ಐಪಿಎಲ್ ಹುಟ್ಟಿಕೊಂಡಿದ್ದು ಹೇಗೆ? ವಿಶ್ವ ಕ್ರಿಕೆಟ್ ಅನ್ನೇ ಬದಲಿಸಿತು ಈ ಒಂದು ಸೇಡಿನ ಕತೆ! IPL History
- ವಿಶ್ವ ವಿಖ್ಯಾತಿ ಪಡೆದಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಹಿಂದೆ ಒಂದು ಸೇಡಿನ ಕತೆ ಇದೆ
- ತಮ್ಮ ಏಕಸ್ವಾಮ್ಯಕ್ಕೆ ಬೆದರಿಕೆ ಇದೆ ಎಂದು ಹೆದರಿದ ಬಿಸಿಸಿಐ 2008ರಲ್ಲಿ ಐಪಿಎಲ್ ಆರಂಭಿತು
- ಲಲಿತ್ ಮೋದಿ ಎಂಬ ಚಾಣಾಕ್ಷ ಮುಂದಿಟ್ಟ ಕಲ್ಪನೆಯೇ ಈ ಐಪಿಎಲ್
IPL History : ಇಂದು ವಿಶ್ವ ವಿಖ್ಯಾತಿ ಪಡೆದಿರುವ ಇಂಡಿಯನ್ ಪ್ರೀಮಿಯರ್ ಲೀಗ್ ( IPL ) ಹಿಂದೆ ಒಂದು ಸೇಡಿನ ಕತೆ ಇದೆ ಎಂದರೆ ನೀವು ನಂಬುತ್ತೀರಾ? ಹೌದು, ನಂಬಲೇಬೇಕು. ಅದು 2007... ಆ ಸಮಯದಲ್ಲಿ, ಜೀ ನೆಟ್‌ವರ್ಕ್ ಮುಖ್ಯಸ್ಥ ಸುಭಾಷ್ ಚಂದ್ರ ಮತ್ತು ಬಿಸಿಸಿಐ ನಡುವಿನ ಹಳೆಯ ಘರ್ಷಣೆಗಳು ಉಲ್ಬಣಗೊಂಡವು. ಈ ವೇಳೆ ಕಪಿಲ್ ದೇವ್‌ನಂತಹ ದಂತಕಥೆಗಳೊಂದಿಗೆ ಜೀ ನೆಟ್‌ವರ್ಕ್ ಐಸಿಎಲ್ (ಇಂಡಿಯನ್ ಕ್ರಿಕೆಟ್ ಲೀಗ್) ಎಂಬ ಖಾಸಗಿ ಲೀಗ್ ಅನ್ನು ಪ್ರಾರಂಭಿಸಿತು. ಇದನ್ನು ನೋಡಿದ ಬಿಸಿಸಿಐ ಕೋಪಗೊಂಡಿತು.
ತಮ್ಮ ಏಕಸ್ವಾಮ್ಯಕ್ಕೆ ಬೆದರಿಕೆ ಇದೆ ಎಂದು ಹೆದರಿದ ಬಿಸಿಸಿಐ, ಐಸಿಎಲ್‌ನಲ್ಲಿ ಆಡುವ ಆಟಗಾರರ ಮೇಲೆ ಜೀವಮಾನದ ನಿಷೇಧವನ್ನು ವಿಧಿಸಿದ್ದಲ್ಲದೆ, ಅದನ್ನು ಎದುರಿಸಲು ಒಂದು ಮಾಸ್ಟರ್ ಪ್ಲಾನ್ ಅನ್ನು ಸಹ ತಂದರು. ಆಗ ಲಲಿತ್ ಮೋದಿ ಎಂಬ ಚಾಣಾಕ್ಷ ಒಂದು ಕಲ್ಪನೆಯನ್ನು ಮುಂದಿಟ್ಟರು. ಅದೇನೆಂದರೆ, 1990ರ ದಶಕದಲ್ಲಿ ಕ್ರಿಕೆಟ್ ಅನ್ನು ಯುರೋಪಿಯನ್ ಫುಟ್‌ಬಾಲ್ ಕ್ಲಬ್‌ಗಳಂತೆ ವ್ಯವಹಾರ ಮತ್ತು ಮನರಂಜನಾ ಪ್ಯಾಕೇಜ್ ಆಗಿ ಪರಿವರ್ತಿಸಬೇಕೆಂದು ಲಲಿತ್ ಮೋದಿ ಭಾವಿಸಿದ್ದರು. ಆದರೆ, ಆ ಸಮಯದಲ್ಲಿ ಬಿಸಿಸಿಐ ಒಪ್ಪಲಿಲ್ಲ. ಆದರೆ, ಐಸಿಎಲ್ ಸೃಷ್ಟಿಸಿದ ಭಯದಿಂದಾಗಿ, ಮಂಡಳಿಗೆ ಲಲಿತ್ ಮೋದಿಯ ಯೋಜನೆಯನ್ನು ಹೊರತುಪಡಿಸಿ ಬೇರೆ ದಾರಿ ಇರಲಿಲ್ಲ.
