ಮತ್ತೊಮ್ಮೆ ಪಾಕ್​ಗೆ ತಾಳಲಾರದ ಅವಮಾನ! ತಮ್ಮ ಬೇಳೆ ಬೇಯಲಿಲ್ಲ ಅನ್ನೋ ಒಂದೇ ಒಂದು ಕಾರಣಕ್ಕೆ WCL​ ಟೂರ್ನಿಗೆ ಗುಡ್​ಬೈ ​  
ಕ್ರಿಕೆಟ್

ಮತ್ತೊಮ್ಮೆ ಪಾಕ್​ಗೆ ತಾಳಲಾರದ ಅವಮಾನ! ತಮ್ಮ ಬೇಳೆ ಬೇಯಲಿಲ್ಲ ಅನ್ನೋ ಒಂದೇ ಒಂದು ಕಾರಣಕ್ಕೆ WCL​ ಟೂರ್ನಿಗೆ ಗುಡ್​ಬೈ ​

ನಮ್ಮ ಡಿಮಾಂಡ್​ ಈಡೇರಲಿಲ್ಲ ಎಂದಮೇಲೆ ನಾವಿನ್ನು ಟೂರ್ನಿಯ ಭಾಗಿಯಾಗಲು ಇಷ್ಟಪಡುವುದಿಲ್ಲ ಎಂದು ತಿಳಿಸಿ, ಎಕ್ಸಿಟ್​ ಆಗಿದೆ ಎಂದು ಕ್ರಿಕೆಟ್​ ಮೂಲಗಳು ಸ್ಪಷ್ಟಪಡಿಸಿವೆ.

ನವದೆಹಲಿ: ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ (WCL) ಟೂರ್ನಿಯ ಹೊಸ ಆವೃತ್ತಿಯಿಂದ ಪಾಕಿಸ್ತಾನ ಚಾಂಪಿಯನ್ಸ್ ತಂಡವು ಇದೀಗ ಅಧಿಕೃತವಾಗಿ ಹೊರನಡೆದಿದೆ. ಈ ಕಟು ನಿರ್ಧಾರಕ್ಕೆ ಮೂಲ ಕಾರಣವೇ ಟೀಮ್ ಇಂಡಿಯಾ ಆಟಗಾರರು ಎಂಬುದು ಸದ್ಯ ಕ್ರಿಕೆಟ್​ ಪ್ರಿಯರ ಅಚ್ಚರಿಗೆ ಕಾರಣವಾಗಿದೆ.

ಟೀಮ್ ಇಂಡಿಯಾ ಆಟಗಾರರು ನಮಗೆ ಲಿಖಿತ ರೂಪದಲ್ಲಿ ಕ್ಷಮಾಪಣೆ ಕೇಳಬೇಕು ಎಂದು ಪಟ್ಟು ಹಿಡಿದಿದ್ದ ಬೇಡಿಕೆಯನ್ನು ಟೂರ್ನಿಯ ಆಯೋಜಕರು ತಿರಸ್ಕರಿಸಿದ್ದೇ ತಡ ಅವಮಾನ ಸಹಿಸಲಾರದ ಪಾಕ್​, ನಮ್ಮ ಡಿಮಾಂಡ್​ ಈಡೇರಲಿಲ್ಲ ಎಂದಮೇಲೆ ನಾವಿನ್ನು ಟೂರ್ನಿಯ ಭಾಗಿಯಾಗಿರಲು ಇಷ್ಟಪಡುವುದಿಲ್ಲ ಎಂದು ತಿಳಿಸಿ, ಎಕ್ಸಿಟ್​ ಆಗಿದೆ ಎಂದು ಕ್ರಿಕೆಟ್​ ಮೂಲಗಳು ಸ್ಪಷ್ಟಪಡಿಸಿವೆ.

ಯಾವ ಕಾರಣಕ್ಕೆ ಕ್ಷಮೆ?

