ಭಾರತದ ಟಿ20 ತಂಡ ( IND vs ZIM )  
ಕ್ರಿಕೆಟ್

ಭಾರತಕ್ಕೆ ಇಂದು ನಿರ್ಣಾಯಕದ ಪಂದ್ಯ: ತಂಡದಲ್ಲಾಗೋ ಬದಲಾವಣೆ ಏನು? ಪ್ಲೇಯಿಂಗ್ 11ನಲ್ಲಿ ಯಾರಿರಲಿದ್ದಾರೆ? IND vs ZIM

ಪ್ರಮುಖ ಮುಖ್ಯಾಂಶಗಳು

  • ಇಂದು ಭಾರತ ಮತ್ತು ಜಿಂಬಾಬ್ವೆ ನಡುವೆ ನಡೆಯಲಿದೆ ನಿರ್ಣಾಯಕ ಪಂದ್ಯ
  • ಟಿ20 ವಿಶ್ವಕಪ್ ಟೂರ್ನಿಯ ಸೂಪರ್-8 ಪಂದ್ಯಕ್ಕೆ ಚೆನ್ನೈನ ಚೆಪಾಕ್ ಕ್ರೀಡಾಂಗಣ ವೇದಿಕೆ
  • ಈ ಪಂದ್ಯದಲ್ಲಿ ಸೋತ ತಂಡವು ಟೂರ್ನಿಯಿಂದಲೇ ಹೊರ ಬೀಳುತ್ತದೆ
  • ಇಂದು ನಡೆಯಲಿರುವ ಪಂದ್ಯದಲ್ಲಿ ಭಾರತ ತಂಡದಲ್ಲಿ ಮಹತ್ವದ ಬದಲಾವಣೆಗಳು ಆಗಲಿವೆ
IND vs ZIM : ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಸೂಪರ್-8 ಹಂತದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 76 ರನ್‌ಗಳ ಹೀನಾಯ ಸೋಲಿನಿಂದ ಕಂಗೆಟ್ಟಿರುವ ಭಾರತ ತಂಡ, ಇಂದು ನಡೆಯಲಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್ ಟೂರ್ನಿಯ ಸೂಪರ್-8 ಹಂತದ ಮತ್ತೊಂದು ಪಂದ್ಯದಲ್ಲಿ ಜಿಂಬಾಬ್ವೆ ತಂಡವನ್ನು ಎದುರಿಸಲಿದೆ. ಭಾರತದ ಪಾಲಿಗೆ ಇಂದು ಮಾಡು ಇಲ್ಲವೇ ಮಡಿ ಎಂಬಂತಾಗಿದೆ.
ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ (ಚೆಪಾಕ್) ಇಂದು ಪಂದ್ಯ ನಡೆಯಲಿದೆ. ಸಿಕಂದರ್ ರಾಜಾ ನಾಯಕತ್ವದ ಜಿಂಬಾಬ್ವೆ ಕೂಡ ತಮ್ಮ ಕಳೆದ ಪಂದ್ಯದಲ್ಲಿ ಸೋಲು ಕಂಡಿದೆ. ಸೆಮಿಫೈನಲ್ ರೇಸ್‌ನಲ್ಲಿ ಉಳಿಯಲು ಅವರಿಗೂ ಗೆಲುವು ಅನಿವಾರ್ಯ. ಇವತ್ತು ಸೋತ ತಂಡಕ್ಕೆ ಸೆಮಿಫೈನಲ್​ನ ಕನಸು ಬಹುತೇಕ ಭಗ್ನವಾಗಲಿದೆ. ಹೀಗಾಗಿ ಟೀಮ್​ ಇಂಡಿಯಾ ಒತ್ತಡದಲ್ಲಿದ್ದು, ಆಡುವ ಹನ್ನೊಂದರ ಬಳಗದಲ್ಲಿ ಇಂದು ಪ್ರಮುಖ ಬದಲಾವಣೆಗಳಾಗುವ ನಿರೀಕ್ಷೆಯಿದೆ.

ವಾಷಿಂಗ್ಟನ್​ ಔಟ್, ಅಕ್ಷರ್ ಇನ್?

ಪ್ಲೇಯಿಂಗ್ 11ನಲ್ಲಿ ಬಹುಮುಖ್ಯ ಬದಲಾವಣೆಯಾಗಿ ವಾಷಿಂಗ್ಟನ್ ಸುಂದರ್ ಬದಲಿಗೆ ಅಕ್ಷರ್ ಪಟೇಲ್ ಕಣಕ್ಕಿಳಿಯುವುದು ಬಹುತೇಕ ಖಚಿತವೆಂದೇ ಹೇಳಲಾಗ್ತಿದೆ. ಕಳೆದ ಎರಡು ಪಂದ್ಯಗಳಲ್ಲಿ ಸುಂದರ್, ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧ 2 ಓವರ್ ಬೌಲ್ ಮಾಡಿ ವಿಕೆಟ್ ಪಡೆಯದೆ ನಿರಾಸೆ ಮೂಡಿಸಿದ್ದಲ್ಲದೇ, 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದು ಕೇವಲ 11 ರನ್ ಗಳಿಸಿದ್ದರು. ಹೀಗಾಗಿ, ಚೆಪಾಕ್‌ನ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಸ್ಪಿನ್​ ದಾಳಿ ನಡೆಸಬಲ್ಲ ಹಾಗೂ ಕೆಳ ಕ್ರಮಾಂಕದಲ್ಲಿ ಉಪಯುಕ್ತ ಬ್ಯಾಟಿಂಗ್ ಮಾಡಬಲ್ಲ ಅಕ್ಷರ್ ಪಟೇಲ್ ಅವರನ್ನು ಆಡಿಸುವ ಸಾಧ್ಯತೆ ದಟ್ಟವಾಗಿದೆ.

