ಅಂತಾರಾಷ್ಟ್ರೀಯ ಲೀಗ್ ಟಿ20 ಪಂದ್ಯಾವಳಿ 
ಕ್ರಿಕೆಟ್

ಉತ್ತಮ ಅವಕಾಶವಿದ್ರೂ ಸ್ಟಂಪ್​ ಮಾಡಲಿಲ್ಲ ನಿಕೋಲಸ್ ಪೂರನ್: ಕಾರಣ ಕೇಳಿದ್ರೆ ನಿಮ್ಮ ಹುಬ್ಬೇರುತ್ತೆ! ILT 20

ಪ್ರಮುಖ ಮುಖ್ಯಾಂಶಗಳು

  • ಅಂತಾರಾಷ್ಟ್ರೀಯ ಲೀಗ್ ಟಿ20 ಪಂದ್ಯಾವಳಿಯಲ್ಲಿ ಅಪರೂಪದ ಪ್ರಸಂಗ
  • ಅವಕಾಶ ಸಿಕ್ಕರೂ ಸ್ಟಂಪ್ ಮಾಡಲಿಲ್ಲ ವಿಕೆಟ್ ಕೀಪರ್ ನಿಕೋಲಸ್ ಪೂರನ್
  • ನಿಕೋಲಸ್ ಪೂರನ್​​ ಪ್ಲಾನ್ ಉಲ್ಟಾ ಮಾಡಿದ ಎದುರಾಳಿ ತಂಡ
ILT 20: ಸಾಮಾನ್ಯವಾಗಿ ಕ್ರಿಕೆಟ್‌ನಲ್ಲಿ ಬ್ಯಾಟ್ಸ್​ಮನ್​ ಕ್ರೀಸ್ ದಾಟಿದರೆ ಸಾಕು ತಕ್ಷಣ ವಿಕೆಟ್ ಕೀಪರ್​ ಸ್ಟಂಪ್ ಮಾಡುವುದನ್ನು ನಾವು ನೋಡುತ್ತೇವೆ. ಆದರೆ, ವೆಸ್ಟ್ ಇಂಡೀಸ್‌ ಸ್ಟಾರ್ ಆಟಗಾರ ಮತ್ತು ವಿಕೆಟ್ ಕೀಪರ್ ನಿಕೋಲಸ್ ಪೂರನ್ ಅವರು ಅಂತಹ ಅವಕಾಶ ಸಿಕ್ಕರೂ ಸ್ಟಂಪ್ ಮಾಡಲಿಲ್ಲ ಅನ್ನೋದೆ ಅಚ್ಚರಿಯ ಸಂಗತಿ. ಅಂದಹಾಗೆ, ಇಲ್ಲಿ ನಿಕೋಲಸ್​ ಅವರ ಪ್ಲಾನ್​ ಬೇರೆಯೇ ಇತ್ತು. ಆದರೆ, ಅದನ್ನು ಅರಿತುಕೊಂಡ ಎದುರಾಳಿ ತಂಡ ತಕ್ಷಣ ತಮ್ಮ ಪ್ಲಾನ್​ ಕೂಡ ಬದಲಿಸಿತು. ಈ ಅಪರೂಪದ ಪ್ರಸಂಗ ಅಂತಾರಾಷ್ಟ್ರೀಯ ಲೀಗ್ ಟಿ20 ಪಂದ್ಯಾವಳಿಯಲ್ಲಿ ನಡೆದಿದೆ.
ಮಂಗಳವಾರ (ಡಿ.09) ಎಂಐ ಎಮಿರೇಟ್ಸ್ ಮತ್ತು ಡೆಸರ್ಟ್ ವೈಪರ್ಸ್ ನಡುವೆ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ, ವೈಪರ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡಿತು. ಎಮಿರೇಟ್ಸ್​ ತಂಡದ ರಶೀದ್ ಖಾನ್ ಅವರು ಇನ್ನಿಂಗ್ಸ್‌ನ 16ನೇ ಓವರ್ ಅನ್ನು ಬೌಲ್ ಮಾಡಿದರು. ಈ ಓವರ್‌ನ ಕೊನೆಯ ಎಸೆತದಲ್ಲಿ ವೈಪರ್ಸ್ ಬ್ಯಾಟ್ಸ್‌ಮನ್ ಮ್ಯಾಕ್ಸ್ ಹೋಲ್ಡನ್ ಕ್ರೀಸ್​ನಲ್ಲಿದ್ದರು. ರಶೀದ್ ಚೆಂಡನ್ನು ಎಸೆಯುವಾಗ ಮ್ಯಾಕ್ಸ್, ಕ್ರೀಸ್‌ನ ಆಚೆಗೆ ಬಂದು ಆಡಲು ಮುಂದಾದರು. ಇದನ್ನು ಗಮನಿಸಿದ ರಶೀದ್, ಚೆಂಡನ್ನು ಸ್ವಲ್ಪ ದೂರಕ್ಕೆ ಎಸೆದರು.
