Vaibhav Sooryavanshi: ಟೀಮ್ ಇಂಡಿಯಾದ ಯುವ ಆಟಗಾರ ವೈಭವ್ ಸೂರ್ಯವಂಶಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆಗಳು ನಿರಂತರವಾಗಿ ನಡೆಯುತ್ತಲೇ ಇವೆ. ಪ್ರಸ್ತುತ ಆರಂಭಿಕ ಜೋಡಿಯಾಗಿ ಕಣಕ್ಕಿಳಿಯುತ್ತಿರುವ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಅತ್ಯುತ್ತಮ ಪ್ರದರ್ಶನ ನೀಡುತ್ತಾ ತಂಡಕ್ಕೆ ಉತ್ತಮ ಬುನಾದಿ ಹಾಕಿಕೊಡುತ್ತಿದ್ದರೂ, ಸೂರ್ಯವಂಶಿಗೆ ಚಾನ್ಸ್ ನೀಡಬೇಕೆಂಬ ಒತ್ತಡ ಸೋಶಿಯಲ್ ಮೀಡಿಯಾದಲ್ಲಿ ಜೋರಾಗುತ್ತಲೇ ಇದೆ.
ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆಗಳ ಬಗ್ಗೆ ಕೊನೆಗೂ ಮೌನ ಮುರಿದಿರುವ ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್ ಸೀತಾಂಶು ಕೋಟಕ್, ಈ ರೀತಿಯ ಸೋಷಿಯಲ್ ಮೀಡಿಯಾ ಹೈಪ್ ವೈಭವ್ ಸೂರ್ಯವಂಶಿಗೆ ಹಾಗೂ ಪ್ರಸ್ತುತ ಸ್ಥಿರ ಪ್ರದರ್ಶನ ನೀಡುತ್ತಿರುವ ಇತರ ಆಟಗಾರರಿಗೆ ಯಾವುದೇ ರೀತಿಯಲ್ಲಿ ಒಳ್ಳೆಯದಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಟಿ20 ಪಂದ್ಯದ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋಟಕ್, ಕೇವಲ ಅಭಿಮಾನಿಗಳ ಒತ್ತಡಕ್ಕೆ ಮಣಿದು ಅಂತಿಮ ಹನ್ನೊಂದರ ಬಳಗದ ಆಯ್ಕೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.
ಅನೇಕ ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ವೈಭವ್, ಸಂಜು ಮತ್ತು ಅಭಿಷೇಕ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಲೇ ಇವೆ. ಜನರಿಗೆ ತಾವೇ ಇಷ್ಟಪಟ್ಟ ಆಟಗಾರರನ್ನು ಆಡುವ ಹನ್ನೊಂದರ ಬಳಗದಲ್ಲಿ ನೋಡುವ ಆಸೆಯಿರುತ್ತದೆ. ಆದರೆ ತಂಡದ ಮ್ಯಾನೇಜ್ಮೆಂಟ್ ಅಥವಾ ಆಯ್ಕೆ ಸಮಿತಿಯ ನಿರ್ಣಯಗಳು ಹಾಗೆ ಕೆಲಸ ಮಾಡಲು ಸಾಧ್ಯವಿಲ್ಲ. ಮ್ಯಾನೇಜ್ಮೆಂಟ್ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರಗಳು ಸಂಪೂರ್ಣವಾಗಿ ಒಟ್ಟಾರೆ ತಂಡದ ಹಿತದೃಷ್ಟಿಯಿಂದ ಕೂಡಿರುತ್ತವೆ ಎಂಬುದನ್ನು ಅಭಿಮಾನಿಗಳು ಅರ್ಥಮಾಡಿಕೊಳ್ಳಬೇಕು ಎಂದು ಕೋಟಕ್ ವಿವರಿಸಿದ್ದಾರೆ.
