ಭಾರತ ಕ್ರಿಕೆಟ್ ತಂಡದ ಮಾಜಿ ಬೌಲರ್ ಹರ್ಭಜನ್ ಸಿಂಗ್, ಪಾಕಿಸ್ತಾನದ ಮಾಜಿ ಆಟಗಾರ ತನ್ವೀರ್ ಅಹ್ಮದ್
- ಹರ್ಭಜನ್ ಸಿಂಗ್ ವಿಡಿಯೋಗೆ ತನ್ವೀರ್ ಅಹ್ಮದ್ ಕೌಂಟರ್ ವಿಡಿಯೋ
- ಹರ್ಭಜನ್ ಸಿಂಗ್ ಯಾವಾಗಲೂ ಪಾಕಿಸ್ತಾನಿ ಆಟಗಾರರ ಹಿಂದೆ ತಿರುಗಾತ್ತಾನೆ ಎಂದು ಹೇಳಿದ್ದ ತನ್ವೀರ್ ಅಹ್ಮದ್
- ತನ್ವೀರ್ ವಿರುದ್ಧ ವಿಡಿಯೋ ಮಾಡಿದ್ದ ಹರ್ಭಜನ್ ಸಿಂಗ್
ಪಾಕಿಸ್ತಾನ: ಭಾನುವಾರ (ಫೆ.15) ಟಿ20 ವಿಶ್ವಕಪ್ ಪಂದ್ಯಾವಳಿಯ ಅಂಗವಾಗಿ, ಕೊಲೊಂಬೊದಲ್ಲಿ ಭಾರತ ಮತ್ತು ಪಾಕಿಸ್ತಾನ (India v/s Pakistan) ಮೈದಾನದಲ್ಲಿ ಕಾದಾಡಲು ಸಜ್ಜಾಗಿದ್ದು, ಉಭಯ ದೇಶಗಳ ಪ್ರೇಕ್ಷಕರು ಈ ಹೈವೋಲ್ಟೆಜ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ.
ಆದರೆ ಮೈದಾನದ ಹೊರಗೆ ಭಾರತ ಮತ್ತು ಪಾಕಿಸ್ತಾನದ ಇಬ್ಬರು ಮಾಜಿ ಆಟಗಾರರ ವಿವಾದ ದಿನ ಕಳೆದಂತೆ ಹೆಚ್ಚಾಗುತ್ತಲೇ ಇದೆ. ಶುಕ್ರವಾರ (ಫೆ.13) ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ತಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ತನ್ವೀರ್ ಅಹ್ಮದ್ರನ್ನು ತರಾಟೆಗೆ ತೆಗೆದುಕೊಂಡಿದ್ದ ವಿಡಿಯೋ ಸಖತ್ ವೈರಲ್ ಆಗಿತ್ತು. ಈಗ ಈ ವಿಡಿಯೋಗೆ ಪ್ರತ್ಯುತ್ತರ ಎಂಬತ್ತೆ ತನ್ವೀರ್ ಅಹ್ಮದ್ ಕೂಡ ಒಂದು ವಿಡಿಯೋವನ್ನು ಹರಿಬಿಟ್ಟಿದ್ದು, ಇದು ಉರಿಯುತ್ತಿರುವ ಬೆಂಕಿಗೆ ಇನ್ನಷ್ಟು ತುಪ್ಪ ಸುರಿದಂತಾಗಿದೆ.
ತನ್ವೀರ್ ಅಹ್ಮದ್ ಅವರ ವಿಡಿಯೋಲೇನಿದೆ?
