ಐಪಿಎಲ್ 2027 ಹರಾಜನ್ನು ಭಾರತದಲ್ಲೇ ನಡೆಸಲು ತೀರ್ಮಾನಿಸಿರುವ ಬಿಸಿಸಿಐ
IPL 2027 Auction: ಐಪಿಎಲ್ ಎಂದರೆ ಅದು ಕೇವಲ ಒಂದು ಕ್ರಿಕೆಟ್ ಫಾಮ್ಯಾಟ್ ಅಲ್ಲ, ಬದಲಿಗೆ ಭಾರತದ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳಿಗೆ ಅದೊಂದು ರೀತಿ ಕ್ರಿಕೆಟ್ ಉತ್ಸವವಾಗಿದೆ. ಭಾರತದಲ್ಲಿ ಕ್ರಿಕೆಟ್ನ ಚಿತ್ರಣವನ್ನೇ ಬದಲಿಸಿದ ಕೀರ್ತಿ ಈ ಐಪಿಎಲ್ಗೆ ಸಲ್ಲುತ್ತದೆ. ಪ್ರತಿ ವರ್ಷ ಎರಡು ತಿಂಗಳ ಮಟ್ಟಿಗೆ ನಡೆಯುವ ಈ ಕ್ರಿಕೆಟ್ ಹಬ್ಬದ ಕುರಿತಂತೆ ಪ್ರಮುಖ ಸುದ್ದಿಯೊಂದು ವರದಿಯಾಗಿದೆ.
ಐಪಿಎಲ್ ಟೂರ್ನಿ ಪ್ರಾರಂಭಕ್ಕೂ ಪೂರ್ವದಲ್ಲಿ, ಆಟಗಾರರ ಹರಾಜು ಪ್ರಕ್ರಿಯೆ ನಡೆಯುತ್ತದೆ. ಇಲ್ಲಿ ಫ್ರಾಂಚೈಸಿಗಳು ತಮ್ಮ ತಂಡಕ್ಕೆ ಯಾವ-ಯಾವ ಆಟಗಾರರು ಬೇಕೋ ಅವರನ್ನು ಆಯ್ದುಕೊಳ್ಳುತ್ತಾರೆ. ಆದರೆ ಕಳೆದ ಮೂರು ವರ್ಷಗಳಿಂದ ಈ ಹರಾಜು ಪ್ರಕ್ರಿಯೆ ದುಬೈನಲ್ಲಿ ನಡೆಯುತ್ತಿತ್ತು. ಆದರೆ ಈಗ ಹೊರಬಿದ್ದಿರುವ ಮಾಹಿತಿ ಪ್ರಕಾರ, 2027 ರಲ್ಲಿ ನಡೆಯಲಿರುವ ಐಪಿಎಲ್ನ ಹಜಾರು ಪ್ರಕ್ರಿಯೆ ಭಾರತದಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ.
ಭಾರತಕ್ಕೆ ಮರಳಿದ ಹಜಾರು ಪ್ರಕ್ರಿಯೆ!
ಮಂಗಳವಾರ (ಸೆ. 15) ರಂದು ನಡೆದ ಬಿಸಿಸಿಐ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತದೆ. 2023 ರಲ್ಲಿ ಕೊನೆಯ ಬಾರಿಗೆ ಕೊಚ್ಚಿಯಲ್ಲಿ ಹರಾಜು ಪ್ರಕ್ರಿಯೆ ಭಾರತದಲ್ಲಿ ನಡೆದಿದ್ದು, ನಂತರ ಇದನ್ನು ದುಬೈಗೆ ಸ್ಥಳಾಂತರ ಮಾಡಲಾಗಿತ್ತು.
ಆದರೆ, ಈಗ ದೊರೆತಿರುವ ಮಾಹಿತಿ ಅನ್ವಯ, 2027 ರ ಐಪಿಎಲ್ ಹಜಾರು ಪ್ರಕ್ರಿಯೆ ಮಾತ್ರ ಭಾರತದಲ್ಲಿ ನಡೆಯಲಿದೆ. ಆದರೆ ಎಲ್ಲಿ ನಡೆಯಲಿದೆ ಎಂದು ಹೇಳಲು ಸ್ಥಳವನ್ನು ಇನ್ನೂ ನಿಗಧಿಮಾಡಿಲ್ಲ. ಅಂತೆಯೇ 2028 ರಲ್ಲಿ ಮೆಗಾ ಆಕ್ಷನ್ (ಹರಾಜು) ನಡೆಯಲಿದ್ದು, ಆಗ ಮತ್ತೆ ಈ ಪ್ರಕ್ರಿಯೆ ವಿದೇಶದಲ್ಲೇ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ಭಾರತಕ್ಕೆ ಮರಳಲು ಕಾರಣವೇನು?
