ಅಹಮದಾಬಾದ್ ಐಸಿಸಿ ಮೀಟಿಂಗ್‌ನಲ್ಲಿ ಕ್ರಾಂತಿಕಾರಕ ನಿರ್ಧಾರ
- ಅಹಮದಾಬಾದ್ ಐಸಿಸಿ ಮೀಟಿಂಗ್‌ನಲ್ಲಿ ಕ್ರಾಂತಿಕಾರಕ ನಿರ್ಧಾರ
- ಕ್ರಿಕೆಟ್ ಕೆನಡಾ ಮಂಡಳಿಯನ್ನು ಅಮಾನತ್ ಮಾಡಿದ ಐಸಿಸಿ
- ಟೆಸ್ಟ್ ಕ್ರಿಕೆಟ್‌ನಲ್ಲಿ 'ಬಾಲ್-ಸ್ವಿಚ್' ಪ್ರಯೋಗ!
- ಟಿ20 ವಿಶ್ವಕಪ್‌ಗೆ ಜಾಗತಿಕ ಅರ್ಹತಾ ಪಂದ್ಯಗಳ ರೀ-ಎಂಟ್ರಿ!
ಐಸಿಸಿ: ವಿಶ್ವ ಕ್ರಿಕೆಟ್‌ನಲ್ಲಿ ಭಾನುವಾರ (ಮೇ.31) ಒಂದೇ ದಿನ ಭಾರಿ ಸಂಚಲನ ಸೃಷ್ಟಿಯಾಗಿದೆ. ಅಹಮದಾಬಾದ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ICC) ಮೀಟಿಂಗ್‌ನಲ್ಲಿ ಮೂರು ಅತ್ಯಂತ ಮಹತ್ವದ ಮತ್ತು ಕ್ರಾಂತಿಕಾರಿ ತೀರ್ಮಾನ (ICC New Rules) ಗಳನ್ನು ತೆಗೆದುಕೊಳ್ಳಲಾಗಿದೆ.
ಇದರಲ್ಲಿ ಮೊದಲನೆಯದಾಗಿ, ತನ್ನ ನಿಯಮಗಳನ್ನು ಗಂಭೀರವಾಗಿ ಉಲ್ಲಂಘಿಸಿದ ಕಾರಣಕ್ಕೆ ಕ್ರಿಕೆಟ್ ಕೆನಡಾ ಮಂಡಳಿಯನ್ನು ಐಸಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ ಮಾಡಿದೆ. ಇದರ ಬೆನ್ನಲ್ಲೇ ಟೆಸ್ಟ್ ಕ್ರಿಕೆಟ್‌ನ ಭವಿಷ್ಯವನ್ನೇ ಬದಲಿಸಬಲ್ಲ ಬಾಲ್-ಸ್ವಿಚ್ ನಿಯಮಕ್ಕೂ ಗ್ರೀನ್ ಸಿಗ್ನಲ್ ನೀಡಲಾಗಿದೆ.
ಅಷ್ಟಕ್ಕೂ ಐಸಿಸಿ ಮೀಟಿಂಗ್‌ನಲ್ಲಿ ಆಗಿದ್ದೇನು?
1. ಕೆನಡಾ ಕ್ರಿಕೆಟ್ ಮಂಡಳಿಗೆ ಐಸಿಸಿ ಶಾಕ್!
ಕೆನಡಾ ಕ್ರಿಕೆಟ್ ಮಂಡಳಿಯಲ್ಲಿ ಕಳೆದ ಕೆಲವು ಸಮಯದಿಂದ ಆಡಳಿತಾತ್ಮಕ ಬಿಕ್ಕಟ್ಟು ಮತ್ತು ಆಂತರಿಕ ರಾಜಕೀಯ ಜೋರಾಗಿತ್ತು. ಐಸಿಸಿ ನಿಯಮಾವಳಿಗಳನ್ನು ಗಾಳಿಗೆ ತೂರಿ ನಡೆದಿದ್ದಕ್ಕೆ ಗರಂ ಆದ ಕ್ರಿಕೆಟ್ ಸಂಸ್ಥೆ, ಕೆನಡಾವನ್ನು ಅಮಾನತುಗೊಳಿಸಿದೆ.
ಆದರೆ, ಬೋರ್ಡ್ ರೂಮ್ ರಾಜಕೀಯದ ಎಫೆಕ್ಟ್ ಮೈದಾನದಲ್ಲಿ ಆಡುವ ಕ್ರಿಕೆಟರ್ಸ್ ಮೇಲೆ ಆಗಬಾರದು ಎಂಬ ಕಾರಣಕ್ಕೆ, ಕೆನಡಾ ರಾಷ್ಟ್ರೀಯ ತಂಡಗಳು ಆಫೀಶಿಯಲ್ ಇಂಟರ್ನ್ಯಾಷನಲ್ ಟೂರ್ನಮೆಂಟ್‌ಗಳಲ್ಲಿ ಆಡುವುದನ್ನು ಮುಂದುವರಿಸಬಹುದು ಎಂದು ಐಸಿಸಿ ಸ್ಪಷ್ಟಪಡಿಸಿದೆ.
ಆಟಗಾರರ ಫಂಡಿಂಗ್ ನಿಲ್ಲುವುದಿಲ್ಲ, ಆದರೆ ಅದು ನೇರವಾಗಿ ಐಸಿಸಿ ಮೇಲ್ವಿಚಾರಣೆಯ ಪರ್ಯಾಯ ವ್ಯವಸ್ಥೆಯ ಮೂಲಕ ತಲುಪಲಿದೆ. ಕ್ರಿಕೆಟ್ ಕೆನಡಾ ತನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಕಠಿಣ ಷರತ್ತುಗಳನ್ನು ವಿಧಿಸಲಾಗಿದ್ದು, ಐಸಿಸಿಯ ವಿಶೇಷ ಸಮಿತಿಯೊಂದು ಇದರ ಉಸ್ತುವಾರಿ ನೋಡಿಕೊಳ್ಳಲಿದೆ ಎಂದು ತಿಳಿಸಿದೆ.
