ಟೀಮ್​ ಇಂಡಿಯಾ ಆಟಗಾರರಾದ ಶುಭಮಾನ್ ಗಿಲ್, ಸಂಜು ಸ್ಯಾಮ್ಸನ್​ ಹಾಗೂ ಸೂರ್ಯಕುಮಾರ್​ ಯಾದವ್​ 
ಕ್ರಿಕೆಟ್

ಆತನಿಗೆ ಸಾಕಷ್ಟು ಚಾನ್ಸ್​ ಕೊಟ್ಟಿದ್ದೇವೆ... ಓಪನಿಂಗ್​ ಬ್ಯಾಟ್ಸ್​ಮನ್​ ಈತನೇ ಎಂದ ಸೂರ್ಯಕುಮಾರ್​! IND vs SA

ಪ್ರಮುಖ ಮುಖ್ಯಾಂಶಗಳು

  • ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟಿ20 ಪಂದ್ಯ ನಾಳೆ ಕಟಕ್‌ನಲ್ಲಿ ನಡೆಯಲಿದೆ
  • ಪಂದ್ಯಕ್ಕೂ ಮುನ್ನ ನಾಯಕ ಸೂರ್ಯಕುಮಾರ್ ಯಾದವ್ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದರು
  • ಶುಭಮಾನ್ ಗಿಲ್ ಮತ್ತು ಹಾರ್ದಿಕ್​ ಪಾಂಡ್ಯ ತಂಡ ಸೇರಿಕೊಂಡಿರುವುದು ಸಂತಸವೆಂದ ಎಸ್​ಕೆವೈ
  • ಸಂಜು ಸ್ಯಾಮ್ಸನ್​ ಯಾವುದೇ ಸ್ಥಾನದಲ್ಲೂ ಬ್ಯಾಟಿಂಗ್ ಮಾಡಬಲ್ಲರು ಎಂದ ಯಾದವ್​
ನವದೆಹಲಿ : ಐದು ಪಂದ್ಯಗಳ ಟಿ20 ಸರಣಿಯ ಭಾಗವಾಗಿ ಭಾರತ ಮತ್ತು ದಕ್ಷಿಣ ಆಫ್ರಿಕಾ ( IND vs SA ) ನಡುವಿನ ಮೊದಲ ಪಂದ್ಯ ಮಂಗಳವಾರ ಕಟಕ್‌ನಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ, ಟೀಮ್ ಇಂಡಿಯಾದ T20 ನಾಯಕ ಸೂರ್ಯಕುಮಾರ್ ಯಾದವ್ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ, ಸಾಕಷ್ಟು ಆಸಕ್ತಿದಾಯಕ ವಿಚಾರಗಳ ಬಗ್ಗೆ ಮಾತನಾಡಿದರು.
ಗಾಯಗಳಿಂದಾಗಿ ತಂಡದಿಂದ ಹೊರಗುಳಿದಿದ್ದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಉಪನಾಯಕ ಶುಭಮಾನ್ ಗಿಲ್ ಸಂಪೂರ್ಣ ಫಿಟ್​ನೆಸ್​ ಪಡೆದುಕೊಂಡಿದ್ದಾರೆ. ಅವರಿಬ್ಬರು ತಂಡವನ್ನು ಸೇರಿಕೊಂಡಿರುವುದು ಸಂತಸ ತಂದಿದೆ. ಹಾರ್ದಿಕ್ ಆಗಮನದಿಂದ ತಂಡಕ್ಕೆ ಸಮತೋಲನ ಬಂದಿದೆ. ಹಾರ್ದಿಕ್​ ಅವರ ಅನುಭವ ತಂಡಕ್ಕೆ ತುಂಬಾ ಉಪಯುಕ್ತವಾಗಲಿದೆ ಎಂದು ಎಸ್​ಕೆವೈ ಹೇಳಿದರು.
ಶುಭಮಾನ್ ಗಿಲ್ ಅವರು ವಿನಾಶಕಾರಿ ಆಟಗಾರ ಅಭಿಷೇಕ್ ಶರ್ಮ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಗಿಲ್ ಆರಂಭಿಕ ಆಟಗಾರನಾಗಿ ಬಂದರು. ಅದರ ನಂತರ, ಅವರ ಅನುಪಸ್ಥಿತಿಯಲ್ಲಿ, ಸಂಜು ಸ್ಯಾಮ್ಸನ್ ಆರಂಭಿಕ ಆಟಗಾರನಾಗಿ ಬಂದು ಅದ್ಭುತ ಪ್ರದರ್ಶನ ನೀಡಿದರು. ಈಗ ಗಿಲ್ ಅವರು ತಂಡಕ್ಕೆ ಮರಳಿದ್ದಾರೆ. ಆದ್ದರಿಂದ, ಅವರಿಗೆ ಅವರ ಸ್ಥಾನವನ್ನು ಬಿಟ್ಟುಕೊಡುವುದು ಸರಿಯಾದ ನಿರ್ಧಾರ ಎಂದು ಸೂರ್ಯಕುಮಾರ್​ ಹೇಳಿದರು.
ಸಂಜು ಸ್ಯಾಮ್ಸನ್ ಬಹಳ ಅಮೂಲ್ಯ ಆಟಗಾರ ಮತ್ತು ಅವರು ಯಾವುದೇ ಸ್ಥಾನದಲ್ಲೂ ಬ್ಯಾಟಿಂಗ್ ಮಾಡಬಲ್ಲರು ಎಂದು ಯಾದವ್​ ಹೇಳಿದರು. ಆರಂಭಿಕರನ್ನು ಹೊರತುಪಡಿಸಿ ಉಳಿದ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆಗಳಿರುತ್ತವೆ. ಪರಿಸ್ಥಿತಿಗೆ ಅನುಗುಣವಾಗಿ ಆಟಗಾರರು ಮೂರನೇ ಸ್ಥಾನದಿಂದ ಯಾವುದೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಸಿದ್ಧರಾಗಿರಬೇಕು ಎಂದು ಇದೇ ವೇಳೆ ಎಸ್​ಕೆವೈ ತಿಳಿಸಿದರು.

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡ

ಸೂರ್ಯಕುಮಾರ್ ಯಾದವ್ (ನಾಯಕ), ಶುಭಮಾನ್ ಗಿಲ್ (ಉಪನಾಯಕ), ಅಭಿಷೇಕ್ ಶರ್ಮ, ತಿಲಕ್ ವರ್ಮ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮ (ವಿಕೆಟ್​ ಕೀಪರ್​), ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್​), ಜಸ್​ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್, ಹರ್ಷಿತ್​ ರಾಣಾ ಮತ್ತು ವಾಷಿಂಗ್ಟನ್​ ಸುಂದರ್​.

ಆಡುವ ಹನ್ನೊಂದರ ಬಳಗ (ಅಂದಾಜು)

ಶುಭಮಾನ್ ಗಿಲ್, ಅಭಿಷೇಕ್ ಶರ್ಮ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮ, ಹಾರ್ದಿಕ್ ಪಾಂಡ್ಯ, ಜಿತೇಶ್ ಶರ್ಮ, ಶಿವಂ ದುಬೆ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್​ಪ್ರೀತ್ ಬುಮ್ರಾ ಹಾಗೂ ವರುಣ್ ಚಕ್ರವರ್ತಿ.