ಮೂರು ವರ್ಷಗಳಿಂದ ವಿದೇಶದಲ್ಲಿ ನಡೆಯುತ್ತಿದ್ದ ಈ ಪ್ರಕ್ರಿಯೆ ಏಕೆ ಭಾರತಕ್ಕೆ ಮರಳಿದೆ ಎಂಬ ಪ್ರಶ್ನೆ ಮೂಡುವುದು ಸಹಜವಾಗಿದೆ. ಮಾಹಿತಿ ಪ್ರಕಾರ, ಫ್ರಾಂಚೈಸಿಗಳೇ ಈ ಪ್ರಸ್ತಾಪವನ್ನು ಮಾಡಿದ್ದು, ಕೆಲವೇ ದಿನ ನಡೆಯುವ ಈ ಪ್ರಕ್ರಿಯೆಗೆ ಸುಮಾರು 50 ಕ್ಕೂ ಅಧಿಕ ಸಿಬ್ಬಂದಿಗಳನ್ನು ವಿದೇಶಕ್ಕೆ ಕರೆದುಕೊಂಡು ಹೋಗುವುದು, ಅವರ ವಾಸಕ್ಕೆ ವ್ಯವಸ್ಥೆ ಮಾಡುವುದು ಮತ್ತೆ ಭಾರತಕ್ಕೆ ಕರೆತರುವುದು ತಂಡದ ಮಲೀಕರಿಗೆ ಅಧಿಕ ಆರ್ಥಿಕ ಹೊರೆಯಾಗುತ್ತಿದೆ ಎನ್ನಲಾಗಿದೆ.
ಹಾಗೆಯೇ, 2028 ರಲ್ಲಿ ಮೆಗಾ ಆಕ್ಷನ್, ಇವರು ಕಾರಣ ಈ ಮಿನಿ ಆಕ್ಷನ್ ಅನ್ನು ಭಾರತದಲ್ಲೇ ನಡೆಸಿದರೆ ಏನು ಸಮಸ್ಯೆಯಾಗುವುದಿಲ್ಲ ಎನ್ನುವುದು ತಂಡದ ಮಾಲೀಕರ ಒತ್ತಾಯವಾಗಿದೆ. ಫ್ರಾಂಚೈಸಿಗಳ ಮಾತನ್ನು ಒಪ್ಪಿಕೊಂಡಿರುವ ಬಿಸಿಸಿಐ ಕೂಡ ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆ ಭಾರತದಲ್ಲಿ ನಡೆಸಲು ಮುಂದಾಗಿದೆ ಎನ್ನಲಾಗಿದೆ.
ಇಂಪ್ಯಾಕ್ಟ್ ಪ್ಲೇಯರ್ ಬಗ್ಗೆ ನಿರ್ಧಾರವಾಗಿಲ್ಲ!
ಮಂಗಳವಾರ ನಡೆದ ಬಿಸಿಸಿಐ ಸಭೆಯಲ್ಲಿ ಕೇವಲ ಆಟಗಾರರ ಹರಾಜಿನ ಬಗ್ಗೆ ಮಾತ್ರ ಚರ್ಚೆ ನಡೆದಿದ್ದು, ಐಪಿಎಲ್ನಲ್ಲಿ ಸಾಕಷ್ಟು ವಿವಾದಕ್ಕೆ ಕಾರಣವಾಗಿರುವ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಕುರಿತು ಯಾವುದೇ ಚರ್ಚೆಯಾಗಿಲ್ಲ ಎನ್ನಲಾಗಿದೆ.
ಭಾರತ ತಂಡದ ಹಾಗೂ ಐಪಿಎಲ್ನ ಸ್ಟಾರ್ ಆಟಗಾರರಾದ ಶುಭಮನ್ ಗಿಲ್, ರೋಹಿತ್ ಶರ್ಮಾ ಸೇರಿದಂತೆ ಹಲವು ಆಟಗಾರರು ಈ ನಿಯಮವನ್ನು ರದ್ದುಪಡಿಸಬೇಕೆಂದು ಹೇಳಿದ್ದರು. ಈ ನಿಯಮದಿಂದಾಗಿ, ಆಲ್-ರೌಂಡರ್ ಆಟಗಾರರಿಗೆ ಅನ್ಯಾಯವಾಗುತ್ತಿದೆ, ಐಪಿಎಲ್ ಎಂದರೆ ಕೇವಲ ಬ್ಯಾಟರ್ಗಳ ಟೂರ್ನಿ ಎನ್ನುವ ಹಣೆಪಟ್ಟಿ ಬರುತ್ತಿದೆ ಎಂದು ಅನೇಕ ಮಾಜಿ ಆಟಗಾರರು ವಿರೋಧ ವ್ಯಕ್ತಪಡಿಸಿದ್ದರು.
ಹೀಗಾಗಿ ಬಿಸಿಸಿಐ ನ ಮುಂದಿನ ಸಭೆಗಳಲ್ಲಿ ಈ ವಿವಾದಾತ್ಮಕ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಮುಂದುವರಿಕೆ, ಬದಲಾವಣೆ ಅಥವಾ ರದ್ದತಿ ಕುರಿತಂತೆ ತೀರ್ಮಾನವಾಗಲಿದೆ ಎಂದು ಹೇಳಬಹುದಾಗಿದೆ, (ಏಜೆನ್ಸೀಸ್).