ಭಾರತ ಮತ್ತು ಇಂಗ್ಲೆಂಡ್ ನಡುವಿನ ಸೆಮಿಫೈನಲ್ ಪಂದ್ಯ
- ಇದೇ ಮಾ.05ರಂದು ಭಾರತ ಮತ್ತು ಇಂಗ್ಲೆಂಡ್ ನಡುವಿನ ಸೆಮಿಫೈನಲ್ ಪಂದ್ಯ
- ಫೈನಲ್ಗೇರಲು ಎರಡು ಬಲಿಷ್ಠ ತಂಡಗಳ ನಡುವೆ ಪೈಪೋಟಿ
- ಅಕಸ್ಮಾತ್ ಪಂದ್ಯ ರದ್ದಾದರೆ ಯಾರು ಫೈನಲ್ ಅಖಾಡಕ್ಕೆ?
- ಸೆಮಿಫೈನಲ್‌ನಲ್ಲಿ ಐಸಿಸಿ ನಿಯಮ ಹೇಗೆ ಅನ್ವಯ?
IND vs ENG: ಟಿ20 ವಿಶ್ವಕಪ್‌ನ ಸೆಮಿಫೈನಲ್ ಪಂದ್ಯಗಳು ನಾಳೆಯಿಂದ (ಮಾ.04) ಆರಂಭವಾಗಲಿದೆ. ದಕ್ಷಿಣ ಆಫ್ರಿಕಾ, ಭಾರತ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಈಗಾಗಲೇ ಸೆಮಿಫೈನಲ್‌ಗೆ ಅರ್ಹತೆ ಪಡೆದಿವೆ. ಮೊದಲ ಸೆಮೀಸ್ ಪಂದ್ಯ ಕೋಲ್ಕತದ ಈಡನ್ ಗಾರ್ಡನ್ಸ್ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ನಡುವೆ ನಡೆದರೆ, ಮಾ.05ರಂದು ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ಎರಡನೇ ಪಂದ್ಯ ನಡೆಯಲಿದೆ.
ಈ ಪಂದ್ಯವು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದೇ ಸಮಯದಲ್ಲಿ, ಭಾರತ-ಇಂಗ್ಲೆಂಡ್ ಪಂದ್ಯಕ್ಕೆ ವರುಣನಿಂದ ಏನಾದರೂ ಅಡ್ಡಿಯಾದರೆ ಹೇಗೆ? ಇದರಿಂದ ಮ್ಯಾಚ್ ರದ್ದಾದರೆ ಮುಂದೇನು ಕಥೆ? ಫೈನಲ್ ಕನಸು ಯಾರ ಪಾಲಾಗುತ್ತದೆ? ಈ ಬಗ್ಗೆ ಐಸಿಸಿ ನಿಯಮಗಳು ಏನು ಹೇಳುತ್ತೆ? ಎಂಬುದರ ವಿವರ ಹೀಗಿದೆ ನೋಡಿ.
ಇಲ್ಲಿದೆ 'ರಿಸರ್ವ್ ಡೇ'
ನ್ಯೂಜಿಲೆಂಡ್- ದಕ್ಷಿಣ ಆಫ್ರಿಕಾ ಮತ್ತು ಭಾರತ-ಇಂಗ್ಲೆಂಡ್ ನಡುವಿನ ಸೆಮಿಫೈನಲ್ ಪಂದ್ಯಗಳು ಮಳೆಯಿಂದಾಗಿ ಏನಾದರೂ ರದ್ದಾದರೆ ಯಾವ ತಂಡ ಫೈನಲ್‌ಗೆ ಮುನ್ನಡೆಯುತ್ತದೆ ಎಂಬ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ಕಾಡತೊಡಗಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಟೀಮ್ ಇಂಡಿಯಾ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾದರೆ, ಐಸಿಸಿ ಮೀಸಲು ದಿನವನ್ನು ನಿಗದಿಪಡಿಸಿದೆ. ಇದನ್ನು 'ರಿಸರ್ವ್ ಡೇ' ಎಂದು ಕರೆಯಲಾಗಿದೆ.
