ಮತ್ತೊಮ್ಮೆ ಕಳಚಿಬಿತ್ತು ಪಾಕಿಸ್ತಾನದ ಮುಖವಾಡ! ( IND VS PAK ) 
ಕ್ರಿಕೆಟ್

ಈ ರೀತಿ ನಡೆದುಕೊಳ್ಳಲು ನಿಮಗೆ ನಾಚಿಕೆ ಆಗಲ್ವಾ? ಮತ್ತೊಮ್ಮೆ ಕಳಚಿಬಿತ್ತು ಪಾಕಿಸ್ತಾನದ ಮುಖವಾಡ! IND VS PAK

ಪ್ರಮುಖ ಮುಖ್ಯಾಂಶಗಳು

  • ಪಾಕಿಸ್ತಾನ ಕ್ರಿಕೆಟ್​ ತಂಡದ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ
  • ಪ್ರಸ್ತುತ ನಡೆಯುತ್ತಿರುವ T20 ವಿಶ್ವಕಪ್ ಟೂರ್ನಮೆಂಟ್‌ನಲ್ಲಿ ಪಾಕಿಸ್ತಾನ ಪುರುಷರ ತಂಡ ಹೀನಾಯ ಸೋಲುಂಡಿದೆ
  • ಪಾಕಿಸ್ತಾನದ ಮಹಿಳಾ ಕ್ರಿಕೆಟಿಗರು ಕೂಡ ಉತ್ತಮ ಪ್ರದರ್ಶನ ತೋರುವಲ್ಲಿ ಹೆಣಗಾಡುತ್ತಿದ್ದಾರೆ
IND VS PAK : ಪಾಕಿಸ್ತಾನ ಕ್ರಿಕೆಟ್​ ತಂಡದ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಪ್ರಸ್ತುತ ನಡೆಯುತ್ತಿರುವ T20 ವಿಶ್ವಕಪ್ ಟೂರ್ನಮೆಂಟ್‌ನಲ್ಲಿ ಪಾಕಿಸ್ತಾನದ ಪುರುಷರ ತಂಡ ಟೀಮ್​ ಇಂಡಿಯಾ ಎದುರು ಹೀನಾಯವಾಗಿ ಸೋಲುಂಡಿದೆ. ಬ್ಯಾಟಿಂಗ್​ ಮತ್ತು ಬೌಲಿಂಗ್​ ಎಡರಲ್ಲೂ ಕಳಪೆ ಪ್ರದರ್ಶನವನ್ನು ತೋರಿದೆ. ಅದೇ ರೀತಿ ಪಾಕಿಸ್ತಾನದ ಮಹಿಳಾ ಕ್ರಿಕೆಟಿಗರು ಕೂಡ ಉತ್ತಮ ಪ್ರದರ್ಶನ ತೋರುವಲ್ಲಿ ಹೆಣಗಾಡುತ್ತಿದ್ದಾರೆ.
ಹೌದು, ಪ್ರಸ್ತುತ ಮಹಿಳಾ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್-2026 ಟೂರ್ನಮೆಂಟ್ ನಡೆಯುತ್ತಿದೆ. ಈ ಟೂರ್ನಮೆಂಟ್‌ನಲ್ಲಿ ಭಾರತವನ್ನು ಹೇಗಾದರು ಮಾಡಿ ಸೋಲಿಸಬೇಕೆಂದು ಪಾಕಿಸ್ತಾನದ ವನಿತೆಯರು ಮಾಡಿದ ಕುತಂತ್ರ ಬಹಿರಂಗಗೊಂಡಿದೆ. ಈ ಮೂಲಕ ಕ್ರೀಡಾ ಜಗತ್ತಿನೆದರು ಪಾಕಿಸ್ತಾನದ ಮುಖವಾಡ ಮತ್ತೊಮ್ಮೆ ಕಳಚಿ ಬಿದ್ದಿದೆ.
ಪಾಕಿಸ್ತಾನದ ವಿಕೆಟ್ ಕೀಪರ್ ಯುಸ್ರಾ ಅಮೀರ್, ಟೀಮ್​ ಇಂಡಿಯಾದ ಆಟಗಾರ್ತಿ ವೃಂದಾ ದಿನೇಶ್ ಅವರ ವಿಕೆಟ್‌ ಪಡೆಯಲು, ವಂಚನೆ ಮಾಡಲು ಹೋಗಿ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ. ಸದ್ಯ ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಇದರಿಂದಾಗಿ, ಪಾಕಿಸ್ತಾನದ ಖ್ಯಾತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಕುಸಿದಿದೆ.
ಮಹಿಳಾ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್-2026 ಟೂರ್ನಮೆಂಟ್‌ನ ಭಾಗವಾಗಿ, ಫೆಬ್ರವರಿ 15 ರಂದು ಟೀಮ್ ಇಂಡಿಯಾ ಮಹಿಳಾ ಎ vs ಪಾಕಿಸ್ತಾನ ಮಹಿಳಾ ಎ ನಡುವೆ ನಿರ್ಣಾಯಕ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಮಹಿಳಾ ತಂಡ 8 ವಿಕೆಟ್‌ಗಳಿಂದ ಜಯಗಳಿಸಿತು. ಶಿವರಾತ್ರಿಯ ದಿನದಂದು ನಮ್ಮ ಮಹಿಳಾ ಕ್ರಿಕೆಟಿಗರು ಪಾಕಿಸ್ತಾನ ಮಹಿಳಾ ತಂಡಕ್ಕೆ ಸೋಲಿನ ರುಚಿ ಉಣಿಸಿದರು.
ಈ ಪಂದ್ಯದಲ್ಲಿ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಿತು. ಆದರೆ, ಯಾರೊಬ್ಬರು ಉತ್ತಮ ಪ್ರದರ್ಶನ ತೋರದ ಹಿನ್ನೆಲೆಯಲ್ಲಿ ಪಾಕ್​ ತಂಡ 18.5 ಓವರ್‌ಗಳಲ್ಲಿ 93 ರನ್‌ಗಳಿಗೆ ಆಲೌಟ್ ಆಯಿತು. ಬಳಿಕ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ ಮಹಿಳಾ ತಂಡ ಕೇವಲ 10 ಓವರ್‌ಗಳಲ್ಲಿ ಈ ಗುರಿಯನ್ನು ಸುಲಭವಾಗಿ ಸಾಧಿಸಿತು. ಈ ಗುರಿ ಮುಟ್ಟಲು ಟೀಮ್​ ಇಂಡಿಯಾ ಕಳೆದುಕೊಂಡಿದ್ದು ಕೇವಲ ಎರಡು ವಿಕೆಟ್‌ಗಳು ಮಾತ್ರ. ಈ ಪಂದ್ಯದಲ್ಲಿ, ವೃಂದಾ ದಿನೇಶ್ ಅವರು 55 ರನ್‌ಗಳನ್ನು ಗಳಿಸಿದರೆ, ಅನುಷ್ಕಾ ಶರ್ಮಾ 24 ರನ್‌ಗಳನ್ನು ಗಳಿಸಿದರು.