ವೈಭವ್ ಸೂರ್ಯವಂಶಿ ಅಪಾರ ಪ್ರತಿಭೆಯುಳ್ಳ ಆಟಗಾರ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ, ಅವರಿಗೆ ಮುಂದಿನ ದಿನಗಳಲ್ಲಿ ಉಜ್ವಲ ಭವಿಷ್ಯವಿದೆ, ಆದರೆ, ಕೇವಲ ಜನರ ಮೆಚ್ಚುಗೆಗಾಗಿ ಅಥವಾ ಅಭಿಮಾನಿಗಳ ನಿರಂತರ ಒತ್ತಡಕ್ಕಾಗಿ ತಂಡದ ಸಂಯೋಜನೆಯನ್ನು ಪದೇ ಪದೇ ಬದಲಾಯಿಸಲು ಸಾಧ್ಯವಿಲ್ಲ ಎಂದರು.
ಕೇವಲ 15-16 ವರ್ಷ ವಯಸ್ಸಿನ ಯುವ ಆಟಗಾರನ ಮೇಲೆ ಇಷ್ಟು ದೊಡ್ಡ ಮಟ್ಟದ ನಿರೀಕ್ಷೆಗಳ ಭಾರವನ್ನು ಹೇರುವುದು ಆತನಿಗೆ ಮತ್ತು ಈಗಾಗಲೇ ತಂಡಕ್ಕಾಗಿ ಸ್ಥಿರವಾಗಿ ರನ್ ಗಳಿಸುತ್ತಿರುವ ಇತರೆ ಆಟಗಾರರಿಗೆ ಮಾಡುವ ದೊಡ್ಡ ಅನ್ಯಾಯ ಎಂದು ಕೋಟಕ್ ಕಳವಳ ವ್ಯಕ್ತಪಡಿಸಿದ್ದಾರೆ. ಹಿರಿಯ ಆಟಗಾರರು ಕ್ರೀಡಾಂಗಣದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವುದನ್ನು ಎಲ್ಲರೂ ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳಬೇಕು ಎಂದಿದ್ದಾರೆ.
ತಂಡದಲ್ಲಿ ಚಾನ್ಸ್ ಸಿಗದಿರುವ ಬಗ್ಗೆ ವೈಭವ್ ಹೇಗೆ ಪ್ರತಿಕ್ರಿಯಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಕೋಟಕ್, ಆ ಯುವ ಆಟಗಾರ ಪ್ರಬುದ್ಧತೆಯಿಂದ ವರ್ತಿಸುತ್ತಿದ್ದಾನೆ ಎಂದರು. ಸಂಜು ಭಾಯ್ ಮತ್ತು ಅಭಿಷೇಕ್ ಭಾಯ್ ಅದ್ಭುತವಾದ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವಾಗ ತಾನು ತಂಡದಿಂದ ಹೊರಗುಳಿಯಲು ಏನು ಕಾರಣ ಎಂಬುದನ್ನು ವೈಭವ್ ಚೆನ್ನಾಗಿ ಅರಿತುಕೊಂಡಿದ್ದಾನೆ. ಆತ ತುಂಬಾ ಸರಳ ಸ್ವಭಾವದ ಹುಡುಗನಾಗಿದ್ದು, ಇಲ್ಲಿಯವರೆಗೆ ಯಾರ ಬಳಿಯೂ ದೂರು ನೀಡಿಲ್ಲ. ಫೀಲ್ಡಿಂಗ್, ಫಿಟ್ನೆಸ್ ಮತ್ತು ಬ್ಯಾಟಿಂಗ್ನಲ್ಲಿ ಸತತವಾಗಿ ಶ್ರಮಿಸುತ್ತಿದ್ದು, ಹಿರಿಯ ಆಟಗಾರರ ಜೊತೆ ಇದ್ದುಕೊಂಡು ಸಾಕಷ್ಟು ಸಂಗತಿಗಳನ್ನು ಕಲಿಯುತ್ತಿದ್ದಾನೆ ಎಂದು ಕೋಟಕ್ ಮೆಚ್ಚುಗೆ ವ್ಯಕ್ತಪಡಿಸಿದರು(ಏಜೆನ್ಸೀಸ್).