ಟೀಮ್​ ಇಂಡಿಯಾ ವಿರುದ್ಧ ಪಾಕಿಸ್ತಾನ ಗಂಭೀರ ಆರೋಪ 
ಕ್ರಿಕೆಟ್

ಸೋಲಿನ ದವಡೆಯಿಂದ ಪಾರಾಗಲು ಅಮೆರಿಕಕ್ಕೆ ಹಣ ನೀಡಿತೇ ಭಾರತ? ಕೇಳಿಬಂತು ಗಂಭೀರ ಆರೋಪ! Team India

ಪ್ರಮುಖ ಮುಖ್ಯಾಂಶಗಳು

  • ಟೀಮ್​ ಇಂಡಿಯಾ ವಿರುದ್ಧ ವಿಷಕಾರುವುದನ್ನು ಮಾತ್ರ ಪಾಕಿಸ್ತಾನ ನಿಲ್ಲಿಸುತ್ತಿಲ್ಲ
  • ಭಾರತದ ವಿರುದ್ಧ ತನ್ನ ಕೆಂಗಣ್ಣು ಬೀರಿದರೆ ಮಾತ್ರ ಪಾಕಿಸ್ತಾನಕ್ಕೆ ತಿಂದ ಅನ್ನ ಜೀರ್ಣವಾಗುತ್ತದೆ
  • ವಿಶ್ವಕಪ್ ಟೂರ್ನಮೆಂಟ್ ಮುಂದಿಟ್ಟುಕೊಂಡು ಭಾರತದ ವಿರುದ್ಧ ಪಾಕಿಸ್ತಾನದಿಂದ ಸಾಲು ಸಾಲು ಆರೋಪ
Team India : ಜಾಗತಿಕವಾಗಿ ಎಷ್ಟೇ ಮುಖಭಂಗ ಅನುಭವಿಸಿದರೂ ಟೀಮ್​ ಇಂಡಿಯಾ ವಿರುದ್ಧ ವಿಷಕಾರುವುದನ್ನು ಮಾತ್ರ ಪಾಕಿಸ್ತಾನ ನಿಲ್ಲಿಸುತ್ತಿಲ್ಲ. ಭಾರತದ ವಿರುದ್ಧ ತನ್ನ ಕೆಂಗಣ್ಣು ಬೀರಿದರೆ ಮಾತ್ರ ಪಾಕಿಸ್ತಾನಕ್ಕೆ ತಿಂದ ಅನ್ನ ಜೀರ್ಣವಾಗುತ್ತದೆ. ಹೀಗಾಗಿ, ಭಾರತದ ವಿರುದ್ಧ ಒಂದಲ್ಲ ಒಂದು ಅಪಪ್ರಚಾರದಲ್ಲಿ ತೊಡಗಿದೆ. ಪ್ರಸ್ತುತ ನಡೆಯುತ್ತಿರುವ ಪುರುಷರ ಐಸಿಸಿ ಟಿ20 ವಿಶ್ವಕಪ್ ಟೂರ್ನಮೆಂಟ್ ಮುಂದಿಟ್ಟುಕೊಂಡು ಭಾರತದ ವಿರುದ್ಧ ಪಾಕಿಸ್ತಾನ ಸಾಲು ಸಾಲು ಆರೋಪಗಳನ್ನು ಮಾಡುತ್ತಿದೆ.
