ಈಗಲಾದ್ರೂ ಎಚ್ಚೆತ್ತುಕೊಳ್ಳಿ... ಭಾವಿ ಪತಿಯ ಬಗ್ಗೆ ಆಕೃತಿ ಭಾವುಕ ಪೋಸ್ಟ್​, ವೈರಲ್​ ಆಯ್ತು ಯುವಿ ಕಾಮೆಂಟ್​...! 
ಕ್ರಿಕೆಟ್

ಈಗಲಾದ್ರೂ ಎಚ್ಚೆತ್ತುಕೊಳ್ಳಿ... ಭಾವಿ ಪತಿಯ ಬಗ್ಗೆ ಆಕೃತಿ ಭಾವುಕ ಪೋಸ್ಟ್​, ವೈರಲ್​ ಆಯ್ತು ಯುವಿ ಕಾಮೆಂಟ್​...! Akriti Agarwal

ನವದೆಹಲಿ: ಟೀಮ್​ ಇಂಡಿಯಾದ ಯುವ ಕ್ರಿಕೆಟಿಗ ಪೃಥ್ವಿ ಶಾ ( Prithvi Shaw ) ಜನ್ಮದಿನದ ಅಂಗವಾಗಿ ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್​ ಆಕೃತಿ ಅಗರ್ವಾಲ್ ( Akriti Agarwal ) ಹಂಚಿಕೊಂಡ ಭಾವುಕ ಸಂದೇಶ ಹಾಗೂ ಅದಕ್ಕೆ ಕ್ರಿಕೆಟ್ ದಿಗ್ಗಜ ಯುವರಾಜ್ ಸಿಂಗ್ ನೀಡಿದ ತಮಾಷೆಯ ಕಮೆಂಟ್ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.

ಪೃಥ್ವಿ ಶಾ ಅವರ 27ನೇ ಜನ್ಮದಿನದ ಸಂದರ್ಭದಲ್ಲಿ ಅವರ ಭಾವಿ ಪತ್ನಿ ಆಕೃತಿ ಅಗರ್ವಾಲ್ ವಿಶೇಷವಾಗಿ ಶುಭಕೋರಿದ್ದು, ಕಷ್ಟ-ಸುಖ ಏನೇ ಬರಲಿ ನಾನು ಯಾವಾಗಲೂ ನಿನಗೆ ಬೆಂಬಲವಾಗಿ ಇರುತ್ತೇನೆ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಈ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ಮಾಜಿ ಆಟಗಾರ ಯುವರಾಜ್ ಸಿಂಗ್ ತಮ್ಮದೇ ಶೈಲಿಯಲ್ಲಿ ವ್ಯಂಗ್ಯ ಮತ್ತು ಹಾಸ್ಯಭರಿತ ಕಾಮೆಂಟ್ ಮಾಡುವ ಮೂಲಕ ಅಭಿಮಾನಿಗಳನ್ನು ನಗೆಗಡಲಲ್ಲಿ ತೇಲಿಸಿದ್ದಾರೆ.

ಆಕೃತಿ ಅಗರ್ವಾಲ್ ತಮ್ಮ ಪೋಸ್ಟ್‌ನಲ್ಲಿ ಪೃಥ್ವಿ ಶಾ ಅವರಿಗೆ ನವವರ್ಷದ ಆಯುಷ್ಯ, ಆರೋಗ್ಯ, ಸುಖ ಮತ್ತು ಯಶಸ್ಸನ್ನು ಕೋರಿದ್ದಾರೆ. ಅಲ್ಲದೆ, ಶಾ ಅವರ ಕಠಿಣ ಪರಿಶ್ರಮ ಮತ್ತು ಕ್ರಿಕೆಟ್ ಮೇಲಿನ ಅಪಾರ ಪ್ರೀತಿಯನ್ನು ಹತ್ತಿರದಿಂದ ಕಂಡಿರುವುದಾಗಿ ಹೇಳಿರುವ ಆಕೃತಿ, ಜೀವನದಲ್ಲಿ ಎಂದಿಗೂ ನಂಬಿಕೆ ಕಳೆದುಕೊಳ್ಳಬೇಡಿ ಎಂದು ಧೈರ್ಯ ತುಂಬಿದ್ದಾರೆ. ಇನ್ನೂ ಸಾಧಿಸಬೇಕಾದ ಮೈಲಿಗಲ್ಲುಗಳು ಮತ್ತು ಜಯಿಸಬೇಕಾದ ಪಂದ್ಯಗಳು ಬಹಳಷ್ಟಿವೆ, ನಿನ್ನ ಪ್ರತಿಯೊಂದು ಸಾಧನೆ ಹಾಗೂ ಗೆಲುವಿನ ಕ್ಷಣದಲ್ಲೂ ನಾನು ನಿನ್ನ ಜತೆಗಿರುತ್ತೇನೆ ಎಂಬ ಆಕೃತಿಯ ಮಾತುಗಳು ಅಭಿಮಾನಿಗಳ ಮನ ಗೆದ್ದಿವೆ.