ಅಂತರ್ಜಾಲದಲ್ಲಿ ಹಂಚಿಕೊಂಡಿರುವ ವೀಡಿಯೊವೊಂದರಲ್ಲಿ, ತನ್ವೀರ್ ಹರ್ಭಜನ್ ಅವರನ್ನು ಎರಡು ಮುಖದ ವ್ಯಕ್ತಿ ಎಂದು ಕರೆದಿದ್ದಾರೆ. ನೀವು ಭಾರತೀಯ ಆಟಗಾರರಿಗೆ, ಪಾಕಿಸ್ತಾನಿ ಆಟಗಾರರೊಂದಿಗೆ ಕೈಕುಲುಕದಂತೆ ಹೇಳುತ್ತಿರಿ ಆದರೆ ನೀವು ಪಾಕಿಸ್ತಾನಿಗಳ ಜತೆಯಲ್ಲೇ ಸ್ಟುಡಿಯೋದಲ್ಲಿ ಕುಳಿತಿರುತ್ತಿರಿ ಎಂದು ಆರೋಪಿಸಿದ್ದಾರೆ.
ನೀವೊಬ್ಬ ಅಪ್ರಾಮಾಣಿಕ ವ್ಯಕ್ತಿ ಎಂದು ಕರೆದಿರುವ ತನ್ವೀರ್, ನಿಮಗೆ ಪ್ರಮಾಣಿಕತೆ ಇದ್ದಿದ್ದೇ ಆಗಿದ್ದರೆ, ನೀವು ಪಾಕಿಸ್ತಾನಿ ಆಟಗಾರರ ಜತೆಗೆ ಏಕೆ ಕಮೆಂಟರಿ ಮಾಡುಲು ಒಪ್ಪಿಕೊಳ್ಳುತ್ತಿದ್ದರಿ? ಹಾಗೂ ಪಾಕಿಸ್ತಾನಿ ಆಟಗಾರರ ಸಂದರ್ಶನವನ್ನು ಏಕೆ ತೆಗೆದುಕೊಳ್ಳುತ್ತಿರಿ ಎಂದು ತನ್ವೀರ್, ಹರ್ಭಜನ್ ಸಿಂಗ್ರನ್ನು ಪ್ರಶ್ನಿಸಿದ್ದಾರೆ.
ಭಜ್ಜಿ ವಿಡಿಯೋಗೆ ಕೌಂಟರ್ ವಿಡಿಯೋ
ಹರ್ಭಜನ್ ಸಿಂಗ್ ಮಾಡಿದ್ದ ವಿಡಿಯೋವನ್ನು ವಿರೋಧಿಸಿದ ತನ್ವೀರ್, ನಿಮ್ಮ ವಿಡಿಯೋನಲ್ಲಿ ನೀವು ಬಳಸಿದ ಪದಗಳು ಗೌರವಯುತವಾಗಿರಲಿಲ್ಲ, ಇದನ್ನು ಇಲ್ಲಿಗೆ ನಿಲ್ಲಿಸಿ ಇಲ್ಲವಾದರೆ ನಾನು ನಿಮಗೆ ಬೇರೆ ಶೈಲಿಯಲ್ಲಿ ಬುದ್ಧಿ ಕಲಿಸಬೇಕಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ನೀವು ನನಗಿಂತ ಹೆಚ್ಚು ಕ್ರಿಕೆಟ್ ಆಡಿರಬಹುದು, ಆದರೆ ನಿಮ್ಮ ನಡುವಳಿಕೆ ಬಹಳ ಕೆಳಮಟ್ಟದಾಗಿದೆ, ನಾನು ನಿಮಗೆ ಅಗೌರವ ತರುವ ಯಾವುದೇ ಪದಗಳನ್ನು ಬಳಸಿಲ್ಲ, ನೀವು ನಿಮ್ಮ ನಡುವಳಿಕೆಯನ್ನು ಮೊದಲು ಸರಿ ಪಡಿಸಿಕೊಳ್ಳಿ ಇಲ್ಲವಾದರೆ, ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ತನ್ವೀರ್, ಹರ್ಭಜನ್ ಸಿಂಗ್ರ ವಿಡಿಯೋಗೆ ತೀಕ್ಷ ಪ್ರತಿಕ್ರಿಯೆ ನೀಡಿದ್ದಾರೆ,(ಏಜನ್ಸೀಸ್).