ಇಡೀ ತಂಡವೇ ಶಾಮೀಲಾದರೂ, ನನ್ನನ್ನು ಮಾತ್ರ ಹರಕೆಯ ಕುರಿ ಮಾಡಿದರು: ಬ್ಯಾನ್‌ಕ್ರಾಫ್ಟ್ 
ಕ್ರಿಕೆಟ್

ಚೆಂಡು ವಿರೂಪದಲ್ಲಿ ಇಡೀ ತಂಡವೇ ಶಾಮೀಲಾದರೂ, ನನ್ನನ್ನು ಮಾತ್ರ ಹರಕೆಯ ಕುರಿ ಮಾಡಿದರು: ಆಸೀಸ್ ಕ್ರಿಕೆಟಿಗರ ಮುಖವಾಡ ಕಳಚಿದ ಬ್ಯಾನ್‌ಕ್ರಾಫ್ಟ್! | Sandpapergate Scandal

ಪರ್ತ್: ವಿಶ್ವ ಕ್ರಿಕೆಟ್‌ಗೆ ಕಪ್ಪುಚುಕ್ಕೆಯಾಗಿದ್ದ 2018ರ ಆಸ್ಟ್ರೇಲಿಯಾದ ಸ್ಯಾಂಡ್‌ಪೇಪರ್ ಗೇಟ್ (Sandpapergate Scandal) ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಆರಂಭಿಕ ಆಟಗಾರ ಕ್ಯಾಮರೂನ್ ಬ್ಯಾನ್‌ಕ್ರಾಫ್ಟ್ 8 ವರ್ಷಗಳ ಬಳಿಕ ಸ್ಫೋಟಕ ಸತ್ಯಗಳನ್ನು ಬಯಲಿಗೆಳೆದಿದ್ದಾರೆ. ಚೆಂಡಿಗೆ ಸ್ಯಾಂಡ್‌ಪೇಪರ್ (ಮರಳು ಕಾಗದ) ಬಳಸುತ್ತಿರುವುದು ಇಡೀ ತಂಡಕ್ಕೆ ಮತ್ತು ಕೋಚಿಂಗ್ ಸಿಬ್ಬಂದಿಗೆ ತಿಳಿದಿತ್ತು, ಆದರೆ ಕ್ಯಾಮೆರಾದಲ್ಲಿ ಸಿಕ್ಕಿಬಿದ್ದ ನಂತರ ನನ್ನನ್ನು ಬಲಿಪಶು ಮಾಡಲಾಯಿತು ಎಂದು ಬ್ಯಾನ್‌ಕ್ರಾಫ್ಟ್ ಗಂಭೀರ ಆರೋಪ ಮಾಡಿದ್ದಾರೆ.

ದಿ ವೆಸ್ಟ್ ಆಸ್ಟ್ರೇಲಿಯನ್ ಪತ್ರಿಕೆಗೆ ಬರೆದ ಸುದೀರ್ಘ ಅಂಕಣದಲ್ಲಿ ಬ್ಯಾನ್‌ಕ್ರಾಫ್ಟ್ ಈ ಸ್ಫೋಟಕ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಆರಂಭಿಕ ತನಿಖೆಯ ವೇಳೆ ತಾನು ಸಂಪೂರ್ಣ ಸತ್ಯವನ್ನು ಹೇಳಿರಲಿಲ್ಲ ಎಂದು ಒಪ್ಪಿಕೊಂಡಿರುವ ಅವರು, ಇತ್ತೀಚೆಗೆ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ನೀಡಿದ ಹೇಳಿಕೆಗಳು ತಮಗೆ ತೀವ್ರ ನೋವುಂಟು ಮಾಡಿದ್ದು, ಸತ್ಯವನ್ನು ಬಹಿರಂಗಪಡಿಸಲು ಪ್ರೇರೇಪಿಸಿತು ಎಂದಿದ್ದಾರೆ.