2. ಟೆಸ್ಟ್ ಕ್ರಿಕೆಟ್‌ನಲ್ಲಿ 'ಬಾಲ್-ಸ್ವಿಚ್' ಪ್ರಯೋಗ!
ಟೆಸ್ಟ್ ಪಂದ್ಯದ ಮಧ್ಯೆ ಕಳಪೆ ಬೆಳಕು (Bad Light) ಕಾಡಿದಾಗಲೆಲ್ಲಾ ಆಟವನ್ನು ನಿಲ್ಲಿಸುವುದು ಅಥವಾ ಬೇಗ ಮುಕ್ತಾಯಗೊಳಿಸುವುದು ಸಾಮಾನ್ಯ. ಇದರಿಂದ ಓವರ್‌ಗಳು ನಷ್ಟವಾಗಿ ಪಂದ್ಯ ಬೋರ್ ಆಗುತ್ತಿತ್ತು. ಇದಕ್ಕೆ ಬ್ರೇಕ್ ಹಾಕಲು ಐಸಿಸಿ ಮಾಸ್ಟರ್ ಪ್ಲಾನ್ ಮಾಡಿದೆ.
ಇನ್ಮುಂದೆ ಸಾಂಪ್ರದಾಯಿಕ ಕೆಂಪು ಚೆಂಡಿನ ಟೆಸ್ಟ್ ಪಂದ್ಯಗಳಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಚೆಂಡು ಸರಿಯಾಗಿ ಕಾಣಿಸದಿದ್ದರೆ, ಅಂಪೈರ್‌ಗಳು ಹೆಚ್ಚು ಗೋಚರಿಸುವ ಗುಲಾಬಿ ಬಣ್ಣದ ಚೆಂಡನ್ನು ಬಳಸಲು ಅನುಮತಿ ನೀಡಲಾಗಿದೆ.
ಆದರೆ ಇದಕ್ಕೆ ಆಡುತ್ತಿರುವ ಎರಡೂ ತಂಡಗಳ ನಾಯಕರ ಒಪ್ಪಿಗೆ ಕಡ್ಡಾಯವಾಗಿದ್ದು, ವ್ಯರ್ತವಾಗುತ್ತಿದ್ದ ಆಟದ ಸಮಯವನ್ನು ಉಳಿಸಲು ಈ ಹೊಸ ರೂಲ್ಸ್ ತರಲಾಗುತ್ತಿದ್ದು, ಇದಕ್ಕಾಗಿ ಮೆರಿಲ್ಬೋನ್ ಕ್ರಿಕೆಟ್ ಕ್ಲಬ್ (MCC) ಜೊತೆ ಸೇರಿ ಸ್ಟೇಡಿಯಂ ಲೈಟಿಂಗ್ ತಂತ್ರಜ್ಞಾನದ ರಿಸರ್ಚ್‌ಗೂ ಐಸಿಸಿ ಹಣ ಹೂಡಿಕೆ ಮಾಡುತ್ತಿದೆ.
3. ಟಿ20 ವಿಶ್ವಕಪ್‌ಗೆ ಜಾಗತಿಕ ಅರ್ಹತಾ ಪಂದ್ಯಗಳ ರೀ-ಎಂಟ್ರಿ!
ಇನ್ನು ಸಣ್ಣ ಸಣ್ಣ ಕ್ರಿಕೆಟ್ ರಾಷ್ಟ್ರಗಳಿಗೆ ಐಸಿಸಿ ಮತ್ತೊಂದು ಬಂಪರ್ ಆಫರ್ ನೀಡಿದೆ. ಭವಿಷ್ಯದ ಐಸಿಸಿ ಪುರುಷರ ಟಿ20 ವಿಶ್ವಕಪ್ ಟೂರ್ನಿಗಳಿಗಾಗಿ ಪ್ರತ್ಯೇಕ ಗ್ಲೋಬಲ್ ಕ್ವಾಲಿಫೈಯರ್ ನಡೆಸುವ ಶಿಫಾರಸ್ಸಿಗೆ ಮಂಡಳಿ ಒಪ್ಪಿಗೆ ಸೂಚಿಸಿದೆ.
ಒಟ್ಟು 16 ತಂಡಗಳು ಭಾಗವಹಿಸುವ ಈ ಟೂರ್ನಿಯ ಹೊಸ ವಿನ್ಯಾಸವನ್ನು ಐಸಿಸಿ ಮ್ಯಾನೇಜ್‌ಮೆಂಟ್ ಸದ್ಯದಲ್ಲೇ ಫೈನಲ್ ಮಾಡಲಿದೆ. ಸಣ್ಣ ದೇಶಗಳ ಪಂದ್ಯಗಳಿಗೂ ಈಗ ಜಾಗತಿಕ ಮಟ್ಟದಲ್ಲಿ ಭಾರೀ ವೀಕ್ಷಕರು ಮತ್ತು ಕಮರ್ಷಿಯಲ್ ಕ್ರೇಜ್ ಸಿಗುತ್ತಿರುವುದನ್ನು ಗಮನಿಸಿ ಐಸಿಸಿ ಈ ನಿರ್ಧಾರ ತೆಗೆದುಕೊಂಡಿದೆ, (ಏಜನ್ಸೀಸ್).