ್‌ಕಾಸ್ಟ್‌ನಲ್ಲಿದ್ದ ಕ್ರಿಕೆಟ್ ತಜ್ಞ ಡೇವಿಡ್ ಲಾಯ್ಡ್, ಈ ಮಾಲೀಕರಿಗೆ ಕ್ರಿಕೆಟ್‌ನ ಯಾವ ಪರಿಣತಿ ಇರುತ್ತದೆ? ಎಂದು ಪ್ರಶ್ನಿಸಿದಾಗ, ಮತ್ತೊಬ್ಬ ಮಾಜಿ ನಾಯಕ ಅಲಸ್ಟೇರ್ ಕುಕ್, ಅವರ ಬಳಿ ಭಾರಿ ಪ್ರಮಾಣದ ಹಣವಿರುತ್ತದೆ ಎಂದು ಲೇವಡಿ ಮಾಡಿದ್ದಾರೆ. ಮಾಲೀಕರು ಸಂಪೂರ್ಣ ನಿರ್ಧಾರಗಳನ್ನು ತೆಗೆದುಕೊಳ್ಳದಿದ್ದರೂ, ಆಟಗಾರರ ಆಯ್ಕೆಯಲ್ಲಿ ಖಂಡಿತವಾಗಿಯೂ ತಮ್ಮ ಪ್ರಭಾವ ಬೀರುತ್ತಾರೆ ಎಂಬುದು ಲಿವಿಂಗ್‌ಸ್ಟೋನ್ ಅವರ ಅಭಿಪ್ರಾಯವಾಗಿದೆ.
ಆದಾಗ್ಯೂ, ಕೋಚ್ ಡೇನಿಯಲ್ ವೆಟ್ಟೋರಿ ಅವರು ತಂಡದಲ್ಲಿ ಏನಾಗುತ್ತಿದೆ ಎಂಬ ಅಸಲಿ ವಿಷಯವನ್ನು ಮೊದಲೇ ತಮಗೆ ಸ್ಪಷ್ಟಪಡಿಸಿದ್ದಕ್ಕೆ ಲಿವಿಂಗ್‌ಸ್ಟೋನ್ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಕಾವ್ಯಾ ಮಾರನ್ ಅವರ ಸಹ-ಮಾಲೀಕತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡವು 2026ರ ಐಪಿಎಲ್ ಟೂರ್ನಿಯಲ್ಲಿ ಪ್ಲೇ-ಆಫ್ ಹಂತವನ್ನು ತಲುಪಿತ್ತಾದರೂ, ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿತು, (ಏಜೆನ್ಸೀಸ್​).