ಸೆಮೀಸ್​ಗೆ ಇಂಗ್ಲೆಂಡ್​ ಮಾಸ್ಟರ್​ ಪ್ಲಾನ್​...ಭಾರತಕ್ಕೆ ಎದುರಾಯ್ತು ದೊಡ್ಡ ಸವಾಲು, ಎಚ್ಚರ ತಪ್ಪಿದ್ರೆ ವಿಶ್ವಕಪ್​ ಕನಸು ಭಗ್ನ! IND vs ENG  
ಕ್ರಿಕೆಟ್

ಸೆಮೀಸ್​ಗೆ ಇಂಗ್ಲೆಂಡ್​ ಮಾಸ್ಟರ್​ ಪ್ಲಾನ್​...ಭಾರತಕ್ಕೆ ಎದುರಾಯ್ತು ದೊಡ್ಡ ಸವಾಲು, ಎಚ್ಚರ ತಪ್ಪಿದ್ರೆ ವಿಶ್ವಕಪ್​ ಕನಸು ಭಗ್ನ! IND vs ENG

ಪ್ರಮುಖ ಮುಖ್ಯಾಂಶಗಳು

  • ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯು ನಿರ್ಣಾಯಕ ಘಟ್ಟವನ್ನು ತಲುಪಿದೆ
  • ಇಂದಿನಿಂದ ಪ್ರತಿಷ್ಠಿತ ಟೂರ್ನಿಯ ಸೆಮಿಫೈನಲ್​ ಹಣಾಹಣಿ ಆರಂಭವಾಗಲಿದೆ
  • ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ಮುಖಾಮುಖಿಯಾಗಲಿವೆ
  • ಎರಡನೇ ಸೆಮಿಫೈನಲ್ ಗುರುವಾರ (ಮಾರ್ಚ್ 5) ನಡೆಯಲಿದ್ದು, ಭಾರತ ಮತ್ತು ಇಂಗ್ಲೆಂಡ್ ಸ್ಪರ್ಧಿಸಲಿವೆ
IND vs ENG: ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯು ನಿರ್ಣಾಯಕ ಘಟ್ಟವನ್ನು ತಲುಪಿದೆ. ಹೌದು, ಇಂದಿನಿಂದ ಸೆಮಿಫೈನಲ್​ ಹಣಾಹಣಿ ಆರಂಭವಾಗಲಿದೆ. ಇಂದು ಸಂಜೆ ನಡೆಯಲಿರುವ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ಮುಖಾಮುಖಿಯಾಗಲಿವೆ. ಎರಡನೇ ಸೆಮಿಫೈನಲ್ ಗುರುವಾರ (ಮಾರ್ಚ್ 5) ನಡೆಯಲಿದ್ದು, ಭಾರತ ಮತ್ತು ಇಂಗ್ಲೆಂಡ್ ಸ್ಪರ್ಧಿಸಲಿವೆ. ಆದರೆ, ಈ ಪಂದ್ಯಕ್ಕೂ ಮುನ್ನವೇ ಟೀಮ್ ಇಂಡಿಯಾ ಹೊಸ ಸವಾಲೊಂದನ್ನು ಎದುರಿಸುತ್ತಿದೆ.
ಹೌದು, ಈ ಮೆಗಾ ಟೂರ್ನಮೆಂಟ್‌ನಾದ್ಯಂತ ಟೀಮ್​ ಇಂಡಿಯಾದ ಬ್ಯಾಟರ್​ಗಳು ಸ್ಪಿನ್ ಬೌಲಿಂಗ್‌ನಲ್ಲಿ ಹೆಣಗಾಡಿದ್ದಾರೆ. ಅಂಕಿಅಂಶಗಳು ಕೂಡ ಇದಕ್ಕೆ ಪೂರಕವಾಗಿವೇ. ಸ್ಪಿನ್ನರ್‌ಗಳಿಗೆ ವಿಕೆಟ್‌ಗಳನ್ನು ಕಳೆದುಕೊಳ್ಳುವುದು, ಅದರಲ್ಲೂ ವಿಶೇಷವಾಗಿ ಮಧ್ಯಮ ಓವರ್‌ಗಳಲ್ಲಿ ವಿಕೆಟ್​ ನೀಡುತ್ತಿರುವುದು ಟೀಮ್​ ಇಂಡಿಯಾಗೆ ಪ್ರಮುಖ ಸಮಸ್ಯೆಯಾಗಿ ಕಾಡುತ್ತಿದೆ.
ವಿಶ್ವಕಪ್​ ಆರಂಭವಾದಾಗ ಟೀಮ್​ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಅಮೆರಿಕ ವಿರುದ್ಧ ಆಡಿತು. ಈ ಪಂದ್ಯದಲ್ಲಿ 8 ಓವರ್​ಗಳಲ್ಲಿ 42 ರನ್​ಗಳಿಗೆ 3 ವಿಕೆಟ್ ಗಳನ್ನು ಕಳೆದುಕೊಂಡಿತು. ಇದಾದ ಬಳಿಕ, ನಮೀಬಿಯಾ ವಿರುದ್ಧ 8 ಓವರ್​ಗಳಲ್ಲಿ 61 ರನ್​ಗಳಿಗೆ 5 ವಿಕೆಟ್​ಗಳನ್ನು ಕಳೆದುಕೊಂಡಿತು. ನಂತರ, ಪಾಕಿಸ್ತಾನ ವಿರುದ್ಧ 18 ಓವರ್​ಗಳಲ್ಲಿ 144 ರನ್​ಗಳಿಗೆ 7 ವಿಕೆಟ್ ಗಳನ್ನು ಕಳೆದುಕೊಂಡಿತು. ನೆದರ್ಲೆಂಡ್​ ವಿರುದ್ಧ 8 ಓವರ್​ಗಳಲ್ಲಿ 70 ರನ್​ಗಳಿಗೆ 2 ಪ್ರಮುಖ ವಿಕೆಟ್​ಗಳನ್ನು ಕಳೆದುಕೊಂಡಿತು.
ಸೂಪರ್​ 8ರ ಹಂತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಟೀಮ್​ ಇಂಡಿಯಾ ಹೀನಾಯ ಸೋಲು ಅನುಭವಿಸಿತು. ಈ ಪಂದ್ಯದಲ್ಲಿ 4 ಓವರ್ ಗಳಲ್ಲಿ 29 ರನ್​ಗಳಿಗೆ 4 ವಿಕೆಟ್​ಗಳನ್ನು ಕಳೆದುಕೊಂಡಿತು. ಅದೇ ರೀತಿ ವೆಸ್ಟ್ ಇಂಡೀಸ್ ವಿರುದ್ಧ 6 ಓವರ್​ಗಳಲ್ಲಿ 58 ರನ್​ಗಳಿಗೆ ೧ ವಿಕೆಟ್ ಮತ್ತು ಜಿಂಬಾಬ್ವೆ ವಿರುದ್ಧ 6 ಓವರ್​ಗಳಲ್ಲಿ 55 ರನ್​ಗಳಿಗೆ ೧ ವಿಕೆಟ್ ಅನ್ನು ಕಳೆದುಕೊಂಡಿತು. ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ಹೊರತುಪಡಿಸಿ, ಉಳಿದ ಎಲ್ಲಾ ಪಂದ್ಯಗಳಲ್ಲಿ ಭಾರತೀಯ ಬ್ಯಾಟ್ಸ್​ಮನ್​ಗಳು ಸ್ಪಿನ್ ಬೌಲರ್​ಗಳನ್ನು ಎದುರಿಸಲು ತಿಣುಕಾಡಿದರು. ಈ ಅಂಕಿಅಂಶಗಳು ಭಾರತೀಯ ಬ್ಯಾಟ್ಸ್​ಮನ್​ಗಳ ಸ್ಪಿನ್ ದೌರ್ಬಲ್ಯವನ್ನು ಎತ್ತಿ ತೋರಿಸುತ್ತವೆ.

