ಕೆಎಲ್ ರಾಹುಲ್ ಮತ್ತು ವಾಷಿಂಗ್ಟರ್ ಸುಂದರ್
- ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಭರ್ಜರಿ ಜಯ
- ಈ ಪಂದ್ಯದ ಸಮಯದಲ್ಲಿ ಒಂದು ಆಸಕ್ತಿದಾಯಕ ಘಟನೆ ನಡೆಯಿತು
- ಭಾಷೆಯ ವಿಚಾರವಾಗಿ ಭಾರತದ ಇಬ್ಬರು ಕಾಮೆಂಟೇಟರ್ಸ್ ನಡುವೆ ಲೈವ್ನಲ್ಲಿ ವಾಗ್ವಾದ
ನವದೆಹಲಿ: ಮೂರು ಏಕದಿನ ಪಂದ್ಯಗಳ ಸರಣಿಯ ಭಾಗವಾಗಿ ನಿನ್ನೆ (ಜ.11) ಗುಜರಾತಿನ ವಡೋದರಾದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಆತಿಥೇಯ ಟೀಮ್ ಇಂಡಿಯಾ 4 ವಿಕೆಟ್ಗಳಿಂದ ಭರ್ಜರಿ ಗೆಲುವು ಸಾಧಿಸಿತು. ಗಮನಾರ್ಹ ಸಂಗತಿ ಏನೆಂದರೆ, ಕಿವೀಸ್ ಪಡೆ ಭಾರತಕ್ಕೆ ಕಠಿಣ ಪೈಪೋಟಿ ನೀಡಿತು. ಒಂದು ಹಂತದಲ್ಲಿ ಪಂದ್ಯವನ್ನು ತಮ್ಮಡೆಗೆ ಸೆಳೆದುಕೊಂಡಿತು. ಆದರೆ, ಅಂತಿಮ ಹಂತದಲ್ಲಿ ಮುಗ್ಗಿರಿಸಿದ ಟೀಮ್ ಇಂಡಿಯಾ ಮುಂದೆ ಶರಣಾಯಿತು. ಇನ್ನು ಈ ಪಂದ್ಯದ ಸಮಯದಲ್ಲಿ ಒಂದು ಆಸಕ್ತಿದಾಯಕ ಘಟನೆ ನಡೆಯಿತು. ಭಾಷಾ ( National Language ) ವಿಚಾರವಾಗಿ ಭಾರತದ ಇಬ್ಬರು ಕಾಮೆಂಟೇಟರ್ಸ್ ನಡುವೆ ಲೈವ್ನಲ್ಲಿ ವಾಗ್ವಾದ ನಡೆದಿದೆ.
ಹೌದು, ನಿನ್ನೆಯ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಆರಂಭಿಕ ಆಟಗಾರರಾದ ಡೆವೊನ್ ಕಾನ್ವೆ ಮತ್ತು ಹೆನ್ರಿ ನಿಕೋಲಸ್, ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ಮೊದಲ ವಿಕೆಟ್ಗೆ ಈ ಜೋಡಿ 117 ರನ್ ಜತೆಯಾಟ ನೀಡಿತು. ಉಭಯ ಆಟಗಾರರು ಚೆನ್ನಾಗಿ ಆಡುವಾಗ ವಿಕೆಟ್ ಕೀಪಿಂಗ್ ಮಾಡುತ್ತಿದ್ದ ಕನ್ನಡಿಗ ರಾಹುಲ್, ವಾಷಿಂಗ್ಟನ್ ಸುಂದರ್ ಅವರಿಗೆ ತಮಿಳಿನಲ್ಲಿ ಸಲಹೆಗಳನ್ನು ನೀಡುತ್ತಿದ್ದರು. ಈ ವೇಳೆ ಕಾಮೆಂಟರಿ ಮಾಡುತ್ತಿದ್ದ ಟೀಮ್ ಇಂಡಿಯಾದ ಮಾಜಿ ಆಟಗಾರ ವರುಣ್ ಆ್ಯರನ್, ರಾಹುಲ್ ಅವರು ವಾಷಿಂಗ್ಟನ್ಗೆ ಸಹಾಯ ಮಾಡಲು ಬಯಸಿದರೆ ತಮಿಳು ಭಾಷೆಯಲ್ಲಿ ಹೇಳುವುದು ಉತ್ತಮ. ಏಕೆಂದರೆ, ಚೆನ್ನಾಗಿ ಅರ್ಥವಾಗುತ್ತದೆ ಎಂದರು. ಆದರೆ, ಟೀಮ್ ಇಂಡಿಯಾದ ಮಾಜಿ ಬ್ಯಾಟಿಂಗ್ ಕೋಚ್, ಸಂಜಯ್ ಬಂಗಾರ್ ಅವರು ನಾನು ರಾಷ್ಟ್ರೀಯ ಭಾಷೆಯನ್ನು ಆಯ್ದುಕೊಳ್ಳುತ್ತೇನೆ ಎಂದು ಪರೋಕ್ಷವಾಗಿ ಹಿಂದಿಯನ್ನು ಉಲ್ಲೇಖಿಸುವ ಮೂಲಕ ಭಾಷಾ ವಿವಾದದ ಚರ್ಚೆ ಹುಟ್ಟುಹಾಕಿದರು.