ಸಂಜು ಸ್ಯಾಮ್ಸನ್‌ಗೆ ಸಿಗುತ್ತಾ ಚಾನ್ಸ್?

ಭಾರತದ ಬ್ಯಾಟಿಂಗ್ ವಿಭಾಗದಲ್ಲಿ ಹಲವು ಗೊಂದಲಗಳಿವೆ. ಯುವ ಬ್ಯಾಟರ್ ತಿಲಕ್ ವರ್ಮಾ ರನ್ ಕಲೆಹಾಕುತ್ತಿದ್ದರೂ ಸ್ಟ್ರೈಕ್ ರೇಟ್ ತಂಡಕ್ಕೆ ದೊಡ್ಡ ತಲೆನೋವಾಗಿದೆ. ಸೂಪರ್-8 ನಂತಹ ಮಹತ್ವದ ಹಂತದಲ್ಲಿ ವೇಗದ ಬ್ಯಾಟಿಂಗ್ ಅತೀ ಮುಖ್ಯ. ಇನ್ನು ಫಿನಿಶರ್ ಪಾತ್ರದಲ್ಲಿ ರಿಂಕು ಸಿಂಗ್ ಸಂಪೂರ್ಣ ವಿಫಲರಾಗಿದ್ದಾರೆ. ಇದರಿಂದ ಡೆತ್ ಓವರ್‌ಗಳಲ್ಲಿ ರನ್ ವೇಗಕ್ಕೆ ಬ್ರೇಕ್ ಬೀಳುತ್ತಿದೆ. ಆರಂಭಿಕನಾಗಿ ಅಭಿಷೇಕ್ ಶರ್ಮಾ ಅವರು ಶೂನ್ಯ ಸುತ್ತುತ್ತಿದ್ದಾರೆ. ಹೀಗಾಗಿ ಮಧ್ಯಮ ಕ್ರಮಾಂಕದಲ್ಲಿ ನಿಯಂತ್ರಣ ಸಾಧಿಸಲು ಸಂಜು ಸ್ಯಾಮ್ಸನ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. 3, 4 ಅಥವಾ 5ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಬಲ್ಲ ಸಂಜು, ಸ್ಪಿನ್ನರ್‌ಗಳನ್ನು ಅತ್ಯುತ್ತಮವಾಗಿ ಎದುರಿಸುವ ಸಾಮರ್ಥ್ಯ ಹೊಂದಿದ್ದಾರೆ. ಇದು ಚೆನ್ನೈ ಪಿಚ್‌ನಲ್ಲಿ ಭಾರತಕ್ಕೆ ನೆರವಾಗಲಿದೆ.

ಮತ್ತೋರ್ವ ಸ್ಪಿನ್ನರ್​ಗೆ ಮಣೆ ಹಾಕುವ ಸಾಧ್ಯತೆ?

ಚೆಪಾಕ್ ಪಿಚ್ ಪಂದ್ಯ ಸಾಗಿದಂತೆ ನಿಧಾನವಾಗುತ್ತದೆ. ಈ ಹಿನ್ನೆಲೆಯಲ್ಲಿ ಸ್ಪಿನ್ ವಿಭಾಗವನ್ನು ಇನ್ನಷ್ಟು ಬಲಗೊಳಿಸಲು ರಿಸ್ಟ್​ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ಕಣಕ್ಕಿಳಿಸುವ ಬಗ್ಗೆಯೂ ಟೀಮ್​ ಮ್ಯಾನೇಜ್ಮೆಂಟ್ ಒಲವು ತೋರಿದಂತಿದೆ. ಕುಲದೀಪ್ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದರೆ, ಹೆಚ್ಚುವರಿ ಬೌಲರ್ ಕೋಟಾದಡಿ ರಿಂಕು ಸಿಂಗ್ ಅಥವಾ ತಿಲಕ್ ವರ್ಮಾ ಬೆಂಚ್ ಕಾಯಬೇಕಾಗಬಹುದು. ಒಟ್ಟಿನಲ್ಲಿ ಜಿಂಬಾಬ್ವೆ ವಿರುದ್ಧ ಯಾವುದೇ ಪ್ರಯೋಗಗಳಿಗೆ ಕೈಹಾಕದೆ, ಫಾರ್ಮ್ ಹಾಗೂ ಪಿಚ್ ಪರಿಸ್ಥಿತಿಯನ್ನು ಅರಿತು ಪಕ್ಕಾ ಲೆಕ್ಕದೊಂದಿಗೆ ಭಾರತ ತಂಡ ಕಣಕ್ಕಿಳಿಯಬೇಕಿದೆ, (ಏಜೆನ್ಸೀಸ್​).