ಕಳೆದ ವಾರ ಕಮಿನ್ಸ್ ನಡೆಸಿದ ಪತ್ರಿಕಾಗೋಷ್ಠಿಯ ನಂತರ ನನಗೆ ಕೋಪ, ದ್ರೋಹ ಮತ್ತು ಒಂಟಿತನ ಕಾಡಿತು. ನನ್ನ ಕ್ರಿಕೆಟ್ ವೃತ್ತಿಜೀವನವೇ ನಾಶವಾಗಿದೆ. 2019ರ ನಂತರ ನನಗೆ ದೇಶಕ್ಕಾಗಿ ಆಡಲು ಸಾಧ್ಯವಾಗಲಿಲ್ಲ. ಅಪೂರ್ಣ ಸತ್ಯವನ್ನು ರಕ್ಷಿಸುವುದಕ್ಕಿಂತ ಸತ್ಯ ಹೇಳುವುದೇ ಲೇಸು ಎಂಬ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಬ್ಯಾನ್‌ಕ್ರಾಫ್ಟ್ ಬರೆದುಕೊಂಡಿದ್ದಾರೆ. ಉಸ್ಮಾನ್ ಖವಾಜಾ ಅವರ ಪುಸ್ತಕ ಮತ್ತು ಮಾಜಿ ನಾಯಕ ಮೈಕೆಲ್ ಕ್ಲಾರ್ಕ್ ಅವರ ಮನವಿಯೂ ತಾವು ಮೌನ ಮುರಿಯಲು ಕಾರಣವಾಯಿತು ಎಂದು ಅವರು ತಿಳಿಸಿದ್ದಾರೆ.

ಸ್ಯಾಂಡ್‌ಪೇಪರ್ ಸಂಚು ರೂಪುಗೊಂಡಿದ್ದು ಹೀಗೆ!

2018ರ ದಕ್ಷಿಣ ಆಫ್ರಿಕಾ ಪ್ರವಾಸದ ಡರ್ಬನ್‌ನಲ್ಲಿ ನಡೆದ ಮೊದಲ ಟೆಸ್ಟ್ ಗೆದ್ದ ನಂತರ ಆಸ್ಟ್ರೇಲಿಯಾ ತಂಡದಲ್ಲಿ ಅಹಂಕಾರ ಬೆಳೆದಿತ್ತು ಎಂದಿರುವ ಬ್ಯಾನ್‌ಕ್ರಾಫ್ಟ್, ಪೋರ್ಟ್ ಎಲಿಜಬೆತ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ರಿವರ್ಸ್ ಸ್ವಿಂಗ್ ಪಡೆಯಲು ಸ್ಯಾಂಡ್‌ಪೇಪರ್ ಬಳಸುವ ಬಗ್ಗೆ ಚರ್ಚೆ ನಡೆಯಿತು. ಈ ಮಾತುಕತೆಯ ವೇಳೆ ಮುಖ್ಯ ಕೋಚ್ ಡ್ಯಾರೆನ್ ಲೆಹ್ಮನ್ ಮತ್ತು ಬೌಲಿಂಗ್ ಕೋಚ್ ಡೇವಿಡ್ ಸೇಕರ್ ಉಪಸ್ಥಿತರಿದ್ದರು ಎಂದು ಅವರು ಆರೋಪಿಸಿದ್ದಾರೆ. ಟಿವಿ ಕ್ಯಾಮೆರಾಗಳು ಡೇವಿಡ್ ವಾರ್ನರ್ ಮೇಲೆ ಕಣ್ಣಿಟ್ಟಿದ್ದರಿಂದ, ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳುವ ಒತ್ತಡದಲ್ಲಿದ್ದ ತಾನು ಈ ಕೆಲಸವನ್ನು ಒಪ್ಪಿಕೊಂಡಿದ್ದಾಗಿ ಬ್ಯಾನ್‌ಕ್ರಾಫ್ಟ್ ವಿವರಿಸಿದ್ದಾರೆ.

ಚೆಂಡು ಸರಿಯಾಗಿ ಸ್ವಿಂಗ್ ಆಗುತ್ತಿದೆಯೇ ಎಂದು ವೇಗದ ಬೌಲರ್‌ಗಳಾದ ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹೇಜಲ್‌ವುಡ್, ಮಿಚೆಲ್ ಮಾರ್ಷ್ ಹಾಗೂ ವಿಕೆಟ್ ಕೀಪರ್ ಟಿಮ್ ಪೈನ್ ಅವರ ಬಳಿ ತಾನು ಪ್ರತಿಕ್ರಿಯೆ ಕೇಳುತ್ತಿದ್ದೆ ಎಂದು ಬ್ಯಾನ್‌ಕ್ರಾಫ್ಟ್ ಬಾಂಬ್ ಸಿಡಿಸಿದ್ದಾರೆ. ನಾನು ಚೆಂಡಿನ ಮೇಲೆ ಸ್ಯಾಂಡ್‌ಪೇಪರ್ ಬಳಸುತ್ತಿದ್ದೇನೆ ಎಂಬುದು ಅವರಿಗೆಲ್ಲರಿಗೂ ತಿಳಿದಿತ್ತು. ನನ್ನ ಕೆಲಸ ಪರಿಣಾಮಕಾರಿಯಾಗಿದೆಯೇ ಎಂದು ಎಲ್ಲಾ ಬೌಲರ್‌ಗಳು ನನಗೆ ಪ್ರತಿಕ್ರಿಯೆ ನೀಡುತ್ತಿದ್ದರು ಎಂದು ಆಸಿಸ್​ ಮಾಜಿ ಕ್ರಿಕೆಟಿಗ ನೇರ ಆರೋಪ ಮಾಡಿದ್ದಾರೆ.