ಬೌಲಿಂಗ್ ಮಾಡುವಾಗ ಚೆಂಡಿನ ವೇಗವನ್ನು ಕಡಿಮೆ ಮಾಡುವಂತೆ ರಾಹುಲ್ ಅವರು ವಾಷಿಂಗ್ಟನ್ ಸುಂದರ್ಗೆ ಹೇಳುವುದು ಸ್ಟಂಪ್ ಮೈಕ್ನಿಂದ ಕೇಳಿಸುತ್ತದೆ. ಈ ಅಂಶವನ್ನೇ ಇಟ್ಟುಕೊಂಡು ವರುಣ್ ಆ್ಯರನ್ ಮತ್ತು ಸಂಜಯ್ ಬಂಗಾರ್ ನಡುವೆ ಈ ಕೆಳಗಿನಂತೆ ಸಂಭಾಷಣೆ ನಡೆಯಿತು.
ವರುಣ್ ಆ್ಯರನ್: ಕೆ.ಎಲ್. ರಾಹುಲ್ ಅವರು ವಾಷಿಂಗ್ಟನ್ ಸುಂದರ್ ಜತೆ ತಮಿಳಿನಲ್ಲಿ ಮಾತನಾಡಬೇಕು. ಆತ ಮೀಡಿಯಂ ಪೇಸರ್ ಬೇಡ ನಿಧಾನವಾಗಿ ಬೌಲಿಂಗ್ ಮಾಡುವಂತೆ ರಾಹುಲ್ ಹೇಳುತ್ತಿದ್ದಾರೆ. ಸಂಜಯ್ ಭಾಯ್, ತಮಿಳಿನಲ್ಲಿ ಹೇಳುವುದರಿಂದ ವಾಷಿಂಗ್ಟನ್ ಸುಂದರ್ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ ಎಂಬುದನ್ನು ನೀವು ಒಪ್ಪುತ್ತೀರಾ?
ಸಂಜಯ್ ಬಂಗಾರ್: ನಾನು ರಾಷ್ಟ್ರೀಯ ಭಾಷೆಯಲ್ಲಿ ಹೆಚ್ಚು ನಂಬಿಕೆಯನ್ನು ಇಡುತ್ತೇನೆ.
ವರುಣ್: ನಾನು ಪ್ರಾದೇಶಿಕ ಭಾಷೆಗಳಲ್ಲಿ ಮಾತ್ರ ನಂಬಿಕೆ ಇಡುತ್ತೇನೆ ಎಂದು ನಾನೆಲ್ಲ ಹೇಳುತ್ತಿದ್ದೇನೆ?
ಸಂಜಯ್ ಬಂಗಾರ್: ನೋಡಿ, ವಾಷಿಂಗ್ಟನ್ ಅವರು ಹಿಂದಿನ ಚೆಂಡನ್ನು 92 ಕಿ.ಮೀ. ವೇಗದಲ್ಲಿ ಬೌಲ್ ಮಾಡಿದರು. ಹಾಗಾಗಿ ಭಾಷೆ ಅಷ್ಟು ಮುಖ್ಯ ಎಂದು ನಾನು ಭಾವಿಸುವುದಿಲ್ಲ.