ಆರಂಭದಿಂದಲೂ ಈ ಟೂರ್ನಮೆಂಟ್ ಅನ್ನು ಟೀಕಿಸುತ್ತಿರುವ ಪಾಕ್​, ಭಾರತದೊಂದಿಗಿನ ಪಂದ್ಯವನ್ನು ಸಹ ಬಹಿಷ್ಕರಿಸಿದೆ. ಈ ವಿಶ್ವಕಪ್​ ಭಾರತದಲ್ಲೇ ನಡೆಯುತ್ತಿರುವುದರಿಂದ ಭಾರತಕ್ಕೆ ಮಸಿ ಬಳಿಯಲು ಎಲ್ಲಾ ರೀತಿಯ ಪಿತೂರಿಗಳನ್ನು ಪಾಕ್​ ಮಾಡುತ್ತಿದೆ. ನಿನ್ನೆ ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ನಡುವೆ ಉಭಯ ತಂಡಗಳ ಮೊದಲ ಲೀಗ್​ ಪಂದ್ಯ ನಡೆದಿದ್ದು ಗೊತ್ತೇ ಇದೆ. ಈ ಪಂದ್ಯದಲ್ಲಿ ಭಾರತದ ಗೆಲವು ಅಷ್ಟೊಂದು ಸುಲಭವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮಾಜಿ ಆಟಗಾರ ತನ್ವೀರ್​ ಅಹ್ಮದ್​ ಅವರು ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಅಷ್ಟಕ್ಕೂ ಆ ಆರೋಪ ಏನು ಅನ್ನೋದನ್ನು ನಾವೀಗ ತಿಳಿದುಕೊಳ್ಳೋಣ.
ನಿನ್ನೆಯ ಪಂದ್ಯದಲ್ಲಿ ಟೀಮ್ ಇಂಡಿಯಾ, ಅಮೆರಿಕ ವಿರುದ್ಧ ಸೋಲುತ್ತಿತ್ತು. ಆದರೆ, ಹಾಲಿ ಐಸಿಸಿ ಚೇರ್ಮನ್​ ಹಾಗೂ ಮಾಜಿ ಬಿಸಿಸಿಐ ಅಧ್ಯಕ್ಷರಾದ ಜಯ್ ಷಾ ನೀಡಿದ ಹಣದಿಂದಾಗಿ ಸೂರ್ಯಕುಮಾರ್​ ನೇತೃತ್ವದ ಪಡೆ ಕೊನೆಯ ಕ್ಷಣದಲ್ಲಿ ಗೆಲುವು ಸಾಧಿಸಿತು ಎಂಬ ಸಂಚಲನಾತ್ಮಕ ಆರೋಪಗಳನ್ನು ಪಾಕ್​ ಮಾಜಿ ಆಟಗಾರ ಮಾಡಿದ್ದಾರೆ.
ನಿನ್ನೆಯ ಪಂದ್ಯದಲ್ಲಿ ಟೀಮ್ ಇಂಡಿಯಾ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ವಿರುದ್ಧ ಕೇವಲ 29 ರನ್​ಗಳ ಅಂತರದಿಂದ ಗೆಲುವು ಕಂಡಿತು. ಸಾಕಷ್ಟು ಶ್ರಮವಹಿಸಿದ ಟೀಮ್ ಇಂಡಿಯಾ, ಅಂತಿಮ ಹಂತದಲ್ಲಿ ಜಯ ಸಾಧಿಸಿತು. ಅಮೆರಿಕ ಕ್ರಿಕೆಟ್​ ಶಿಶುವಾದರು ಕೂಡ ಭಾರತದ ಗೆಲುವು ಅಷ್ಟೊಂದು ಸುಲಭವಾಗಿರಲಿಲ್ಲ. ತುಂಬಾ ತಿಣುಕಾಡಿ ಈ ಪಂದ್ಯವನ್ನು ಟೀಮ್​ ಇಂಡಿಯಾ ಗೆದ್ದುಕೊಂಡಿತು.
ಸೂರ್ಯ ಕುಮಾರ್ ಯಾದವ್, ಅಕ್ಷರ್ ಪಟೇಲ್ ಮತ್ತು ಮೊಹಮ್ಮದ್ ಸಿರಾಜ್ ಅವರ ಕಠಿಣ ಪರಿಶ್ರಮದ ಆಧಾರದ ಮೇಲೆ ಟೀಮ್ ಇಂಡಿಯಾ ಗೆಲುವು ಸಾಧಿಸಿತು. ಟೀಮ್​ ಇಂಡಿಯಾದ ಅಗ್ರಗಣ್ಯ ಆಟಗಾರರಾದ ಅಭಿಶೇಕ್​ ಶರ್ಮಾ, ಇಶಾನ್​ ಕಿಶಾನ್​, ತಿಲಕ್​ ವರ್ಮಾ, ಶಿವಂ ದುಬೆ, ರಿಂಕು ಸಿಂಗ್​ ಮತ್ತು ಹಾರ್ದಿಕ್​ ಪಾಂಡ್ಯರಂತಹ ಆಟಗಾರರೇ ಪ್ರಮುಖ ಪಂದ್ಯದಲ್ಲಿ ವಿಫಲರಾದರು. ನಾಯಕ ಸೂರ್ಯಕುಮಾರ್​ ಅವರು ನಾಯಕತ್ವದ ಜವಬ್ದಾರಿಯುತ ಆಟವಾಡಿದ್ದರಿಂದ ಟೀಮ್​ ಇಂಡಿಯಾ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಬಳಿಕ ಬೌಲರ್​ಗಳ ನಿಖರ ದಾಳಿಯ ನೆರವಿನಿಂದಾಗಿ ಅಂತಿಮವಾಗಿ ಟೀಮ್​ ಇಂಡಿಯಾ ಗೆಲುವಿನ ನಗೆ ಬೀರಿತು.