ಐಪಿಎಲ್ ಘೋಷಣೆಯಾದ ಕೆಲವೇ ದಿನಗಳಲ್ಲಿ, ಧೋನಿ ಮತ್ತು ತಂಡ, ದಕ್ಷಿಣ ಆಫ್ರಿಕಾದಲ್ಲಿ ನಡೆದ ಮೊದಲ ಟಿ20 ವಿಶ್ವಕಪ್ ಗೆದ್ದ ನಂತರ ಭಾರತಕ್ಕೆ ಬಂದರು. ಟಿ20 ಅನ್ನು "ವಿಲಕ್ಷಣ" ಎಂದು ಈ ಹಿಂದೆ ಪರಿಗಣಿಸಿದ್ದ ಜನರು, ವಿಶ್ವಕಪ್ ಗೆದ್ದ ನಂತರ ಈ ಸಣ್ಣ ಸ್ವರೂಪದ ಬಗ್ಗೆ ಅಪಾರ ಕ್ರೇಜ್ ಹೊಂದಿದ್ದರು. ಇದೇ ಸರಿಯಾದ ಸಮಯ ಎಂದು ಮನಗಂಡ ಲಲಿತ್ ಮೋದಿ, ಅದನ್ನೇ ಮಾರ್ಕೆಟಿಂಗ್‌ಗಾಗಿ ಬಳಸಿಕೊಂಡರು. ಕ್ರಿಕೆಟ್ ತಂಡಗಳನ್ನು ರಾಜ್ಯಗಳ ಹೆಸರಿಡುವ ಹಳೆಯ ಪದ್ಧತಿಯನ್ನು ಕೈಬಿಟ್ಟರು ಮತ್ತು 2008ರ ಜನವರಿಯಲ್ಲಿ ಎಂಟು ನಗರಗಳಲ್ಲಿ ಫ್ರಾಂಚೈಸಿಗಳಿಗಾಗಿ ಹರಾಜನ್ನು ನಡೆಸಿದರು. ರಿಲಯನ್ಸ್, ಶಾರುಖ್ ಖಾನ್ ಮತ್ತು ವಿಜಯ್ ಮಲ್ಯ ಅವರಂತಹ ದೊಡ್ಡ ದೊಡ್ಡ ಐಕಾನ್ಗಳು ಸುಮಾರು 723 ಮಿಲಿಯನ್ ಡಾಲರ್ಗೆ ತಂಡಗಳನ್ನು ಖರೀದಿಸುವುದರೊಂದಿಗೆ, ಕ್ರಿಕೆಟ್ ಒಂದು ಆಕರ್ಷಕ 'ಕಾರ್ಪೊರೇಟ್' ವ್ಯವಹಾರವಾಗಿ ರೂಪುಗೊಂಡಿತು.
ಇದಾದ ನಂತರ ಫೆಬ್ರವರಿಯಲ್ಲಿ ನಡೆದ ಆಟಗಾರರ ಹರಾಜು, ಕ್ರಿಕೆಟ್ ಜಗತ್ತನ್ನೇ ಬೆಚ್ಚಿಬೀಳಿಸಿತು. ಆ ಸಮಯದಲ್ಲಿ ಆಟಗಾರರ ಪ್ರತಿಭೆಯನ್ನು ಡಾಲರ್‌ಗಳಲ್ಲಿ ಬೆಲೆ ನಿಗದಿಪಡಿಸುವುದು ಒಂದು ಕ್ರಾಂತಿಯಾಗಿತ್ತು. ಸಚಿನ್, ಗಂಗೂಲಿ ಮತ್ತು ದ್ರಾವಿಡ್ ಅವರನ್ನು ಅವರವರ ತವರು ನಗರಗಳಿಗೆ 'ಐಕಾನಿಕ್ ಆಟಗಾರರು' ಎಂದು ನೀಡಲಾಗಿದ್ದರೂ, ಐಕಾನಿಕ್ ಸ್ಥಾನಮಾನವಿಲ್ಲದ ಧೋನಿಗಾಗಿ ಹರಾಜು ಯುದ್ಧ ಸಾಮಾನ್ಯವಾಗಿರಲಿಲ್ಲ. ಅಂತಿಮವಾಗಿ, ಸಿಎಸ್‌ಕೆ ಧೋನಿ ಅವರನ್ನು 1.5 ಮಿಲಿಯನ್ ಡಾಲರ್ಗೆ ಗೆದ್ದುಕೊಂಡಿತು.
