ಬ್ಯಾಟ್​ನಲ್ಲಿ ಎನ್​ವಿಡಿಯಾ ಎಐ ಚಿಪ್​! 'ವಂಡರ್​ ಕಿಡ್'​ ಬಗ್ಗೆ ವಿದೇಶಿ ಕ್ರಿಕೆಟ್​ ಬೋರ್ಡ್​ ಸ್ಫೋಟಕ ಹೇಳಿಕೆ | Vaibhav Sooryavanshi  
ಕ್ರಿಕೆಟ್

ಬ್ಯಾಟ್​ನಲ್ಲಿ ಎನ್​ವಿಡಿಯಾ ಎಐ ಚಿಪ್​! 'ವಂಡರ್​ ಕಿಡ್'​ ಬಗ್ಗೆ ವಿದೇಶಿ ಕ್ರಿಕೆಟ್​ ಬೋರ್ಡ್​ ಸ್ಫೋಟಕ ಹೇಳಿಕೆ | Vaibhav Sooryavanshi

Vaibhav Sooryavanshi: ಇತ್ತೀಚೆಗೆ ನಡೆದ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯ ಪಂದ್ಯದಲ್ಲಿ ಟೀಮ್ ಇಂಡಿಯಾದ ಯುವ ಬ್ಯಾಟಿಂಗ್ ಸೆನ್ಸೇಷನ್​ ವೈಭವ್ ಸೂರ್ಯವಂಶಿ ಆಡಿದ ಸ್ಫೋಟಕ ಇನಿಂಗ್ಸ್‌, ನಿರ್ಮಿಸಿದ ಐತಿಹಾಸಿಕ ವಿಶ್ವ ದಾಖಲೆಗೆ ಇಡೀ ಕ್ರಿಕೆಟ್​ ಜಗತ್ತೇ ತಲೆಬಾಗಿದೆ. ಕ್ರಿಕೆಟ್​ ದಿಗ್ಗಜರು, ಮಾಜಿ ಆಟಗಾರರು ಸೇರಿದಂತೆ ಇತರೆ ಕ್ಷೇತ್ರಗಳ ಗಣ್ಯ ವ್ಯಕ್ತಿಗಳೇ ವೈಭವ್​ ಸಾಧನೆಯನ್ನು ಕೊಂಡಾಡುತ್ತಿರುವಾಗ, ಐಸ್​ಲ್ಯಾಂಡ್​ ಕ್ರಿಕೆಟ್ ಮಾತ್ರ ವಿಭಿನ್ನ ರೀತಿಯಲ್ಲಿ ಹೇಳಿಕೆ ನೀಡಿದೆ. ​

ಕೇವಲ 53 ಎಸೆತಗಳಲ್ಲಿ 28 ಸಿಕ್ಸರ್‌ಗಳ ಸಿಡಿಸಿ, ಬರೋಬ್ಬರಿ 204 ರನ್ ಬಾರಿಸಿ ವಿಶ್ವ ಕ್ರಿಕೆಟ್ ಅನ್ನೇ ಬೆರಗುಗೊಳಿಸಿದ ಈ 15 ವರ್ಷದ ಬಾಲಕನ ಬ್ಯಾಟಿಂಗ್ ಕುರಿತು ಐಸ್‌ಲ್ಯಾಂಡ್ ಕ್ರಿಕೆಟ್ ಮಾಡಿರುವ ಹಾಸ್ಯಸ್ಪದ ಪೋಸ್ಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ತಮ್ಮ ಪೋಸ್ಟ್‌ನಲ್ಲಿ ಭಾರಿ ವಿವಾದಕ್ಕೆ ಗುರಿಯಾಗಿರುವ ಎನ್‌ವಿಡಿಯಾ (Nvidia) ಮಾಜಿ ಸಿಇಒ ಜೆನ್ಸೆನ್ ಹುವಾಂಗ್ ಅವರ ಹೆಸರನ್ನು ಉಲ್ಲೇಖಿಸಿ, ವೈಭವ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ.