ಟೀಮ್​ ಇಂಡಿಯಾದ ಗೆಲುವಿನ ಬೆನ್ನಲ್ಲೇ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ತನ್ವೀರ್ ಅಹ್ಮದ್, ಟೀಮ್ ಇಂಡಿಯಾ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಐಸಿಸಿ ಬಾಸ್ ಜಯ್ ಷಾ ಅವರ ಟೀಮ್ ಇಂಡಿಯಾ ಗೆದ್ದಿದೆ ಎಂದು ಆರೋಪ ಮಾಡಿದ್ದಾರೆ. ಜಯ್ ಷಾ ಅವರು ಯುಎಸ್ಎ ತಂಡಕ್ಕೆ ಹಣ ನೀಡಿದರು, ಅದಕ್ಕಾಗಿಯೇ ಅವರು ಸೋತರು ಎಂದು ಆರೋಪಿಸಿದ್ದಾರೆ.
ಸೌರಭ್ ನೇತ್ರವಾಲ್ಕರ್ ಅವರು ಭಾರತದ ಆಟಗಾರ. ಅವರಿಗೆ ಜಯ್​ ಷಾ ಅವರು ಹಣ ನೀಡಿದ್ದರಿಂದ 4 ಓವರ್‌ಗಳಲ್ಲಿ 65 ರನ್‌ಗಳನ್ನು ದೇಣಿಗೆ ನೀಡಿದರು. ಯುಎಸ್ಎ ತಂಡಕ್ಕೆ ಹಣದ ಕಂತೆಯನ್ನು ನೀಡಿದ್ದರಿಂದ ಟೀಮ್ ಇಂಡಿಯಾ ಮುಂದೆ ಅಮೆರಿಕ ಸೋಲುಂಡಿತು. ಎಲ್ಲ ಪಂದ್ಯಗಳನ್ನು ಜಯ್ ಷಾ ಅವರ ಕಣ್ಗಾವಲಿನಲ್ಲಿ ಆಡಲಾಗುತ್ತಿದೆ ಎಂಬ ಗಂಭೀರ ಹೇಳಿಕೆಯನ್ನು ತನ್ವೀರ್​ ನೀಡಿದ್ದಾರೆ.
ಅಂದಹಾಗೆ, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ತನ್ವೀರ್ ಅಹ್ಮದ್ ಮಾಡಿದ ಕಾಮೆಂಟ್‌ಗಳಿಗೆ ಭಾರತೀಯ ಅಭಿಮಾನಿಗಳು ತಿರುಗೇಟು ನೀಡುತ್ತಿದ್ದಾರೆ. ಭಾರತ ಕಠಿಣ ಪರಿಶ್ರಮದಿಂದ ಗೆದ್ದಿದ್ದಾರೆ ಹೊರತು ನಿಮ್ಮ ರೀತಿ ಮೋಸ ಮಾಡಲ್ಲ. ಇಂತಹ ಸುಳ್ಳು ಪ್ರಚಾರಗಳು ನಿಜಕ್ಕೂ ಕ್ರೂರವಾಗಿವೆ ಎಂದು ಭಾರತ ನೆಟ್ಟಿಗರು ತನ್ವೀರ್​ಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ, (ಏಜೆನ್ಸೀಸ್​).