ಪಾಕಿಸ್ತಾನ ಹೈಡ್ರಾಮ

ಭಾನುವಾರ ನಡೆದ ಪಂದ್ಯದಲ್ಲಿ ಹಿಟ್ ವಿಕೆಟ್ ವಿವಾದ ಮುನ್ನೆಲೆಗೆ ಬಂದಿತು. ಈ ಪಂದ್ಯದಲ್ಲಿ ಅಮೋಘ ಆಟವಾಡಿ 55 ರನ್ ಗಳಿಸಿದ ವೃಂದಾ ದಿನೇಶ್ ಅವರನ್ನು ಪಾಕಿಸ್ತಾನದ ವಿಕೆಟ್ ಕೀಪರ್ ಯುಸ್ರಾ ಅಮೀರ್ ಮೋಸದಿಂದ ಔಟ್ ಮಾಡಲು ಪ್ರಯತ್ನಿಸಿದರು. ಆದರೆ, ಅದು ಸಾಧ್ಯವಾಗಲಿಲ್ಲ. ವೃಂದಾ ದಿನೇಶ್ ಬ್ಯಾಟಿಂಗ್ ಮಾಡುತ್ತಿದ್ದಾಗ, ಚೆಂಡು ಪ್ಯಾಡಿಗೆ ಬಡಿದು ನಿಧಾನವಾಗಿ ವಿಕೆಟ್​ಗಳ ಕಡೆ ಸಾಗುತ್ತಿತ್ತು. ಈ ವೇಳೆ ಕೂಡಲೇ ಎಚ್ಚೆತ್ತುಕೊಂಡ ವೃಂದಾ ದಿನೇಶ್​, ತಮ್ಮ ಬ್ಯಾಟ್​ನಿಂದ ಚೆಂಡನ್ನು ತಡೆಯಲು ಪ್ರಯತ್ನಿಸಿದರು. ಆದರೆ, ಅದೇ ಸಮಯದಲ್ಲಿ ಅಲ್ಲಿಗೆ ಬಂದ ವಿಕೆಟ್ ಕೀಪರ್ ಯುಸ್ರಾ ಅಮೀರ್, ಚೆಂಡು ವಿಕೆಟ್​ಗಳಿಗೆ ಬಡಿದಿದೆ ಎಂದು ಕಾಣುವಂತೆ ಮಾಡಲು ಪ್ರಯತ್ನಿಸಿದರು. ಅವರು ಚೆಂಡನ್ನು ನಿಧಾನವಾಗಿ ವಿಕೆಟ್​ಗಳ ಕಡೆಗೆ ತಳ್ಳಿದರು.
ಆದರೆ, ಆ ಸಮಯದಲ್ಲಿ ಇದನ್ನು ಅರಿತುಕೊಂಡ ಫೀಲ್ಡ್ ಅಂಪೈರ್, ನಾಟ್ ಔಟ್ ಎಂದು ತೀರ್ಪು ನೀಡಿದರು. ಸದ್ಯ ಈ ಘಟನೆಗೆ ಸಂಬಂಧಿಸಿದ ವಿಡಿಯೋ ಈಗ ಹೊರಬಂದಿದ್ದು, ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಟೀಮ್​ ಇಂಡಿಯಾ ಅಭಿಮಾನಿಗಳು ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪಾಕಿಸ್ತಾನವು ಮೋಸದಿಂದ ಗೆಲ್ಲಲು ಪ್ರಯತ್ನಿಸಿದೆ ಎಂದು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಈ ವಿಷಯದಲ್ಲಿ, ಪಾಕಿಸ್ತಾನದ ಪುರುಷರು ಮತ್ತು ಮಹಿಳೆಯರು ಒಂದೇ ಎಂಬುದು ಇದೀಗ ಸ್ಪಷ್ಟವಾಗಿದೆ ಎಂದು ಟೀಕಿಸುತ್ತಿದ್ದಾರೆ, (ಏಜೆನ್ಸೀಸ್​).