RCB ವಿರುದ್ಧ ಬಿರುಗಾಳಿ ಇನ್ನಿಂಗ್ಸ್ ಆಡಿದ ಬೆನ್ನಲ್ಲೇ ಬೌಲರ್ಗಳ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ವೈಭವ್ ಸೂರ್ಯವಂಶಿ! Vaibhav Sooryavanshi
- 19ನೇ ಆವೃತ್ತಿಯ ಐಪಿಎಲ್ನಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿರುವ ಹದಿನೈದು ವರ್ಷದ ವೈಭವ್ ಸೂರ್ಯವಂಶಿ
- ನಿನ್ನೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB ) ವಿರುದ್ಧದ ಪಂದ್ಯದಲ್ಲಿ ಮತ್ತೊಮ್ಮೆ ಭರ್ಜರಿ ಬ್ಯಾಟಿಂಗ್ ಪ್ರದರ್ಶನ
- ಕೇವಲ 26 ಎಸೆತಗಳಲ್ಲಿ 8 ಬೌಂಡರಿ ಮತ್ತು 7 ಸಿಕ್ಸರ್‌ಗಳ ಸಹಾಯದಿಂದ 78 ರನ್ ಗಳಿಸಿದ ವೈಭವ್
- ರಾಜಸ್ಥಾನ ರಾಯಲ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ವೈಭವ್ ಸೂರ್ಯವಂಶಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ
Vaibhav Sooryavanshi : ಹದಿನೈದು ವರ್ಷದ ವೈಭವ್ ಸೂರ್ಯವಂಶಿ 19ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ತಮ್ಮ ಬ್ಯಾಟಿಂಗ್ ಮೂಲಕ ವಿನಾಶ ಸೃಷ್ಟಿಸುತ್ತಿದ್ದಾರೆ. ಶುಕ್ರವಾರ (ಏಪ್ರಿಲ್ 10) ಗುವಾಹಟಿಯಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB ) ವಿರುದ್ಧದ ಪಂದ್ಯದಲ್ಲಿ ಮತ್ತೊಮ್ಮೆ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. 202 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುವಾಗ ಆರ್‌ಸಿಬಿ ಬೌಲರ್‌ಗಳಿಗೆ ಬೆವರಿಳಿಸಿದರು. ಕೇವಲ 26 ಎಸೆತಗಳಲ್ಲಿ 8 ಬೌಂಡರಿ ಮತ್ತು 7 ಸಿಕ್ಸರ್‌ಗಳ ಸಹಾಯದಿಂದ 78 ರನ್ ಗಳಿಸಿದರು. ಈ ಮೂಲಕ ತಂಡದ ಗೆಲುವಿನಲ್ಲಿ ವೈಭವ್ ಪ್ರಮುಖ ಪಾತ್ರವಹಿಸಿದರು.
ಆರ್‌ಸಿಬಿ ವಿರುದ್ಧ ರಾಜಸ್ಥಾನ ರಾಯಲ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವೈಭವ್ ಸೂರ್ಯವಂಶಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದ ಅವರು, ನಾನು ಕ್ರೀಸ್‌ನಲ್ಲಿರುವಾಗ ಬೌಲರ್ ಕಡೆಗೆ ನೋಡುವುದಿಲ್ಲ, ಚೆಂಡಿನ ಮೇಲೆ ಮಾತ್ರ ಗಮನ ನಾನು ಹರಿಸುತ್ತೇನೆ ಎಂದರು.
ಇವತ್ತು ಕೂಡ ಕೇಕ್ ಕತ್ತರಿಸಿ ಸಂಭ್ರಮ ಮಾಡುವಂಥದ್ದೂ ಏನಾದರೂ ಮಾಡುತ್ತೀರಾ ಎಂದು ಪ್ರಶ್ನಿಸಿದಾಗ, ಆ ರೀತಿ ಏನೂ ಇಲ್ಲ. ನಾಳೆ ಬೆಳಗ್ಗೆ ವಿಮಾನ ಹಿಡಿಯಬೇಕಾಗಿರುವುದರಿಂದ ಇಂದು ಬೇಗ ಮಲಗಲು ಬಯಸುತ್ತೇನೆ. ಮೈದಾನದಲ್ಲಿ ಹೊಸದೇನನ್ನೂ ಪ್ರಯತ್ನಿಸುವುದಿಲ್ಲ. ಅಭ್ಯಾಸದಲ್ಲಿ ಏನೇ ಮಾಡಿದರೂ, ಮೈದಾನದಲ್ಲೂ ಅದನ್ನೇ ಆಡಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಯಾರು ಬೌಲಿಂಗ್ ಮಾಡುತ್ತಿದ್ದಾರೆ ಎಂಬ ಯೋಚನೆ ಮನಸ್ಸಿಗೆ ಬರುತ್ತದೆ ಆದರೆ, ನಾನು ಬೌಲರ್ ಕಡೆಗೆ ನೋಡುವುದಿಲ್ಲ. ನಾನು ಚೆಂಡಿನ ಮೇಲೆ ಮಾತ್ರ ಗಮನ ಹರಿಸುತ್ತೇನೆ. ಅದಕ್ಕಾಗಿಯೇ ನಾನು ಬೌಲರ್ ಬಗ್ಗೆ ಚಿಂತಿಸುವುದಿಲ್ಲ. ನಾನು ನನ್ನ ನೈಸರ್ಗಿಕ ಆಟವನ್ನು ಆಡಲು ಪ್ರಯತ್ನಿಸುತ್ತೇನೆ. ನನ್ನ ಚಿಕ್ಕಪ್ಪ ಮತ್ತು ತರಬೇತುದಾರರು ಎಲ್ಲರೂ ನಿನ್ನ ಪ್ರಯಾಣ ಇದೀಗ ಪ್ರಾರಂಭವಾಗಿದೆ ಮತ್ತು ಅದು ದೀರ್ಘವಾಗಿರಲಿದೆ ಎಂದು ಹೇಳುತ್ತಾರೆ. ಬೇರೆ ಯಾವುದನ್ನೂ ನೋಡದೆ ಆಟ ಮತ್ತು ಅದರ ಪ್ರಕ್ರಿಯೆಯ ಮೇಲೆ ಸಂಪೂರ್ಣವಾಗಿ ಗಮನಹರಿಸಲು ಸಲಹೆ ನೀಡಿದ್ದಾರೆ ಎಂದು ವೈಭವ್ ಸೂರ್ಯವಂಶಿ ಹೇಳಿದರು.