ವಿಶೇಷವೆಂದರೆ, ಈ ಬಾರಿ ಪೃಥ್ವಿ ಶಾ ಅವರ ಜನ್ಮದಿನದ ಸಂಭ್ರಮವು ದೀಪಾವಳಿ ಹಬ್ಬದ ವಾತಾವರಣದ ನಡುವೆಯೇ ಬಂದಿರುವುದರಿಂದ, ಆಕೃತಿ ತಮ್ಮ ಪೋಸ್ಟ್‌ನಲ್ಲಿ ದೀಪಾವಳಿಯ ಶುಭಾಶಯಗಳನ್ನೂ ಸೇರಿಸಿದ್ದಾರೆ. ಈ ಬೆಳಕಿನ ಹಬ್ಬವು ನಿನ್ನ ಜೀವನದಲ್ಲಿ ಹೊಸ ಭರವಸೆ, ಪಾಸಿಟಿವಿಟಿ​, ಸಮೃದ್ಧಿ ಮತ್ತು ಹೊಸ ಆರಂಭಗಳನ್ನು ತರಲಿ ಎಂದು ಹಾರೈಸಿದ್ದಾರೆ. ಮೈದಾನದ ಒಳಗೂ ಮತ್ತು ಹೊರಗೂ ನಿನ್ನ ಪಯಣ ಇನ್ನಷ್ಟು ಪ್ರಕಾಶಮಾನವಾಗಿ ಬೆಳಗಲಿ ಎಂದು ಹಾರೈಸಿ, "ಹ್ಯಾಪಿ ಬರ್ತ್‌ಡೇ ಅಂಡ್ ಹ್ಯಾಪಿ ದೀಪಾವಳಿ ಮೈ ಡಿಯರೆಸ್ಟ್" ಎಂದು ಪ್ರೀತಿಯಿಂದ ಬರೆದುಕೊಂಡಿದ್ದಾರೆ.

ಈ ಭಾವುಕ ಪೋಸ್ಟ್‌ನ ಕೆಳಗೆ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಮಾಡಿದ ಕಮೆಂಟ್ ಎಲ್ಲರ ಗಮನ ಸೆಳೆದಿದೆ. ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಪೃಥ್ವಿ ಶಾ ಅವರಿಗೆ ಮಾರ್ಗದರ್ಶನ ನೀಡಿದ್ದ ಯುವರಾಜ್, "ಈಗಲಾದರೂ ಇಬ್ಬರೂ ಎಚ್ಚರಗೊಳ್ಳಿ.." (Now both of you wake up..) ಎಂದು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ. ಇಬ್ಬರ ನಡುವೆ ಇತ್ತೀಚೆಗೆ ನಡೆದ ಘಟನಾವಳಿಗಳನ್ನು ಪರೋಕ್ಷವಾಗಿ ನೆನಪಿಸಿರುವ ಯುವರಾಜ್, ಈ ಸಣ್ಣ ವ್ಯಂಗ್ಯದ ಕಮೆಂಟ್ ನೆಟ್ಟಿಗರಲ್ಲಿ ಭಾರಿ ನಗು ಮೂಡಿಸಿದ್ದು, ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅಂದಹಾಗೆ, ಪೃಥ್ವಿ ಶಾ ಮತ್ತು ಆಕೃತಿ ಅಗರ್ವಾಲ್ ಅವರ ಸಂಬಂಧವು ಇತ್ತೀಚಿನ ದಿನಗಳಲ್ಲಿ ಹಲವು ತಿರುವುಗಳನ್ನು ಕಂಡಿದೆ. ಕಳೆದ ಮಾರ್ಚ್ ತಿಂಗಳಲ್ಲಿ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರೂ, ಸೆಪ್ಟೆಂಬರ್ 17ರಂದು ಪರಸ್ಪರ ಒಪ್ಪಂದದ ಮೂಲಕ ಬೇರೆಯಾಗುತ್ತಿರುವುದಾಗಿ ಆಕೃತಿ ಪ್ರಕಟಿಸಿದ್ದರು. ಭವಿಷ್ಯದ ಗುರಿಗಳು ಮತ್ತು ಪರಿಸ್ಥಿತಿಗಳು ಹೊಂದಾಣಿಕೆಯಾಗದ ಕಾರಣ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದ್ದ ಅವರು, ಖಾಸಗಿತನಕ್ಕೆ ಗೌರವ ನೀಡುವಂತೆ ಮನವಿ ಮಾಡಿದ್ದರು. ಆದರೆ, ಬೇರೆಯಾದ ಕೇವಲ ಒಂದು ತಿಂಗಳ ಅವಧಿಯಲ್ಲೇ ಇಬ್ಬರೂ ಮತ್ತೆ ಒಂದಾಗುವ ಮೂಲಕ ತಮ್ಮ ನಡುವಿನ ಮನಸ್ತಾಪಗಳನ್ನು ಬಗೆಹರಿಸಿಕೊಂಡು ಮತ್ತೆ ಜತೆಯಾಗಿದ್ದಾರೆ, (ಏಜೆನ್ಸೀಸ್​).