ಕಳೆದ ವರ್ಷದ WCL ಸೀಸನ್​ ವೇಳೆ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ, ಸಾರ್ವಜನಿಕರ ಭಾವನೆ ಹಾಗೂ ಉದ್ವಿಗ್ನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕ್ರಿಕೆಟಿಗರಾದ ಯುವರಾಜ್ ಸಿಂಗ್, ಸುರೇಶ್ ರೈನಾ, ಹರ್ಭಜನ್ ಸಿಂಗ್, ಯೂಸುಫ್ ಪಠಾಣ್ ಅವರನ್ನೊಳಗೊಂಡ ಟೀಮ್ ಇಂಡಿಯಾ, ಪಾಕಿಸ್ತಾನ ವಿರುದ್ಧ ಆಡಲು ಸುತಾರಾಮ್​ ಒಪ್ಪಲಿಲ್ಲ. ಇದರ ಪರಿಣಾಮ, ಲೀಗ್ ಹಂತದ ಪಂದ್ಯ ರದ್ದಾಗಿತ್ತು ಹಾಗೂ ಸೆಮಿಫೈನಲ್ ಪಂದ್ಯದಿಂದಲೂ ಭಾರತ ಹಿಂದೆ ಸರಿದಿದ್ದರಿಂದ ಪಾಕಿಸ್ತಾನ ಸುಲಭವಾಗಿ ಫೈನಲ್‌ ಪ್ರವೇಶಿಸಿತು.

ಪಾಕ್​ ಬೇಡಿಕೆ ಕಸದಬುಟ್ಟಿಗೆ

ಈ ಅವಮಾನವನ್ನು ಸಹಿಸಿಕೊಳ್ಳಲಾಗದ ಪಾಕಿಸ್ತಾನ ಕ್ರಿಕೆಟ್​ ಮಂಡಳಿಯು, ಆಟಗಾರರಿಗೆ ಎನ್‌ಒಸಿ (NOC) ನೀಡಿದ್ದೇ ಆದರೂ ಕಳೆದ ಬಾರಿಯ ಘಟನೆಗೆ ಸಂಬಂಧಿಸಿದಂತೆ ಭಾರತ ತಂಡದಿಂದ ನಮಗೆ ಲಿಖಿತ ರೂಪದಲ್ಲಿ ಕ್ಷಮಾಪಣೆ ಕೊಡಿಸುವಂತೆ ಆಯೋಜಕರ ಬಳಿ ಮೊದಲೇ ಕಂಡೀಷನ್​ ಹಾಕಿತ್ತು. ಆದರೆ, ಪಾಕಿಸ್ತಾನದ ಈ ಬೇಡಿಕೆಯನ್ನು ಎಡಗಾಲಿನಲ್ಲಿ ಒದೆಯುವ ಮೂಲಕ ಆಯೋಜಕರು ತಿರಸ್ಕರಿಸಿದ್ದಾರೆ. ಇದರಿಂದ ತೀರ ಸಿಡಿಮಿಡಿಗೊಂಡ ಪಿಸಿಬಿ, ನಮ್ಮ ಡಿಮಾಂಡ್​ ಈಡೇರಿಸಲು ಆಗದಿದ್ದ ಮೇಲೂ ನಾವಿನ್ನು ಈ ಟೂರ್ನಿಯಲ್ಲಿ ಮುಂದುವರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಈ ಕುರಿತಾಗಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹೊಸ ಪೋಸ್ಟ್​ ಕೂಡ ಹಂಚಿಕೊಂಡಿರುವ ಡಬ್ಲ್ಯೂಸಿಎಲ್, ಈ ಬಾರಿ ಒಟ್ಟು ಭಾರತ, ವೆಸ್ಟ್ ಇಂಡೀಸ್​, ಇಂಗ್ಲೆಂಡ್​, ಬಾಂಗ್ಲಾದೇಶ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ತಂಡಗಳು ಮಾತ್ರ ಭಾಗವಹಿಸಲಿವೆ. ಅನಿವಾರ್ಯ ಕಾರಣಗಳಿಂದ ಪಾಕಿಸ್ತಾನ ಲೀಗ್​ನಿಂದ ಹೊರಗುಳಿದಿದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದೆ,(ಏಜೆನ್ಸೀಸ್).