ವೈಭವ್ ಸೂರ್ಯವಂಶಿ ತಮ್ಮ ಔಟ್ ಬಗ್ಗೆ ಸ್ವಲ್ಪ ನಿರಾಶೆ ವ್ಯಕ್ತಪಡಿಸಿದರು. ಗುರಿಯನ್ನು ಬೆನ್ನಟ್ಟುವಾಗ ನಾನು ಸ್ವಲ್ಪ ಸಮಯ ಕ್ರೀಸ್‌ನಲ್ಲಿ ಇದ್ದಿದ್ದರೆ, ಪಂದ್ಯ ಎರಡು ಓವರ್‌ಗಳಿಗಿಂತ ಮೊದಲೇ ಮುಗಿಯುತ್ತಿತ್ತು ಎಂದು ಹೇಳಿದರು. ಇಂತಹ ಸಮಯದಲ್ಲಿ, ಕೆಟ್ಟ ಶಾಟ್ ಆಡಿ ಔಟ್ ಆಗುವುದು ನೋವುಂಟು ಮಾಡುತ್ತದೆ ಎಂದು ಹೇಳಿದರು.
ಪಂದ್ಯದ ವಿವರ
ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 201 ರನ್ ಗಳಿಸಿತು. ತಂಡದ ಪರ ರಜತ್ ಪಟಿದಾರ್ (63 ರನ್, 40 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್) ಅರ್ಧಶತಕ ಗಳಿಸಿದರು. ಇನ್ನು 32 ರನ್ ಬಾರಿಸಿದ ವಿರಾಟ್ ಕೊಹ್ಲಿ, 16 ಎಸೆತಗಳಲ್ಲಿ 7 ಬೌಂಡರಿ ಸಿಡಿಸಿದರು. ರಾಜಸ್ಥಾನ ಪರ ಜೋಫ್ರಾ ಆರ್ಚರ್, ರವಿ ಬಿಷ್ಣೋಯ್ ಮತ್ತು ಬ್ರಿಜೇಶ್ ಶರ್ಮಾ ತಲಾ ಎರಡು ವಿಕೆಟ್ ಪಡೆದರೆ, ಸಂದೀಪ್ ಶರ್ಮಾ ಮತ್ತು ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
ಈ ಗುರಿಯನ್ನು ಬೆನ್ನತ್ತಿದ ಆರ್ಆರ್ಗೆ ವೈಭವ್ ಸೂರ್ಯವಂಶಿ (78 ರನ್, 26 ಎಸೆತ, 8 ಬೌಂಡರಿ, 7 ಸಿಕ್ಸರ್) ಮತ್ತು ಧ್ರುವ್ ಜುರೆಲ್ ( ಅಜೇಯ 81 ರನ್, 43 ಎಸೆತ, 8 ಬೌಂಡರಿ, 3 ಸಿಕ್ಸರ್) ಅದ್ಭುತ ಅರ್ಧಶತಕಗಳ ನೆರವಿನಿಂದ ರಾಜಸ್ಥಾನ ರಾಯಲ್ಸ್ 18 ಓವರ್‌ಗಳಲ್ಲಿ ಕೇವಲ 4 ವಿಕೆಟ್‌ಗಳ ನಷ್ಟಕ್ಕೆ 202 ರನ್‌ಗಳ ಟಾರ್ಗೆಟ್ ಅನ್ನು ತಲುಪಿತು. ಆರ್‌ಸಿಬಿ ಪರ, ಜೋಶ್ ಹೇಜಲ್‌ವುಡ್ ಮತ್ತು ಕೃನಾಲ್ ಪಾಂಡ್ಯ ತಲಾ ಎರಡು ವಿಕೆಟ್‌ಗಳನ್ನು ಪಡೆದರು, (ಏಜೆನ್ಸೀಸ್).