ಈ ರೀತಿಯಾಗಿ ವರುಣ್ ಮತ್ತು ಸಂಜಯ್ ನಡುವೆ ವಾಗ್ವಾದ ನಡೆಯಿತು. ಅಂತಿಮವಾಗಿ ಇಬ್ಬರು ತಮ್ಮ ಚರ್ಚೆಯಿಂದ ಹಿಂದೆ ಸರಿದು, ಪಂದ್ಯದ ಕಡೆ ಗಮನ ಹರಿಸಿದರು. ಇಲ್ಲಿ ಮುಖ್ಯವಾಗಿ ತಿಳಿಯಬೇಕಾದ ಸಂಗತಿ ಏನೆಂದರೆ, ಭಾರತ ಯಾವುದೇ ರಾಷ್ಟ್ರ ಭಾಷೆಯನ್ನು ಹೊಂದಿಲ್ಲ. ಆದರೆ, ಭಾರತ ಸಂವಿಧಾನ 8ನೇ ಶೆಡ್ಯೂಲ್ನಲ್ಲಿ ಹಿಂದಿ ಮತ್ತು ಇಂಗ್ಲಿಷ್ ಅನ್ನು ಅಧಿಕೃತ ಭಾಷೆ ಅಂತ ಮಾತ್ರ ಪರಿಗಣಿಸಲಾಗಿದೆ. ಭಾರತ ಒಕ್ಕೂಟ ರಾಜ್ಯಗಳ ವ್ಯವಸ್ಥೆಯನ್ನು ಹೊಂದಿರುವುದರಿಂದ ಇಲ್ಲಿ ರಾಷ್ಟ್ರೀಯ ಭಾಷೆ ಎಂದು ಯಾವುದನ್ನು ಪರಿಗಣಿಸಿಲ್ಲ.
ಪಂದ್ಯದ ವಿಚಾರಕ್ಕೆ ಬರುವುದಾದರೆ, ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ತಂಡವು ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 300 ರನ್ ಗಳಿಸಿತು. ಕಿವೀಸ್ ತಂಡದ ಬ್ಯಾಟ್ಸ್‌ಮನ್‌ಗಳಲ್ಲಿ ಡ್ಯಾರೆಲ್ ಮಿಚೆಲ್ (84 ರನ್, 71 ಎಸೆತ, 5 ಬೌಂಡರಿ, 3 ಸಿಕ್ಸರ್), ಹೆನ್ರಿ ನಿಕೋಲ್ಸ್ (62 ರನ್, 69 ಎಸೆತ, 8 ಬೌಂಡರಿ) ಮತ್ತು ಡೆವೊನ್ ಕಾನ್ವೇ (56 ರನ್, 67 ಎಸೆತ, 6 ಬೌಂಡರಿ, 1 ಸಿಕ್ಸರ್) ಅರ್ಧಶತಕಗಳನ್ನು ಗಳಿಸಿದರು. ಟೀಮ್ ಇಂಡಿಯಾ ಬೌಲರ್‌ಗಳಲ್ಲಿ ಸಿರಾಜ್, ಹರ್ಷಿತ್ ರಾಣಾ ಮತ್ತು ಪ್ರಸಿದ್ಧ ಕೃಷ್ಣ ತಲಾ ಎರಡು ವಿಕೆಟ್ ಪಡೆದರು. ಕುಲದೀಪ್ ಯಾದವ್ ಒಂದು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ್ದ ಭಾರತದ ಪರ ವಿರಾಟ್ ಕೊಹ್ಲಿ (93 ರನ್, 8 ಬೌಂಡರಿ, 91 ಎಸೆತ, 1 ಸಿಕ್ಸರ್) ಅದ್ಭುತ ಇನ್ನಿಂಗ್ಸ್ ಆಡಿದರು. ಭಾರತ 49 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ ಗುರಿ ತಲುಪಿತು. ಉಳಿದ ಬ್ಯಾಟ್ಸ್‌ಮನ್‌ಗಳಲ್ಲಿ, ಶುಭಮಾನ್ ಗಿಲ್ (56 ರನ್, 71 ಎಸೆತ 3 ಬೌಂಡರಿ, 2 ಸಿಕ್ಸರ್) ಮತ್ತು ಶ್ರೇಯಸ್ ಅಯ್ಯರ್ (49 ರನ್, 47 ಎಸೆತ, 4 ಬೌಂಡರಿ, 1 ಸಿಕ್ಸರ್) ಉತ್ತಮ ಪ್ರದರ್ಶನ ನೀಡಿದರು. ಕಿವೀಸ್ ಬೌಲರ್‌ಗಳಲ್ಲಿ ಕೈಲ್ ಜೇಮಿಸನ್ ನಾಲ್ಕು ವಿಕೆಟ್ ಪಡೆದರು. ಆದಿತ್ಯ ಅಶೋಕ್ ಮತ್ತು ಕ್ರಿಶ್ಚಿಯನ್ ಕ್ಲಾರ್ಕ್ ತಲಾ ಒಂದು ವಿಕೆಟ್ ಪಡೆದರು, (ಏಜೆನ್ಸೀಸ್).