ಕನಿಷ್ಠ ಮೂರು ಓವರ್
ಮಳೆಯಿಂದ ಕನಿಷ್ಠ ಮೂರು ಓವರ್ ಕೂಡ ಆಡಿಸಲು ಸಾಧ್ಯವಾಗದ ಹಿನ್ನೆಲೆ ಪಂದ್ಯ ರದ್ದುಗೊಂಡರೆ, ಅದರ ಮರುದಿನ ಆಡಿಸಲಾಗುವುದು. ಆದರೆ, ಎರಡನೇ ದಿನವೂ ಮಳೆಯಿಂದಾಗಿ ಪಂದ್ಯ ರದ್ದಾದರೆ ಮುಂದೇನು ಎಂಬ ಕುತೂಹಲಕಾರಿ ಪ್ರಶ್ನೆ ಸದ್ಯ ಕ್ರಿಕೆಟ್ ಅಭಿಮಾನಿಗಳನ್ನು ಕಾಡುತ್ತಿದೆ. ಇದಕ್ಕೆ ಉತ್ತರ, ಪಂದ್ಯದ ದಿನ ಅಥವಾ ಮೀಸಲು ದಿನದಂದು ಮಳೆಯಿಂದಾಗಿ ಪಂದ್ಯವನ್ನು ರದ್ದುಗೊಳಿಸಿದರೆ, ಪಂದ್ಯದ ಫಲಿತಾಂಶವನ್ನು ಹೇಗೆ ನಿರ್ಧರಿಸಬೇಕು ಎಂಬುದರ ಕುರಿತು ಐಸಿಸಿ ನಿಯಮಗಳು ಬಹಳ ಸ್ಪಷ್ಟವಾಗಿವೆ.
2ನೇ ದಿನವು ರದ್ದಾದರೆ ಈ ನಿಯಮ ಅನ್ವಯ
ನಿಯಮಗಳ ಪ್ರಕಾರ, ನಾಕೌಟ್ ಹಂತದಲ್ಲಿ ಪಂದ್ಯವನ್ನು ನಿರ್ಧರಿಸದಿದ್ದರೆ, ಎಲ್ಲಾ ಸೂಪರ್-8 ಪಂದ್ಯಗಳು ಪೂರ್ಣಗೊಂಡ ನಂತರ ಸೆಮಿಫೈನಲ್‌ನಲ್ಲಿ ಸ್ಪರ್ಧಿಸಿದ ಎರಡು ತಂಡಗಳಲ್ಲಿ ಉತ್ತಮ ಸ್ಥಾನ ಹೊಂದಿರುವ ತಂಡವು ಫೈನಲ್‌ಗೆ ಅರ್ಹತೆ ಪಡೆಯಲಿದೆ. ಅಲ್ಲಿಗೆ, ಪಂದ್ಯವೇನಾದರೂ ರದ್ದಾದರೆ, ಇಂಗ್ಲೆಂಡ್ ನೇರವಾಗಿ ಫೈನಲ್ ಪ್ರವೇಶಿಸಲಿದೆ. ಇಂಗ್ಲೆಂಡ್ ಗ್ರೂಪ್-2ರಲ್ಲಿ ಅಗ್ರ ಸ್ಥಾನದಲ್ಲಿದೆ. ಅದೇ ಭಾರತ, ಗ್ರೂಪ್-1ರಲ್ಲಿ ಎರಡನೇ ರನ್ನರ್ ಅಪ್ ಆಗಿ ಸೆಮಿಫೈನಲ್ ಪ್ರವೇಶಿಸಿದೆ. ಈ ಕಾರಣದಿಂದಾಗಿ, ಟೀಮ್ ಇಂಡಿಯಾ ಸೆಮಿಫೈನಲ್ ಪಂದ್ಯವನ್ನಾಡದೆ ಫೈನಲ್ನಿಂದ ಹೊರಗುಳಿಯಲಿದೆ.
ಫೈನಲ್‌ಗೆ ದಕ್ಷಿಣ ಆಫ್ರಿಕಾ
ಅದೇ ರೀತಿ, ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ಪಂದ್ಯ ರದ್ದಾದರೆ, ಹರಿಣರ ಪಡೆ ನೇರವಾಗಿ ಫೈನಲ್‌ಗೆ ಲಗ್ಗೆಯಿಡುತ್ತದೆ. ಕಾರಣ, ದಕ್ಷಿಣ ಆಫ್ರಿಕಾ ಗ್ರೂಪ್-1ರಲ್ಲಿ ಅಗ್ರ ಸ್ಥಾನದಲ್ಲಿದೆ. ಗ್ರೂಪ್-2ರಲ್ಲಿ ನ್ಯೂಜಿಲೆಂಡ್ ಎರಡನೇ ರನ್ನರ್ ಅಪ್ ಆಗಿ ಸೆಮೀಸ್ಗೆ ಬಂದಿದೆ. ಹವಾಮಾನ ವರದಿಗಳ ಪ್ರಕಾರ, ಕೋಲ್ಕತ ಮತ್ತು ಮುಂಬೈನಲ್ಲಿ ಮಾ.04 ಮತ್ತು 05ರಂದು ಮಳೆ ಬೀಳುವ ಸಾಧ್ಯತೆಗಳಿಲ್ಲ. ಅಕಸ್ಮಾತ್ ಮಳೆ ಬಂದರೂ, ಪಂದ್ಯ ರದ್ದಾಗುವ ಮಟ್ಟಿಗೆ ಸುರಿಯುವುದಿಲ್ಲ ಎನ್ನಲಾಗಿದೆ,(ಏಜೆನ್ಸೀಸ್).