ಸೋನಿ ಪಿಕ್ಚರ್ಸ್ ಹತ್ತು ವರ್ಷಗಳ ಕಾಲ ಸುಮಾರು 1.02 ಬಿಲಿಯನ್ ಡಾಲರ್ಗೆ ಟಿವಿ ಹಕ್ಕುಗಳನ್ನು ಪಡೆದುಕೊಂಡಿತು, ಅದು ಆ ಸಮಯದಲ್ಲಿ ವಿಶ್ವ ದಾಖಲೆಯಾಗಿತ್ತು. ಅಂತಿಮವಾಗಿ, 2008, ಏಪ್ರಿಲ್ 18 ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಬ್ರೆಂಡನ್ ಮೆಕಲಮ್ ಗಳಿಸಿದ 158 ರನ್‌ಗಳು ಕೇವಲ ಶತಕವಲ್ಲ, ಅದು ಕ್ರಿಕೆಟ್‌ನ ಭವಿಷ್ಯವನ್ನು ನಿರ್ಧರಿಸುವ ಹೊಡೆತವಾಗಿತ್ತು. ಆ ಒಂದೇ ಇನ್ನಿಂಗ್ಸ್‌ನೊಂದಿಗೆ, ಐಪಿಎಲ್, ಪ್ರಾಯೋಜಕರು ಮತ್ತು ಅಭಿಮಾನಿಗಳಿಗೆ ಚಿನ್ನದ ಗಣಿ ಎಂದು ನಿರ್ಧರಿಸಲಾಯಿತು.
ಕೋಪ ಮತ್ತು ಸೇಡಿನಿಂದ ಆರಂಭವಾದ ಲೀಗ್ ಈಗ 2026, ಮಾರ್ಚ್ 28ರಂದು ತನ್ನ 19ನೇ ಸೀಸನ್‌ಗೆ ಪ್ರವೇಶಿಸುತ್ತಿದೆ. 10 ತಂಡಗಳು, ಲಕ್ಷ ಕೋಟಿ ಹಾಗೂ ಜಾಗತಿಕ ಕ್ರೀಡಾ ತಾರೆಗಳು ಇವೆಲ್ಲವೂ ಅಂದು ಲಲಿತ್ ಮೋದಿ ಕಂಡು ಕನಸು. ಕಳೆದ 18 ವರ್ಷಗಳಲ್ಲಿ ಐಪಿಎಲ್‌ನ ಪ್ರಯಾಣ ಮತ್ತು ಅದರ ಅಂಕಿ-ಅಂಶಗಳನ್ನು ನೋಡಿದರೆ, ಎಷ್ಟರ ಮಟ್ಟಿಗೆ ಕ್ರೇಜ್ ಹುಟ್ಟುಹಾಕಿದೆ ಅನ್ನೋದು ನಿಮಗೆ ಗೊತ್ತಾಗುತ್ತದೆ.
ಐಪಿಎಲ್‌ನ ಕೆಲವು ಅತ್ಯುತ್ತಮ ದಾಖಲೆಗಳು
* ಹೆಚ್ಚಿನ ಪ್ರಶಸ್ತಿಗಳು: ಚೆನ್ನೈ ಸೂಪರ್ ಕಿಂಗ್ಸ್ (5), ಮುಂಬೈ ಇಂಡಿಯನ್ಸ್ (5).
* ಹೆಚ್ಚಿನ ರನ್‌ಗಳು: ವಿರಾಟ್ ಕೊಹ್ಲಿ (8000+ ರನ್‌ಗಳೊಂದಿಗೆ ರಾಜನಾಗಿ ಉಳಿದಿದ್ದಾರೆ).
* ಹೆಚ್ಚಿನ ವಿಕೆಟ್‌ಗಳು: ಯಜುವೇಂದ್ರ ಚಾಹಲ್ ( 200 ಕ್ಕೂ ಹೆಚ್ಚು ವಿಕೆಟ್ ಪಡೆದಿದ್ದಾರೆ).
* ಗರಿಷ್ಠ ಸ್ಕೋರ್: ಸನ್ ರೈಸರ್ಸ್ ಹೈದರಾಬಾದ್ (2024 ರಲ್ಲಿ ಮುಂಬೈ ವಿರುದ್ಧ 277/3 ಮತ್ತು RCB ವಿರುದ್ಧ 287/3 ).
* ವೇಗದ ಶತಕ: ಕ್ರಿಸ್ ಗೇಲ್ ( ಪುಣೆ ವಿರುದ್ಧ ಕೇವಲ 30 ಎಸೆತಗಳಲ್ಲಿ ಅಜೇಯ 175 ರನ್)
ಈಗ, 19ನೇ ಸೀಸನ್ 2026, ಮಾರ್ಚ್ 28ರಂದು ಬೆಂಗಳೂರಿನಲ್ಲಿ ಪ್ರಾರಂಭವಾಗಲಿದೆ. ಕಳೆದ ವರ್ಷ ಕಪ್ ಗೆಲ್ಲುವ ಮೂಲಕ ಹಾಲಿ ಚಾಂಪಿಯನ್ ಆಗಿರುವ RCB ಮತ್ತು ಸೇಡು ತೀರಿಸಿಕೊಳ್ಳಲು ಹಂಬಲಿಸುತ್ತಿರುವ ಎಸ್ಆರ್ಎಚ್ ಪರಸ್ಪರ ಮುಖಾಮುಖಿಯಾಗಲಿವೆ. ಈ ಬಾರಿ ಯಾರು ಗೆಲ್ಲುತ್ತಾರೆಂದು ನೋಡೋಣ!, (ಏಜೆನ್ಸೀಸ್).