ಕೇಪ್‌ಟೌನ್‌ನಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ ಬೌಲಿಂಗ್ ಕೋಚ್ ಡೇವಿಡ್ ಸೇಕರ್ ಮತ್ತು ಬೌಲರ್‌ಗಳು ನೀನು ಮಾಡುತ್ತಿರುವುದು ಸಾಲದು, ಇನ್ನೂ ಹೆಚ್ಚು ಮಾಡಬೇಕು ಎಂದು ಒತ್ತಡ ಹೇರಿದ್ದರು. ಕ್ಯಾಮೆರಾದಲ್ಲಿ ಸಿಕ್ಕಿಬಿದ್ದ ತಕ್ಷಣ ಕೋಚ್ ಲೆಹ್ಮನ್ ಅವರು ಬದಲಿ ಆಟಗಾರ ಪೀಟರ್ ಹ್ಯಾಂಡ್ಸ್‌ಕೋಂಬ್ ಮೂಲಕ ತಕ್ಷಣವೇ ಆತನ ಬಳಿಯಿರುವ ಸ್ಯಾಂಡ್‌ಪೇಪರ್ ತೆಗೆದುಕೊ ಎಂದು ಸಂದೇಶ ಕಳುಹಿಸಿದ್ದರು. ಲೆಹ್ಮನ್ ಅವರಿಗೆ ಈ ಬಗ್ಗೆ ತಿಳಿದಿಲ್ಲದಿದ್ದರೆ ಹಾಗೆ ಹೇಳುತ್ತಿರಲಿಲ್ಲ. ನಮಗೆಲ್ಲರಿಗೂ ಈ ವಿಷಯ ತಿಳಿದಿತ್ತು, ಅಲ್ಲದೆ, ಪಂದ್ಯದ ನಂತರದ ಸುದ್ದಿಗೋಷ್ಠಿಯಲ್ಲಿ ಸ್ಯಾಂಡ್‌ಪೇಪರ್ ಹೆಸರು ಹೇಳದಂತೆ ಸೇಕರ್ ಮತ್ತು ಸಿಬ್ಬಂದಿ ತಮಗೆ ಹಾಗೂ ಸ್ಟೀವ್ ಸ್ಮಿತ್‌ಗೆ ಸೂಚಿಸಿದ್ದರು ಎಂದು ಬ್ಯಾನ್‌ಕ್ರಾಫ್ಟ್ ತಿಳಿಸಿದ್ದಾರೆ.

2021ರಲ್ಲಿ ಕಮಿನ್ಸ್, ಸ್ಟಾರ್ಕ್, ಹೇಜಲ್‌ವುಡ್ ಮತ್ತು ನಾಥನ್ ಲಿಯಾನ್ ಅವರು ತಮಗೇನೂ ತಿಳಿದಿಲ್ಲ ಎಂದು ನೀಡಿದ್ದ ಜಂಟಿ ಹೇಳಿಕೆ ತಮಗೆ ತೀವ್ರ ನೋವು ನೀಡಿತ್ತು ಎಂದು ಬ್ಯಾನ್‌ಕ್ರಾಫ್ಟ್ ಹೇಳಿದ್ದಾರೆ. ಈ ನಡುವೆ, ಪ್ರಕರಣದ ಕುರಿತು ಆಟಗಾರರು ಮುಕ್ತವಾಗಿ ಮಾತನಾಡಲು ಸ್ವತಂತ್ರ ವೇದಿಕೆಯೊಂದನ್ನು ಸ್ಥಾಪಿಸುವುದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಬುಧವಾರ ಘೋಷಿಸಿದ್ದು, ಇದರಲ್ಲಿ ಭಾಗವಹಿಸಲು ತಾನು ಸಿದ್ಧವಿರುವುದಾಗಿ ಬ್ಯಾನ್‌ಕ್ರಾಫ್ಟ್ ತಿಳಿಸಿದ್ದಾರೆ(ಏಜೆನ್ಸೀಸ್​).