ಇಂಗ್ಲೆಂಡ್​ ರಣತಂತ್ರ

ಮುಂಬೈನಲ್ಲಿ ನಡೆಯಲಿರುವ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ತಂಡ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಎದುರಾಳಿ ತಂಡ ತನ್ನ ಸ್ಪಿನ್ ಬಲದಿಂದ ಬಲಿಷ್ಠವಾಗಿ ಕಾಣುತ್ತದೆ. ಇಂಗ್ಲೆಂಡ್ ತಂಡದಲ್ಲಿ ಆದಿಲ್ ರಶೀದ್, ವಿಲ್ ಜಾಕ್ಸ್, ರೆಹಾನ್ ಅಹ್ಮದ್, ಲಿಯಾಮ್ ಡಾಸನ್ ಮತ್ತು ಜಾಕೋಬ್ ಬೆಥೆಲ್ ಅವರಂತಹ ಐದು ಸ್ಪಿನ್ನರ್‌ಗಳಿದ್ದಾರೆ. ಹೀಗಾಗಿ, ಭಾರತ ತಂಡ ಸ್ಪಿನ್​ ಬೌಲರ್​ಗಳಿಗೆ ಎಡವುತ್ತಿರುವ ಲಾಭವನ್ನು ಇಂಗ್ಲೆಂಡ್​ ತಂಡ ಪಡೆದುಕೊಳ್ಳಲಿದೆ. ಒಂದು ವೇಳೆ ಪಿಚ್ ಸ್ಪಿನ್‌ಗೆ ಅನುಕೂಲಕರವಾಗಿದ್ದರೆ, ಭಾರತಕ್ಕೆ ಕಠಿಣ ಪರೀಕ್ಷೆಯಾಗುವ ಸಾಧ್ಯತೆಯಿದೆ.
ಸೆಮಿಫೈನಲ್‌ನಂತಹ ನಿರ್ಣಾಯಕ ಪಂದ್ಯದಲ್ಲಿ, ಮಧ್ಯಮ ಓವರ್‌ಗಳಲ್ಲಿ ವಿಕೆಟ್‌ಗಳನ್ನು ಉಳಿಸಿಕೊಳ್ಳುವುದು ಮತ್ತು ಸ್ಟ್ರೈಕ್ ಅನ್ನು ಕಾಯ್ದುಕೊಳ್ಳುವುದು ಈಗ ಸೂರ್ಯಕುಮಾರ್​ ಸೇನೆಗೆ ಬಹಳ ಮುಖ್ಯವಾಗಿದೆ. ಆದ್ದರಿಂದ, ಸೆಮಿಫೈನಲ್‌ನಲ್ಲಿ ಭಾರತಕ್ಕೆ ಸ್ಪಿನ್ ಬೌಲಿಂಗ್ ದೊಡ್ಡ ಸವಾಲಾಗಲಿದೆ. ಈ ಸ್ಪಿನ್ ಪರೀಕ್ಷೆಯನ್ನು ಟೀಮ್ ಇಂಡಿಯಾ ಹೇಗೆ ಜಯಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ, (ಏಜೆನ್ಸೀಸ್​).