ಮಂಗಳವಾರ ಜೆನ್ಸೆನ್ ಹುವಾಂಗ್ ವಾಪಾಸ್​ ಎನ್‌ವಿಡಿಯಾ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ಮರುದಿನವೇ, ಅಂದರೆ ಬುಧವಾರ, ವೈಭವ್ ಸೂರ್ಯವಂಶಿ ಸ್ಫೋಟಕ ಇನ್ನಿಂಗ್ಸ್ ಆಡಿದರು. ಈ ಎರಡು ಘಟನೆಯನ್ನು ಸೂಕ್ಷ್ಮವಾಗಿ ಗಮನಿಸಿದ್ದ ಐಸ್​ಲ್ಯಾಂಡ್​ ಕ್ರಿಕೆಟ್​, ವೈಭವ್​ ಬ್ಯಾಟ್‌ನಲ್ಲಿರುವ ಎನ್​ವಿಡಿಯಾ ಸಂಸ್ಥೆಯ ಎಐ ಚಿಪ್‌ಗಳು ಕೆಲಸ ಮಾಡಲು ಪ್ರಾರಂಭಿಸಿವೆ. ಇದೇನೂ ಕಾಕತಾಳೀಯವಲ್ಲ" ಎಂದು ತನ್ನ ಅಧಿಕೃತ 'ಎಕ್ಸ್' (ಹಿಂದಿನ ಟ್ವಿಟರ್​) ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿದೆ.

ಮತ್ತೊಂದೆಡೆ, ಸಾವರ್ಕಾಲಿಕ ದಾಖಲೆಗಳನ್ನು ಧೂಳೀಪಟ ಮಾಡುತ್ತಿರುವ ವೈಭವ್​ ಕುರಿತು ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಗುಣಗಾನ ಮಾಡಿದ್ದಾರೆ. ಸುದ್ದಿ ಸಂಸ್ಥೆ 'ಎಎನ್‌ಐ' (ANI) ಜತೆ ಮಾತನಾಡಿದ ಗಂಗೂಲಿ, ವೈಭವ್ ಸೂರ್ಯವಂಶಿ ಭಾರತೀಯ ಕ್ರಿಕೆಟ್‌ನ ಭವಿಷ್ಯ. ಆತ ಅತ್ಯುತ್ತಮ ಆಟಗಾರನಾಗಿದ್ದು, ಚಿಕ್ಕ ವಯಸ್ಸಿನಲ್ಲೇ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಭಾರತಕ್ಕಾಗಿ ತಮಗೆ ಸಿಕ್ಕ ಪ್ರತಿಯೊಂದು ಅವಕಾಶವನ್ನೂ ವೈಭವ್ ಸಮರ್ಥವಾಗಿ ಬಳಸಿಕೊಂಡಿದ್ದಾರೆ ಎಂದು ಹೊಗಳಿದರು.

ವೈಭವ್​ ಭವಿಷ್ಯದಲ್ಲಿ ಯಶಸ್ವಿ ಆಟಗಾರನಾಗಿ ಬೆಳೆಯುವ ಎಲ್ಲ ಲಕ್ಷಣಗಳನ್ನು ಹೊಂದಿದ್ದಾರೆ. ಆದರೆ, ಸದ್ಯದ ಮಟ್ಟಿಗೆ ಅವರನ್ನು ಇತರ ದಿಗ್ಗಜ ಕ್ರಿಕೆಟಿಗರೊಂದಿಗೆ ಹೋಲಿಸದಂತೆ ಅಭಿಮಾನಿಗಳಲ್ಲಿ ಮತ್ತು ವಿಶ್ಲೇಷಕರಿಗೆ ಗಂಗೂಲಿ ವಿಶೇಷವಾಗಿ ಮನವಿ ಮಾಡಿಕೊಂಡಿದ್ದಾರೆ. ಸುಖಾಸುಮ್ಮನೆ ಹೋಲಿಕೆ ಮಾಡಿ ಸೂರ್ಯವಂಶಿಯನ್ನು ಮೇಲಕ್ಕೆ ಕೂರಿಸಿ, ಇಲ್ಲದ ಒತ್ತಡವನ್ನು ಹೇರಬೇಡಿ. ಆತ ತನ್ನದೇ ಆದ ರೀತಿಯಲ್ಲಿ ಆಟವನ್ನು ಆನಂದಿಸಲು ಮತ್ತು ಬೆಳೆಯಲು ಅವಕಾಶ ನೀಡಬೇಕು ಎಂದು ಹೇಳಿದ್ದಾರೆ,(ಏಜೆನ್ಸೀಸ್).