ಇಶಾನ್ ಕಿಶನ್ ಆಟದ ಬಗ್ಗೆ ಗಂಭೀರ ಆರೋಪ ಮಾಡಿದ ಪಾಕಿಸ್ತಾನ ತನ್ವೀ ಅಹ್ಮದ್
- ಟೀಮ್ ಇಂಡಿಯಾದ ಯುವ ಆಟಗಾರ ಇಶಾನ್ ಕಿಶನ್ರಿಂದ ಅಬ್ಬರದ ಬ್ಯಾಟಿಂಗ್
- ನ್ಯೂಜಿಲೆಂಡ್ ವಿರುದ್ಧದ ಐದನೇ ಟಿ20 ಪಂದ್ಯದಲ್ಲಿ 42 ಎಸೆತಗಳಲ್ಲಿ ಶತಕ
- ಇಶಾನ್ ಕಿಶನ್ ಅರ್ಭಟ ಕಂಡು ಗಂಭೀರ ಆರೋಪ ಮಾಡಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ
ನವದೆಹಲಿ: ಟಿ20 ವಿಶ್ವಕಪ್-2026 ಟೂರ್ನಮೆಂಟ್‌ಗೂ ಮುನ್ನವೇ ಟೀಮ್ ಇಂಡಿಯಾದ ಯುವ ಆಟಗಾರ ಇಶಾನ್ ಕಿಶನ್ ( Ishan Kishan ) ತಮ್ಮ ಅಬ್ಬರದ ಬ್ಯಾಟಿಂಗ್ ಮೂಲಕ ಎದುರಾಳಿ ತಂಡಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ನಿನ್ನೆ (ಜ.31) ಕೇರಳದ ತಿರುವನಂತಪುರದ ಗ್ರೀನ್‌ಫೀಲ್ಡ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಐದನೇ ಹಾಗೂ ಕೊನೆಯ ಟಿ20 ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಇಶಾನ್ ಕಿಶನ್ ಕೇವಲ 42 ಎಸೆತಗಳಲ್ಲಿ ಶತಕ ಗಳಿಸಿದರು. ಇದರಿಂದ ಟೀಮ್ ಇಂಡಿಯಾ ದಾಖಲೆಯ ಮೊತ್ತ ಕಲೆಹಾಕಿ, ಭರ್ಜರಿ ಜಯ ದಾಖಲಿಸಿತು. ಈ ಹಿಂದಿನ ಪಂದ್ಯಗಳಲ್ಲಿ ಅಭಿಷೇಕ್ ಶರ್ಮ ಅಬ್ಬರಿಸಿ ಬೊಬ್ಬಿರಿದಿದ್ದರು. ಇದೀಗ ಇಶಾನ್ ಕಿಶನ್ ಧೂಳಿಪಟ ಮಾಡಿದ್ದಾರೆ.
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 5 ಪಂದ್ಯಗಳ ಟಿ20 ಸರಣಿ ನಿನ್ನೆ ಮುಕ್ತಾಯವಾಗಿದೆ. ಎಲ್ಲಾ ಭಾರತೀಯ ಆಟಗಾರರು ಈ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಫಾರ್ಮ್‌ನಲ್ಲಿಲ್ಲದ ಸೂರ್ಯ ಕುಮಾರ್ ಯಾದವ್ ಕೂಡ ಮರಳಿ ಫಾರ್ಮ್ಗೆ ಬಂದಿದ್ದಾರೆ. ಎದುರಾಳಿ ಬೌಲರ್‌ಗಳಿಗೆ ನಡುಕ ಹುಟ್ಟಿಸುತ್ತಿದ್ದಾರೆ. ನಿನ್ನೆ ಇಶಾನ್ ಕಿಶನ್ ಅದ್ಭುತ ಶತಕ ದಾಖಲಿಸಿದರು. ಕೇವಲ 42 ಎಸೆತಗಳಲ್ಲಿ ಶತಕ ಗಳಿಸಿದ ಇಶಾನ್ ಅವರನ್ನು ಎಲ್ಲರೂ ಹೊಗಳುತ್ತಿದ್ದರೆ, ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಮಾತ್ರ ವಿಷ ಉಗುಳುತ್ತಿದ್ದಾರೆ.
ಪಾಕ್ನ ಮಾಜಿ ನಾಯಕ ತನ್ವೀರ್ ಅಹ್ಮದ್, ಈ ಕುರಿತು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಅಭಿಷೇಕ್ ಶರ್ಮ ಅವರಂತೆಯೇ, ಇಶಾನ್ ಅವರ ಬ್ಯಾಟ್‌ನಲ್ಲೂ ಸ್ಪ್ರಿಂಗ್‌ಗಳಿವೆ ಮತ್ತು ಐಸಿಸಿ ಅಧ್ಯಕ್ಷ ಜಯ್ ಷಾ ಅವರಿಗೆ ಇದೆಲ್ಲ ಗೊತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.
ನಿನ್ನೆಯ ಪಂದ್ಯದ ಬಗ್ಗೆ ಹಲವು ಅನುಮಾನಗಳಿವೆ. ಇಶಾನ್ ಅವರ ಬ್ಯಾಟ್‌ನಲ್ಲಿ ಖಂಡಿತವಾಗಿಯೂ ಸ್ಪ್ರಿಂಗ್‌ಗಳಿವೆ. ಅದಕ್ಕಾಗಿಯೇ ಅವರು ಭಯಾನಕವಾಗಿ ಬ್ಯಾಟಿಂಗ್ ಮಾಡಿದ್ದಾರೆ. ತಿರುವನಂತಪುರಂ ಕ್ರೀಡಾಂಗಣವು ತುಂಬಾ ಚಿಕ್ಕದಾಗಿದೆ ಮತ್ತು ಬೌಂಡರಿ ಗಾತ್ರ ಕೇವಲ 35 ಮೀಟರ್. ಅದಕ್ಕಾಗಿಯೇ ಇಶಾನ್ 42 ಎಸೆತಗಳಲ್ಲಿ ಶತಕ ಗಳಿಸಿದರು. ಆಡುವ ಪ್ರತಿ ಪಂದ್ಯದಲ್ಲೂ ಭಾರತ ಮೋಸ ಮಾಡುತ್ತದೆ. ಜಯ್ ಷಾಗೂ ಇದೆಲ್ಲವೂ ತಿಳಿದಿದೆ ಎಂದು ತನ್ವೀರ್ ಅಹ್ಮದ್ ಆಕ್ರೋಶ ಹೊರಹಾಕಿದರು, (ಏಜೆನ್ಸೀಸ್).