ಮ್ಯಾಕ್ಸ್ ಅವರು ಚೆಂಡನ್ನು ತಪ್ಪಿಸಿಕೊಂಡಾಗ, ವಿಕೆಟ್ ಕೀಪರ್ ಪೂರನ್ ಅದನ್ನು ಹಿಡಿದರು. ಈ ವೇಳೆ ಮ್ಯಾಕ್ಸ್​ ಹೋಲ್ಡನ್ ಅವರನ್ನು ಸ್ಟಂಪ್ ಮಾಡಲು ಒಳ್ಳೆಯ ಅವಕಾಶವಿತ್ತು. ಆದರೂ, ಪೂರನ್ ಮಾತ್ರ ಆ ರೀತಿ ಮಾಡಲಿಲ್ಲ. ಬದಲಾಗಿ ಚೆಂಡನ್ನು ಬೌಲರ್‌ಗೆ ಎಸೆದರು. ಆರಂಭದಲ್ಲಿ ಮ್ಯಾಕ್ಸ್​ ಹೋಲ್ಡನ್​ ತಾನು ಸ್ಟಂಪ್ ಆಗಿದ್ದೇನೆ ಎಂದು ಭಾವಿಸಿದ್ದರು. ಯಾವಾಗ ಸ್ಟಂಪ್​ ಆಗಿಲ್ಲ ಅಂತಾ ಗೊತ್ತಾಯ್ತೋ ತಕ್ಷಣ ತಮ್ಮ ಬ್ಯಾಟ್​ ಅನ್ನು ಕ್ರೀಸ್‌ನಲ್ಲಿ ಇಟ್ಟರು. ಈ ವೇಳೆ ಅಂಪೈರ್ ಈ ಚೆಂಡನ್ನು ವೈಡ್ ಎಂದು ಘೋಷಿಸಿದರು ಮತ್ತು ಮುಂದಿನ ಎಸೆತದಲ್ಲಿ ಯಾವುದೇ ರನ್ ಗಳಿಸಲಿಲ್ಲ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಅಂದಹಾಗೆ, ಪೂರನ್ ಅವರು ಸ್ಟಂಪ್ ಔಟ್ ಮಾಡದಿರಲು ಒಂದು ಕಾರಣವೂ ಇತ್ತು. ಆ ಸಮಯದಲ್ಲಿ ಮ್ಯಾಕ್ಸ್ ಅವರು ರನ್ ಗಳಿಸಲು ಪರದಾಡುತ್ತಿದ್ದರು. ಅವರು 37 ಎಸೆತಗಳಲ್ಲಿ ಕೇವಲ 42 ರನ್ ಗಳಿಸಿದ್ದರು. ಮ್ಯಾಕ್ಸ್​ ಅವರು ಮತ್ತಷ್ಟು ಎಸೆತಗಳನ್ನು ವ್ಯರ್ಥ ಮಾಡಿದರೆ ಅದು ತಮ್ಮ ತಂಡಕ್ಕೆ ಅನುಕೂಲವಾಗುತ್ತದೆ ಎಂದು ನಿಕೋಲಸ್​ ಪೂರನ್​ ಅವರು ಭಾವಿಸಿದ್ದರು. ಇದನ್ನು ಅರಿತ ವೈಪರ್ಸ್, ಓವರ್ ಮುಗಿದ ತಕ್ಷಣ ರಿಟೈರ್ಡ್​ ಆಗಿ ಪೆವಿಲಿಯನ್‌ಗೆ ಹಿಂತಿರುಗುವಂತೆ ಮ್ಯಾಕ್ಸ್ ಹೋಲ್ಡನ್‌ಗೆ ಹೇಳಿದರು. ಮ್ಯಾಕ್ಸ್​ ಕೂಡ ಅದೇ ರೀತಿ ಮಾಡಿದರು.
ಈ ಪಂದ್ಯದ ಅತ್ಯಂತ ಕುತೂಹಲಕಾರಿ ವಿಷಯವೆಂದರೆ, ಕೊನೆಯವರೆಗೂ ರೋಚಕವಾಗಿದ್ದ ಈ ಪಂದ್ಯದಲ್ಲಿ ವೈಪರ್ಸ್ ಒಂದು ರನ್‌ನಿಂದ ಗೆದ್ದಿತು. ಮೊದಲು ಬ್ಯಾಟಿಂಗ್ ಮಾಡಿದ ವೈಪರ್ಸ್, ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 159 ರನ್ ಗಳಿಸಿತು. ವೈಪರ್ಸ್ ಪರ ಮ್ಯಾಕ್ಸ್ ಹೋಲ್ಡನ್ (42) ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಫಖರ್ ಜಮಾನ್ (35) ಅತ್ಯುತ್ತಮ ಪ್ರದರ್ಶನ ನೀಡಿದರು. 160 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಎಮಿರೇಟ್ಸ್​ ತಂಡವು ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 158 ರನ್‌ಗಳಿಗೆ ಸೀಮಿತವಾಯಿತು. ನಿಕೋಲಸ್ ಪೂರನ್ (31) ಮತ್ತು ಟಾಮ್ ಬ್ಯಾಂಟನ್ (34) ಎಮಿರೇಟ್ಸ್​ ಪರ ಅತ್ಯುತ್ತಮ ಪ್ರದರ್ಶನ ನೀಡಿದರು, (ಏಜೆನ್ಸೀಸ್​).